varthabharthi


ರಾಷ್ಟ್ರೀಯ

​ಮಹಾರಾಷ್ಟ್ರ ರಾಜಕೀಯ: ನಿತಿನ್ ಗಡ್ಕರಿ ಹೇಳಿದ್ದೇನು ?

ವಾರ್ತಾ ಭಾರತಿ : 15 Nov, 2019

ಹೊಸದಿಲ್ಲಿ: ಮಹಾರಾಷ್ಟ್ರ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಲು ನಿರಾಕರಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, "ರಾಜಕೀಯ ಕೂಡಾ ಕ್ರಿಕೆಟ್‌ನಂತೆ ಊಹೆಗೆ ನಿಲುಕದ್ದು; ಏನು ಬೇಕಾದರೂ ನಡೆಯಬಹುದು" ಎಂದು ಹೇಳಿದ್ದಾರೆ.

"ಕ್ರಿಕೆಟ್ ಮತ್ತು ರಾಜಕಾರಣದಲ್ಲಿ ಏನು ಬೇಕಾದರೂ ನಡೆಯಬಹುದು. ಕೆಲವೊಮ್ಮೆ ನಾವು ಪಂದ್ಯ ಸೋಲುತ್ತೇವೆ ಎಂಬ ಭಾವನೆ ನಿಮ್ಮಲ್ಲಿ ಬರಬಹುದು. ಆದರೆ ಫಲಿತಾಂಶ ಇದಕ್ಕೆ ತದ್ವಿರುದ್ಧವಾಗಿರುತ್ತದೆ" ಎಂದು ಹೇಳಿದರು. ಜತೆಗೆ ನಾನು ದೆಹಲಿ ರಾಜಕೀಯಕ್ಕೆ ಸಂಬಂಧ ಹೊಂದಿದ್ದೇನೆಯೇ ವಿನಃ ಮಹಾರಾಷ್ಟ್ರ ರಾಜಕಾರಣದ ಜತೆ ಅಲ್ಲ ಎಂದು ಸ್ಪಷ್ಟಪಡಿಸಿದರು.

ಮಹಾರಾಷ್ಟ್ರದಿಂದ ವಾಪಸ್ಸಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಗಡ್ಕರಿ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಬಿಜೆಪಿ ಹಾಗೂ ಶಿವಸೇನೆ ನಡುವೆ ಮುಖ್ಯಮಂತ್ರಿ ಗಾದಿಗಾಗಿ ನಡೆದ ಹಗ್ಗ ಜಗ್ಗಾಟದ ಬಳಿಕವೂ ಒಪ್ಪಂದಕ್ಕೆ ಬರಲು ವಿಫಲವಾದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಶಿವಸೇನೆ ಇದೀಗ ಕಾಂಗ್ರೆಸ್ ಹಾಗೂ ಎನ್‌ಸಿಪಿ ಜತೆ ಮೈತ್ರಿಗೆ ಕಸರತ್ತು ನಡೆಸುತ್ತಿದೆ.
ರಾಜ್ಯದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಯಾದಲ್ಲಿ, ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರ ಕೈಗೊಂಡ ಯೋಜನೆಗಳ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ ಎಂಬ ಆತಂಕವನ್ನು ಗಡ್ಕರಿ ತಳ್ಳಿಹಾಕಿದರು.

"ಇದರಿಂದ ಯಾವ ವ್ಯತ್ಯಾಸವೂ ಆಗದು ಎನ್ನುವುದು ನನ್ನ ಭಾವನೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳು ಬದಲಾಗುತ್ತವೆ. ಆದರೆ ಯೋಜನೆಗಳು ಯಾವ ಸಮಸ್ಯೆಯೂ ಇಲ್ಲದೇ ಮುಂದುವರಿಯುತ್ತವೆ. ಯಾವ ಸರ್ಕಾರ ಬರುತ್ತದೆ ಎನ್ನುವುದು ಮುಖ್ಯವಲ್ಲ. ಈಗಾಗಲೇ ಚಾಲನೆಗೊಂಡ ಧನಾತ್ಮಕ ಯೋಜನೆಗಳು ಮತ್ತು ಅಭಿವೃದ್ಧಿ ಯೋಜನೆಗಳನ್ನು ಮುಂದುವರಿಯುತ್ತವೆ" ಎಂದು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)