varthabharthi


ಸಂಪಾದಕೀಯ

ನಿವೃತ್ತ ಸೇನಾಧಿಕಾರಿಯೊಬ್ಬನ ಸೇಡಿನ ಮಾತು

ವಾರ್ತಾ ಭಾರತಿ : 19 Nov, 2019

ಸಾಧಾರಣವಾಗಿ ಯಾವುದೇ ರಾಜಕೀಯ ಪಕ್ಷಗಳಿಂದ ಆಯ್ಕೆಯಾದರೂ ಜನಪ್ರತಿನಿಧಿಗಳು ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಪಕ್ಷಭೇದ ಮರೆಯಬೇಕಾಗುತ್ತದೆ. ಎಲ್ಲರನ್ನೂ ಒಂದು ತೆಕ್ಕೆಗೆ ತೆಗೆದುಕೊಂಡು ದೇಶವನ್ನು ಮುನ್ನಡೆಸಬೇಕು. ಆದರೆ ರಾಜಕೀಯ ನಾಯಕರು ಅದನ್ನು ಪಾಲಿಸಲೇಬೇಕು ಎಂದೇನಿಲ್ಲ. ಸದ್ಯದ ರಾಜಕೀಯದಲ್ಲಿ ಪಕ್ಷಗಳು ಸೇಡಿನ ರಾಜಕೀಯಗಳಿಗಾಗಿ ಕುಖ್ಯಾತಿಯನ್ನು ಹೊಂದಿವೆ. ಇಷ್ಟಾದರೂ ಕೆಲವು ಸ್ಥಾನಗಳ ಘನತೆಯೇ ಪಕ್ಷಾತೀತವಾಗಿರುತ್ತವೆ. ಯಾವ ಸರಕಾರವೇ ಅಧಿಕಾರದಲ್ಲಿರಲಿ, ರಾಷ್ಟ್ರಪತಿ ತಟಸ್ಥ ನೀತಿಯನ್ನು ಅನುಸರಿಸಬೇಕು. ದೇಶದ ಹಿತಾಸಕ್ತಿಯಷ್ಟೇ ಆ ಸ್ಥಾನಕ್ಕೆ ಮುಖ್ಯವಾಗುತ್ತದೆ. ಯಾವುದೇ ಪಕ್ಷದ ಪರವಾಗಿ, ಸಿದ್ಧಾಂತದ ಪರವಾಗಿ ಕೆಲಸ ಮಾಡುವುದು ಆ ಸ್ಥಾನದ ಘನತೆಗೆ ಧಕ್ಕೆ ತಂದಂತೆ. ಆ ಘನತೆಯನ್ನು ಉಳಿಸಿದರೆ ಮಾತ್ರ ಪ್ರಜಾಸತ್ತೆಯ, ಸಂವಿಧಾನದ ಘನತೆ ಉಳಿಯುತ್ತದೆ. ಸದನದ ನಾಯಕತ್ವವನ್ನು ವಹಿಸುವ ಸ್ಪೀಕರ್‌ನ ಸ್ಥಾನವೂ ಇದಕ್ಕೆ ಹೊರತಾಗಿಲ್ಲ. ಈ ದೇಶ ಅಂತಹ ಹಲವು ಮುತ್ಸದ್ದಿ ಸ್ಪೀಕರ್‌ಗಳನ್ನು ಕಂಡಿದೆ. ಇದೇ ಸಂದರ್ಭದಲ್ಲಿ ಕೆ.ಜಿ. ಬೋಪಯ್ಯರಂತಹ ಅತ್ಯಂತ ಕಳಪೆ ಸ್ಪೀಕರ್‌ಗಳಿಗೂ ದೇಶ ಸಾಕ್ಷಿಯಾಗಿದೆ. ಕೆಲವು ವೃತ್ತಿಗಳೂ ಇಂತಹದೇ ತಾಟಸ್ಥವನ್ನು ಬೇಡುತ್ತವೆ.

ಒಬ್ಬ ಪತ್ರಕರ್ತನ ಖಾಸಗಿ ನಂಬಿಕೆ ಯಾವುದೇ ಇರಲಿ, ವರದಿಗಳನ್ನು ನೀಡುವ ಸಂದರ್ಭದಲ್ಲಿ ಅದರ ಮೇಲೆ ಆ ನಂಬಿಕೆ ಪ್ರಭಾವ ಬೀರಬಾರದು. ಅದು ಆತನ ವೃತ್ತಿಧರ್ಮದ ಪ್ರಮುಖ ಭಾಗವಾಗಿದೆ. ಹಾಗೆಯೇ ಈ ದೇಶದ ಕೆಲವು ಮಹತ್ವದ ಹುದ್ದೆಗಳು ಇಂತಹದೇ ‘ವೃತ್ತಿ ಧರ್ಮ’ವನ್ನು ಬೇಡುತ್ತವೆ. ಪೊಲೀಸ್ ಇಲಾಖೆ, ವೈದ್ಯಕೀಯ ಇಲಾಖೆ, ಶಿಕ್ಷಣ ಇಲಾಖೆ ಅಂತಿಮವಾಗಿ ನಮ್ಮ ಸೇನೆ ಸದಾ ವೃತ್ತಿಧರ್ಮಕ್ಕೆ ಬದ್ಧವಾಗಿರಬೇಕು. ವೈಯಕ್ತಿಕ ನಂಬಿಕೆಗಿಂತಲೂ ದೇಶದ ಹಿತಾಸಕ್ತಿ ಅವರಿಗೆ ಮುಖ್ಯವಾಗಬೇಕು. ಅದಕ್ಕಾಗಿಯೇ ಅದನ್ನು ಸೇವೆ ಎಂದು ಕರೆಯುತ್ತಾರೆ. ತಮ್ಮ ವೃತ್ತಿಗೆ ನ್ಯಾಯ ನೀಡುವುದು ಆದ್ಯತೆಯಾಗಬೇಕೇ ಹೊರತು, ಯಾವುದೋ ರಾಜಕೀಯ ಸಿದ್ಧಾಂತಗಳೋ ಅಥವಾ ವೈಯಕ್ತಿಕ ನಂಬಿಕೆಗಳೋ ಅಲ್ಲ. ಯಾವಾಗ ವೈಯಕ್ತಿಕ ನಂಬಿಕೆಗಳು, ರಾಜಕೀಯ ಸಿದ್ಧಾಂತಗಳು ಈ ಹುದ್ದೆಗಳಲ್ಲಿ ಹಸ್ತಕ್ಷೇಪ ನಡೆಸುತ್ತದೆಯೋ ಆಗ, ಅವರು ಈ ದೇಶಕ್ಕೆ ಅತ್ಯಂತ ಅಪಾಯಕಾರಿಗಳಾಗಿ ಬದಲಾಗುತ್ತಾರೆ.

ಪೊಲೀಸ್ ಇಲಾಖೆಯಲ್ಲಿರುವ ಒಬ್ಬ ಅಧಿಕಾರಿ ಒಂದು ರಾಜಕೀಯ ಪಕ್ಷದ ಕಟ್ಟಾ ಅನುಯಾಯಿಯಾಗಿದ್ದರೆ, ತನ್ನ ಹುದ್ದೆಗೆ ಆತ ನ್ಯಾಯ ನೀಡಲು ಸಾಧ್ಯವಿಲ್ಲ. ಆತ ವೈಯಕ್ತಿಕವಾಗಿ ಕೋಮುವಾದಿ ಮತ್ತು ಮೂಲಭೂತವಾದಿಯಾಗಿದ್ದು ತನ್ನ ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಅದು ಪ್ರಭಾವವನ್ನು ಬೀರಿದರೆ ಆತನಿಂದಲೇ ಕಾನೂನಿಗೆ ಅನ್ಯಾಯವಾಗುವ ಸಾಧ್ಯತೆಗಳಿರುತ್ತವೆ. ಇಂದು ಸಾರ್ವಜನಿಕವಾಗಿ ಸಂಘಪರಿವಾರದ ದುಷ್ಕರ್ಮಿಗಳು ಗೋರಕ್ಷಣೆ, ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ಬೀದಿಯಲ್ಲಿ ವಿಜೃಂಭಿಸುತ್ತಿದ್ದರೆ ಅದಕ್ಕೆ ಮುಖ್ಯ ಕಾರಣ, ಪೊಲೀಸ್ ಇಲಾಖೆ ಕೇಸರೀಕರಣಗೊಂಡಿರುವುದು. ಒಬ್ಬ ಶಿಕ್ಷಕ ಕೋಮುವಾದಿಯಾಗಿದ್ದರೆ ಆತ ಇಡೀ ಶಿಕ್ಷಣವ್ಯವಸ್ಥೆಯನ್ನೇ ಕೆಡಿಸಿ ಬಿಡುತ್ತಾನೆ. ಒಬ್ಬ ನ್ಯಾಯಾಧೀಶ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಬದ್ಧನಾಗಿದ್ದರೆ ಅಥವಾ ನಿರ್ದಿಷ್ಟ ಸಿದ್ಧಾಂತದ ಕುರಿತಂತೆ ಒಲವನ್ನು ಹೊಂದಿದ್ದು ಅದು ಆತನ ವೃತ್ತಿಯ ಮೇಲೆ ಪರಿಣಾಮ ಬೀರಿದರೆ, ಸಂವಿಧಾನದ ಉದ್ದೇಶ ಸಂಪೂರ್ಣ ವಿಫಲವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೊರ ಬೀಳುತ್ತಿರುವ ವಿರೋಧಾಭಾಸಗಳನ್ನು ಹೊಂದಿದ ತೀರ್ಪುಗಳನ್ನು ಈ ಹಿನ್ನೆಲೆಯಿಂದ ನಾವು ಚರ್ಚಿಸಬಹುದಾಗಿದೆ.

   ಇತ್ತೀಚಿನವರೆಗೂ ಭಾರತ ಸೇನೆ ಯಾವುದೇ ರಾಜಕೀಯ ಹಸ್ತಕ್ಷೇಪಗಳಿಲ್ಲದೆ ಸ್ವತಂತ್ರವಾಗಿದ್ದು ತನ್ನ ಘನತೆಯನ್ನು ಉಳಿಸಿಕೊಂಡಿತ್ತು. ಯಾವುದೇ ರಾಜಕೀಯ ಹೇಳಿಕೆಗಳಿಂದ, ಸಾರ್ವಜನಿಕ ಹೇಳಿಕೆಗಳಿಂದ ಅದು ದೂರವುಳಿದು ಭಾರತದ ಒಟ್ಟು ಹಿತಾಸಕ್ತಿಯನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡು ದೇಶದ ರಕ್ಷಣೆ ಮಾಡುತ್ತಾ ಬಂದಿದೆ. ಆದರೆ ನಾಲ್ಕೈದು ವರ್ಷಗಳಿಂದ ಪರಿಸ್ಥಿತಿ ಬದಲಾಗಿದೆ. ಸೇನೆಯ ಮುಖ್ಯಸ್ಥರು ಪತ್ರಿಕಾಗೋಷ್ಠಿಗಳಲ್ಲಿ, ಮಾಧ್ಯಮಗಳ ಮುಖಪುಟಗಳಲ್ಲಿ ಹೆಚ್ಚು ಹೆಚ್ಚು ಗುರುತಿಸ ತೊಡಗಿದ್ದಾರೆ. ಪ್ರಧಾನಿಯ ಪರವಾಗಿ ಹೇಳಿಕೆಗಳನ್ನು ನೀಡುವ ರೂಢಿಯೊಂದು ಶುರುವಾಗಿದೆ. ಕೆಲವು ವರ್ಷಗಳ ಹಿಂದೆ, ಸ್ಫೋಟ ಪ್ರಕರಣವೊಂದರಲ್ಲಿ ಸೇನಾ ಹಿನ್ನೆಲೆಯಿರುವ ಯೋಧನ ಬಂಧನವಾದಾಗ, ಸೇನೆಯೊಳಗೆ ಕೇಸರಿ ಉಗ್ರರ ಜಾಲ ಹರಡುತ್ತಿದೆ ಎಂಬ ವ್ಯಾಪಕ ಗುಲ್ಲೆದ್ದಿತ್ತು. ಇದೀಗ ಆ ಆರೋಪಗಳನ್ನು ಸಮರ್ಥಿಸುವಂತೆ ಸೇನೆಯ ಹಿರಿಯ ಮಾಜಿ ಅಧಿಕಾರಿಯೊಬ್ಬ ಇಡೀ ದೇಶವೇ ಬೆಚ್ಚಿ ಬೀಳುವಂತಹ ಹೇಳಿಕೆಯನ್ನು ನೀಡಿದ್ದಾರೆ. ಕಾಶ್ಮೀರದ ಕುರಿತ ಮಾಧ್ಯಮವೊಂದರ ಚರ್ಚೆಯಲ್ಲಿ ಆತ ಬಹಿರಂಗವಾಗಿ ‘ಕಾಶ್ಮೀರದಲ್ಲಿ ಅತ್ಯಾಚಾರಕ್ಕೆ ಬದಲಾಗಿ ಅತ್ಯಾಚಾರ ನಡೆಸಬೇಕು, ಗಡಿಪಾರಿಗೆ ಬದಲಾಗಿ ಗಡಿಪಾರು ನಡೆಸಬೇಕು, ಸೇಡಿಗೆ ಸೇಡು ಅಗತ್ಯ’ ಎಂದು ಚೀರಾಟ ನಡೆಸಿದ್ದಾರೆ. ಅಷ್ಟೇ ಅಲ್ಲ, ಅದಕ್ಕಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದಾಗಲೂ ಮಣಿಯದ ಆ ಅಧಿಕಾರಿ, ತನ್ನ ಮಾತಿಗೆ ಬದ್ಧ ಎಂಬ ಹೇಳಿಕೆಯನ್ನು ನೀಡಿದ್ದಾರೆ.

ನಿವೃತ್ತ ಸೇನಾಧಿಕಾರಿ ಎಸ್. ಪಿ. ಸಿನ್ಹಾ ಅವರ ಬಾಯಿಯಿಂದ ಹೊರಟ ಈ ಸೇಡಿನ ಹೇಳಿಕೆ ಆಕಸ್ಮಿಕವೇನೂ ಅಲ್ಲ. ಮಣಿಪುರ, ಕಾಶ್ಮೀರದಲ್ಲಿ ಸೇನೆಯ ದೌರ್ಜನ್ಯಗಳು ಆಗಾಗ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಾ ಬಂದಿವೆ. ಮಣಿಪುರದಲ್ಲಿ ಉಗ್ರಗಾಮಿಗಳ ದಮನದ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆದ ಬರ್ಬರ ಅತ್ಯಾಚಾರಗಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ಎಸ್. ಪಿ. ಸಿನ್ಹಾ ಒಂದು ಕಾಲದಲ್ಲಿ ಸೇನೆಯಲ್ಲಿ ಕೆಲಸ ನಿರ್ವಹಿಸಿದವರು. ಸೇನೆಯನ್ನು ಕಾಶ್ಮೀರಕ್ಕೆ ಕಳುಹಿಸಿರುವುದು ಅಲ್ಲಿನ ಶಾಂತಿ ಭದ್ರತೆಯನ್ನು ಕಾಪಾಡಲು. ಆದರೆ ವೈಯಕ್ತಿಕವಾಗಿ ಕಾಶ್ಮೀರಿ ಜನರ ಕುರಿತಂತೆ ಇಷ್ಟೊಂದು ಅಸಹನೆಯನ್ನು ಹೊಂದಿದ ಒಬ್ಬ ಸೇನಾಧಿಕಾರಿ ತನ್ನ ಶಕ್ತಿಯನ್ನು ಬಳಸಿಕೊಂಡು ಅಲ್ಲಿ ಮಾಡಬಹುದಾದ ಅನಾಹುತಗಳು ಆ ರಾಜ್ಯದ ಜನರನ್ನು ಭಾರತದಿಂದ ಇನ್ನಷ್ಟು ದೂರವಾಗಿಸಬಹುದು. ಕಾಶ್ಮೀರದ ಜನರು ಸೇನೆಯ ಕುರಿತಂತೆ ಯಾಕೆ ಅಸಹನೆಯನ್ನು ಹೊಂದಿದ್ದಾರೆ ಎನ್ನುವುದಕ್ಕೆ ಉತ್ತರ, ಸಿನ್ಹಾ ಅವರ ಮಾತಿನಲ್ಲಿದೆ. ಇಂತಹವರ ಕೈಯಲ್ಲಿ ವಿಶೇಷ ಆಫ್‌ ಸ್ಪಾ ಅಧಿಕಾರ ಸಿಕ್ಕಿದರೆ ಅದರ ಪರಿಣಾಮ ಏನಾಗಬಹುದು? ಇಂದು ಸಿನ್ಹಾ ನಿವೃತ್ತರಾಗಿದ್ದಾರೆ ಎನ್ನುವ ಕಾರಣಕ್ಕಾಗಿ ಅವರ ಮಾತುಗಳನ್ನು ನಿರ್ಲಕ್ಷಿಸುವಂತಿಲ್ಲ. ಸೇನೆಯೊಳಗೆ ಇಂತಹ ಮನಸ್ಥಿತಿಯ ಜನರೂ ಇದ್ದಾರೆ ಎನ್ನುವುದನ್ನು ಇದು ಎತ್ತಿ ಹಿಡಿದಿದೆ ಮತ್ತು ಇಂತಹ ಯೋಧರೇ ಕಾಶ್ಮೀರ, ಮಣಿಪುರದಂತಹ ರಾಜ್ಯಗಳನ್ನು ಭಾರತದಿಂದ ದೂರ ಮಾಡುತ್ತಿದ್ದಾರೆ. ಸಿನ್ಹಾ ಈ ಹೇಳಿಕೆಯನ್ನು ನೀಡಿದ ಬಳಿಕವೂ ಅವರ ವಿರುದ್ಧ ಇನ್ನೂ ಯಾವುದೇ ಮೊಕದ್ದಮೆ ದಾಖಲಾಗಿಲ್ಲ ಎನ್ನುವುದು ಇನ್ನೊಂದು ವಿಶೇಷವಾಗಿದೆ.

ಈವರೆಗೆ ಆಫ್‌ ಸ್ಪಾದಿಂದಷ್ಟೇ ನರಳುತ್ತಿದ್ದ ಕಾಶ್ಮೀರ, ಇದೀಗ ಸಂಪೂರ್ಣ ಸೇನೆಯ ತೆಕ್ಕೆ ಬಂದಿದೆ. 370ನೇ ವಿಧಿಯನ್ನು ತೆಗೆದು ಹಾಕುವ ಮೂಲಕ ಕಾಶ್ಮೀರವನ್ನು ಭಾರತಕ್ಕೆ ಇನ್ನಷ್ಟು ಹತ್ತಿರವಾಗಿಸಿದ್ದೇವೆ ಎಂದು ರಾಜಕೀಯ ನಾಯಕರು ಹೇಳುತ್ತಿದ್ದಾರೆ. ಆದರೆ ಕಾಶ್ಮೀರದ ಮಾಧ್ಯಮಗಳ ಬಾಯಿಯನ್ನು ಹೊಲಿಯಲಾಗಿದೆ. ಅಲ್ಲಿರುವ ಬಹುತೇಕ ರಾಜಕಾರಣಿಗಳನ್ನು ಗೃಹ ಬಂಧನದಲ್ಲಿಡಲಾಗಿದೆ. ವಿರೋಧ ಪಕ್ಷದ ನಾಯಕರಿಗೆ ಕಾಶ್ಮೀರದ ಬಾಗಿಲು ಮುಚ್ಚಿದೆ. ಇಂತಹ ಸಂದರ್ಭದಲ್ಲಿ ಸೇನೆ ಅಲ್ಲಿಯ ಜನರೊಂದಿಗೆ ಹೇಗೆ ನಡೆದುಕೊಳ್ಳುತ್ತಿದೆ ಎಂಬ ವಿವರವನ್ನು ದೇಶಕ್ಕೆ ನೀಡುವವರು ಯಾರು? ಸಿನ್ಹಾರಂತಹ ಮನಸ್ಥಿತಿ ಹೊಂದಿದ ಸೇನಾ ಅಧಿಕಾರಿಗಳು ಒಂದು ವೇಳೆ ಅಲ್ಲಿ ತಮ್ಮ ವೈಯಕ್ತಿಕ ದ್ವೇಷಗಳನ್ನು ಸಾಧಿಸಲು ಮುಂದಾದದ್ದೇ ಆದರೆ, ಕಾಶ್ಮೀರವನ್ನು ಭಾರತದೊಂದಿಗೆ ಉಳಿಸಿಕೊಳ್ಳುವುದಕ್ಕೆ ಸಾಧ್ಯವೇ? ಕಾಶ್ಮೀರದಲ್ಲಿ ಪ್ರಜಾಸತ್ತೆಯನ್ನು, ಸಂವಿಧಾನವನ್ನು ಬಲಪಡಿಸುವ ಮೂಲಕ ನಮ್ಮದಾಗಿ ಅಲ್ಲಿನ ಜನರನ್ನು ನಮ್ಮವರನ್ನಾಗಿ ಉಳಿಸಿಕೊಳ್ಳಬಹುದೇ ಹೊರತು, ಸಿನ್ಹಾರಂತಹ ಮಾನಸಿಕ ರೋಗಿಗಳ ಕೈಗೆ ಕೋವಿಗಳನ್ನು ಕೊಟ್ಟು ನಮ್ಮದಾಗಿಸಿಕೊಳ್ಳಲು ಅಸಾಧ್ಯ ಎನ್ನುವ ವಾಸ್ತವವನ್ನು ಸರಕಾರ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)