ಮಣಿಪಾಲ: ಕ್ರಿಸ್ಮಸ್ ಕೇಕ್ಗೆ ಡ್ರೈಫ್ರುಟ್ಸ್ ಮಿಕ್ಸಿಂಗ್
ಉಡುಪಿ, ನ.18: ಮುಂಬರುವ ಕ್ರಿಸ್ಮಸ್ ಹಾಗೂ ಹೊಸವರ್ಷದ ಸಂದರ್ಭಕ್ಕಾಗಿ ಸಾಂಪ್ರದಾಯಿಕ ಕೇಕ್ ಮಿಕ್ಸ್ ಕಾರ್ಯಕ್ರಮ ಮಣಿಪಾಲದ ವಾಗ್ಷಾ ಕಟ್ಟಡದಲ್ಲಿ ಸೋಮವಾರ ಸಂಜೆ ಗಣ್ಯರ ಸಮ್ಮುಖದಲ್ಲಿ ನಡೆಯಿತು.
ಮಣಿಪಾಲ ಮಾಹೆಯ ವೆಲ್ಕಮ್ ಗ್ರೂಪ್ ಗ್ರಾಜ್ಯುವೇಟ್ ಸ್ಕೂಲ್ ಆಫ್ ಹೊಟೇಲ್ ಅಡ್ಮಿಸ್ಟ್ರೇಷನ್ ಹಾಗೂ ಫಾರ್ಚ್ಯೂನ್ ಇನ್ ವ್ಯಾಲಿವ್ಯೆ ಹೊಟೇಲ್ಗಳ ಜಂಟಿ ಆಶ್ರಯದಲ್ಲಿ ನಡೆದ ಕೇಕ್ ಮಿಕ್ಸಿಂಗ್ ಕಾರ್ಯಕ್ರಮದಲ್ಲಿ ಕಿಲೋಗಟ್ಟಲೆ ನಟ್ಸ್ ಮತ್ತು ಡ್ರೈಪ್ರುಟ್ಸ್ಗಳನ್ನು ವಿವಿಧ ಬಗೆಯ ಮದ್ಯದಲ್ಲಿ ಕಲಸಿ ನೆನಸಿ ಇಡಲಾಯಿತು.
‘ಕೇಕ್ ಮಿಕ್ಸಿಂಗ್ ಉತ್ಸವ ವಿದೇಶಗಳಲ್ಲಿ ವಿಶೇಷವಾಗಿ ಯುರೋಪ್, ಇಂಗ್ಲೆಂಡ್ ಹಾಗೂ ಅಮೆರಿಕಗಳಲ್ಲಿ ಶತಮಾನಗಳಿಂದ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯ. ಕ್ರಿಸ್ಮಸ್ಗೆ ಇನ್ನೂ ತಿಂಗಳು ಇರುವಾಗಲೇ ರುಚಿಕರ ಕೇಕ್ ತಯಾರಿಗಾಗಿ ಒಣ ಹಣ್ಣುಗಳನ್ನು ವಿವಿಧ ಬಗೆಯ ಹಣ್ಣಿನ ರಸ, ಬಿಳಿ ಮತ್ತು ಕೆಂಪು ವೈನ್ ಹಾಗೂ ಮದ್ಯದೊಂದಿಗೆ ಮಿಕ್ಸ್ ಮಾಡುವ ಪೂರ್ವ ತಯಾರಿಯೇ ಈ ಕೇಕ್ಮಿಕ್ಸಿಂಗ್. ಕೇಕ್ಮಿಕ್ಸಿಂಗ್ ಉಗಮ 17ನೇ ಶತಮಾನದಲ್ಲಾದರೆ, ಇದನ್ನು ಈಗಲೂ ಮುಂದುವರಿಸಿಕೊಂಡು ಬರಲಾ ಗುತ್ತಿದೆ’ ಎಂದು ವಾಗ್ಷಾದ ಪ್ರಾಂಶುಪಾಲ್ ಚೆಫ್ ತಿರುಜ್ಞಾನಸಂಬಂಧನ್ ಕೆ. ಹಾಗೂ ಚೆಫ್ ವಸಂತನ್ ಎಸ್. ಮಾಹಿತಿ ನೀಡಿದರು.
ಇಂದು ಲಕ್ಷಾಂತರ ರೂ. ಮೌಲ್ಯದ ಸುಮಾರು 250 ಕೆ.ಜಿ.ಯಷ್ಟು ಗೋಡಂಬಿ ಬೀಜ, ಒಣದ್ರಾಕ್ಷೆ, 3 ಬಗೆಯ ಟೂಟಿ-ಫ್ರೂಟಿ, ಚೆರ್ರಿ, ಬಾದಾಮ್, ಅಲ್ಮೋಡ ಹಾಗೂ ಇತರ ಡ್ರೈ ಫ್ರುಟ್ಸ್ಗಳನ್ನು 80 ಲೀ.ನಷ್ಟು ರಮ್, ಬ್ರಾಂಡಿ, ಬಿಳಿ ಮತ್ತು ಕೆಂಪು ವೈನ್, ದ್ರಾಕ್ಷಾರಸ, ಕಿತ್ತಳೆ ರಸ ಹಾಗೂ ಜೇನುತುಪ್ಪದೊಂದಿಗೆ ಬೆರೆಸಿ ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ಸುಮಾರು ಒಂದು ತಿಂಗಳ ಕಾಲ ಮುಚ್ಚಿಟ್ಟು, ನಂತರ ಅದರಿಂದ ವೈವಿಧ್ಯಮಯ ಕೇಕ್ ತಯಾರಿಸಲಾಗುತ್ತದೆ ಎಂದವರು ವಿವರಿಸಿದರು.
ಕೇಕ್ ಮಿಕ್ಸ್ಗೆ ಮಣಿಪಾಲ ವಿವಿ ಚಾನ್ಸಲರ್ ಡಾ. ರಾಮದಾಸ್ ಪೈ ಅವರ ಪತ್ನಿ ವಸಂತಿ ಪೈ ಚಾಲನೆ ನೀಡಿದರು. ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್, ಇಂದಿರಾ ಬಲ್ಲಾಳ್, ಕುಲಪತಿ ಡಾ.ವಿನೋದ್ ಭಟ್, ಸಹ ಕುಲಪತಿಗಳಾದ ಡಾ.ಪೂರ್ಣಿಮಾ ಬಾಳಿಗಾ, ಡಾ.ಪಿಎಲ್ಎನ್ಜಿ ರಾವ್, ರಿಜಿಸ್ಟಾರ್ ಡಾ.ನಾರಾಯಣ ಸಭಾಹಿತ್ ಹಾಗೂ ಇತರರು ಉಪಸ್ಥಿತರಿದ್ದರು.