varthabharthi


ರಾಷ್ಟ್ರೀಯ

1528ರಿಂದ 2019ರವರೆಗೆ: ಅಯೋಧ್ಯೆ ಪ್ರಕರಣದ ಪ್ರಮುಖ ಘಟನಾವಳಿಗಳು…

ವಾರ್ತಾ ಭಾರತಿ : 9 Nov, 2019

ಹೊಸದಿಲ್ಲಿ,ನ.9: ಅಯೋಧ್ಯೆಯ ರಾಮ ಜನ್ಮಸ್ಥಳ-ಬಾಬರಿ ಮಸೀದಿ ಪ್ರಕರಣದಲ್ಲಿ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ಶನಿವಾರ ಪ್ರಕಟಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಘಟನಾವಳಿಗಳ ಕಾಲಾನುಕ್ರಮಣಿಕೆಯ ಒಂದು ಪಾರ್ಶ್ವನೋಟ ಇಲ್ಲಿದೆ:

►1528: ಮುಘಲ್ ಚಕ್ರವರ್ತಿ ಬಾಬರ್‌ನಿಂದ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ

►1885: ವಿವಾದಿತ ರಾಮ ಜನ್ಮಭೂಮಿ-ಬಾಬರಿ ಮಸೀದಿ ಕಟ್ಟಡದ ಹೊರಗಡೆ ಮೇಲಾವರಣವನ್ನು ನಿರ್ಮಿಸಲು ಅನುಮತಿ ಕೋರಿ ಮಹಂತ ರಘುಬೀರ ದಾಸ್ ಅವರಿಂದ ಫೈಝಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ. ನ್ಯಾಯಾಲಯದಲ್ಲಿ ಅರ್ಜಿ ತಿರಸ್ಕೃತ 1949: ವಿವಾದಿತ ಕಟ್ಟಡದ ಹೊರಗೆ ಮಧ್ಯದ ಗುಮ್ಮಟದ ಕೆಳಗೆ ರಾಮ ಮತ್ತು ಸೀತಾ ವಿಗ್ರಹಗಳನ್ನು ಇಡಲಾಗಿತ್ತು. ಈ ವಿಗ್ರಹಗಳನ್ನು ಇಟ್ಟವರು ಯಾರು ಎನ್ನುವುದು ಸ್ಪಷ್ಟವಾಗಿಲ್ಲ

►1950: ವಿಗ್ರಹಗಳ ಪೂಜೆಗೆ ಹಕ್ಕ್ಕು ಕೋರಿ ಗೋಪಾಲ ಸಿಮ್ಲಾ ವಿಷಾರದ ಅವರಿಂದ ಫೈಝಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಸಲ್ಲಿಕೆ. ಅದೇ ವರ್ಷ ಪರಮಹಂಸ ರಾಮಚಂದ್ರ ದಾಸ್ ಅವರಿಂದಲೂ ಪ್ರಾರ್ಥನೆಗಳನ್ನು ಮುಂದುವರಿಸಲು ಮತ್ತು ಕಟ್ಟಡದಲ್ಲಿ ವಿಗ್ರಹಗಳನ್ನಿರಿಸಲು ಅನುಮತಿ ಕೋರಿ ದಾವೆ ಸಲ್ಲಿಕೆ

►1959: ವಿವಾದಿತ ನಿವೇಶನದ ಅಧಿಕಾರವನ್ನು ಹಸ್ತಾಂತರಿಸುವಂತೆ ಕೋರಿ ನಿರ್ಮೋಹಿ ಅಖಾಡಾದಿಂದ ಮೂರನೇ ದಾವೆ ದಾಖಲು

►1981: ನಿವೇಶನದ ಹಕ್ಕು ಕೋರಿ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ನಿಂದ ನಾಲ್ಕನೇ ದಾವೆ ದಾಖಲು

►1986,ಫೆ.1: ಬೀಗಗಳನ್ನು ತೆಗೆದು ನಿವೇಶನವನ್ನು ಹಿಂದು ಆರಾಧಕರಿಗೆ ಮುಕ್ತಗೊಳಿಸುವಂತೆ ಜಿಲ್ಲಾ ನ್ಯಾಯಾಲಯದ ಆದೇಶ

►1989,ಆ.14: ವಿವಾದಿತ ಕಟ್ಟಡಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶ

►1992,ಡಿ.6: ಬಾಬ್ರಿ ಮಸೀದಿ ಕಟ್ಟಡ ಧ್ವಂಸ

►1993: ವಿವಾದಿತ ನಿವೇಶನದ ಸುತ್ತಲಿನ 67 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡ ಕೇಂದ್ರದಿಂದ ಮಸೀದಿ ನಿರ್ಮಾಣಕ್ಕೆ ಮೊದಲು ಆ ಸ್ಥಳದಲ್ಲಿ ಹಿಂದು ಪೂಜಾ ಸ್ಥಳವಿತ್ತೇ ಎನ್ನುವುದರ ಕುರಿತು ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯ ಕೋರಿ ಅರ್ಜಿ ಸಲ್ಲಿಕೆ. ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಇಸ್ಮಾಯಿಲ್ ಫಾರೂಕಿ ಸೇರಿದಂತೆ ಹಲವರಿಂದ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಗಳ ಸಲ್ಲಿಕೆ

►1994,ಅ.24: ಮಸೀದಿಯು ಇಸ್ಲಾಮಿನ ಅವಿಭಾಜ್ಯ ಅಂಗವಲ್ಲ ಎಂದು ಐತಿಹಾಸಿಕ ಇಸ್ಮಾಯಿಲ್ ಫಾರೂಕಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಹೇಳಿಕೆ

►2002,ಎಪ್ರಿಲ್: ವಿವಾದಿತ ನಿವೇಶನದ ಒಡೆತನ ಯಾರಿಗೆ ಸೇರಿದ್ದು ಎನ್ನುವುದನ್ನು ನಿರ್ಧರಿಸಲು ಅಲಹಾಬಾದ್ ಉಚ್ಚ ನ್ಯಾಯಾಲಯದಿಂದ ವಿಚಾರಣೆ ಆರಂಭ

►2003,ಮಾ.13: ವಿವಾದಿತ ನಿವೇಶನದಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದು ಅಸ್ಲಾಂ ಅಲಿಯಾಸ್ ಭುರೆ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಹೇಳಿಕೆ

►2003,ಮಾ.14: ಕೋಮು ಸೌಹಾರ್ದವನ್ನು ಕಾಯುಕೊಳ್ಳಲು ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿನ ಸಿವಿಲ್ ಪ್ರಕರಣಗಳು ಇತ್ಯರ್ಥಗೊಳ್ಳುವವರೆಗೂ ತಾನು ಹೊರಡಿಸಿರುವ ಮಧ್ಯಂತರ ಆದೇಶವು ಕಾರ್ಯಾಚರಣೆಯಲ್ಲಿರಬೇಕು ಎಂದು ತಿಳಿಸಿದ ಸರ್ವೋಚ್ಚ ನ್ಯಾಯಾಲಯ

►2010,ಸೆ.30: ವಿವಾದಿತ ನಿವೇಶನವನ್ನು ಸುನ್ನಿ ವಕ್ಫ್ ಬೋರ್ಡ್,ನಿರ್ಮೋಹಿ ಅಖಾಡಾ ಮತ್ತು ರಾಮ ಲಲ್ಲಾ ವಿರಾಜಮಾನ ನಡುವೆ ಸಮಾನ ಹಂಚಿಕೆಗೆ ಆದೇಶಿಸಿ ಅಲಹಾಬಾದ್ ಉಚ್ಚ ನ್ಯಾಯಾಲಯದ ವಿಶೇಷ ಪೂರ್ಣ ಪೀಠದ ತೀರ್ಪು

►2011,ಮೇ 9: ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪಿಗೆ ಸರ್ವೋಚ್ಚ ನ್ಯಾಯಾಲಯದ ತಡೆಯಾಜ್ಞೆ

►2016,ಫೆ.26: ವಿವಾದಿತ ನಿವೇಶನದಲ್ಲಿ ಮಂದಿರ ನಿರ್ಮಾಣ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ

►2017,ಮಾ.21: ಎದುರಾಳಿ ಕಕ್ಷಿದಾರರ ನಡುವೆ ನ್ಯಾಯಾಲಯದ ಹೊರಗೆ ಇತ್ಯರ್ಥಗೊಳಿಸುವಂತೆ ಆಗಿನ ಭಾರತದ ಮುಖ್ಯ ನ್ಯಾಯಾಧೀಶ ಜೆ.ಎಸ್.ಖೆಹರ್ ಅವರ ಸಲಹೆ

►2017,ಆ.7: ಅಲಹಾಬಾದ್ ಉಚ್ಚ ನ್ಯಾಯಾಲಯದ 2010ರ ತೀರ್ಪನ್ನು ಪ್ರಶ್ನಿಸಿದ ಅರ್ಜಿಗಳ ವಿಚಾರಣೆಗಾಗಿ ಸರ್ವೋಚ್ಚ ನ್ಯಾಯಾಲಯದಿಂದ ಮೂವರು ನ್ಯಾಯಾಧೀಶರ ಪೀಠ ರಚನೆ

►2018,ಫೆ.8: ಸರ್ವೋಚ್ಚ ನ್ಯಾಯಾಲಯದಲ್ಲಿ ಸಿವಿಲ್ ಮೇಲ್ಮನವಿಗಳ ವಿಚಾರಣೆ ಆರಂಭ

►2018,ಜು.20: ತನ್ನ ತೀರ್ಪನ್ನು ಕಾಯ್ದಿರಿಸಿದ ಸರ್ವೋಚ್ಚ ನ್ಯಾಯಾಲಯ

►2018,ಸೆ.27: ಪ್ರಕರಣವನ್ನು ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ಒಪ್ಪಿಸಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ

►2018,ಅ.29: ವಿಚಾರಣೆ ದಿನಾಂಕವನ್ನು ನಿಗದಿಗೊಳಿಸಲು 2019,ಜನವರಿಯಲ್ಲಿ ವಿವಾದ ಅರ್ಜಿಗಳನ್ನು ಸೂಕ್ತ ಪೀಠದೆದುರು ಉಲ್ಲೇಖಿಸುವಂತೆ ಮು.ನ್ಯಾ.ರಂಜನ ಗೊಗೊಯಿ ನೇತೃತ್ವದ ಮೂವರು ನ್ಯಾಯಾಧೀಶರ ಪೀಠದ ಆದೇಶ

►2019,ಜ.8: ಮು.ನ್ಯಾ.ರಂಜನ್ ಗೊಗೊಯಿ ನೇತೃತ್ವದ,ನಾಲ್ವರು ಜೇಷ್ಠ ನ್ಯಾಯಮೂರ್ತಿಗಳಾದ ಎಸ್.ಎ.ಬೊಬ್ಡೆ,ಎನ್.ವಿ.ರಮಣ,ಯು.ಯು.ಲಲಿತ್ ಮತ್ತು ಡಿ.ವೈ.ಚಂದ್ರಚೂಡ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಪೀಠಕ್ಕೆ ಅಯೋಧ್ಯೆ ಒಡೆತನ ವಿವಾದ ಅರ್ಜಿಗಳ ವಿಚಾರಣೆಯನ್ನು ವಹಿಸಿ ಸರ್ವೋಚ್ಚ ನ್ಯಾಯಾಲಯದಿಂದ ಅಧಿಸೂಚನೆ ಪ್ರಕಟ

►2019,ಜ.10: ಪ್ರಕರಣದ ವಿಚಾರಣೆಯಿಂದ ದೂರ ಸರಿದ ನ್ಯಾ.ಯು.ಯು.ಲಲಿತ್,ನೂತನ ಪೀಠದೆದುರು ಜ.29ರಿಂದ ವಿಚಾರಣೆಗಾಗಿ ವೇಳಾಪಟ್ಟಿಯ ಪರಿಷ್ಕರಣೆ

►2019,ಜ.25: ಪ್ರಕರಣದ ವಿಚಾರಣೆಗಾಗಿ ಐವರು ನ್ಯಾಯಾಧೀಶರ ಸಂವಿಧಾನ ಪೀಠದ ಪುನರ್‌ರಚನೆ. ನೂತನ ಪೀಠದಲ್ಲಿ ಮು.ನ್ಯಾ.ರಂಜನ ಗೊಗೊಯಿ ಮತ್ತು ನ್ಯಾಯಮೂರ್ತಿಗಳಾದ ಎಸ್.ಎ.ಬೊಬ್ಡೆ, ಡಿ.ವೈ.ಚಂದ್ರಚೂಡ, ಅಶೋಕ ಭೂಷಣ ಮತ್ತು ಎಸ್.ಎ.ನಝೀರ್ ಅವರ ಉಪಸ್ಥಿತಿ

►2019,ಫೆ.26: ಪ್ರಕರಣದಲ್ಲಿಯ ಹಿಂದು ಮತ್ತು ಮುಸ್ಲಿಂ ಕಕ್ಷಿದಾರರ ನಡುವೆ ನ್ಯಾಯಾಲಯದ ನಿಗಾದಡಿ ಸಂಧಾನ ಪ್ರಕ್ರಿಯೆಗೆ ಸರ್ವೋಚ್ಚ ನ್ಯಾಯಾಲಯದ ಸಲಹೆ. ಅಯೋಧ್ಯೆ ಪ್ರಕರಣ ದಾಖಲೆಗಳ ಅಧಿಕೃತ ಅನುವಾದವನ್ನು ಪರಿಶೀಲಿಸಲು ಮುಸ್ಲಿಂ ಕಕ್ಷಿದಾರರಿಗೆ ಎಂಟು ವಾರಗಳ ಕಾಲಾವಕಾಶ ನೀಡಿಕೆ

►2019,ಮಾ.8: ಅಯೋಧ್ಯೆ ವಿವಾದವನ್ನು ಮಧ್ಯಸ್ಥಿಕೆಗೆ ಒಪ್ಪಿಸಿದ ಸರ್ವೋಚ್ಚ ನ್ಯಾಯಾಲಯ. ಸಂಧಾನಕಾರರಾಗಿ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಎಫ್‌ಎಂಐ ಕಲೀಫುಲ್ಲಾ,ಧಾರ್ಮಿಕ ಮುಖಂಡ ಶ್ರೀ ಶ್ರೀ ರವಿಶಂಕರ ಮತ್ತು ಹಿರಿಯ ನ್ಯಾಯವಾದಿ ಶ್ರೀರಾಮ ಪಂಚು

►2019,ಆ.2: ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲು ಸಂಧಾನ ಸಮಿತಿ ವಿಫಲ. ಆ.6ರಿಂದ ದೈನಂದಿನ ಆಧಾರದಲ್ಲಿ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯದ ನಿರ್ಧಾರ

►2019,ಆ.6: ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದ ಮೇಲ್ಮನವಿಗಳ ವಿಚಾರಣೆ ಸಂವಿಧಾನ ಪೀಠದಲ್ಲಿ ಆರಂಭ

►2019,ಅ.16: 40 ದಿನಗಳ ಮ್ಯಾರಥಾನ್ ವಿಚಾರಣೆಯ ಬಳಿಕ ಅಯೋಧ್ಯೆ ತೀರ್ಪನ್ನು ಕಾಯ್ದರಿಸಿದ ಸರ್ವೋಚ್ಚ ನ್ಯಾಯಾಲಯ

►2019,ನ.9: ಸರ್ವೋಚ್ಚ ನ್ಯಾಯಾಲಯದಿಂದ ತೀರ್ಪು ಪ್ರಕಟ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)