varthabharthi


ಅಂತಾರಾಷ್ಟ್ರೀಯ

ಗ್ಯಾಂಬಿಯಾದಿಂದ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಮ್ಯಾನ್ಮಾರ್ ವಿರುದ್ಧ ರೋಹಿಂಗ್ಯಾ ನರಮೇಧ ಪ್ರಕರಣ ದಾಖಲು

ವಾರ್ತಾ ಭಾರತಿ : 11 Nov, 2019

ಫೋಟೊ: www.hrw.org

ದಿ ಹೇಗ್, ನ.11: ಮ್ಯಾನ್ಮಾರ್ ತನ್ನದೇ ಆದ ರೋಹಿಂಗ್ಯಾ ಮುಸ್ಲಿಂ ಅಲ್ಪಸಂಖ್ಯಾತರ ನರಮೇಧವನ್ನು ನಡೆಸುತ್ತಿದೆ ಎಂದು ಆರೋಪಿಸಿ ತಾನು ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ)ದಲ್ಲಿ ಮೊಕದ್ದಮೆಯನ್ನು ದಾಖಲಿಸಿರುವುದಾಗಿ ಗೇಂಬಿಯಾ ಸೋಮವಾರ ಹೇಳಿದೆ. ಈ ಕ್ರಮಕ್ಕೆ ಮಾನವ ಹಕ್ಕು ಗುಂಪುಗಳು ಮತ್ತು ರೋಹಿಂಗ್ಯಾ ಕಾರ್ಯಕರ್ತರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮ್ಯಾನ್ಮಾರ್ ಸೇನೆಯ ಆಕ್ರಮಣದಿಂದ ಜೀವವನ್ನುಳಿಸಿಕೊಳ್ಳಲು 7,30,000ಕ್ಕೂ ಅಧಿಕ ರೋಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪರಾರಿಯಾಗಿದ್ದಾರೆ. ಮ್ಯಾನ್ಮಾರ್ ಸೇನೆಯು ನರಮೇಧದ ಉದ್ದೇಶದಿಂದ ರೋಹಿಂಗ್ಯಾಗಳ ವಿರುದ್ಧ ದಾಳಿ ನಡೆಸಿದೆ ಎಂದು ವಿಶ್ವಸಂಸ್ಥೆಯ ತನಿಖಾ ತಂಡ ಹೇಳಿದ್ದರೆ,ಬೌದ್ಧರು ಬಹುಸಂಖ್ಯಾಕರಾಗಿರುವ ಮ್ಯಾನ್ಮಾರ್ ನರಮೇಧದ ಆರೋಪಗಳನ್ನು ತಿರಸ್ಕರಿಸಿದೆ.

ಪಶ್ಚಿಮ ಆಫ್ರಿಕಾದ ಮುಸ್ಲಿಂ ಬಾಹುಳ್ಯದ ಪುಟ್ಟ ರಾಷ್ಟ್ರವಾಗಿರುವ ಗೇಂಬಿಯಾ 57 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಆರ್ಗನೈಸೇಷನ್ ಫಾರ್ ಇಸ್ಲಾಮಿಕ್ ಕೋಆಪರೇಷನ್ (ಒಐಸಿ)ನ ಬೆಂಬಲವನ್ನು ಪಡೆದುಕೊಂಡ ಬಳಿಕ ಈ ಮೊಕದ್ದಮೆಯನ್ನು ದಾಖಲಿಸಿದೆ. ಒಂದು ರಾಷ್ಟ್ರ ಮಾತ್ರ ಇನ್ನೊಂದು ರಾಷ್ಟ್ರದ ವಿರುದ್ಧ ಐಸಿಜೆಯಲ್ಲಿ ಮೊಕದ್ದಮೆಯನ್ನು ದಾಖಲಿಸಬಹುದಾಗಿದೆ.

‘ ತನ್ನದೇ ರೋಹಿಂಗ್ಯಾ ಜನರ ವಿರುದ್ಧ ತನ್ನ ಕೃತ್ಯಕ್ಕೆ ಮ್ಯಾನ್ಮಾರ್‌ನ್ನು ಉತ್ತರದಾಯಿಯನ್ನಾಗಿಸುವುದು ನಮ್ಮ ಉದ್ದೇಶವಾಗಿದೆ. ನಮ್ಮ ಕಣ್ಣೆದುರೇ ನರಮೇಧ ನಡೆಯುತ್ತಿದ್ದರೂ ಏನೂ ಮಾಡದೆ ಸುಮ್ಮನೆ ಉಳಿಯುವುದು ನಮ್ಮ ಪೀಳಿಗೆಗೆ ನಾಚಿಕೆಗೇಡಿನದ್ದಾಗಿದೆ ’ ಎಂದು ಗ್ಯಾಂಬಿಯಾದ ನ್ಯಾಯ ಸಚಿವ ಅಬೂಬಕರ್ ತಂಬಾಡೌ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗ್ಯಾಂಬಿಯಾ ಮತ್ತು ಮ್ಯಾನ್ಮಾರ್ 1948ರ ನರಮೇಧ ನಿರ್ಣಯಕ್ಕೆ ಸಹಿ ಹಾಕಿವೆ. ಈ ನಿರ್ಣಯವು ಸರಕಾರಗಳು ನರಮೇಧ ನಡೆಸುವುದನ್ನು ನಿಷೇಧಿಸಿರುವ ಜೊತೆಗೆ ನರಮೇಧ ಅಪರಾಧವನ್ನು ತಡೆಗಟ್ಟುವುದನ್ನು ಮತ್ತು ದಂಡಿಸುವುದನ್ನು ಎಲ್ಲ ಸದಸ್ಯ ರಾಷ್ಟ್ರಗಳಿಗೆ ಕಡ್ಡಾಯಗೊಳಿಸಿದೆ.

ತನ್ನ ತೀರ್ಪುಗಳನ್ನು ಜಾರಿಗೊಳಿಸುವ ಅಧಿಕಾರ ಐಸಿಜೆಗೆ ಇಲ್ಲ. ಆದರೆ ಮ್ಯಾನ್ಮಾರ್ ಅದರ ತೀರ್ಪನ್ನು ಉಲ್ಲಂಘಿಸಿದರೆ ಜಾಗತಿಕ ಮಟ್ಟದಲ್ಲಿ ಅದರ ಪ್ರತಿಷ್ಠೆಗೆ ಇನ್ನಷ್ಟು ಹಾನಿಯಾಗುತ್ತದೆ.

ಈಗಾಗಲೇ ಸಾಕಷ್ಟು ಸಂಕಷ್ಟವನ್ನು ಅನುಭವಿಸಿರುವ ರೋಹಿಂಗ್ಯಾ ಸಮುದಾಯವು ಗೇಂಬಿಯಾದ ಈ ಕ್ರಮವನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದು ರೋಹಿಂಗ್ಯಾ ಕಾರ್ಯಕರ್ತ ಯಾಸ್ಮೀನ್ ಉಲ್ಲಾ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಐಸಿಜೆ ಮೊಕದ್ದಮೆಯಲ್ಲಿ ಗೇಂಬಿಯಾದೊಂದಿಗೆ ಕೈಜೋಡಿಸುವಂತೆ ಇತರ ರಾಷ್ಟ್ರಗಳಿಗೆ ಅವರು ಕರೆ ನೀಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)