varthabharthi


ರಾಷ್ಟ್ರೀಯ

ಏರ್‌ ಇಂಡಿಯಾ ಬಳಿಕ ಇದೀಗ ಬಿಪಿಸಿಎಲ್ ಮಾರಾಟಕ್ಕಿದೆ!

ವಾರ್ತಾ ಭಾರತಿ : 17 Nov, 2019

ಹೊಸದಿಲ್ಲಿ, ನ.17: ಸರ್ಕಾರಿ ಸ್ವಾಮ್ಯದ ವಿಮಾನಯಾನ ಕಂಪೆನಿ ಏರ್‌ ಇಂಡಿಯಾ ಮಾರಾಟ ಪ್ರಕ್ರಿಯೆ ಪೂರ್ಣಗೊಳಿಸಲು ಸಿದ್ಧತೆ ನಡೆದಿರುವ ನಡುವೆಯೇ, ತೈಲ ಶುದ್ಧೀಕರಣ ಮತ್ತು ಮಾರುಕಟ್ಟೆ ಕಂಪೆನಿಯಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್) ಸಂಸ್ಥೆಯನ್ನು ಮಾರ್ಚ್ ತಿಂಗಳ ಒಳಗಾಗಿ ಮಾರಾಟ ಮಾಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

"ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ಮುಂದುವರಿದಿದ್ದು, ಇದೇ ವರ್ಷ ಪೂರ್ಣಗೊಳ್ಳುವ ನಿರೀಕ್ಷೆ ಇದೆ" ಎಂದು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಕ್ರೋಢೀಕರಿಸುವ ಸರ್ಕಾರದ ಯೋಜನೆಯ ಪ್ರಮುಖ ಅಂಗವಾಗಿ ಈ ಎರಡು ಕಂಪನಿಗಳನ್ನು ಮಾರಾಟ ಮಾಡಲಾಗುತ್ತಿದೆ" ಎಂದು ಹೇಳಿದ್ದಾರೆ.

ಏರ್‌ ಇಂಡಿಯಾ ಮಾರಾಟದ ಸಂಬಂಧ ಅಂತಾರಾಷ್ಟ್ರೀಯ ರೋಡ್‌ ಶೋಗಳಲ್ಲಿ ಹೂಡಿಕೆದಾರರಿಂದ ವ್ಯಾಪಕ ಆಸಕ್ತಿ ವ್ಯಕ್ತವಾಗಿದೆ. ನಷ್ಟಕ್ಕೆ ಕಾರಣವಾದ ಸಂಸ್ಥೆಯನ್ನು ಒಂದು ವರ್ಷದ ಹಿಂದೆ ಮಾರಾಟ ಮಾಡುವ ಪ್ರಕ್ರಿಯೆ, ಹೂಡಿಕೆದಾರರಿಂದ ಸೂಕ್ತ ಸ್ಪಂದನ ದೊರಕದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ತೆರಿಗೆ ಸಂಗ್ರಹ ಒತ್ತಡದ ಸ್ಥಿತಿಯಲ್ಲಿ, ಈ ಬಂಡವಾಳ ಹಿಂದೆಗೆತ ಕ್ರಮದಿಂದ ಸರ್ಕಾರದ ಆದಾಯ ಹೆಚ್ಚುವ ನಿರೀಕ್ಷೆ ಇದೆ ಎಂದು ವಿವರಿಸಿದರು.

ಆರ್ಥಿಕ ಹಿಂಜರಿತವನ್ನು ತಡೆಯಲು ಸರ್ಕಾರ ಸಕಾಲದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದು, ಹಲವು ವಲಯಗಳು ಒತ್ತಡದಿಂದ ಹೊರಬರುತ್ತಿವೆ. ಉದ್ಯಮಗಳ ಮುಖಂಡರು ತಮ್ಮ ಬ್ಯಾಲೆನ್ಸ್‌ಶೀಟ್ ಸುಧಾರಿಸಲು ನೆರವಾಗಿದ್ದು, ಹಲವು ಮಂದಿ ಹೊಸ ಹೂಡಿಕೆಗಳಿಗೆ ಯೋಜನೆ ಹಾಕಿಕೊಂಡಿದ್ದಾರೆ ಎಂದು ಬಣ್ಣಿಸಿದರು. ಕೆಲ ವಲಯಗಳಲ್ಲಿ ಮಾರಾಟ ಹೆಚ್ಚಿದ ತಕ್ಷಣ ಜಿಎಸ್‌ಟಿ ಸಂಗ್ರಹ ಪ್ರಮಾಣ ಕೂಡಾ ಅಧಿಕವಾಗಲಿದೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)