ದಬಾಂಗ್ 3 ನಲ್ಲಿ ಸಲ್ಮಾನ್ ಹಾಡುವರೇ?
ದಬಾಂಗ್ 3 ಬಿಡುಗಡೆಯನ್ನು ಬಾಲಿವುಡ್ ಸುಲ್ತಾನ್ ಸಲ್ಮಾನ್ಖಾನ್ ಅಭಿಮಾನಿಗಳು ತದೇಕಚಿತ್ತದಿಂದ ಕಾಯುತ್ತಿದ್ದಾರೆ. ದಬಾಂಗ್ ಚಿತ್ರದ ಮೊದಲ ಹಾಗೂ ಎರಡನೇ ಭಾಗವು ಸೂಪರ್ ಹಿಟ್ ಆಗಿದ್ದವು. ಸಲ್ಮಾನ್ ಅಭಿನಯ ಹಾಗೂ ಹಾಡುಗಳೇ ಈ ಚಿತ್ರದ ಜೀವಾಳವಾಗಿದ್ದವು ಎಂಬುದರಲ್ಲಿ ಎರಡು ಮಾತಿಲ್ಲ. ಇದೀಗ ದಬಾಂಗ್ 3ರಲ್ಲಿಯೂ ಸಲ್ಮಾನ್ ಖಾನ್ ತನ್ನ ಅಭಿಮಾನಿಗಳಿಗಾಗಿ ಹೊಸತೊಂದನ್ನು ನೀಡುವ ತವಕದಲ್ಲಿದ್ದಾರೆ. ಆದಾಗ್ಯೂ, ಈ ಚಿತ್ರದಲ್ಲಿ ಸಲ್ಮಾನ್ಖಾನ್ ಅವರು ತಮ್ಮ ಕಂಠಸಿರಿಯಿಂದಲೇ ಹಾಡೊಂದನ್ನು ಹಾಡುವ ಸಾಧ್ಯತೆಯಿದೆಯೆಂದು ಚಿತ್ರತಂಡದ ಮೂಲಗಳು ಹೇಳಿಕೊಂಡಿವೆ. ಸಿನೆಮಾ ಸಂಗೀತದ ಬಗ್ಗೆ ಸದಭಿರುಚಿ ಹೊಂದಿರುವ ಸಲ್ಮಾನ್ಖಾನ್, ತನ್ನ ಚಿತ್ರಗಳಲ್ಲಿನ ಹಾಡುಗಳ ಬಗ್ಗೆ ಅಪಾರ ಕಾಳಜಿ ವಹಿಸುತ್ತಾರೆಂಬುದು ಬಾಲಿವುಡ್ನಲ್ಲಿ ಎಲ್ಲರಿಗೂ ತಿಳಿದಿರುವ ವಿಷಯ.
ಅಂದಹಾಗೆ ಸಲ್ಮಾನ್ ಈ ಮೊದಲು ಹಲವಾರು ಸಿನೆಮಾಗಳಲ್ಲಿ ಹಾಡಿದ್ದಾರೆಂಬುದು ಅನೇಕರಿಗೆ ತಿಳಿದಿಲ್ಲ. ಅವುಗಳಲ್ಲಿ ಕೆಲವಂತೂ ಸೂಪರ್ಹಿಟ್ ಕೂಡಾ ಆಗಿವೆ. ಹೀರೋ ಚಿತ್ರದ ಮೈ ಹೂ ಹೀರೋ ತೇರಾ ಹಾಗೂ ಕಿಕ್ ಚಿತ್ರದ ಹ್ಯಾಂಗೊವರ್ ಹಾಡುಗಳನ್ನು ಅವರೇ ಹಾಡಿದ್ದು, ಅವು ಈಗಲೂ ಚಿತ್ರರಸಿಕರ ಮನದಲ್ಲಿ ಹಸಿರಾಗಿಯೇ ಉಳಿದಿವೆ.