varthabharthi


ನಿಮ್ಮ ಅಂಕಣ

ಇಂದು ಕನಕದಾಸ ಜಯಂತಿ

ವರ್ಗತಾರತಮ್ಯವನ್ನು ವಿಡಂಬಿಸಿದ್ದ ಸಂತ ಕನಕದಾಸ

ವಾರ್ತಾ ಭಾರತಿ : 15 Nov, 2019
ಸುರೇಶ ನೇರ್ಲಿಗೆ

ಕನಕದಾಸರು ಕನ್ನಡ ನಾಡಿನ ಶ್ರೀಮಂತ ಸಂಸ್ಕೃತಿಯಲ್ಲಿ ಬೆರೆತು ಹೋಗಿರುವ ಶ್ರೇಷ್ಠ ವ್ಯಕ್ತಿ. ದಾಸ ಸಾಹಿತ್ಯಕ್ಕೆ ವೈಶಿಷ್ಟಪೂರ್ಣವಾದ ಮೆರುಗನ್ನು ತಂದಿತ್ತ ಪಾಂಡಿತ್ಯಪೂರ್ಣ ಕವಿ. ಸಹಜ ಬದುಕಿನಿಂದ ಕೀರ್ತನಕಾರರಾಗಿ, ಸಂತರಾಗಿ, ದಾರ್ಶನಿಕರಾಗಿ, ತತ್ವಜ್ಞಾನಿಯಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಕನಕದಾಸರು ಅನನ್ಯ ಕೊಡುಗೆ ನೀಡಿದ್ದಾರೆ. ತಮ್ಮ ಕೀರ್ತನೆಗಳಲ್ಲಿ ಭಕ್ತಿ, ವೈರಾಗ್ಯ, ಭಜನೆಗಳಷ್ಟೇ ಅಲ್ಲದೆ ಹದಿನಾರನೆಯ ಶತಮಾನದ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಸಾತ್ವಿಕ ಸಮರ ಸಾರಿದ್ದಾರೆ. ಸಾಮಾಜಿಕ ಮಡಿವಂತಿಕೆಯನ್ನು ಕನಕದಾಸರು ಕೀರ್ತನೆಗಳಲ್ಲಿ ವಿಡಂಬಿಸಿದ್ದಾರೆ. ಅಂದಿನ ಸಮಾಜದ ಓರೆ ಕೋರೆಗಳನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ.

‘‘ಕುಲ ಕುಲ ಕುಲವೆಂದು ಹೊಡೆದಾಡಿದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ’’ ಎಂಬ ತಾರ್ಕಿಕ ಪ್ರಶ್ನೆಯ ಮೂಲಕ ವರ್ಗ ಸಮಾನತೆಯನ್ನು ತಮ್ಮ ಕೀರ್ತನೆಗಳಲ್ಲಿ ಪ್ರತಿಪಾದಿಸಿದ್ದಾರೆ. ‘‘ಕುಲ ಕುಲ ಕುಲವೆನ್ನುತಿಹರು ಕುಲವ್ಯಾವುದು ಸತ್ಯ-ಸುಖವುಳ್ಳ ಜನರಿಗೆ? ಕೆಸರೊಳು ತಾವರೆ ಪುಟ್ಟಲು ಅದ ತಂದು ಬಿಸಜನಾಭನಿಗರ್ಪಿಸಲಿಲ್ಲವೇ?’’   ಎಂಬ ನುಡಿಗಳು ಅಂದಿನ ಮೂಲಭೂತವಾದಿಗಳಿಗೆ ಅಜೀರ್ಣವಾಗುತ್ತವೆ. ಹನ್ನೆರಡನೇ ಶತಮಾನದಲ್ಲಿ ಬಸವೇಶ್ವರರನ್ನು ಮೊದಲುಗೊಂಡಂತೆ ಅನೇಕ ಶರಣರು ಅಸ್ಪಶ್ಯರ ದನಿಯಾಗಿ ವಚನ ಸಾಹಿತ್ಯವನ್ನು ರಚಿಸಿ ಬಂಡಾಯದ ಹಣತೆಯನ್ನು ಹಚ್ಚಿದರು. ಮುಂದೆ ಸರ್ವಜ್ಞ ಕವಿಯೂ ‘‘ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ’’ ಕುಲಭೇದವಿಲ್ಲ ಮನುಜನಿಗೆ ಎಂಬ ತ್ರಿಪದಿಯ ಮೂಲಕ ಮಾನವತೆಯ ಹಣತೆಗೆ ಜ್ಞಾನ ತೈಲವೆರೆಯುತ್ತಾರೆ. ಅದಾದ ಹಲವು ಶತಮಾನಗಳ ಕಾಲ ತಳ ಸಮುದಾಯಗಳ ಗಟ್ಟಿ ಧ್ವನಿ ಹೊರಬಿದ್ದಿದ್ದು ಕನಕದಾಸರ ಕೀರ್ತನೆಗಳಲ್ಲಿ ಎಂದರೆ ತಪ್ಪಾಗಲಾರದು. ಕನಕದಾಸರು ಕೇವಲ ಕೀರ್ತನಕಾರರಷ್ಟೇ ಅಲ್ಲ ಆ ಕಾಲಘಟ್ಟದ ಶೋಷಿತ ಸಮುದಾಯಗಳ ಪ್ರಾತಿನಿಧಿಕ ಸಂಪತ್ತು. ಅಂದಿನ ಅವರ ಹೋರಾಟ ಇಂದಿಗೂ ಅನಿವಾರ್ಯವಾಗಿರುವುದು ನಮ್ಮ ಪ್ರಜ್ಞಾವಂತಿಕೆಯ ದುಃಸ್ಥಿತಿಯಲ್ಲದೆ ಮತ್ತೇನು? ಭಗವಂತನ ಸಾಕ್ಷಾತ್ಕಾರಕ್ಕೆ ಶ್ರೇಷ್ಠ ಕುಲದಲ್ಲಿಯೇ ಹುಟ್ಟಬೇಕೆಂಬ ಮನುವಾದಿಗಳ ಅಲಿಖಿತ ನಿಯಮವನ್ನು ತಮ್ಮ ಕೀರ್ತನೆಗಳ ಮೂಲಕ ಪ್ರಬಲವಾಗಿ ಖಂಡಿಸಿದ್ದಾರೆ. ‘‘ಕೆಸರೊಳು ತಾವರೆ ಪುಟ್ಟಲು ಅದ ತಂದು ಬಿಸಜನಾಭನಿಗರ್ಪಿಸಲಿಲ್ಲವೇ? ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವ ವಸುಧೆಯೊಳಗೆ ಭೂಸುರರುಣಲಿಲ್ಲವೇ?’’ ಎಂಬ ನೇರ ಪ್ರಶ್ನೆಗಳಿಗೆ ಉತ್ತರಿಸುವವರ್ಯಾರು? ಆತ್ಮ, ಜೀವ, ತತ್ವೇಂದ್ರೀಯಗಳ ಕುಲವನ್ನು ತಿಳಿಸಲು ಕೇಳಿದ್ದಾರೆ.

ಹದಿನಾರನೇ ಶತಮಾನದಲ್ಲಿದ್ದ ಡಾಂಭಿಕ ಭಕ್ತಿ ಆಚಾರಗಳ ಬಗ್ಗೆ ‘‘ತೀರ್ಥವನ್ನು ಪಿಡಿದವರೆಲ್ಲಾ ತಿರುನಾಮಧಾರಿಗಳೆ’’ ‘‘ಮೂಗ್ಹಿಡಿದು ನೀರು ಮುಳುಗಿ ವೇದಶಾಸ್ತ್ರಗಳನ್ನು ಓದಿ ಪರಸ್ತ್ರೀಯ ಭ್ರಮಿಸುವಂತ ನೀತಿ ತಪ್ಪಿದವರೆಲ್ಲಾ ದೇವ ಬ್ರಾಹ್ಮಣರೇ ಕೃಷ್ಣ’’ ಎಂದು ನಿರ್ಭಿಡೆಯಿಂದ ಪ್ರಶ್ನಿಸಿದವರು ಕನಕದಾಸರು.
‘‘ಮಂಡೆ ಬೋಳು ಮಾಡಿ ನಾಮ
ಮಂಡೆಯನ್ನು ಬರೆದು ಕೆಡಿಸಿ
ಕಂಡಕಂಡವರನು ಕೂಡಿ
ಭಂಡ ಜನ್ಮ ಹೊರೆಯುವವಗೆ
ದಾಸಪಟ್ಟವೋ ಸನ್ಯಾಸ ಪಟ್ಟವೋ॥

ಎನ್ನುವ ಮೂಲಕ ಕಪಟ ವೇಷ ಧರಿಸಿ ವಂಚನೆಗೈಯುವ ದಾಸರು ಮತ್ತು ಸನ್ಯಾಸಿಗಳ ಮೇಲೂ ತಮ್ಮ ಹರಿತ ಮಾತುಗಳ ಚಾಟಿ ಬೀಸಿದ್ದಾರೆ. ಕಾಯಕ ತತ್ವವನ್ನು ಪ್ರತಿಪಾದಿಸಿರುವ ಕನಕದಾಸರು ‘‘ಕುಂಟೆ ತುದಿಗೆ ಕೊರಡು ಹಾಕಿ ಹೆಂಟೆ ಮಣ್ಣು ಸಮ ಮಾಡಿ ರೆಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’’  ಎಂದಿದ್ದಾರೆ. ಬದುಕಿನ ಪರಮಾರ್ಥವನ್ನು ಈ ಮೇಲಿನ ಕೀರ್ತನೆಯಲ್ಲಿ ತಿಳಿಸುವುದರ ಜೊತೆಗೆ ಆಧುನಿಕ ಬದುಕನ್ನು ಪರಾಮರ್ಶಿಸುವಂತೆ ಪರಮ ಸತ್ಯವನ್ನು ದರ್ಶಿಸಿದ್ದಾರೆ.
ಹೆಣ್ಣು, ಹೊನ್ನು, ಮಣ್ಣು ಮೂರು ನಿನ್ನದೇನಲೋ
ಅನ್ನದಿಂದ ಬಂದ ಕಾಮ ನಿನ್ನದೇನಲೋ
ಕರ್ಣದಿಂದ ಬರುವ ದೋಷ ನಿನ್ನದೇನಲೋ
ನಿನ್ನ ಬಿಟ್ಟು ಹೋಹ ದೇಹ ನಿನ್ನದೇನಲೋ’’

ಕೀಲು ಜಡಿದ ತೊಗಲು ಗೊಂಬೆ ಈ ದೇಹ ಇದು ನಿನ್ನದಲ್ಲ. ಈ ಹೆಣ್ಣು, ಹೊನ್ನು, ಮಣ್ಣು, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಇವು ಯಾವೂ ನಿನ್ನವಲ್ಲ. ಸಾವು ಬಂದು ನಿನ್ನನ್ನು ಎಳೆಯುವಾಗ ಇವು ಯಾವುವೂ ನಿನ್ನನ್ನು ಉಳಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ ಇವು ಯಾವುವೂ ನಿನ್ನೊಂದಿಗೆ ಬರುವುದಿಲ್ಲ ಎಂಬುದನ್ನು ಕನಕದಾಸರು ಹಲವಾರು ಕೀರ್ತನೆಗಳಲ್ಲಿ ನಿರೂಪಿಸಿದ್ದಾರೆ.

‘‘ಸತ್ಯವ್ರತವುಳ್ಳವನಿಗೆ ಮೃತ್ಯುಭಯವುಂಟೆ
ಚಿತ್ತಶುದ್ಧಿಯಿಲ್ಲದವನಿಗೆ ಪರಲೋಕವುಂಟೆ’’
ಎಂಬ ಕೀರ್ತನೆಯಲ್ಲಿ ಸತ್ಯ ಸಂಧತೆಯಿಂದ ಬದುಕುವವನಿಗೆ ಮತ್ತು ನಡೆ-ನುಡಿಗಳೊಂದಾದವನಿಗೆ ಮೃತ್ಯುವಿನ ಭಯವೆಲ್ಲಿಹುದು ಎನ್ನುತ್ತಾರೆ ಕನಕದಾಸರು.
‘‘ಸತ್ಯವಂತರ ಸಂಗವಿರಲು ತೀರ್ಥವೇತಕೆ
ನಿತ್ಯ ಜ್ಞಾನಿಯಾದ ಮೇಲೆ ಚಿಂತೆಯಾತಕೆ’’
ಸತ್ಯವಂತರ ಸಂಗ ಮಾಡುವುದಾದರೆ ಯಾವ ತೀರ್ಥ ಯಾತ್ರೆಯೂ ಅಗತ್ಯವಿರುವುದಿಲ್ಲ ಎಂಬುದನ್ನು ಹೇಳುತ್ತಲೇ ಜ್ಞಾನದ ಬಲವೇ ಶ್ರೇಷ್ಠವಾದದ್ದು ಅದನ್ನು ಗಳಿಸಿದವನಿಗೆ ನಿಶ್ಚಿಂತೆಯಾದ ಬದುಕಿದೆ ಎಂದಿದ್ದಾರೆ.
ಬೆಟ್ಟದಾ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ
ಅಡವಿಯೊಳಗಾಡುವ ಮೃಗ ಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರವಿತ್ತವರು ಯಾರೋ
ಪಡೆದ ಜನನಿಯ ತೆರದಿ
ಸ್ವಾಮಿ ಹೊಣೆಗೀಡಾಗಿ ಬಿಡದೆ ರಕ್ಷಿಪನಿದಕೆ ಸಂಶಯವಿಲ್ಲ

ಅಹಂಕಾರಿಯಾದ ಮಾನವ ನಾನೇ ಎಲ್ಲ, ನನ್ನಿಂದಲೇ ಎಲ್ಲಾ ಎಂದು ಬೊಬ್ಬಿರಿಯುವಾಗ ಸಮಷ್ಠಿ ಹಿತದ ಒಡೆಯನಾದ ದೇವರೇ ನಮ್ಮೆಲ್ಲರನ್ನು ಸಲಹುತ್ತಾನೆ ಎಂದು ಹತಾಶರಾದವರಿಗೆ ಗಟ್ಟಿ ಸಾಂತ್ವನ ಹೇಳಿದ್ದಾರೆ ಕನಕದಾಸರು.

ನಳಚರಿತ್ರೆ, ರಾಮಧಾನ್ಯ ಚರಿತೆ ಮತ್ತು ಮೋಹನ ತರಂಗಿಣಿಯಂತಹ ಕಾವ್ಯಗಳನ್ನು ರಚಿಸುವ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಮಿನುಗುವ ನಕ್ಷತ್ರವಾಗಿದ್ದಾರೆ. ಅವರ ರಾಮಧಾನ್ಯ ಚರಿತೆ ಕಾಲ್ಪನಿಕ ಕಾವ್ಯವಾಗಿದ್ದರೂ ಸಾಮಾಜಕ ವ್ಯವಸ್ಥೆಯ ಲೋಪಗಳನ್ನು ಧಾನ್ಯಗಳ ಮೂಲಕ ಮನಮುಟ್ಟುವಂತೆ ನಿರೂಪಿಸಿದ್ದಾರೆ. ವರ್ಗಸಮಾನತೆಯ ಪ್ರತಿಪಾದನೆಯೇ ಕೃತಿಯ ಆಶಯವಾಗಿದೆ. ‘‘ಕನಕದಾಸರು ಒಂದು ಜನಾಂಗದ ಪ್ರತಿನಿಧಿಯಾಗದೆ, ಒಂದು ತತ್ವದ ಪ್ರತಿನಿಧಿಯಾಗಿ ಮಾನವೀಯತೆ ಅಂತಃಕರಣ, ನಿಷ್ಕಲ್ಮಷ ಪ್ರೇಮ ಇವುಗಳ ಮೌಲ್ಯವನ್ನು ಸಮಾಜಕ್ಕೆ ತಿಳಿಸಿಕೊಟ್ಟಿದ್ದಾರೆ. ಯಾವ ಮತವನ್ನೂ ಬಿಡದೆ ಯಾವ ಮತಕ್ಕೂ ಅಂಟಿಕೊಳ್ಳದೇ ಸಕಲ ತತ್ವಗಳನ್ನೂ ಮೀರಿ ನಿರ್ದಿಗಂತವಾಗಿ ಬೆಳೆದು ವಿಶ್ವ ಮಾನವರಾಗಿ ವಿಜೃಂಬಿಸಿದ ಯೋಗ ಪುರುಷರು’’ ಎಂಬ ದೇಜಗೌ ಅವರ ಮಾತುಗಳು ಕನಕದಾಸರ ಬಹುಮುಖೀ ವ್ಯಕ್ತಿತ್ವವನ್ನು ಎತ್ತಿ ಹೇಳುತ್ತವೆ. ಕನಕದಾಸರ ತತ್ವಗಳು ಸಂದೇಶಗಳು ಮಾನವ ಜಗತ್ತಿಗೆ ಪ್ರಸ್ತುತವಾಗಿವೆ. ಕನಕದಾಸರ ಜಯಂತಿಯ ನಿಮಿತ್ತ ಕೇವಲ ಅವರ ಭಾವಚಿತ್ರಕ್ಕೆ ಪೂಜಿಸದೆ ಅವರ ತತ್ವಾದರ್ಶಗಳ ಪೂಜೆ ನಡೆದರೆ ಒಳ್ಳೆಯದಲ್ಲವೇ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)