varthabharthi


ಬೆಂಗಳೂರು

ಪಿಎಫ್‌ಐ ನಿಷೇಧಕ್ಕೆ ಒತ್ತಾಯಿಸಿ ಕೇಂದ್ರ ಸರಕಾರಕ್ಕೆ ಪತ್ರ: ಶೋಭಾ ಕರಂದ್ಲಾಜೆ

ವಾರ್ತಾ ಭಾರತಿ : 20 Nov, 2019

ಬೆಂಗಳೂರು, ನ.20: ಮಾಜಿ ಸಚಿವ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಅತ್ಯಂತ ಖಂಡನೀಯ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಸಂಘಟನೆಯನ್ನು ನಿಷೇಧಿಸುವಂತೆ ಕೋರಿ ನಾನು ಕೇಂದ್ರ ಸರಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

ಬುಧವಾರ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಶಿವಾಜಿನಗರದ ಆರೆಸೆಸ್ಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದ ಜರುಗಿದ ಸಂದರ್ಭದಲ್ಲಿಯೂ ನಾನು ಈ ಸಂಘಟನೆಯ ವಿರುದ್ಧ ಧ್ವನಿ ಎತ್ತಿದೆ. ಈ ಸಂಘಟನೆಯನ್ನು ಕೇವಲ ನಮ್ಮ ರಾಜ್ಯವಷ್ಟೇ ಅಲ್ಲ, ಇಡೀ ದೇಶದಲ್ಲಿ ನಿಷೇಧಿಸುವ ಅಗತ್ಯವಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಮಹಾದಾಯಿ ಯೋಜನೆ ವಿಚಾರದಲ್ಲಿ ನಾವು ಯಾವುದೇ ಕಾರಣಕ್ಕೂ ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಗೋವಾ ಸರಕಾರದ ಜೊತೆಯೂ ನಾವು ಮಾತುಕತೆ ನಡೆಸುತ್ತೇವೆ ಎಂದು ಅವರು ತಿಳಿಸಿದರು.

ರಾಜ್ಯಕ್ಕೆ ಹಂಚಿಕೆಯಾಗಿರುವ ಏಳೂವರೆ ಟಿಎಂಸಿ ನೀರಿಗಿಂತ ಹೆಚ್ಚಿಗೆ ನೀರನ್ನು ಪಡೆಯಲು ಪ್ರಯತ್ನಿಸುತ್ತೇವೆ. ಇದು ಕುಡಿಯುವ ನೀರಿಗಾಗಿ ನಡೆಯುತ್ತಿರುವ ಹೋರಾಟ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್‌ಗೆ ಬ್ಲಾಕ್‌ಮೇಲ್ ಮಾಡಿ ವಿರೋಧ ಪಕ್ಷದ ನಾಯಕನ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಉಪಚುನಾವಣೆ ಅವರ ಕೈಗೆ ಸಿಗದ ಹುಳಿ ದ್ರಾಕ್ಷಿಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಆದರೂ, ಹಗಲುಗನಸು ಕಾಣುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)