varthabharthi


ಸಂಪಾದಕೀಯ

ರಫೇಲ್ ಹಗರಣ: ತನಿಖೆಗೆ ಹೆದರುತ್ತಿರುವ ಸರಕಾರ

ವಾರ್ತಾ ಭಾರತಿ : 15 Nov, 2019

ಹಿ ಂದೆಲ್ಲ ವಿರೋಧ ಪಕ್ಷಗಳು ಆಡಳಿತ ಪಕ್ಷದ ಮೇಲೆ ಆರೋಪಗಳನ್ನು ಮಾಡಿದರೆ, ಸರಕಾರ ತನ್ನ ಮಾನವನ್ನು ಉಳಿಸಿಕೊಳ್ಳುವುದಕ್ಕೆ ತಕ್ಷಣ ತನಿಖೆಗೆ ಆದೇಶ ನೀಡುತ್ತಿತ್ತು. ಬೋಫೋರ್ಸ್ ಹಗರಣ, ಹವಾಲಾ ಹಗರಣ, ಕಲ್ಲಿದ್ದಲು ಹಗರಣ ಸಹಿತ ಹತ್ತು ಹಲವು ಹಗರಣಗಳು ತನಿಖೆಗೊಳಗಾಗಿ ಹಲವರು ಕ್ಲೀನ್‌ಚಿಟ್ ಪಡೆದುಕೊಂಡಿದ್ದಾರೆ. ಇನ್ನು ಕೆಲವರು ಈ ಕ್ಷಣದಲ್ಲೂ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಆದರೆ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ, ಈ ದೇಶದ ಭದ್ರತೆಗೆ ಸಂಬಂಧ ಪಟ್ಟ ಮಹತ್ವದ ರಫೇಲ್ ಒಪ್ಪಂದದಲ್ಲಿ ಹಗರಣ ನಡೆದಿದೆಯೆಂದು ಇಡೀ ದೇಶ ಒಕ್ಕೊರಲಲ್ಲಿ ಆರೋಪಿಸುತ್ತಿದ್ದರೆ, ಸರಕಾರ ಆರೋಪಿಸಿದವರನ್ನೇ ಕಟಕಟೆಯಲ್ಲಿ ನಿಲ್ಲಿಸಿ, ತನಗೆ ತಾನೇ ಕ್ಲೀನ್‌ಚಿಟ್ ನೀಡಲು ಹೊರಟಿದೆ. ತನಿಖೆಗೆ ಒತ್ತಾಯಿಸಿದವರನ್ನೆಲ್ಲ ಬೇರೆ ಬೇರೆ ತಂತ್ರಗಳ ಮೂಲಕ ಬಾಯಿ ಮುಚ್ಚಿಸುತ್ತಿದೆ. ರಫೇಲ್ ಹಗರಣಗನ್ನ್ನು ಬಯಲಿಗೆಳೆದ ಮಾಧ್ಯಮಗಳನ್ನು ತನಿಖಾ ಸಂಸ್ಥೆಗಳ ಮೂಲಕವೇ ಬೆದರಿಸಲು ಯತ್ನಿಸಿತು.

ಕಳೆದ ಲೋಕಸಭಾ ಚುನಾವಣೆಗೆ ಮುನ್ನ ರಫೇಲ್ ಹಗರಣದ ತನಿಖೆಗೆ ಒತ್ತಾಯಿಸಿ ಗದ್ದಲ ಎಬ್ಬಿಸುತ್ತಿದ್ದ ಕಾಂಗ್ರೆಸ್ ಪಕ್ಷವನ್ನು ಕೂಡ ಈ ಬಾರಿ ಬಾಯಿ ಮುಚ್ಚಿ ಕೂರುವಂತೆ ಮಾಡಿದೆ. ದೇಶದ ಗಡಿಭಾಗದಲ್ಲಿ ನಡೆಯುತ್ತಿರುವ ಉಗ್ರದಾಳಿ ಹೆಚ್ಚುತ್ತಿರುವುದಕ್ಕೆ ‘ರಫೇಲ್ ಯುದ್ಧ ವಿಮಾನ ಖರೀದಿ ತಡವಾಗುತ್ತಿರುವುದೇ ಕಾರಣ’ ಎಂಬಂತಹ ಹೇಳಿಕೆಗಳನ್ನು ಪ್ರಧಾನಿ ಮೋದಿ ನೀಡಿದರು. ಸರ್ಜಿಕಲ್ ಸ್ಟ್ರೈಕ್‌ಗೂ ರಫೇಲ್ ಯುದ್ಧ ವಿಮಾನಕ್ಕೂ ಸಂಬಂಧ ತಳಕು ಹಾಕಿ, ರಫೇಲ್ ತನಿಖೆಗೆ ಒತ್ತಾಯಿಸುತ್ತಿರುವವರನ್ನು ದೇಶದ್ರೋಹಿಗಳಾಗಿ ಬಿಂಬಿಸಲು ಯತ್ನಿಸಿದರು. ಚುನಾವಣೆಯ ಪ್ರಚಾರ ಸಂದರ್ಭದಲ್ಲಿ, ರಫೇಲ್ ಯುದ್ಧ ವಿಮಾನ ಖರೀದಿ ಭಾರತದ ಕೆಲವರಿಗೆ ಇಷ್ಟವಿಲ್ಲ ಎಂಬಂತೆ ಅಪಪ್ರಚಾರ ನಡೆಸಿತು. ಫಲಿತಾಂಶ ಘೋಷಣೆಯಾದ ದಿನದಿಂದ ರಫೇಲ್ ಕುರಿತು ವೌನವ್ರತ ಆರಂಭಿಸಿದ ಕಾಂಗ್ರೆಸ್, ಮತ್ತೆ ಬಾಯಿ ತೆರೆಯಬೇಕಾದರೆ ಪ್ರಕರಣ ಮತ್ತೊಮ್ಮೆ ಸುಪ್ರೀಂಕೋರ್ಟ್ ಮುಂದೆ ಬರಬೇಕಾಯಿತು. ಇದೀಗ ಸುಪ್ರೀಂಕೋರ್ಟ್ ಮಗದೊಮ್ಮೆ ಸರಕಾರದ ಬೆನ್ನಿಗೆ ನಿಂತಿದೆ. ರಫೇಲ್ ಯುದ್ಧ ವಿಮಾನ ಖರೀದಿ ಪ್ರಕ್ರಿಯೆಯ ಒಪ್ಪಂದಕ್ಕೆ ಸಂಬಂಧಿಸಿ ಸಿಬಿಐ ಎಫ್‌ಐಆರ್ ದಾಖಲಿಸಬೇಕಾಗಿಲ್ಲ ಎನ್ನುವ ಮೂಲಕ ಎನ್‌ಡಿಎ ಸರಕಾರಕ್ಕೆ ಕ್ಲೀನ್‌ಚಿಟ್ ನೀಡಿರುವ ಆದೇಶವನ್ನು ಮರು ಪರಿಶೀಲಿಸುವಂತೆ ಕೋರಿದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಈ ಅರ್ಜಿಯನ್ನು ಸಲ್ಲಿಸಿದವರು ವಿರೋಧಪಕ್ಷದ ನಾಯಕರಲ್ಲ ಎನ್ನುವುದು ಗಮನಾರ್ಹ.

ಒಂದು ಕಾಲದ ಬಿಜೆಪಿಯ ಹಿರಿಯ ಮುತ್ಸದ್ದಿ ನಾಯಕನೆಂದು ಗುರುತಿಸಿಕೊಂಡಿದ್ದ ಯಶವಂತ್ ಸಿನ್ಹಾ, ಬೋಫೋರ್ಸ್ ಹಗರಣ ಹೊರಬರಲು ಪ್ರಮುಖ ಕಾರಣರಾಗಿದ್ದ ಮಾಜಿ ಪತ್ರಕರ್ತ ಅರುಣ್ ಶೌರಿ ಮತ್ತು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು ಈ ಅರ್ಜಿಯನ್ನು ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ ಎನ್ನುವುದನ್ನು ಮುಂದಿಟ್ಟು, ರಫೇಲ್ ಹಗರಣಕ್ಕೆ ಸಂಬಂಧಿಸಿ ಮೋದಿ ನೇತೃತ್ವದ ಸರಕಾರ ಕಳಂಕಮುಕ್ತಗೊಂಡಿದೆ ಎನ್ನಲಾಗುವುದಿಲ್ಲ. ರಫೇಲ್ ಹಗರಣಕ್ಕೆ ಸಂಬಂಧಿಸಿ ಯಾವ ತನಿಖೆಗೂ ಅವಕಾಶ ನೀಡದೇ ಇರುವುದೇ ಒಪ್ಪಂದದಲ್ಲಿ ಸರಕಾರದ ನಡೆಯನ್ನು ಅನುಮಾನಾಸ್ಪದ ಗೊಳಿಸಿದೆ. ರಫೇಲ್ ಹಗರಣದ ಕುರಿತಂತೆ ಆಸಕ್ತಿ ತೋರಿಸಿದ್ದ ಸಿಬಿಐ ಸಂಸ್ಥೆಯನ್ನೇ ಪರೋಕ್ಷವಾಗಿ ಮುಗಿಸಿದ ಸರಕಾರ, ತನಿಖೆಗೆ ಒತ್ತಾಯಿಸಿದವರನ್ನೆಲ್ಲ ಬೇರೆ ಬೇರೆ ರೀತಿಯಲ್ಲಿ ಬಗ್ಗು ಬಡಿಯಿತು. ಆದರೆ ರಫೇಲ್ ಹಗರಣದಲ್ಲಿ ಸರಕಾರವೆಸಗಿದ ಲೋಪಗಳು ಉತ್ತರವಿಲ್ಲದೆ ಬಿದ್ದುಕೊಂಡಿದೆ. ಎಲ್ಲಿಯವರೆಗೆ ಸರಕಾರ ಈ ಲೋಪಗಳಿಗೆ ಸ್ಪಷ್ಟೀಕರಣವನ್ನು ನೀಡುವುದಿಲ್ಲವೋ, ಅಲ್ಲಿಯವರೆಗೂ ರಫೇಲ್ ಒಪ್ಪಂದ ಪ್ರಶ್ನಾರ್ಹವಾಗಿಯೇ ಉಳಿಯುತ್ತದೆ. ರಫೇಲ್ ಯುದ್ಧ ವಿಮಾನಗಳ ಖರೀದಿ ಯುಪಿಎ ಸರಕಾರದ ಕೂಸು ಎನ್ನುವುದನ್ನು ನಾವು ಮರೆಯುವಂತಿಲ್ಲ. ಫ್ರಾನ್ಸ್ ಕಂಪೆನಿಯ ಜೊತೆಗೆ ನಡೆದ ಈ ಒಪ್ಪಂದದಲ್ಲಿ ಭಾರತದ ಪರವಾಗಿ ಕೈ ಜೋಡಿಸಿದ್ದು ಭಾರತದ ಹೆಮ್ಮೆಯ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ. ಹಾಲ್ ಮತ್ತು ಡಸಾಲ್ಟ್ ಕಂಪೆನಿಯ ನಡುವಿನ ಒಪ್ಪಂದ ಅದೆಷ್ಟು ಸ್ಪಷ್ಟವಾಗಿತ್ತೆಂದರೆ, 126 ಯುದ್ಧ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ ಹಾಲ್ ಅಂತಿಮ ನಿರ್ಧಾರಕ್ಕೆ ಇನ್ನೇನು ಬರಲಿತ್ತು.

ಈ ಬಗ್ಗೆ ಹಾಲ್‌ನ ಅಂದಿನ ಅಧ್ಯಕ್ಷ ರಕ್ಷಣಾ ಸಚಿವಾಲಯಕ್ಕೆ ಪತ್ರವನ್ನೂ ಬರೆದಿದ್ದರು. ಆದರೆ ಇದಾದ ಕೆಲವೇ ಸಮಯದಲ್ಲಿ ಪ್ರಧಾನಿ ಮೋದಿ ಫ್ರಾನ್ಸ್‌ಗೆ ಪ್ರವಾಸ ಗೈದರು. ಅಲ್ಲಿನ ಪ್ರಧಾನಿಯನ್ನು ಭೇಟಿಯಾಗುವ ಸಂದರ್ಭದಲ್ಲಿ ಮೋದಿಯ ಜೊತೆಗಿದ್ದದ್ದು ಹಾಲ್‌ನ ಅಧ್ಯಕ್ಷರಲ್ಲ, ಬದಲಿಗೆ ಅಂಬಾನಿ. ಬಳಿಕ ಮೊದಲಿಗಿಂತಲೂ ದುಬಾರಿ ಬೆಲೆಯಲ್ಲಿ 126 ಯುದ್ಧ ವಿಮಾನಗಳ ಬದಲಿಗೆ 36 ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದ ಕುದುರಿತು. ನೋಂದಣಿಯಾಗಿ ಒಂದು ವರ್ಷವೂ ಆಗದ ರಿಲಯನ್ಸ್ ಡಿಫೆನ್ಸ್ ಕಂಪೆನಿ ಒಪ್ಪಂದದ ಭಾಗವಾಯಿತು. ಸರಕಾರ ದೇಶದ ಭದ್ರತೆಯನ್ನು ಅಂಬಾನಿಯ ಹಿತಾಸಕ್ತಿಗಾಗಿ ಬಲಿಕೊಟ್ಟಿತೇ? ಎಂದು ಈ ದೇಶದ ಜನರು ಅನುಮಾನಿಸಿದರೆ ಆ ಅನುಮಾನವನ್ನು ಸರಕಾರ ಸ್ಪಷ್ಟೀಕರಣದ ಜೊತೆಗೆ ಪರಿಹರಿಸಬೇಕೇ ಹೊರತು, ಬೇರೆ ಒತ್ತಡಗಳ ಮೂಲಕ ಅವುಗಳನ್ನು ದಮನಿಸುವುದಲ್ಲ. ಈ ದೇಶದಲ್ಲಿ ಬೋಫೋರ್ಸ್ ಹಗರಣ ತನಿಖೆಯಾಗಬಹುದಾದರೆ ಅದಕ್ಕಿಂತಲೂ ಹಲವು ಪಟ್ಟು ದೊಡ್ಡ ಅವ್ಯವಹಾರವೆಂದು ಆರೋಪಿಸಲ್ಪಟ್ಟ ರಫೇಲ್ ಹಗರಣ ಯಾಕೆ ತನಿಖೆಯಾಗಬಾರದು?

  ಒಪ್ಪಂದದ ಭಾಗವಾಗಿದ್ದ ಹಾಲ್‌ನನ್ನು ಹೊರಗಿಟ್ಟು, ರಕ್ಷಣಾ ಕ್ಷೇತ್ರದಲ್ಲಿ ಎಳ್ಳಷ್ಟೂ ಅನುಭವವಿಲ್ಲದ, ಅದಾಗಷ್ಟೇ ನೋಂದಣಿಯಾಗಿದ್ದ ರಿಲಯನ್ಸ್ ಡಿಫೆನ್ಸ್‌ನ್ನು ಯಾಕೆ ಆಯ್ಕೆ ಮಾಡಿಕೊಳ್ಳಲಾಯಿತು? 126 ಯುದ್ಧ ವಿಮಾನಗಳ ಖರೀದಿಯ ಬದಲಿಗೆ ಅದನ್ನು 36ಕ್ಕೆ ಇಳಿಸಲಾಯಿತು ಮತ್ತು 520 ಕೋಟಿ ಯುರೋ ವೆಚ್ಚವು, 820 ಕೋಟಿ ಯುರೋಗೆ ಯಾಕೆ ಏರಿಕೆಯಾಯಿತು? ಈ ಒಪ್ಪಂದದಲ್ಲಿ ಭ್ರಷ್ಟಾಚಾರ ತಡೆ ನಿಯಮವನ್ನೂ ಸರಕಾರ ತೆರವು ಗೊಳಿಸಿದೆ. ಅಂದರೆ ಫ್ರೆಂಚ್ ಕಂಪೆನಿಗೆ ಲಂಚ ಪಾವತಿಯಾಗಿದೆಯೇ ಎನ್ನುವುದನ್ನು ವಿಚಾರಣೆ ನಡೆಸುವ ಹಕ್ಕನ್ನು ಕೂಡ ಕೈ ಬಿಡಲಾಗಿದೆ. ಹಾಲ್‌ನನ್ನು ಭಾಗೀದಾರನನ್ನಾಗಿಸಿ 120 ವಿಮಾನಗಳನ್ನು ಖರೀದಿಸುವ ಒಪ್ಪಂದದಲ್ಲಿ, ತಂತ್ರಜ್ಞಾನವನ್ನು ಹಸ್ತಾಂತರಿಸುವ ಅನಿವಾರ್ಯತೆ ಪಶ್ಚಿಮದ ಕಂಪೆನಿಗಳಿಗಿತ್ತು. ಹಾಲ್ ಮೂಲಕ ವಿದೇಶಿ ತಂತ್ರಜ್ಞಾನಗಳನ್ನು ನಮ್ಮದಾಗಿಸಿಕೊಂಡು ಇನ್ನಷ್ಟು ಯುದ್ಧವಿಮಾನಗಳ ತಯಾರಿಗೆ ಅವಕಾಶವಿತ್ತು.

ಆದರೆ ಅಂಬಾನಿ ಕಂಪೆನಿಯ ಹಿತಾಸಕ್ತಿಗಾಗಿ ಎಲ್ಲ ಅವಕಾಶಗಳನ್ನು ಭಾರತ ಕಳೆದುಕೊಂಡಿತು. ಈ ಒಪ್ಪಂದದ ನಿಜವಾದ ಫಲಾನುಭವಿಗಳು ವಿದೇಶಿ ಕಂಪೆನಿ, ರಿಲಯನ್ಸ್ ಕಂಪೆನಿಗಳು ಮಾತ್ರ. ಭಾರತ ಇದರಲ್ಲಿ ಪಡೆದುಕೊಂಡದ್ದಕ್ಕಿಂತ ಕಳೆದುಕೊಂಡುದೇ ಹೆಚ್ಚು. ಈ ದೇಶದ ಭದ್ರತಾ ವಿಷಯವನ್ನು ಕೆಲವು ಹಿತಾಸಕ್ತಿಗಳಿಗಾಗಿ ಸರಕಾರ ಬಲಿಕೊಟ್ಟಿದೆ ಎಂದಾದಲ್ಲಿ ಅದು ತನಿಖೆ ನಡೆಯಲೇಬೇಕಾಗಿದೆ. ಈ ನಿಟ್ಟಿನಲ್ಲಿ ತನಿಖೆಗೆ ಸುಪ್ರಿಂೀಕೋರ್ಟ್‌ನ ತೀರ್ಪು ಅಡ್ಡಿ ಬರುವುದಿಲ್ಲ. ಜಂಟಿ ಸಂಸದೀಯ ಸಮಿತಿ ಈ ಒಪ್ಪಂದ ತನಿಖೆ ನಡೆಸಬಹುದು. ಆರಂಭದಿಂದ ಇಲ್ಲಿಯವರೆಗೆ ಎಲ್ಲೆಲ್ಲಿ ಅಕ್ರಮಗಳು ನಡೆದಿವೆ, ಅವ್ಯವಹಾರಗಳು ನಡೆದಿವೆ ಎನ್ನುವುದನ್ನು ಪರಿಶೀಲಿಸಲು ಜಂಟಿ ಸಂಸದೀಯ ಸಮಿತಿಯನ್ನು ಸ್ಥಾಪಿಸಬೇಕು. ತಾನು ಅಕ್ರಮವೆಸಗಿಲ್ಲ ಎನ್ನುವುದಾಗಿದ್ದರೆ, ಮುಕ್ತ ಮನಸ್ಸಿನಿಂದ ತನಿಖೆಗೆ ತೆರೆದುಕೊಳ್ಳಬೇಕು. ತನ್ನ ವಿಶ್ವಾಸಾರ್ಹತೆಯನ್ನು ಈ ಮೂಲಕ ಉಳಿಸಿಕೊಂಡು, ಆ ಬಳಿಕ ಆರೋಪಿಸಿದವರ ಮೇಲೆ ಸರಕಾರ ಪ್ರತಿದಾಳಿ ನಡೆಸಬೇಕು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)