varthabharthiವಿಶೇಷ-ವರದಿಗಳು

ಭ್ರಷ್ಟಾಚಾರವೊಂದೇ ಅಲ್ಲ; ಸಮಗ್ರ ಪರಿವರ್ತನೆಗಾಗಿನ ಹೋರಾಟ-ಎಸ್. ಆರ್. ಹಿರೇಮಠ್

ವಾರ್ತಾ ಭಾರತಿ : 9 Nov, 2019
ಸಂದರ್ಶನ: ಡಾ. ಸರ್ಜಾಶಂಕರ ಹರಳಿಮಠ

ಎಸ್. ಆರ್. ಹಿರೇಮಠರ ಜೊತೆ ಸಂದರ್ಶಕ ಡಾ. ಸರ್ಜಾಶಂಕರ್ ಹರಳಿಮಠ

ಇಂದು (09.11.2019, ಶನಿವಾರ)ಬೆಂಗಳೂರಿನ ಗಾಂಧಿ ಭವನದಲ್ಲಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಜಂಟಿಯಾಗಿ ಪ್ರಸಿದ್ಧ ಹೋರಾಟಗಾರ ಎಸ್.ಆರ್. ಹಿರೇಮಠ ಅವರ ಹೋರಾಟವನ್ನು ನೆನೆಸಿಕೊಳ್ಳುವ ಮತ್ತು ಕೃತಜ್ಞತೆ ಸಲ್ಲಿಸುವ ‘‘ಎಸ್. ಆರ್. ಹಿರೇಮಠ್ ಅವರಿಗೆ ಹೀಗೊಂದು ಕೃತಜ್ಞತೆ’’ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಎಸ್. ಆರ್. ಹಿರೇಮಠರ ಜೊತೆ ಲೇಖಕ ಡಾ. ಸರ್ಜಾಶಂಕರ್ ಹರಳಿಮಠ ಅವರು ನಡೆಸಿದ ಸಂದರ್ಶನದ ಆಯ್ದ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ.

ಇವತ್ತು ನೀವು ಏನು ಭ್ರಷ್ಟಾಚಾರ ವಿರೋಧಿ ಹೋರಾಟ ಹೇಳುತ್ತೀರಲ್ಲ, ಇದು ಏನೂ ಅಲ್ಲ. ನನ್ನದು ಸಮಗ್ರ ಪರಿವರ್ತನೆಗಾಗಿನ ಹೋರಾಟ. ಸಮಾಜದಲ್ಲಿ ಮತ್ತು ಎಲ್ಲರನ್ನೂ ಸಮಾನವಾಗಿ ಕಾಣುವಂತಹ ಆರ್ಥಿಕ, ಸಾಮಾಜಿಕ, ರಾಜಕೀಯ ಅಧಿಕಾರ ಏನಿದೆ ಇದು ಜನರ ಕೈಯಲ್ಲಿ ಮಾತ್ರ ಇರಬೇಕು. ಯಾವ ಅಧಿಕಾರಸ್ಥರಲ್ಲೂ ಕೇಂದ್ರೀಕೃತವಾಗಿರಬಾರದು ಅಂತ ಎರಡು ಸಾವಿರಕ್ಕೂ ವರ್ಷಗಳ ಹಿಂದೆ ಸಾಕ್ರಟಿಸ್, ಪ್ಲೇಟೊ, ಅರಿಸ್ಟಾಟಲ್ ಏನು ಹೇಳಿದ್ದರೋ ಅದು ಮತ್ತು ಶರಣರ ನುಡಿಗಳೇನಿವೆಯೋ ಅದು ನನ್ನ ಪರಿಕಲ್ಪನೆಯ ಅಡಿಪಾಯ.

ನನಗೆ ಖಾಸಗಿ ಆಸ್ತಿ ಮಾಡೋಕೆ ಆಗಲೂ ಆಸಕ್ತಿ ಇರಲಿಲ್ಲ, ಈಗಲೂ ಇಲ್ಲ. ನಮ್ಮದೇನಿದೆ ಅದನ್ನೆಲ್ಲ ಸಮಾಜಕ್ಕೆ ಕೊಟ್ಟು ಹೋಗೋದು. ಪೂರ್ವಾರ್ಜಿತ ಆಸ್ತೀನೂ ನಾನು ಯಾವುದೂ ಇಟ್ಕೊಂಡಿಲ್ಲ.

ಪ್ರಶ್ನೆ: ನಿಮ್ಮ ಕುಟುಂಬದ ಮತ್ತು ಬಾಲ್ಯದ ಪರಿಸರ ನೀವು ಇಂದು ಒಬ್ಬ ಹೋರಾಟಗಾರನಾಗಿ ರೂಪುಗೊಳ್ಳಲು ಪ್ರೇರಣೆ ಒದಗಿಸಿತ್ತೇ? ಹೌದಾದರೆ ಅದು ಯಾವ ರೀತಿಯಲ್ಲಿತ್ತು?

► ನನ್ನ ಕುಟುಂಬ ಮತ್ತು ಬಾಲ್ಯದ ಪರಿಸರದಲ್ಲಿ ಇಂತಹ ಪ್ರೇರಣೆ ಅಷ್ಟೊಂದು ಸ್ಪಷ್ಟವಾಗಿ ಇರಲಿಲ್ಲ. ನಮ್ಮ ತಂದೆಯವರು ಬಾಲ್ಯದಲ್ಲಿಯೇ ತೀರಿಹೋದರು. ಆನಂತರ ತುಂಬ ಬಡತನದ ಕಷ್ಟದ ದಿನಗಳು ಶುರುವಾದವು. ನಮ್ಮ ತಾಯಿಯವರು ನಮ್ಮನ್ನು ಪ್ರವಚನಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ವಿಶೇಷವಾಗಿ ಶರಣರ ಜೀವನದ ಪರಿಕಲ್ಪನೆ, ಯಾವ ರೀತಿಯ ಜೀವನ ಮಾಡಬೇಕು ಎನ್ನುವ ಮಹತ್ವದ ವಿಷಯಗಳು ನನಗೆ ಬಾಲ್ಯದಲ್ಲಿಯೇ ಸಿಕ್ಕಿತು. ಇದೊಂದು ನನ್ನ ಬಾಲ್ಯದಲ್ಲಿ ಸಿಕ್ಕ ಅಪೂರ್ವ ಕೊಡುಗೆ. ನಮಗೆ ಪ್ರವಚನ ಕೊಡುತ್ತಿದ್ದವರು ಬಂತನಾಳ ಸ್ವಾಮೀಜಿ ಎಂಬವರು. ಅವರು ಸಾರ್ವಜನಿಕ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. ಅವರು ಅನ್ನದಾಸೋಹ, ಶಿಕ್ಷಣಸಂಸ್ಥೆಗಳ ಮೂಲಕ ವಿದ್ಯೆಯನ್ನು ನೀಡುವ ಕೆಲಸವನ್ನು ಬಹಳ ಉತ್ಕೃಷ್ಟವಾಗಿ ಮಾಡುತ್ತಿದ್ದರು. ಇನ್ನೊಬ್ಬರು ಮಲ್ಲಿಕಾರ್ಜುನ ಸ್ವಾಮೀಜಿ ಅನ್ನುವವರು. ಸಿದ್ದೇಶ್ವರ ಸ್ಮಾಮೀಜಿ ಅವರ ಗುರುಗಳು. ಅವರು ತುಂಬ ಮೇಧಾವಿ ಸ್ವಾಮೀಜಿ. ಅನುಭವ ಮಂಟಪದಲ್ಲಿ ಅಲ್ಲಮಪ್ರಭುಗಳು ಹೇಳಿರಬಹುದಾದಂತೆ ತತ್ವಜ್ಞಾನವನ್ನು ಭಗವಧ್ಗೀತೆ, ಶೂನ್ಯಸಂಪಾದನೆ, ಸಿದ್ಧಾಂತ ಶಿಖಾಮಣಿಗಳ ಮೂಲಕ ಹೇಳುತ್ತಿದ್ದರು. ಇದರ ಪ್ರಭಾವ ನನ್ನ ಮೇಲೆ ಬಹಳ ಆಯಿತು.

ಪ್ರ: ನಿಮ್ಮ ಪ್ರಾಥಮಿಕ ಶಿಕ್ಷಣ, ಉನ್ನತ ಶಿಕ್ಷಣ ಎಲ್ಲಿಲ್ಲಿ ನಡೆಯಿತು?

► ನಾನು ಮೊದಲು ಹೋಗಿದ್ದು ಬಿಜಾಪುರದ ಷಹಪುರ್ ಪೇಟೆಯಲ್ಲಿನ 11ನೇ ನಂಬರ್ ಶಾಲೆಗೆ. ನಂತರ 5ನೇ ನಂಬರ್ ಶಾಲೆಗೆ. ಅವಾಗೆಲ್ಲ ಮುನ್ಸಿಪಾಲ್ಟಿ ಶಾಲೆಗಳನ್ನು ಹೀಗೆ ನಂಬರ್‌ಗಳಲ್ಲಿ ಹೇಳುತ್ತಿದ್ದರು. ಪ್ರೌಢ ಶಿಕ್ಷಣ ಸಿದ್ದೇಶ್ವರ ಹೈಸ್ಕೂಲ್‌ನಲ್ಲಿ ಆಯಿತು. ಬಿಎಲ್‌ಡಿ ಸಂಸ್ಥೆಯಲ್ಲಿ ಎಸ್‌ಎಸ್‌ಸಿ ಮುಗಿಸಿದೆ. ಮೊದಲಿನಿಂದಲೂ ಶಾಲೆಯಲ್ಲಿ ನನ್ನ ಫಲಿತಾಂಶ ಉತ್ತಮವಾದುದರಿಂದ ಎಸ್‌ಎಸ್‌ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ, ಬೋರ್ಡ್‌ಗೆ ಸೆಕೆಂಡ್ ಸ್ಥಾನ ಬಂತು. ಇದರಿಂದ ನ್ಯಾಷನಲ್ ಮೆರಿಟ್ ಸ್ಕಾಲರ್‌ಷಿಪ್ ದೊರಕಿ ಶಿಕ್ಷಣಕ್ಕೆ ತುಂಬ ತುಂಬ ಸಹಾಯ ಆಯ್ತು. ಎಸ್‌ಎಸ್‌ಸಿ ಆದ ಕೂಡಲೇ ನಾನು ಇಲ್ಲೇ ಇಳಕಲ್ ಕಾಲೇಜಿಗೆ ಹೋಗಿ ಬರ್ತಾ ಇದ್ದೆ. ಮುಂದೆ ಏನು ಮಾಡಬೇಕು ಅನ್ನೋ ಬಗ್ಗೆ ಎಳ್ಳಷ್ಟೂ ಏನೂ ತಿಳಿದೀರ್ಲಿಲ್ಲ. ಮನೆತನದ ಕೆಲವು ಸಮಸ್ಯೆಗಳು ಇದ್ದಿದ್ರಿಂದ ನಾನು ಹಳ್ಳಿಗೆ ಹೋಗ್ಲಿಲ್ಲ. ತಿರುಗಿ ಬಂದಾಗ ಅವರು ನನಗೆ ಫ್ರೀ ಸೀಟ್ ಕೊಟ್ಟು ತುಂಬಾ ಚೆನ್ನಾಗಿ ನೋಡ್ಕೊಂಡ್ರು. ಇಲ್ಲೇ ಪಿಯುಸಿ ಮಾಡ್ದೆ. ಯುನಿವರ್ಸಿಟಿಗೆ ಮೊದಲ ರ್ಯಾಂಕ್ ಬಂದಿದ್ದರಿಂದ ಅವರು ತುಂಬಾ ಸಂತೋಷ ಪಟ್ಟರು. ಆನಂತರ ನಾನು ಇಂಜಿನಿಯರಿಂಗ್ ಕಾಲೇಜಿಗೆ ಬಂದೆ.

 ಪ್ರ: ಈ ಸಮಾಜ ಪರಿವರ್ತನೆ ಬಗ್ಗೆ ನಿಮ್ಮ ಪರಿಕಲ್ಪನೆ ಏನು?

► ನಮ್ಮ ಚಳವಳಿ ಅಮೆರಿಕದಲ್ಲಿ ಶುರುವಾಯಿತು. ಇಂಜಿನಿಯರಿಂಗ್ ಮತ್ತು ಮ್ಯಾನೇಜ್ ಮೆಂಟ್ ಮಾಸ್ಟರ್ ಇನ್ ಸೈನ್ಸ್ ನಂತರ ಎಂಬಿಎ ಮಾಡಿದ್ದೆ. ಅಲ್ಲಿ 11 ವರ್ಷ ಇದ್ದೆ, 10 ವರ್ಷ ಕೆಲಸ ಮಾಡಿದ್ದೆ. ಆಗ ತಿರುಗಿ ಭಾರತಕ್ಕೆ ಬರಬೇಕು. ಕೈಗಾರಿಕೆೆ ಆರಂಭ ಮಾಡಬೇಕು, ಸಮಾಜದ ಕೆಲಸಗಳಿಗೆ ಹಣ ಕೊಡಬೇಕು. ಹಳ್ಳಿಗಳಿಗೆ ಒಳ್ಳೆಯ ಶಿಕ್ಷಣದ ಅವಕಾಶಗಳನ್ನು ಸೃಷ್ಟಿಸಬೇಕು, ಆರೋಗ್ಯ ಕ್ಷೇತ್ರವನ್ನು ಸುಧಾರಿಸಬೇಕು ಈ ರೀತಿಯ ಆಲೋಚನೆಗಳಿದ್ದವು. ಆದರೆ ನಾನೇ ಇದರಲ್ಲಿ ಫುಲ್ ಟೈಮರ್ ಆಗಿರ್ತೀನಿ ಅನ್ನೋದಿರಲಿಲ್ಲ.

ಪ್ರ: ಅಂದರೆ ನಿಮ್ಮ ಹೆಚ್ಚಿನ ಕಾಳಜಿ ಇದ್ದದ್ದು ಶಿಕ್ಷಣ ಮತ್ತು ಆರೋಗ್ಯದ ಮೇಲೆ..?

► ಶಿಕ್ಷಣದಿಂದ ನನಗೆ ಒಳ್ಳೆಯದಾಯಿತು. ನನ್ನ ಅನುಭವದ ಆಧಾರದ ಮೇಲೆ. ಇದಕ್ಕೂ ಮೊದಲು ನಾನೂ, ನಮ್ಮ ತಾಯಿಯವರು ಚಿಕ್ಕಂದಿನಲ್ಲಿ ಹಳ್ಳಿಗೆ ಹೋದಾಗ ಈ ಕುಡಿಯೋ ನೀರಿನದು ಬಹಳ ದೊಡ್ಡ ಸಮಸ್ಯೆಯಿತ್ತು. ಅಲ್ಲೆಲ್ಲಾ ಸವಳು ನೀರು. ಒಂದೂವರೆ ಕಿಲೋಮೀಟರ್ ದೂರದ ಹಳ್ಳಕ್ಕೆ ಹೋಗಿ, ಅಲ್ಲಿ ವರ್ದಿ ಅಂತಾರೆ ಅದರಿಂದ ನೀರು ತರಬೇಕಿತ್ತು. ಇದೆಲ್ಲಾ ಸಮಸ್ಯೆಗಳು ಕಂಡಿದ್ದು. ನೂರಕ್ಕೆ ಎಂಬತ್ತರಷ್ಟು ರೋಗಗಳು ಬರೋದು ನೀರಿನಿಂದಲೇ.

ಪ್ರ: ನಿಮ್ಮ ಸಾಮಾಜಿಕ ಚಟುವಟಿಕೆಗಳಿಗೆ, ಹೋರಾಟಗಳಿಗೆ ಮದುವೆ ನಂತರ ನಿಮ್ಮ ಕುಟುಂಬದ ಪ್ರತಿಸ್ಪಂದನೆ ಹೇಗಿತ್ತು?

► ನಾನು ಕಾಮನ್ ಸ್ಕೂಲ್‌ನಲ್ಲಿ ಕಲಿತವನಾದ್ದರಿಂದ ಪರಸ್ಪರ ಒಬ್ಬರಿಗೆ ಒಬ್ಬರು ಸಹಾಯ ಮಾಡುವುದು, ಪರಸ್ಪರ ವಿಶ್ವಾಸ, ಗೆಳೆತನದ ಮಹತ್ವ ಇವನ್ನೆಲ್ಲ ನಾನು ಆಗಲೇ ಕಲಿತಿದ್ದೆ. ಇಂಜಿನಿಯರಿಂಗ್ ಮುಗಿಸಿ ಒಂದು ವರ್ಷ ಇಲ್ಲೇ ಅಧ್ಯಾಪಕನಾಗಿದ್ದು ಅಮೆರಿಕಕ್ಕೆ ಹೋದೆ. ಅಲ್ಲಿ ಫೆಡರೇಷನ್ ಆಫ್ ಇಂಡಿಯಾ ಸ್ಟೂಡೆಂಟ್ ಅಸೋಸಿಯೇಷನ್ ಆಫ್ ಅಮೆರಿಕದಲ್ಲಿ ಕಾರ್ಯದರ್ಶಿಯಾಗಿದ್ದೆ, ನಂತರ ಅಧ್ಯಕ್ಷನಾದೆ. ಆಗ ಪಾಶ್ಚಾತ್ಯರ ಪರಿಸ್ಥಿತಿ ಹೇಗಿದೆ? ಭಾರತದಲ್ಲಿ ಯಾಕೆ ಅಲ್ಲಿಗಿಂತ ವಿಭಿನ್ನವಾದ ಪರಿಸ್ಥಿತಿ ಇದೆ? ಇವೆಲ್ಲ ಚಿಂತನೆ ಮಾಡಿದ ನಂತರ ನಮ್ಮ ದೇಶ ಸುಧಾರಿಸಲು ನಾವೇನಾದರೂ ಮಾಡಬೇಕು ಅಂತ ವಿಚಾರ ಬಂತು. ನನ್ನ ಚಿಂತನೆ ಹೀಗಿರೋದ್ರಿಂದ ಇಂತಹ ಆಸಕ್ತಿಯುಳ್ಳ ಜೀವನ ಸಂಗಾತಿಯನ್ನು ಆರಿಸಿಕೊಳ್ಳ್ಳುವಂತಹ ಅವಕಾಶ ನನಗೆ ಬಂತು. ಅಲ್ಲಿರುವ ಒಬ್ಬರು ಆಫ್ರಿಕಾ ಖಂಡದ ಪಶ್ಚಿಮ ಭಾಗದಲ್ಲ್ಲಿ ಸಿರಿಲಿಯೋನ್ ಅನ್ನುವ ಚಿಕ್ಕ ದೇಶದಲ್ಲಿ ಎರಡು ವರ್ಷ ಶಿಕ್ಷಕಿಯಾಗಿ ಹಳ್ಳಿಯಲ್ಲಿ ಸೇವೆ ಸಲ್ಲಿಸಿದ್ದರು. ಬೇರೊಂದು ಸಂಸ್ಕೃತಿಯಲ್ಲಿ, ಅಲ್ಲಿನ ಜೀವನಶೈಲಿಗೆ ಹೊಂದಿಕೊಂಡು ಎರಡು ವರ್ಷ ಅಲ್ಲಿರುವುದು ಸಣ್ಣ ಸಂಗತಿಯಲ್ಲ. ಅಂತಹವರೊಬ್ಬರು ಸಿಕ್ಕಿದ್ದರಿಂದ, ಅವರಿಗೂ ಕೂಡ ಜೀವನದಲ್ಲಿ ಕೂಡಿ ಏನಾದರೂ ಕೆಲಸ ಮಾಡಬೇಕು ಎನ್ನುವ ಬಯಕೆ ಇದ್ದಿದ್ದರಿಂದ ನಾವು ಲಗ್ನ ಆಗಬೇಕು ಎಂದು ನಿರ್ಧರಿಸಿದೆವು. ಈ ನಿರ್ಧಾರಕ್ಕೆ ಬರುವ ಮೊದಲೇ ಭಾರತಕ್ಕೆ ಮರಳಿ ಬರುವುದರ ಬಗ್ಗೆ ಚರ್ಚಿಸಿದೆವು. ಭಾರತಕ್ಕೆ ಬರಲು ಅವರಿಗೂ ಆಸಕ್ತಿ ಇದ್ದಿದ್ದರಿಂದ ತುಂಬಾ ಅನುಕೂಲವಾಯ್ತು.

ಪ್ರ: ನಿಮ್ಮನ್ನು ಈಗ ನಾವು ನೋಡ್ತಾ ಇರೋದು ಭ್ರಷ್ಟಾಚಾರದ ವಿರುದ್ಧದ ಐಕಾನ್ ಆಗಿ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬೇಕು ಎನ್ನುವ ಚಿಂತನೆ ನಿಮ್ಮಲ್ಲಿ ಹೇಗೆ ಬಂತು?

► ನಾವೇನಾದ್ರೂ ಭಾರತದಲ್ಲಿ ಮಾಡಬೇಕು ಅಂತ 1971ರಲ್ಲಿ ತೀರವಾಗಿ ಅನ್ನಿಸತೊಡಗಿತು. ಅಲ್ಲಿ ಶಿಕ್ಷಣದ ವೆಚ್ಚ ತುಂಬ ಕಡಿಮೆ. ಫೀಜು ವಗೈರೆ ಅಷ್ಟೇನೂ ಇರಲಿಲ್ಲ. ಇದು ಸಮಾಜದ ದೊಡ್ಡ ಕೊಡುಗೆ. ಆಗ ಭಾರತದ ಶಿಕ್ಷಣಕ್ಕೆ ನಾವು ಪಡೆದದ್ದನ್ನು ತಿರುಗಿ ಕೊಡಬೇಕು ಎನ್ನುವ ಚಿಂತನೆ ಮಾಡ್ತಿದ್ವಿ. ಆಗ ಒಬ್ಬರು ಪಿ.ಕೆ. ಮೆಹ್ತಾ ಅಂತ. ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಬರ್ಕಿಲಿ ಒಳಗೆ ಪ್ರೊಫೆಸರ್ ಆಗಿ ಬಂದಿದ್ರು. ಅವರು ಐಐಟಿ ಕಾನ್ಪುರದಲ್ಲಿ ಒಂದು ವರ್ಷ ವಿಸಿಟಿಂಗ್ ಪ್ರೊಫೆಸರ್ ಆದ್ರು. ಅವರು ಒಂದು ಸಂಸ್ಥೆ ಕಟ್ಟಿದ್ದಾರೆ. ‘ಫ್ರೆಂಡ್ ಫಾರ್ ರ್ಯಾಪಿಡ್ ರೂರಲ್ ಅಡ್ವಾನ್ಸ್‌ಮೆಂಟ್ ಆಫ್ ಇಂಡಿಯಾ’ ಅಂತ. ಅವರು ಇಬ್ಬರ ಹೆಸರುಗಳನ್ನು ಕೊಟ್ಟಿದ್ದರು. ಒಬ್ಬರು ದುನಿರಾಯ್ ಅನ್ನುವವರು. ಇನ್ನೊಬ್ಬರು ಜಾವೇದ್ ಅಹ್ಮದ್ ಅಂತ ಈಗ ಜಾವೇದ್ ಆನಂದ್ ಎಂದು ಹೆಸರಾಗಿದ್ದಾರೆ. ‘ಕಂಬ್ಯಾಟ್ ಕಮ್ಯುನಲಿಸಂ’ ಪತ್ರಿಕೆ ತರೋದು ಅವರೇ. (ತೀಸ್ತಾ ಸೆಟಲ್ವಾಡ್ ಅವರ ಪತಿ) ಅವರಿಬ್ಬರು ಆರ್ಟ್ಸ್‌ನಲ್ಲಿ ಗ್ರಾಜ್ಯುಯೇಟ್ಸ್. ಅವರು ಹಳ್ಳಿಗಳಲ್ಲಿ ಕೆಲಸ ಮಾಡೋರು. ಅವರನ್ನು ನಾನು ಭೇಟಿ ಮಾಡಿ ‘‘ನಾನು ಇಲ್ಲಿ ಒಂದು ಇಂಡಸ್ಟ್ರಿ ಮಾಡಬೇಕಂತ ನಿರ್ಧಾರ ಮಾಡಿದ್ದೇನೆ. ಅದಕ್ಕೆ ನಿಮ್ಮ ಸಲಹೆಯೇನು’’ ಎಂದು ಕೇಳಿದೆ. ಆಗ ಅವರು ಒಂದು ಚಿಕ್ಕ ಲೇಖನ ತಂದುಕೊಟ್ಟರು. ‘ಅನ್‌ಎಂಪ್ಲಾಯ್ ಮೆಂಟ್ ಪ್ರಾಬ್ಲಮ್ ಇನ್ ಇಂಡಿಯಾ.’ ಅದು ನನಗೆ ಬಹಳ ಮಾನಸಿಕವಾಗಿ ಇಂಪ್ಯಾಕ್ಟ್ ಮಾಡಿತು. ಒಂದೆರಡು ಪ್ಯಾರ ಓದುತ್ತಿದ್ದಂತೆ ತುಂಬ ಆಸಕ್ತಿ ಮೂಡಿತು. ಇ.ಎಫ್.ಶಿಮಾಕರ್ ಅನ್ನುವವರು ಇದನ್ನು ಬರೆದಿದ್ದು. ನಾನು ಅವರ ವಿಳಾಸ ಪಡಕೊಂಡೆ. ಅವರು ಇಂಗ್ಲೆಂಡ್‌ನಲ್ಲಿದ್ದರು. ಅವರು ಆರ್ಥಿಕ ತಜ್ಞರು. ಶಿಮಾಕರ್ ಅವರಿಗೆ ನಾನು ತಕ್ಷಣ ಬರೆದೆ. ನನ್ನ ಪತ್ರಕ್ಕೆ ಅವರು ತುಂಬ ಸಂತೋಷದಿಂದ ಉತ್ತರ ಬರೆದರು. ನನ್ನ ಒಂದು ಲೇಖನ ನಿಮಗೆ ಅಷ್ಟು ಪ್ರಭಾವ ಬೀರಿದ್ದರೆ ನನ್ನದೊಂದು ಪುಸ್ತಕ ಬರ್ತಾ ಇದೆ. ‘ಸ್ಮಾಲ್ ಈಸ್ ಬ್ಯೂಟಿಫುಲ್’ ಅಂತ ಹೇಳಿದರು. ಬಿಡುಗಡೆಯಾದ ನಂತರ ಅದನ್ನು ನಾನು ಓದಿದಾಗ ಒಬ್ಬ ಇಂಜಿನಿಯರ್ ಅಂದ್ರೆ ಬಾವಿಯೊಳಗಿನ ಕಪ್ಪೆ. ಇದೊಂದು ವಿಶಾಲವಾದ ಜಗತ್ತಿದೆ. ದೇಶ ಯಾವ ಟೆಕ್ನಾಲಜಿಯನ್ನು ಅಡಾಪ್ಟ್ ಮಾಡಬೇಕು? ಯಾವ ಇಂಡಸ್ಟ್ರಿ ಆರಂಭಿಸಬೇಕು ಇವೆಲ್ಲಾ ನನ್ನ ಮನಸ್ಸಿಗೆ ಬಂತು. ಇನ್ನೊಬ್ಬ ಎಡ್ಗರ್ ಓನ್ ಎನ್ನುವವರು 30 ವರ್ಷ ಯು.ಎಸ್.ಎ.ಡಿ. ಅಂತ ಅದರಲ್ಲಿ ಕೆಲಸ ಮಾಡಿದ್ದರು. ಅವರು ಒಂದು ಪುಸ್ತಕ ಬರೆದಿದ್ದರು. ‘ಡೆವಲಪ್ ಮೆಂಟ್ ಇನ್ ಕನ್ಸಿಡರ್ಡ್’ ಅಂತ. ಅಭಿವೃದ್ಧಿಯ ಸ್ವರೂಪದ ಬಗೆಗಿನ ಚಿಂತನೆಯಿದು. ಈ ಅಭಿವೃದ್ಧಿ ಮಾನದಂಡಗಳಿವೆಯಲ್ಲ, ಈ ಜಿಡಿಪಿ ಇತ್ಯಾದಿ, ಇವೆಲ್ಲ ನಿಜವಾದ ಮಾನದಂಡಗಳೇ ಅಲ್ಲ. ಒಂದು ದೇಶದಲ್ಲಿ ನಡೆಯುವ ಅನ್ಯಾಯ ಅತ್ಯಾಚಾರಗಳನ್ನು ತಡೆಗಟ್ಟಿದ, ಸ್ವಾತಂತ್ರ್ಯ, ಸಮಾನತೆಗಳಂತಹ ಉದಾತ್ತ ಆದರ್ಶಗಳು ನಿಜವಾಗಿ ಜಾರಿಯಲ್ಲಿರುವ ನಾಡು ಮಾತ್ರ ಅಭಿವೃದ್ಧಿ ಹೊಂದಿದೆ ಎಂದು ಹೇಳಲು ಸಾಧ್ಯ. ಇಂತಹ ಸಮಾಜವನ್ನು ಕಟ್ಟುವುದು ಮುಖ್ಯ. ಅಭಿವೃದ್ಧಿ ಎಂದರೆ ಜನರ ಅಭಿವೃದ್ಧಿ ಮಾತ್ರ. ಅನಕ್ಷರತೆ, ಅನಾರೋಗ್ಯ, ಶೋಷಣೆ, ನಿರುದ್ಯೋಗ, ಇವೆಲ್ಲವನ್ನು ನಿರ್ಮೂಲನೆ ಮಾಡಿ ನಿಜವಾದ ಅಭಿವೃದ್ಧಿ ಸಾಧಿಸಬೇಕು. ಈ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ ಗಳಿಂದ ಹ್ಯೂಮನ್ ಇಂಡೆಕ್ಸ್‌ಗಳಿಂದ ಮಾನವ ಅಭಿವೃದ್ಧಿಯನ್ನು ಅಳೆಯಲು ಆರಂಭವಾಗಿದ್ದು ಹೀಗೆ. ಇದು ನನಗೆ ತುಂಬಾ ಪರಿಣಾಮ ಬೀರಿತು.

ನನ್ನ ಚಿಂತನಾ ಕ್ರಮದಲ್ಲಿ ಅತೀ ಬದಲಾವಣೆಯಾಗಿದ್ದೆಂದರೆ ಇಂದಿರಾಗಾಂಧಿ ಅವರು ಹೇರಿದ ತುರ್ತುಪರಿಸ್ಥಿತಿ. ಇದರ ಬಗ್ಗೆ ಆಗ ಆಳವಾದ ವೈಚಾರಿಕ ತಿಳುವಳಿಕೆಯಿಲ್ಲದಿದ್ದರೂ ಒಬ್ಬ ವ್ಯಕ್ತಿಯ ಪರಮಾಧಿಕಾರ ಏನು ಅನಾಹುತ ಮಾಡುತ್ತದೆ. ಇದು ನಿಜವಾಗಲೂ ಸಂವಿಧಾನ ವಿರೋಧಿ ಅದನ್ನು ವಿರೋಧಿಸಲೇಬೇಕು ಎಂದು ಅಲ್ಲಿ ಪ್ರತಿಭಟಿಸಿದೆವು. ಕೇವಲ ಮೂರು ದಿನಗಳಲ್ಲಿ ನಾವು ಸಾವಿರ ಮೈಲಿ ದೂರದಿಂದ ಬಂದು ಪ್ರತಿಭಟನೆ ಮಾಡಿದೆವು. ಕೆಲವರು ಶಿಕಾಗೋದಿಂದ ಬಂದರು. ನಮ್ಮ ನಾಲ್ಕು ಜನರ ಪಾಸ್‌ಪೋರ್ಟುಗಳನ್ನು ಆಗ ಅಮೆರಿಕ ಸರಕಾರ ಸೀಜ್ ಮಾಡಿತು.

ದಕ್ಷಿಣ ಆಫ್ರಿಕಾದಲ್ಲಿದ್ದಾಗ ಗಾಂಧಿ ನಡೆಸುತ್ತಿದ್ದ ಇಂಡಿಯನ್ ಒಪಿನೀಯನ್ ಹೆಸರಿನಲ್ಲೇ ನಾವು ಪತ್ರಿಕೆ ಮಾಡಿದೆವು. ಅದು ನಮ್ಮ ಜೀವನದ ದಿ ಮೋಸ್ಟ್ ಕ್ರಿಯೇಟಿವ್ ಪೀರಿಯೆಡ್. ಆವತ್ತು ನಾನು ಏನು ಒಂದು ಪೊಲಿಟಿಕಲ್ ಚೇಂಜ್ ಅನ್ನು ಕಲಿತೆ, ಅದು ಇವತ್ತಿನವರೆಗೂ ನನ್ನ ರಕ್ತದಲ್ಲಿ ಬಂದಿದೆ.

ಇವತ್ತು ನೀವು ಏನು ಭ್ರಷ್ಟಾಚಾರ ವಿರೋಧಿ ಹೋರಾಟ ಹೇಳುತ್ತೀರಲ್ಲ, ಇದು ಏನೂ ಅಲ್ಲ. ನನ್ನದು ಸಮಗ್ರ ಪರಿವರ್ತನೆಗಾಗಿನ ಹೋರಾಟ. ಸಮಾಜದಲ್ಲಿ ಮತ್ತು ಎಲ್ಲರನ್ನೂ ಸಮಾನವಾಗಿ ಕಾಣುವಂತಹ ಆರ್ಥಿಕ, ಸಾಮಾಜಿಕ, ರಾಜಕೀಯ ಅಧಿಕಾರ ಏನಿದೆ ಇದು ಜನರ ಕೈಯಲ್ಲಿ ಮಾತ್ರ ಇರಬೇಕು. ಯಾವ ಅಧಿಕಾರಸ್ಥರಲ್ಲೂ ಕೇಂದ್ರೀಕೃತವಾಗಿರಬಾರದು ಅಂತ ಎರಡು ಸಾವಿರಕ್ಕೂ ವರ್ಷಗಳ ಹಿಂದೆ ಸಾಕ್ರಟಿಸ್, ಪ್ಲೇಟೊ, ಅರಿಸ್ಟಾಟಲ್ ಏನು ಹೇಳಿದ್ದರೋ ಅದು ಮತ್ತು ಶರಣರ ನುಡಿಗಳೇನಿವೆಯೋ ಅದು ನನ್ನ ಪರಿಕಲ್ಪನೆಯ ಅಡಿಪಾಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)