varthabharthiಕರ್ನಾಟಕ

ಮುಂದಿನ ವರ್ಷದಿಂದ ಮೈಷುಗರ್, ಪಿಎಸ್‍ಎಸ್‍ಕೆ ಆರಂಭ: ಸಿಎಂ ಯಡಿಯೂರಪ್ಪ

ವಾರ್ತಾ ಭಾರತಿ : 9 Nov, 2019

ಮಂಡ್ಯ, ನ.9: ಜಿಲ್ಲೆಯ ರೈತರ ಜೀವನಾಡಿಗಳಾದ ಮೈಷುಗರ್ ಮತ್ತು ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗಳನ್ನು ಮುಂದಿನ ವರ್ಷದಿಂದ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಕೆ.ಆರ್.ಪೇಟೆ  ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಶನಿವಾರ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ಮೇಳ ಮತ್ತು ಉಚಿತ ಔಷಧ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನನ್ನ ಹುಟ್ಟೂರು ಕೆ.ಆರ್.ಪೇಟೆ ತಾಲೂಕಿನ ಸಮಗ್ರ ಅಭಿವೃದ್ದಿಗೆ ಕ್ಷೇತ್ರದ ಜನಪ್ರಿಯ ನಾಯಕರಾದ ನಾರಾಯಣಗೌಡ ಅವರ ಆಶಯದಂತೆ ಅಗತ್ಯ ಅನುದಾನ ನೀಡಲಾಗುವುದು. ತಾಲೂಕಿಗೆ ಆಗಬೇಕಾದ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ಕೆ.ಆರ್.ಪೇಟೆ ತಾಲೂಕಿನಲ್ಲಿ ಮೆಡಿಕಲ್ ಕಾಲೇಜು ಹಾಗೂ ವಿವಿಧ ವೈದ್ಯಕೀಯ ಕೋರ್ಸುಗಳ ಸ್ಥಾಪನೆಗೆ ನಾರಾಯಣಗೌಡರು ಬೇಡಿಕೆ ಇಟ್ಟಿದ್ದಾರೆ.  ವೈದ್ಯಕೀಯ ವಿಜ್ಞಾನಕ್ಕೆ ಸಂಬಂಧಿಸಿದ ಪ್ಯಾರಾ ಮೆಡಿಕಲ್ ಕೋರ್ಸುಗಳನ್ನು ಆರಂಭಿಸಲಾಗುವುದು. ತಾಲೂಕನ್ನು ರಾಜ್ಯದಲ್ಲಿಯೇ ಮಾದರಿ  ತಾಲೂಕನ್ನಾಗಿ ಅಭಿವೃದ್ದಿಪಡಿಸಲಾಗುವುದು ಎಂದು ಅವರು ತಿಳಿಸಿದರು.

ನಾರಾಯಣಗೌಡರಂತಹ ಸಜ್ಜನ, ಪ್ರಾಮಾಣಿಕ ವ್ಯಕ್ತಿ ರಾಜಕೀಯ ಕ್ಷೇತ್ರದಲ್ಲಿ ಸಿಗುವುದು ಅಪರೂಪ. ಇಂತಹ ವ್ಯಕ್ತಿಯನ್ನು ನಿಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ದೀರಿ. ಮುಂದೆ ಬರುವ ದಿನಗಳಲ್ಲೂ ಇವರಿಗೆ ನೀವು ಆಶೀರ್ವಾದ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಬೃಹತ್ ಆರೋಗ್ಯ ಮೇಳಕ್ಕೆ ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ವೈದ್ಯಕೀಯ ತಪಾಸಣೆಗೆ ಒಳಪಟ್ಟರು. ತಪಾಸಣೆಗೆ ಒಳಗಾದ ಎಲ್ಲಾ ರೋಗಿಗಳಿಗೂ ಉಚಿತ ಔಷಧ ವಿತರಣೆ ಮಾಡಲಾಯಿತು. ಅಲ್ಲದೇ ಈ ಆರೋಗ್ಯ ಮೇಳದಲ್ಲಿ ರೋಗಪತ್ತೆಯಾದ ಎಲ್ಲಾ ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸಲು ಅಗತ್ಯ ಅನುದಾನ ನೀಡಲಾಗಿದೆ ಎಂದು ಅತಿಥಿಯಾಗಿದ್ದ ಡಿಸಿಎಂ ಡಾ.ಅಶ್ವತ್ ನಾರಾಯಣ್ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್, ಸಂಸದೆ ಸುಮಲತಾ ಅಂಬರೀಷ್, ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ, ಮೂಡ ಅಧ್ಯಕ್ಷ ಕೆ.ಶ್ರೀನಿವಾಸ್, ರಾಜ್ಯ ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ನಾಗಣ್ಣಗೌಡ,  ತಾಲೂಕು ಬಿಜೆಪಿಅಧ್ಯಕ್ಷ  ಬೂಕಹಳ್ಳಿ ಮಂಜು, ತಾಲೂಕು ತಾಪಂ ಸದಸ್ಯೆ ಮೀನಾಕ್ಷಿ, ಮನ್‍ಮುಲ್ ನಿರ್ದೇಶಕ ಕೆ.ಜಿ.ತಮ್ಮಣ್ಣ, ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್, ಸಿಇಓ ಕೆ.ಯಾಲಕ್ಕೀಗೌಡ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)