varthabharthi

ಅನುಗಾಲ

ಬಹುಜನ ಹಿತಾಯ! ಬಹುಜನ ಸುಖಾಯ!

ವಾರ್ತಾ ಭಾರತಿ : 13 Nov, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ತಾರ್ಕಿಕತೆ ನಿರ್ಣಯಗಳನ್ನು ಪ್ರಭಾವಿಸಬೇಕಾದ ಮುಖ್ಯ ಸೂತ್ರವಾಗಬೇಕು. ಆದರೆ ನಂಬಿಕೆಯನ್ನು ಎತ್ತಿಹಿಡಿಯುವ ತಾತ್ವಿಕತೆಯು ನ್ಯಾಯಾಲಯಗಳ ನಿರ್ಣಯಗಳನ್ನು ಪ್ರಭಾವಿಸಿದಾಗ ಅದು ಪಾರಲೌಕಿಕವೆಂದೇ ಒಪ್ಪಿಕೊಳ್ಳಬೇಕಾದ ಸಂದಿಗ್ಧತೆಯು ಎದುರಾಗುತ್ತದೆ. ಇದೊಂದು ರೀತಿಯಲ್ಲಿ ಸತ್ತವನಿಗೆ ಚೆಕ್ ನೀಡಿ ಹಣ ಮರುಪಾವತಿ ಮಾಡಿದಂತೆ. ಅವನು ಅದನ್ನು ನಗದೀಕರಿಸಲಾರ; ಆದರೆ ಸಾಲಗಾರನು ಋಣಮುಕ್ತನಾದೆನೆಂಬ ತೃಪ್ತಿ, ಸಮಾಧಾನವನ್ನು ಹೊಂದಬಹುದು.


9/11 ಸ್ವತಂತ್ರ ಭಾರತದ ಇತಿಹಾಸದಲ್ಲಿ ಮಹತ್ವದ ದಿನವೆನಿಸಿದೆ. ಈ ಬಾರಿಯ ಆ ದಿನ ಕಳೆದ ಏಳು ದಶಕಗಳಿಗೂ ಮಿಕ್ಕಿ ಬಾಕಿಯುಳಿದಿದ್ದ ಅಯೋಧ್ಯೆಯ ರಾಮಮಂದಿರ-ಬಾಬರಿ ಮಸೀದಿ ನಡುವಣ ವಿವಾದವನ್ನು ಸಮಾಧಿ ಮಾಡಿದ ದಿನ. ಐದು ಮಂದಿ ನ್ಯಾಯಮೂರ್ತಿಗಳ ಸಂವಿಧಾನಪೀಠವು ಈ ಕುರಿತ ಒಮ್ಮತದ ತೀರ್ಪನ್ನು ನೀಡಿದೆ. 1,000ಕ್ಕೂ ಮಿಕ್ಕಿ ಪುಟಗಳಲ್ಲಿರುವ ಈ ತೀರ್ಪನ್ನು ಅಧ್ಯಯನ ಮಾಡಿ ಅದರ ಶವಪರೀಕ್ಷೆಯನ್ನು ಮಾಡಬಹುದು. ಆದರೆ ಕೊನೆಗೂ ಅದೊಂದು ಶೂನ್ಯ ಸಂಪಾದನೆಯಾಗುವುದರಿಂದ ಅದನ್ನು ಎಳೆಎಳೆಯಾಗಿ ಬಿಡಿಸಿ ಶೋಧಿಸುವ ಅವಶ್ಯಕತೆ ಸದ್ಯಕ್ಕಂತೂ ಇಲ್ಲ. ಅದರ ಲಕ್ಷಣ, ಪರಿಣಾಮ ಮತ್ತು ಮಹತ್ವವನ್ನಷ್ಟೇ ಹೇಳಬಹುದು.

ಯಾವುದೇ ಚರ್ಚೆಗೆ ಒಂದು ತಾರ್ಕಿಕ ಅಂತ್ಯವನ್ನು ಕಾಣುವ ಅಗತ್ಯವಿರುತ್ತದೆ. ಅಧಿಕಾರ ಮತ್ತು ಅಸಹಾಯಕತೆ, ಶಕ್ತ ಮತ್ತು ದುರ್ಬಲ, ಇವರ ನಡುವಣ ಹೋರಾಟದಲ್ಲಿ ವಿಜಯದ ಹಕ್ಕು ಯಾರದ್ದೆಂದು ಹೇಳುವ ಅಗತ್ಯವಿಲ್ಲ. ಇಲ್ಲಿ ಡೇವಿಡ್ ಮತ್ತು ಗೋಲಿಯಾಥ್ ಅಥವಾ ಮೊಲ ಮತ್ತು ಆಮೆಯ ನಡುವಣ ಸ್ಪರ್ಧೆಯನ್ನು ಹೋಲಿಸುವ ಅಗತ್ಯವಿಲ್ಲ. ಆಗ ಇಂತಹ ಹೋರಾಟಗಳ ದಿಕ್ಕು ತರ್ಕವನ್ನು ಮೀರಿ ಅನುಕೂಲವನ್ನು ಆಶ್ರಯಿಸುತ್ತದೆ. ಯಾವ ತೀರ್ಪು ತನಗೆ ಅನುಕೂಲ ಎಂದು ನಿರ್ಣಯಿಸುವ ಹಾದಿ ಒಂದಾದರೆ, ಯಾವ ತೀರ್ಪು ಹೆಚ್ಚು ಜನರನ್ನು ಸಂತೋಷದಲ್ಲಿಡಬಹುದು ಎಂಬುದು ಇನ್ನೊಂದು. ಅಯೋಧ್ಯೆಯ ರಾಮಾಯಣ ಕೊನೆಗೂ ಮುಗಿಯಿತು ಎಂಬುದು ಒಂದು ದೃಷ್ಟಿಕೋನವಾದರೆ ಅದು ಮಂಗಳವಾಗಿ ಮುಗಿಯಿತು ಎಂಬುದು ಇನ್ನೊಂದು. ಹೀಗಾಗಿ ಅನೇಕ ತೀರ್ಮಾನಗಳಲ್ಲಿ- ಅರಳಿಕಟ್ಟೆಯಿಂದ ಸರ್ವೋಚ್ಚ ನ್ಯಾಯಾಲಯದ ಅಥವಾ ಸರ್ವಶಕ್ತ ದೇವರ ವರೆಗೆ ತರ್ಕವನ್ನು ಮೀರಿದ ಅರ್ಧಸತ್ಯವನ್ನು ಕಂಡುಕೊಳ್ಳುವುದು ಅನಿವಾರ್ಯವಾಗುತ್ತದೆ. ನಮ್ಮ ಪುರಾಣಗಳು ಬಹುತೇಕ ಹೇಳಿದ್ದು ಇದನ್ನೇ. ಪ್ರಿಯವಾದ ಸುಳ್ಳು ಅಪ್ರಿಯವಾದ ಸತ್ಯಕ್ಕಿಂತ ಹೆಚ್ಚು ಸ್ವೀಕಾರಾರ್ಹವಾಗುತ್ತದೆ. ಸಮಾಜ ನಡೆಯುವುದು ಇಂತಹ ಅರ್ಧಸತ್ಯಗಳ ಮಂಜುಬೆಳಕಿನಲ್ಲೇ.

ಈ ಅರ್ಧಸತ್ಯದ ಮಂಜಿನಲ್ಲಿ ರಾಮಾಯಣವನ್ನು ದರ್ಶಿಸಬಹುದು: ರಾಮಾಯಣವು ರಾಮ ನಡೆದ ಹಾದಿಯಷ್ಟೇ ಅಲ್ಲ, ಪ್ರತಿಯೊಬ್ಬರೂ ಹಾಗೆಯೇ ಇರಬೇಕೆಂಬ ಸಂದೇಶದ ಮತ್ತು ಒಟ್ಟಾರ್ಥದಲ್ಲಿ ತ್ಯಾಗದ ಕಥೆ. ಅಧಿಕಾರವನ್ನು ತ್ಯಜಿಸಿದ, ಶೋಕದಿಂದ ಶ್ಲೋಕ ಹುಟ್ಟಿತೆಂಬ ಕ್ಲೀಷೆಯನ್ನು ಸೃಷ್ಟಿಸಿದ, ಪಿತೃವಾಕ್ಯ ಪರಿಪಾಲನೆಯೆಂಬ ಹೆಸರಿನಲ್ಲಿ ದಶರಥನು ಕೈಕೆಯಿಗೆ ಕೊಟ್ಟ ಮಾತನ್ನು ನಡೆಸಲು ರಾಮನು ಪಟ್ಟಾಭಿಷೇಕವನ್ನು ತೊರೆದು ವನವಾಸವನ್ನು ಕೈಗೊಂಡ, ಈ ನಿರ್ಣಯಕ್ಕೆ ಪೂರಕವಾಗಿ ಲಕ್ಷ್ಮಣನೂ ಯಾವುದೇ ಹಂಗಿಲ್ಲದಾಗಲೂ ಪತ್ನಿಯನ್ನು ಬಿಟ್ಟು ವನವಾಸವನ್ನು ನಡೆಸಿದ, ಅನಾಯಾಸವಾಗಿ ಬಂದ ಪಟ್ಟವನ್ನು ತ್ಯಜಿಸಿ ರಾಮನನ್ನು ಹುಡುಕಿ ಬಂದು ಮರಳಿಬರುವಂತೆ ಕೋರಿ, ಅದಕ್ಕೆ ರಾಮನು ಒಪ್ಪದಿದ್ದಾಗ ಅಯೋಧ್ಯೆಯ ಹೊರವಲಯದ ನಂದಿಗ್ರಾಮದಲ್ಲಿ ಋಷಿಗಳಂತೆಯೇ ಬದುಕಿ ಅವನನ್ನು ಕಾಯುತ್ತ ಕಳೆದ ಭರತನ ಕಥೆ. ಇದು ಇನ್ನೂ ಅನೇಕರ ಸಂಕಟದ ಕಥೆಯೂ ಹೌದು. ಶಬರಿ, ಜಟಾಯು, ವಾಲಿ ಹೀಗೆ ಅನೇಕರ ಬದುಕನ್ನು ತರ್ಕದ ಹಾದಿಯಿಂದ ವಿಶ್ವದ ಭವಿಷ್ಯದ, ಆದರ್ಶದ ಹಾದಿಯಲ್ಲಿ ನಡೆಸಿದ ಕಥೆಯೂ ಹೌದು.

ಮಂಗಳಂ ಕೋಸಲೇಂದ್ರಾಯ ಎಂದಾಗ ಅಯೋಧ್ಯೆ ಮುಖ್ಯವಲ್ಲ ಎಂದು ಕವಿಗೂ ಅನಿಸಿರಬೇಕು. ತಾಯಿ ಇದ್ದಾಗಲೂ ‘‘ತಂದೆಯಡಗಿದ ಬಳಿಕ ನೀನೇ ತಂದೆ ತಾಯೆನಗವನಿಜಾತೆಯು’’ ಎಂದು ಭರತನ ಬಾಯಲ್ಲಿ ಕವಿ ಹಾಡಿಸಿದ್ದು ಮಾತ್ರ ‘‘ಕುಪುತ್ರೋ ಜಾಯೇತು ಕ್ವಚಿದಪಿ ಕುಮಾತಾ ನ ಭವತಿಃ’’ ಎಂಬ ತರ್ಕವನ್ನು ಮೀರಿದ್ದು. ರಾಮಾಯಣದಲ್ಲಿ ಬರುವ ವಾಲಿವಧೆ, ಸೀತೆಯ ಅಗ್ನಿಪರೀಕ್ಷೆ, ಸೀತಾ ಪರಿತ್ಯಾಗ, ಶಂಬೂಕವಧೆ ಇವೆಲ್ಲ ರಾಮನ ವ್ಯಕ್ತಿತ್ವವನ್ನು ದೊಪ್ಪನೆ ನೆಲಕ್ಕೆ ಬೀಳಿಸಿದ ಐತಿಹ್ಯಗಳು. ಇವನ್ನು ಸಮರ್ಥಿಸುವುದು ಹೇಗೆ? ಪ್ರಾಯಃ ವಕೀಲರಿಗಿಂತಲೂ ಹೆಚ್ಚು ಇಂತಹ ಸಂಗತಿಗಳಿಗೆ ಸಮರ್ಥನೆಯ ಲೇಪವನ್ನು ನಮ್ಮ ಯಕ್ಷಗಾನದ ಕಲಾವಿದರು ಅದು ಹೇಗೋ (‘ಉದ್ದಿ, ಒರೆಸಿ’ ಎಂಬ ವಾಡಿಕೆಯ ಮಾತಿನಂತೆ!) ಹಚ್ಚಬಹುದು. ಆದರೆ ಕೊನೆಗೂ ಮನಸ್ಸಿನಲ್ಲಿ ಈ ಮತ್ತು ಇಂತಹ ಪ್ರಸಂಗಗಳು ಶಾಶ್ವತ ಕಿಲುಬುಗಳಂತೆ ಮತ್ತೆ ಮತ್ತೆ ಚರ್ಚೆಗೆ ಒಳಗಾಗುವುದು ಸಹಜ. ಏಕೆಂದರೆ ಬಂಗಾರದ ಪಾತ್ರೆಯೊಳಗೆ ಇರುವ ಸತ್ಯದ ಮುಖವೂ ಬೆಳಕು ಬಿದ್ದಾಗ ಗೋಚರಿಸುತ್ತದೆ. ಬದುಕಿನ ತಪ್ಪುಗಳನ್ನು ಕ್ಷಮಿಸುವ ಅವಸರದಲ್ಲಿ, ತಾಳಿಕೊಂಡು ಹೊಂದಿಸಿಕೊಂಡು ಹೋಗುವ ಅನಿವಾರ್ಯದಲ್ಲಿ ಇವನ್ನು ಮತ್ತೆ ಅದೇ ಪಾತ್ರೆಯೊಳಗಿಟ್ಟು ಮುಚ್ಚುತ್ತೇವೆ.

ಎಷ್ಟೆಂದರೂ ಅರ್ಧಸತ್ಯ ನೀಡುವ ಸುಖವನ್ನು ಪೂರ್ಣಸತ್ಯವು ನೀಡದು. ಮಹಾಭಾರತದಲ್ಲಿ ಎಲ್ಲ ಕೃತ್ರಿಮಗಳನ್ನೂ ಅನ್ಯಾಯಗಳನ್ನೂ ಲೋಕಹಿತವೆಂಬ, ಧರ್ಮಸಂಸ್ಥಾಪನೆಯೆಂಬ ಬೃಹತ್ ದಿಡ್ಡಿಬಾಗಿಲು ಹಾಕಿ ರಕ್ಷಿಸುತ್ತೇವೆ. ಭಾರತೀಯ ಧಾರ್ಮಿಕರು ಈ ದೇಶವು ವಿಶ್ವದಲ್ಲೇ ಶ್ರೇಷ್ಠ ಮಾತ್ರವಲ್ಲ, ಏಕೈಕ ಅವಿನಾಶಿ ದೇಶವೆಂದು ಘೋಷಿಸುತ್ತಾರೆ. ಅದಕ್ಕಾಗಿಯೇ ಇಲ್ಲಿ ಭಗವಂತ ತನ್ನ ಹತ್ತೂ ಅವತಾರಗಳನ್ನು ಎತ್ತಿದ್ದಾನೆಂಬ ಪಾಠವನ್ನು ಹೇಳುತ್ತಾರೆ. ಪರ್ಯಾಯವಾಗಿ ಇಲ್ಲಿ ಆಗುವಷ್ಟು ಧರ್ಮಗ್ಲಾನಿ ಜಗತ್ತಿನ ಇನ್ನೆಲ್ಲೂ ಸಂಭವಿಸುವುದಿಲ್ಲವೇನೋ ಮತ್ತು ಇತರರಿಗೆ ಭಗವಂತನ ಅಗತ್ಯವೇ ಇಲ್ಲವೇನೋ ಅದಕ್ಕಾಗಿ ಭಗವಂತನು ಇಲ್ಲೇ ಅವತಾರವೆತ್ತಿದ್ದಾನೆಂದು ವಾದಿಸಿದರೆ ಹೇಗೆ? ಇದಕ್ಕೆ ತಾರ್ಕಿಕ ಉತ್ತರ ಸಿಗಲಾರದು. ಅಂತಹ ಸಂದರ್ಭದಲ್ಲಿ ತರ್ಕವನ್ನು ಮೀರಿದ ಅಧ್ಯಾತ್ಮವನ್ನು ಹೇಳಿ ಇವೆಲ್ಲವೂ ಭಗವಂತನ ಲೀಲಾವಿನೋದವೆಂದು ಮುಚ್ಚಿಹಾಕಬಹುದು. ಅದನ್ನು ತತ್ವವೆಂದು ವಿವರಿಸಬಹುದು. ತಾರ್ಕಿಕತೆ ನಿರ್ಣಯಗಳನ್ನು ಪ್ರಭಾವಿಸಬೇಕಾದ ಮುಖ್ಯ ಸೂತ್ರವಾಗಬೇಕು. ಆದರೆ ನಂಬಿಕೆಯನ್ನು ಎತ್ತಿಹಿಡಿಯುವ ತಾತ್ವಿಕತೆಯು ನ್ಯಾಯಾಲಯಗಳ ನಿರ್ಣಯಗಳನ್ನು ಪ್ರಭಾವಿಸಿದಾಗ ಅದು ಪಾರಲೌಕಿಕವೆಂದೇ ಒಪ್ಪಿಕೊಳ್ಳಬೇಕಾದ ಸಂದಿಗ್ಧತೆಯು ಎದುರಾಗುತ್ತದೆ. ಇದೊಂದು ರೀತಿಯಲ್ಲಿ ಸತ್ತವನಿಗೆ ಚೆಕ್ ನೀಡಿ ಹಣ ಮರುಪಾವತಿ ಮಾಡಿದಂತೆ. ಅವನು ಅದನ್ನು ನಗದೀಕರಿಸಲಾರ; ಆದರೆ ಸಾಲಗಾರನು ಋಣಮುಕ್ತನಾದೆನೆಂಬ ತೃಪ್ತಿ, ಸಮಾಧಾನವನ್ನು ಹೊಂದಬಹುದು.

ಈ ಬಾರಿ ಸರ್ವೋಚ್ಚ ನ್ಯಾಯಾಲಯವು ಮಾಡಿದ್ದು ಇದನ್ನೇ. ಸರ್ವೋಚ್ಚ ನ್ಯಾಯಮೂರ್ತಿಗಳು ನಿವೃತ್ತಿಯಾಗುವ ಮೊದಲೇ ಈ ತೀರ್ಪು ಪ್ರಕಟವಾಗುತ್ತದೆಯೆಂಬ ಮಾಹಿತಿ ಸಿಕ್ಕಿದೊಡನೆಯೇ ದೇಶದ ಎಲ್ಲೆಡೆ ರಕ್ಷಣಾ ಕಾರ್ಯ, ಕಾನೂನು ಮತ್ತು ಸುವ್ಯವಸ್ಥೆ ನಭೂತೋ ಎಂಬಂತೆ ನಡೆಯಿತು. ಮುಖ್ಯ ನ್ಯಾಯಮೂರ್ತಿಗಳೇ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮುಖ್ಯಸ್ಥರೊಂದಿಗೆ ಚರ್ಚಿಸಿದ್ದು ಒಂದು ವಿಚಿತ್ರ ವಿಶೇಷ. ನವೆಂಬರ್ 8ನೇ ದಿನ ರಾತ್ರಿ ಮರುದಿನ ಅಯೋಧ್ಯೆಯ ತೀರ್ಪು ಹೊರಬೀಳಲಿದೆಯೆಂಬ ಮಾಹಿತಿ ಬಂದಾಕ್ಷಣ ನಿಜಕ್ಕೂ ಬಹಳಷ್ಟು ಜನರು ಗಾಬರಿಯಾಗಿದ್ದರು. ಸರಳ, ಸಾಮಾನ್ಯವಾಗಬೇಕಿದ್ದ ಒಂದು ಸಮಸ್ಯೆಯು ಅಧಿಕಾರ ಮತ್ತು ಮತೀಯ ರಾಜಕಾರಣದ ದಾಳವಾದಾಗ ಘನಘೋರವಾಗುತ್ತದೆಂಬುದಕ್ಕೆ ಅಯೋಧ್ಯೆಗಿಂತ ದೊಡ್ಡ ಉದಾಹರಣೆ ಸಿಗಲಾರದು. ಇನ್ನೊಂದು ಇಂತಹ ಉದಾಹರಣೆಯನ್ನು ರಾಜಕಾರಣಿಗಳು ಸೃಷ್ಟಿಸಲಾರರೆಂಬ ವಿಶ್ವಾಸ ನನಗಂತೂ ಇಲ್ಲ; (ಇನ್ನೂ ಅನೇಕರಿಗೆ ಇರಲಾರದು.) ಏಕೆಂದರೆ ಇನ್ನೂ ನಿಯತಕಾಲಿಕವಾಗಿ ಅಧಿಕಾರವ್ಯಾಪಿ ಚುನಾವಣೆಗಳು ನಡೆಯುತ್ತವಲ್ಲ!

ಶಾಂತಿಯ ಮಂತ್ರವನ್ನು ರಾಜಕಾರಣಿಗಳು ಎಷ್ಟೇ ಏರುಧ್ವನಿಯಲ್ಲಿ ಜಪಿಸಿದರೂ ಅಂತರ್ಜಲದ ಹರಿವನ್ನು ಅವರು ಆಗಲೇ ಸಿದ್ಧಗೊಳಿಸಿದ್ದಿರಬಹು ದಾದ್ದರಿಂದ ಬಹುಸಂಖ್ಯಾತ ಹಿಂದೂಗಳ ವಿರುದ್ಧವಾಗಿ ತೀರ್ಪು ಬಂದಿದ್ದರೆ ದೇಶದ ಎಲ್ಲೆಡೆ ಪ್ರಾಯಃ ಹಿಂಸಾಕಾಂಡ ತಾಂಡವವಾಡುತ್ತಿತ್ತು. ತಾರ್ಕಿಕ ಅಂತ್ಯವನ್ನು ನೀಡಹೊರಟರೆ ಅದು ದೇಶದಲ್ಲೆಡೆ ಖಾಂಡವವನದಹನವನ್ನು ಸೃಷ್ಟಿಸಬಹುದೆಂಬ ಭೀತಿ ಸರ್ವೋಚ್ಚ ನ್ಯಾಯಾಲಯದ ಐವರು ನ್ಯಾಯಾಧೀಶರಿಗೂ ಇದ್ದಿರಬೇಕು. ಮುಖ್ಯನ್ಯಾಯಮೂರ್ತಿಗಳು ಈ ತಂಡದ ನಾಯಕರಾದ್ದರಿಂದ ಅವರ ಮನದಿಚ್ಛೆಯೇನಿತ್ತೋ ಅದೇ ನಡೆದಿರಬೇಕು. ಕೊನೆಗೂ ಬಹುಜನಸಮಾಜದ ಇಚ್ಛೆಗನುಸಾರವಾಗಿ ಕಾನೂನು ಬಾಗಬೇಕೆಂಬ ಸೂತ್ರವನ್ನು ಹಿಡಿದೆಳೆದು ಜಗ್ಗಿ ಅಯೋಧ್ಯೆಯ ತೀರ್ಪು ಹೊರಬಂದಿದೆ. ನ್ಯಾಯಮೂರ್ತಿಗಳನ್ನು ಮತ್ತು ಹತ್ಯಾಕಾಂಡದಿಂದ ದೇಶವನ್ನು ಉಳಿಸುವ ಅವರ ಮಹೋದ್ದೇಶವನ್ನು ಗೌರವಿಸೋಣ. ಅವರ ತೀರ್ಪಿಗೆ ತಲೆಬಾಗೋಣ. ರಾಮಾಯಣ ನಮಗೆ ಹೇಳಿಕೊಟ್ಟದ್ದೇ ಇದನ್ನು: ಕಡೆಗೂ ಕರುಣಾಳು ರಾಘವನಲಿ ತಪ್ಪಿಲ್ಲ ಎಂದು ಕಾಡಾಡಿಯಾದ ಸೀತೆಯೇ ಹೇಳಿರುವಾಗ ನಾವೂ ಇದನ್ನೇ ಹೇಳಬೇಕು.

ಆದರೆ ತೀರ್ಪನ್ನು ವಿಶ್ಲೇಷಿಸುವುದರಲ್ಲಿ ತಪ್ಪಿಲ್ಲ. ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎ.ಕೆ.ಗಂಗುಲಿಯವರು ಈಗಾಗಲೇ ಈ ತೀರ್ಪಿನ ಕೆಲವು ಒಡಕುಗಳನ್ನು ಪತ್ತೆಹಚ್ಚಿದ್ದಾರೆ. ತೀರ್ಪಿನಲ್ಲಿ ಬಾಬರಿ ಮಸೀದಿಯನ್ನು ಕೆಡವಿದ್ದು ತಪ್ಪೆಂದು ಹೇಳಿದ ನ್ಯಾಯಾಲಯವು ಪೂರ್ವಸ್ಥಿತಿಯನ್ನು ತರಬೇಕಾಗಿದ್ದದ್ದು ನ್ಯಾಯವಲ್ಲವೇ? ಒಂದು ವೇಳೆ ಬಾಬರಿ ಮಸೀದಿ ಕೆಡವದೇ ಇದ್ದಿದ್ದರೆ ಅದನ್ನು ಕೆಡವಲು ನ್ಯಾಯಾಲಯವು ನಿರ್ದೇಶಿಸುತ್ತಿತ್ತೇ? ಎಂಬ ಅವರ ಪ್ರಶ್ನೆ ತಾರ್ಕಿಕವಾದದ್ದು. ಮಸೀದಿಯ ಅಡಿಯಲ್ಲಿ ಉತ್ಖನನ ನಡೆದಾಗ ಅಲ್ಲಿ ಇಸ್ಲಾಮ್ ಸಂಪ್ರದಾಯದ್ದಲ್ಲದ ನಿರ್ಮಾಣಗಳು ಪತ್ತೆಯಾಗಿವೆಯೆಂಬ ಭಾರತೀಯ ಪುರಾತತ್ವ ಇಲಾಖೆಯ ವರದಿಯನ್ನು ನ್ಯಾಯಾಲಯ ಒಪ್ಪಿಕೊಂಡರೂ ಅದು ಯಾವ ಧರ್ಮದ್ದು ಎಂಬ ಬಗ್ಗೆ ನಿಖರ ಮಾಹಿತಿಯಿಲ್ಲದ್ದನ್ನು ತೀರ್ಪಿನಲ್ಲಿ ಕಾಣಿಸಲಾಗಿದೆ. ವಿವಾದಪೂರ್ವಸ್ಥಿತಿಗೆ ಅಯೋಧ್ಯೆಯನ್ನು ತರುವಲ್ಲಿ ತೀರ್ಪು ವಿಫಲವಾಗಿದೆ. ಇಂತಹ ಅನೇಕ ಋಣಾತ್ಮಕ ಅಂಶಗಳು ತೀರ್ಪಿನಲ್ಲಿವೆ.

ಇದು ನ್ಯಾಯಾಲಯದ ಗಮನಕ್ಕೂ ಬಂದಿಲ್ಲವೆಂದೇನಿಲ್ಲ. ಈ ತಪ್ಪುಒಂದು ರೀತಿಯ ಪಶ್ಚಾತಾಪದಗ್ಧತೆಗೂ ಕಾರಣವಾಗಿದೆ. ಅದಿಲ್ಲದಿದ್ದರೆ ರಾಮಮಂದಿರಕ್ಕೆ ನೀಡಲಾದ 2.77 ಎಕ್ರೆ ಜಾಗದ ಬದಲಾಗಿ ಸಂವಿಧಾನದ 142ನೇ ವಿಧಿಯ ವಿಶೇಷಾಧಿಕಾರವನ್ನು ಬಳಸಿಕೊಂಡು ಮಸೀದಿಗೆ (ಅಯೋಧ್ಯೆಯಲ್ಲೇ) 5 ಎಕ್ರೆ ಜಾಗವನ್ನು ನೀಡುವ ಅಗತ್ಯವೇ ಇರಲಿಲ್ಲ. ಅಂತಹ ಐಚ್ಛಿಕತೆಯು ಜನಾದೇಶ ಹೊಂದಿದ ಸರಕಾರಕ್ಕಿರಬೇಕಾದ್ದೇ ವಿನಾ ಕಾನೂನಿನಡಿ ನ್ಯಾಯನಿರ್ಣಯ ನೀಡಬೇಕಾದ ಬದ್ಧತೆಯನ್ನು ಹೊಂದಿರುವ ನ್ಯಾಯಾಲಯಗಳಿಗಲ್ಲ. ಇದು ಉಭಯಪಕ್ಷಕಾರರ ನಡುವಣ ಸಮತೋಲವೆನ್ನುವುದಕ್ಕಿಂತಲೂ ಕಾನೂನು ಮತ್ತು ನ್ಯಾಯದ ಹೆಸರಿನಲ್ಲಿ ನಡೆಯಬಹುದಾದ ಉಪಚಾರ ಮತ್ತು ಅಪಚಾರಗಳ ಸಮತೋಲವೆನ್ನಬಹುದು. ಮುಂದಿನ ದಿನಗಳಲ್ಲಿ ಇವು ಮತ್ತು ಇನ್ನೂ ಹಲವು ಅಂಶಗಳು ಬೆಳಕು ಕಾಣಬಹುದು. ಆದರೆ ಅವುಗಳ ನಿವ್ವಳ ಫಲಿತಾಂಶ ಮಾತ್ರ ಸೊನ್ನೆ. ಬೆಂತಮ್ ನ್ಯಾಯದಾನದ ನ್ಯಾಯಪರಿಪಾಲನೆಯ ಮುಖ್ಯ ಸೂತ್ರವಾಗಿ ಹೇಳಿದ್ದೇ ಬಹುಜನ ಹಿತಾಯ (maximum good of maximum people) ಎಂಬುದನ್ನು. ಈ ಬಹುಜನರೆಂದರೆ ಈ ದೇಶದ ಮುಗ್ಧ ಬಲಿಪಶುಗಳು. ಯಾವುದೇ ಬೆಂಕಿಬಿದ್ದಾಗ ಅದರಲ್ಲಿ ಎಲ್ಲ ನಿಷ್ಪಾಪಿ ಜೀವಜಂತುಗಳು ನಾಶವಾಗುತ್ತವೆಂಬುದು ಯುಗಾತೀತ ಸತ್ಯ. ಅದನ್ನು ಕಡಿಮೆಮಾಡುವತ್ತ ಒಂದು ಪುಟ್ಟ ಹೆಜ್ಜೆಯೂ ತ್ರಿವಿಕ್ರಮನ ಹೆಜ್ಜೆಯಾಗುತ್ತದೆ. ಇದು ಒಂದು ಜನಾಂಗದ ಪರ-ವಿರೋಧವಾದ ತೀರ್ಪಲ್ಲ. ಬದಲಾಗಿ ಶಾಂತಿಯನ್ನು ಕಾಪಾಡಲು ಕೈಗೊಂಡ ದಿಟ್ಟ ಹೆಜ್ಜೆ. ಈ ಹೆಜ್ಜೆಯನ್ನು ನಿಜಕ್ಕೂ ಅನುಸರಿಸಿದ್ದು ಈ ತೀರ್ಪಿನ ಪ್ರತಿಕೂಲ ಪರಿಣಾಮವನ್ನುಂಡವರು. ಅವರ ಮೌನ, ಶಾಂತಿ, ಸಹನೆ ಇವು ಅನನ್ಯವಾದದ್ದು. ಗೆದ್ದ ದೊಡ್ಡಸ್ತಿಕೆಗಿಂತಲೂ ಸೋತು ಗೆದ್ದವರ ಘನಸ್ತಿಕೆ ಹೆಚ್ಚೆಂದು ಕಾಣುತ್ತಿದೆ.

ಅಯೋಧ್ಯೆಯ ತೀರ್ಪು ಹೊಸ ಹಾದಿಯನ್ನು ನಿರ್ಮಿಸಿದ್ದಂತೂ ನಿಜ. ಇಂಗ್ಲಿಷ್‌ನ ಒಂದು ಮಾತಿದೆ: ನಂಬಿಕೆಯು ಜನರನ್ನು ಅತ್ಯಂತ ನಿಕೃಷ್ಟವಾದ ವಿಚಾರವನ್ನೂ ಪೂರ್ಣಸತ್ಯವೆಂದು ಸ್ವೀಕರಿಸಲು ದಾರಿಮಾಡಿಕೊಡುತ್ತದೆ. ಇಂತಹ ನಂಬಿಕೆಗಳನ್ನು ನ್ಯಾಯಾಲಯಗಳು ಸ್ವೀಕರಿಸಲು ಆರಂಭಿಸಿದಾಗ ಅವು ಭವಿಷ್ಯಕ್ಕೆ ಮತ್ತು ಒಳಿತಿಗೆ ನೀಡಬಹುದಾದ ಧನಾತ್ಮಕ/ಋಣಾತ್ಮಕ ಕೊಡುಗೆಗಳನ್ನು ಅಂದಾಜಿಸಬೇಕು. ಸದ್ಯ ಶಬರಿಮಲೆಯ ತೀರ್ಪು ಬರಬೇಕಾಗಿದೆ. ಇದೇ ಮೌಲ್ಯಗಳನ್ನು ಅಲ್ಲೂ ಎತ್ತಿಹಿಡಿಯಬೇಕಾದರೆ ಈಗಾಗಲೇ ಆಗಿರುವ ನಿರ್ಣಯವನ್ನು ತಳ್ಳಿಹಾಕಬೇಕಾದ ಅನಿವಾರ್ಯತೆ ಎದುರಾಗಬಹುದು. ಮಧ್ಯಯುಗದಲ್ಲಿ ಚರ್ಚು ಮತ್ತು ಜ್ಞಾನದ ನಡುವೆ ವಿವಾದವುಂಟಾಗಿತ್ತು. ಗೆಲಿಲಿಯೋ ಭೂಮಿಯು ವಿಶ್ವದ ಕೇಂದ್ರವಲ್ಲವೆಂದು ಸಾರಿದ್ದನ್ನು ಚರ್ಚು ಒಪ್ಪಿರಲಿಲ್ಲ. ಆನಂತರ ವಿಜ್ಞಾನವು ವಿಜೃಂಭಿಸಿದಾಗ ನಂಬಿಕೆಗಳು ಮನೆಯೊಳಗೇ ಇದ್ದವು. ಅವೀಗ ಹೊರಬರುತ್ತಿವೆ. ಅಂತ್ಯದಲ್ಲಿ (ವಿ)ಜ್ಞಾನ ಮತ್ತು ನಂಬಿಕೆಗಳ ನಡುವಣ ವಿವಾದದಲ್ಲಿ ನಂಬಿಕೆ ಗೆದ್ದು ಅಜ್ಞಾನವೇ ನಿತ್ಯಸತ್ಯವಾಗುವ ಅಪಾಯವೂ ಇದೆ. ಬಹುಜನರ ಹಿತವಾಗಿದೆಯೇ ಬಹುಜನರ ಸುಖವಾಗಿದೆಯೇ ಕಾಲವೇ ಹೇಳಬೇಕು. ಆದರೆ ಸದ್ಯಕ್ಕಂತೂ ಬಹುಜನರಿಗೆ ಸಂತೋಷವಾಗಿದೆ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)