ಜೈಲು ಅಧಿಕಾರಿ ಏಕಾಏಕಿ ಕೋಟ್ಯಧಿಪತಿಯಾಗಿದ್ದು ಹೇಗೆ ಗೊತ್ತಾ?
ಹೊಸದಲ್ಲಿ, ನ.13: ಜನಪ್ರಿಯ ಟಿವಿ ಶೋ ಕೌನ್ ಬನೇಗಾ ಕರೋಡ್ ಪತಿಯ 11ನೇ ಅವತರಣಿಕೆಯಲ್ಲಿ ಬಿಹಾರದ ಹಾಜಿಪುರ ಜೈಲು ಅಧಿಕಾರಿ ಅಜೀತ್ ಕುಮಾರ್ ಒಂದು ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾರೆ. ಈ ಸೀಸನ್ನಲ್ಲಿ ಒಂದು ಕೋಟಿ ರೂಪಾಯಿ ಬಹುಮಾನ ಗೆದ್ದ ನಾಲ್ಕನೇ ಸ್ಪರ್ಧಿ ಇವರಾಗಿದ್ದಾರೆ. ಇವರು ಒಂದು ಕೋಟಿ ರೂಪಾಯಿ ಗೆದ್ದ ಪ್ರಶ್ನೆ: "ಬ್ರಿಟಿಷ್ ರಾಕೆಟ್ನಿಂದ ಯಶಸ್ವಿಯಾಗಿ ಉಡಾಯಿಸಲ್ಪಟ್ಟ ಮೊಟ್ಟಮೊದಲ ಬ್ರಿಟಿಷ್ ಉಪಗ್ರಹ ಯಾವುದು?" ಎಂದಾಗಿತ್ತು. ಕುಮಾರ್ ಅವರು ತಮ್ಮ ಅಂತಿಮ ಲೈಫ್ಲೈನ್ "ಫಿಫ್ಟಿ-ಫಿಫ್ಟಿ" ಬಳಸಿಕೊಂಡರು.
ಪ್ರೋಸ್ಪೆರಾ ಮತ್ತು ಮಿರಂಡಾ ಎಂಬ ಎರಡು ಆಯ್ಕೆಗಳಲ್ಲಿ ಒಂದು ಉತ್ತರವನ್ನು ಕುಮಾರ್ ಆಯ್ಕೆ ಮಾಡಬೇಕಿತ್ತು. ಅಂತಿಮವಾಗಿ ಕುಮಾರ್ ಪ್ರೋಸ್ಪೆರಾ ಉತ್ತರ ಆಯ್ಕೆ ಮಾಡಿಕೊಂಡರು. ಅದು ಸರಿಯಾದ ಉತ್ತರವಾಗಿತ್ತು. ಆದರೆ ಅಂತಿಮ ಹಾಗೂ ಹದಿನಾರನೇ ಪ್ರಶ್ನೆಗೆ ಸ್ಪಷ್ಟ ಉತ್ತರ ಗೊತ್ತಿಲ್ಲದ ಕಾರಣ ಅವರು ಆಟದಿಂದ ನಿರ್ಗಮಿಸಿದರು. ಈ ಪ್ರಶ್ನೆಗೆ 7 ಕೋಟಿ ರೂಪಾಯಿ ಬಹುಮಾನವಿತ್ತು.
ಏಳು ಕೋಟಿ ಮೌಲ್ಯದ ಹದಿನಾರನೇ ಪ್ರಶ್ನೆ, "ಒಂದೇ ದಿನ ಎರಡು ಬೇರೆ ಬೇರೆ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ ಮೊದಲ ಆಟಗಾರ ಯಾರು" ಎನ್ನುವುದಾಗಿತ್ತು. ಕಾರ್ಯಕ್ರಮ ನಿರೂಪಕ ಅಮಿತಾಬ್ ಬಚ್ಚನ್, ಈ ಸಾಧನೆಗಾಗಿ ಅಜಿತ್ ಕುಮಾರ್ ಅವರನ್ನು ಅಭಿನಂದಿಸಿದರು. ಹಿಂದಿನ ದಿನ 12.5 ಲಕ್ಷ ರೂಪಾಯಿ ಗೆದ್ದಿದ್ದ ಅಜೀತ್, ಎರಡು ಲೈಫ್ಲೈನ್ ಉಳಿಸಿಕೊಂಡಿದ್ದರು.