varthabharthi


ರಾಷ್ಟ್ರೀಯ

ವಾಯು ಮಾಲಿನ್ಯ ನಿಯಂತ್ರಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರಧಾನಿಗೆ ಪತ್ರ

ವಾರ್ತಾ ಭಾರತಿ : 14 Nov, 2019

ಹೊಸದಿಲ್ಲಿ, ನ. 13: ಹೊಸದಿಲ್ಲಿಯಲ್ಲಿ ವಾಯು ಗುಣಮಟ್ಟದ ಗಂಭೀರ ಸ್ಥಿತಿ ಗುರುವಾರ ಕೂಡ ಮುಂದುವರಿದಿದೆ. ದಿಲ್ಲಿ-ಎನ್‌ಸಿಆರ್ ವಲಯ ವಿಷಕಾರಿ ಹೊಗೆಯ ದಟ್ಟ ಪದರದಿಂದ ಮುಚ್ಚಿಹೋಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

  ಅಧಿಕಾರಿಗಳು ಬುಧವಾರ ರಾತ್ರಿ ನೀಡಿದ ನಿರ್ದೇಶನದಂತೆ ದಿಲ್ಲಿ-ಎನ್‌ಆರ್‌ಸಿಯ ಶಾಲೆಗಳು ಗುರುವಾರ ಕೂಡ ಮುಚ್ಚಿದ್ದವು. ವಾಯು ಗುಣಮಟ್ಟ ಅಪಾಯಕಾರಿ ಮಟ್ಟಕ್ಕೆ ತಲುಪಿರುವುದನ್ನು ಉಲ್ಲೇಖಿಸಿ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ (ಇಪಿಸಿಎ) ಶಾಲೆಗಳನ್ನು ಮುಚ್ಚಲು ಶಿಫಾರಸು ಮಾಡಿತ್ತು.

ಹಲವು ವಿದ್ಯಾರ್ಥಿಗಳು ಮನೆಯಿಂದ ಹೊರಗಿಳಿಯಲಿಲ್ಲ. ಇದರಿಂದ ಗುರುವಾರದ ಮಕ್ಕಳ ದಿನಾಚರಣೆ ಸಂಭ್ರಮವಿರಲಿಲ್ಲ. ‘‘ನಾನು ಯಾವಾಗಲೂ ಬೆಳಗ್ಗೆ ಫುಟ್‌ಬಾಲ್ ಆಡುತ್ತೇನೆ. ಆದರೆ, ಈಗ ನಾನು ಕೇವಲ ಟಿ.ವಿ. ಮಾತ್ರ ನೋಡುತ್ತೇನೆ. ನಾನು ಹೊರಗೆ ಆಟ ಆಡುತ್ತಿಲ್ಲ. ಯಾಕೆಂದರೆ ವಾಯು ತೀವ್ರ ವಿಷಕಾರಿಯಾಗಿದೆ’’ ಎಂದು ವಿದ್ಯಾರ್ಥಿ ಇಶಾನ್ ಮಹಾಂತ ಪ್ರಧಾನಿಗೆ ಬರೆದ ಪತ್ರದಲ್ಲಿ ಹೇಳಿದ್ದಾನೆ.

‘‘ಈ ಸಂದರ್ಭ ನಮಗೆ ಭಾರತ ಸರಕಾರದ ನಿರ್ದೇಶನದ ಅಗತ್ಯ ಇದೆ. ರಾಜ್ಯ ಸರಕಾರ ಈ ಗಂಭೀರ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಖಂಡಿತವಾಗಿ ಈ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ನಂಬಿಕೆ ನಮಗಿದೆ’’ ಎಂದು ಇನ್ನೋರ್ವ ವಿದ್ಯಾರ್ಥಿ ಬರೆದಿದ್ದಾನೆ. ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 463ಕ್ಕೆ ಇಳಿಕೆಯಾಗಿದೆ. ಇದು ಬೆಳಗ್ಗೆ 9.30ಕ್ಕೆ ಮೂರು ಅಂಶಗಳಷ್ಟು ಮೇಲೆ ಇತ್ತು. ದ್ವಾರಕಾ ಸೆಕ್ಟರ್‌ನಲ್ಲಿರುವ ವಾಯು ಗುಣಮಟ್ಟ ಸೂಚ್ಯಾಂಕ ಮೇಲ್ವಿಚಾರಣೆ ಕೇಂದ್ರ 496 ವಾಯು ಗುಣಮಟ್ಟ ಸೂಚ್ಯಂಕವನ್ನು ದಾಖಲಿಸಿದೆ. ಜೆಎಲ್‌ಎನ್ ಕ್ರೀಡಾಂಗಣ ಹಾಗೂ ನೆಹರೂ ನಗರದ ವಾಯು ಗುಣಮಟ್ಟ ಸೂಚ್ಯಾಂಕ ಮೇಲ್ವಿಚಾರಣೆ ಕೇಂದ್ರ 490 ವಾಯು ಗುಣಮಟ್ಟವನ್ನು ದಾಖಲಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)