varthabharthiರಾಷ್ಟ್ರೀಯ

ಬರ್ಲಿನ್ ಗೋಡೆ ಉರುಳಿದ ಈ ದಿನವೇ ಕರ್ತಾರ್‌ಪುರ ಕಾರಿಡಾರ್‌ನ ಬಾಗಿಲು ತೆರೆದಿದೆ: ಪ್ರಧಾನಿ ಮೋದಿ

ವಾರ್ತಾ ಭಾರತಿ : 9 Nov, 2019

ಫೋಟೊ: PTI 

ಹೊಸದಿಲ್ಲಿ, ನ.9: ನವೆಂಬರ್ 9ರಂದು ಬರ್ಲಿನ್ ಗೋಡೆಯನ್ನು ಒಡೆಯಲಾಯಿತು. ಇವತ್ತು, ನವೆಂಬರ್ 9ರಂದು ಕರ್ತಾರ್‌ಪುರ ಕಾರಿಡಾರ್ ತೆರೆಯಲಾಗಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ಸಹಕರಿಸಿದೆ. ಅಯೋಧ್ಯೆಯ ವಿಷಯದಲ್ಲೂ ಈ ದಿನ ನಮಗೆ ಒಟ್ಟಾಗಿ ಸಂಭ್ರವಿಸುವ ಕಾರಣ ದೊರಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ನವೆಂಬರ್ 9ರಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮೋದಿ, ಮುನ್ನಡೆಯಬೇಕಿದ್ದರೆ ನಾವೆಲ್ಲಾ ಒಗ್ಗೂಡಬೇಕಿದೆ. ನವಭಾರತದಲ್ಲಿ ಕಹಿಭಾವನೆಗೆ ಆಸ್ಪದವೇ ಇಲ್ಲ. ಒಟ್ಟಾಗಿ ಬನ್ನಿ ಮತ್ತು ಒಟ್ಟಾಗಿ ಬಾಳಿ ಎಂಬ ಸದಾಶಯವೇ ಇರಲಿದೆ ಎಂದರು.

ಅಯೋಧ್ಯೆ ಪ್ರಕರಣದ ವಿಚಾರಣೆ ಪ್ರತೀ ದಿನ ನಡೆಯಬೇಕೆಂದು ಇಡೀ ರಾಷ್ಟ್ರದ ಜನತೆ ಬಯಸಿದ್ದರು. ಶತಮಾನಗಳಷ್ಟು ಹಿಂದಿನ ಪ್ರಕರಣದ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್ ಪ್ರಕಟಿಸಿದೆ. ಹಲವು ದಶಕಗಳಿಂದ ಸಾಗಿ ಬಂದ ಕಾನೂನು ಪ್ರಕ್ರಿಯೆಗಳಿಗೆ ಅಂತಿಮವಾಗಿ ತೆರೆ ಬಿದ್ದಿದೆ. ಭಾರತ ವಿಶ್ವದಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬುದು ಇಡೀ ವಿಶ್ವಕ್ಕೆ ತಿಳಿದಿರುವ ವಿಷಯ. ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಎಷ್ಟು ಬಲಿಷ್ಟ ಮತ್ತು ಚೈತನ್ಯಶೀಲವಾಗಿದೆ ಎಂಬುದು ಇದೀಗ ಇಡೀ ವಿಶ್ವಕ್ಕೆ ತಿಳಿಯಿತು ಎಂದವರು ಹೇಳಿದ್ದಾರೆ.

ಎಲ್ಲಾ ಸಮುದಾಯದವರು, ವಿವಿಧ ಕ್ಷೇತ್ರದ ಜನತೆ ಸುಪ್ರೀಂಕೋರ್ಟ್‌ನ ತೀರ್ಪನ್ನು ಸ್ವೀಕರಿಸಿರುವ ರೀತಿ ಭಾರತದ ಪರಂಪರೆ ಮತ್ತು ಸಂಪ್ರದಾಯದ ಹೆಗ್ಗುರುತಿನ ಪ್ರತೀಕವಾಗಿದೆ. ವೈವಿಧ್ಯತೆಯಲ್ಲಿ ಏಕತೆ ಎಂಬ ಪದಕ್ಕೆ ಈಗ ಪೂರ್ಣತ್ವ ಲಭಿಸಿದೆ. ಸಾವಿರಾರು ವರ್ಷಗಳ ಬಳಿಕ ಯಾರಾದರೂ ಭಾರತದ ಬಗ್ಗೆ , ಪ್ರಜಾಪ್ರಭುತ್ವದ ಬಗ್ಗೆ ಏನನ್ನಾದರೂ ಹೇಳಲು ಬಯಸಿದಾಗ ಈ ಸಂದರ್ಭವನ್ನು ಉಲ್ಲೇಖಿಸುತ್ತಾರೆ ಎಂಬುದು ಹೆಮ್ಮೆಯ ವಿಷಯವಾಗಿದೆ. ಭಾರತದ ಇತಿಹಾಸದಲ್ಲಿ ಮತ್ತು ದೇಶದ ನ್ಯಾಯಾಂಗದಲ್ಲಿ ಹೊಸ ಅಧ್ಯಾಯ ಬರೆಯಲಾಗಿದೆ ಎಂದು ಮೋದಿ ಹೇಳಿದ್ದಾರೆ.

ದೇಶದ ಹೊಸ ಕಾನೂನುಗಳನ್ನು ಪಾಲಿಸುವ ಅನಿವಾರ್ಯತೆ ಈ ಹಿಂದಿಗಿಂತಲೂ ಈಗ ಹೆಚ್ಚಾಗಿದೆ . ನಮ್ಮೆದುರು ಹಲವು ಗುರಿಗಳಿವೆ. ಹಲವು ಚುನಾವಣೆಗಳಿವೆ, ಹಲವು ವಿಷಯಗಳಿವೆ. ಉತ್ತಮ ಭವಿಷ್ಯಕ್ಕಾಗಿ ಮತ್ತು ನವಭಾರತದ ನಿರ್ಮಾಣದ ಗುರಿ ಇರಿಸಿಕೊಂಡು ಒಗ್ಗೂಡಿ ಮುನ್ನಡೆಯಬೇಕಾಗಿದೆ ಎಂದು ಮೋದಿ ಹೇಳಿದ್ದಾರೆ.

ತಾಳ್ಮೆಯ ಶ್ರೇಷ್ಟತೆ ತೋರಿಸಿದ ತೀರ್ಪು

ಒಂದು ಮನೆಗೆ ಸಂಬಂಧಿಸಿದ ಸಣ್ಣ ವ್ಯಾಜ್ಯಕ್ಕೆ ಕೂಡಾ ಪರಿಹಾರ ಕಂಡುಕೊಳ್ಳುವುದು ಸುಲಭವಲ್ಲ. ಆದರೆ ಈ ಪ್ರಕರಣವನ್ನು ಸುಪ್ರೀಂಕೋರ್ಟ್ ನಿರ್ವಹಿಸಿದ ರೀತಿ ಶ್ಲಾಘನಾರ್ಹವಾಗಿದೆ. ತಾಳ್ಮೆಯ ಶ್ರೇಷ್ಟತೆಯನ್ನು ಈ ತೀರ್ಪು ಎತ್ತಿಹಿಡಿದಿದೆ. ಭಾರತದ ಸಂವಿಧಾನ ಮತ್ತು ನ್ಯಾಯಾಂಗಕ್ಕೆ ತನ್ನದೇ ಆದ ಭವ್ಯ ಪರಂಪರೆಯಿದೆ. ನಾವು ಅದರಲ್ಲಿ ವಿಶ್ವಾಸ ಇರಿಸಿದ್ದೇವೆ. ಸುಪ್ರೀಂಕೋರ್ಟ್ ತೀರ್ಪು ನಮಗೆ ಹೊಸ ದಿನದ ಉದಯದ ಪೂರ್ವಸೂಚಕವಾಗಿದೆ ಎಂದು ಮೋದಿ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)