varthabharthi


ಅಂತಾರಾಷ್ಟ್ರೀಯ

​ವಿದ್ಯಾರ್ಥಿಯಿಂದ ಸಹಪಾಠಿಗಳ ಮೇಲೆ ಗುಂಡಿನ ದಾಳಿ: ಇಬ್ಬರು ಬಲಿ

ವಾರ್ತಾ ಭಾರತಿ : 15 Nov, 2019

ಲಾಸ್ ಎಂಜಲೀಸ್: ಹದಿನೈದು ವರ್ಷದ ಬಾಲಕನೋರ್ವ ತನ್ನ ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಸಹ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ ಘಟನೆಯಲ್ಲಿ ಇಬ್ಬರು ಮೃತಪಟ್ಟು ಇತರ ಮೂವರು ಗಾಯಗೊಂಡಿದ್ದಾರೆ. ಬಳಿಕ ಪಿಸ್ತೂಲಿನಿಂದ ತಾನೇ ಗುಂಡು ಹೊಡೆದುಕೊಂಡಿದ್ದು, ಆತ ಕೂಡಾ ಗಂಭೀರ ಸ್ಥಿತಿಯಲ್ಲಿದ್ದಾನೆ.

ಸಾಂತ ಕ್ಲಾರಿಟ ಸಾಗೂಸ್ ಹೈಸ್ಕೂಲ್‌ನಲ್ಲಿ ನಡೆದ ಘಟನೆಯಲ್ಲಿ ಬಾಲಕನನ್ನು ಗಂಭೀರ ಸ್ಥಿತಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಮೆರಿಕದಲ್ಲಿ ಕಳೆದ ಎರಡು ದಶಕದಲ್ಲಿ ಶಾಲೆಗಳಲ್ಲಿ ನಡೆಯುತ್ತಿರುವ ಗುಂಡಿನ ದಾಳಿಯಲ್ಲಿ 300ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.

ಏಷ್ಯನ್ ವಿದ್ಯಾರ್ಥಿಯೊಬ್ಬ 0.45 ಕ್ಯಾಲಿಬೆರ್ ಸೆಮಿ ಅಟೋಮ್ಯಾಟಿಕ್ ಪಿಸ್ತೂಲಿನಿಂದ ಗುಂಡು ಹಾರಿಸಿದ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ ಭೀತಿಗೊಂಡ ವಿದ್ಯಾರ್ಥಿಗಳು ತಮ್ಮ ತಮ್ಮ ಕೊಠಡಿಗಳನ್ನು ಮುಚ್ಚಿಕೊಂಡರೆ, ಕೆಲ ವಿದ್ಯಾಥಿಗಳು ದಿಕ್ಕಾಪಾಲಾಗಿ ಓಡಿದರು.

ಘಟನೆಯ ದೃಶ್ಯಾವಳಿಯನ್ನು ತನಿಖಾಧಿಕಾರಿಗಳು ವೀಕ್ಷಿಸಿದ್ದು, ಈ ವಿದ್ಯಾರ್ಥಿ ತನ್ನ ಹಿಂದಿನ ಜೇಬಿನಿಂದ ಪಿಸ್ತೂಲು ತೆಗೆದು, ಐದು ಮಂದಿಗೆ ಗುಂಡು ಹೊಡೆದು ಗಾಯಗೊಳಿಸಿದ್ದಾನೆ. ಬಳಿಕ ತನ್ನ ಹಣೆಗೇ ಗುಂಡು ಹೊಡೆದುಕೊಂಡಿದ್ದಾನೆ ಎಂದು ಹೊಮಿಸೈಡ್ ಕ್ಯಾಪ್ಟನ್ ಕೆಂಟ್ ವೆಜೆನರ್ ಹೇಳಿದ್ದಾರೆ. ಗಾಯಾಳುಗಳಲ್ಲಿ ದಾಳಿಕೋರ ವಿದ್ಯಾರ್ಥಿ ಕೂಡಾ ಸೇರಿದ್ದಾನೆ ಎಂದು ಲಾಸ್‌ಎಂಜಲೀಸ್ ಕೌಂಟಿ ಶೆರಿಫ್ ಅಲೆಕ್ಸ್ ವಿಲಾನುವಾ ಹೇಳಿದ್ದಾರೆ.

ಮೃತಪಟ್ಟವರಲ್ಲಿ 16 ವರ್ಷದ ಬಾಲಕಿ ಹಾಗೂ 14 ವರ್ಷದ ಬಾಲಕ ಸೇರಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಹಾಗೂ ಒಬ್ಬ ವಿದ್ಯಾರ್ಥಿ ಗಾಯಗೊಂಡಿದ್ದು ಇವರು 14 ರಿಂದ 15 ವರ್ಷದವರು. 2300 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಮಧ್ಯಾಹ್ನ ಈ ದಾಳಿ ನಡೆದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)