varthabharthiಅನುಗಾಲ

ಚರಿತ್ರೆಯ ಪುಟಗಳು

ವಾರ್ತಾ ಭಾರತಿ : 20 Nov, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಚರಿತ್ರೆಗೊಂದು ಚೌಕಟ್ಟಿರುವುದರಿಂದ ಮತ್ತು ಲೋಕ ಭಿನ್ನರುಚಿಯದ್ದಾಗಿರುವುದರಿಂದ ಅದನ್ನು ವಿಭಿನ್ನ ದೃಷ್ಟಿಕೋನದಿಂದ ಕಾಣಬಹುದೇ ಹೊರತು, ವಿಕೃತವಾಗಿ ಚಿತ್ರಿಸುವುದು ಸಾಧ್ಯವಿಲ್ಲ. ಸ್ವಲ್ಪಮಟ್ಟಿನ ಗಣಿತಪಾರದರ್ಶಕತೆಯಿರಲೇಬೇಕು. ಜನರು, ಕಾಲ, ದೇಶ ಇವೆಲ್ಲವೂ ಒಟ್ಟಾಗಿ ಚರಿತ್ರೆಯನ್ನು ನಿರ್ಮಿಸುತ್ತವೆ. ಚರಿತ್ರೆಯನ್ನು ನಿರ್ಮಿಸುವುದೆಂದರೆ ತಮಗಿಷ್ಟಬಂದಂತೆ ಬರೆಯುವುದು, ವಿವರಿಸುವುದು, ಅಲ್ಲ. ಆದ್ದರಿಂದ ಯಾವುದೇ ಸಿದ್ಧಾಂತವನ್ನು ಮಂಡಿಸಿದರೂ, ಬೆಂಬಲಿಸಿದರೂ ಮೂಲಚರಿತ್ರೆ ಬದಲಾಗುವುದು ಸಾಧ್ಯವಿಲ್ಲ.


ಯಾವುದೇ ತಲೆಮಾರು ತನ್ನ ಪೂರ್ವಜರಿಗೂ ಭವಿಷ್ಯದ ಪೀಳಿಗೆಗೂ ಕೊಂಡಿ ಬೆಸೆಯುವುದರೊಂದಿಗೆ ಅವರಿಗೆ ಉತ್ತರಿಸುವ ಬದ್ಧತೆಯನ್ನು, ಅಂದರೆ ಉತ್ತರದಾಯಿತ್ವವನ್ನು ಹೊಂದಿರುತ್ತದೆ. ನಮ್ಮ ಕಾಲದಲ್ಲಿ ಹೀಗಾಯಿತು ಎಂದು ಹಳಬರು ಹೇಳುವುದನ್ನು ಹೇಗೆ ಕೇಳುತ್ತೇವೆಯೋ ಹಾಗೆಯೇ ನಾವೂ ನಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ನಮ್ಮ ಕಾಲದಲ್ಲಿ ಹೀಗಾಯಿತು ಎಂದು ಹೇಳಿ ಒಂದು ರೀತಿಯ ವೌಖಿಕ ಪರಂಪರೆಯನ್ನು ಸೃಷ್ಟಿಸುತ್ತೇವೆ. ಭಾರತದ ಸ್ವಾತಂತ್ರ್ಯ ಚಳವಳಿಯನ್ನು ನೆನಪಿಸುವವರು ಆ ಸಮಯದಲ್ಲಿ ಹೋರಾಟದಲ್ಲಿ ಬಲಿಯಾದವರನ್ನು ಸ್ವಾತಂತ್ರ್ಯವೀರರೆಂದೂ ಅವರ ಕೊಡುಗೆಗಳನ್ನು ದೇಶೋದ್ಧಾರವೆಂದೂ ಹಾಗೆಯೇ ಆ ಕಾಲದಲ್ಲಿ ಹೋರಾಟಕ್ಕೆ ವಿರುದ್ಧವಾಗಿ ಆಳರಸರನ್ನು ಬೆಂಬಲಿಸಿದವರನ್ನು ದ್ರೋಹಿ ಗಳೆಂದೂ ಚಿತ್ರಿಸುತ್ತಾರೆ. ಒಟ್ಟಾರೆ ಚರಿತ್ರೆಗೊಂದು ಚೌಕಟ್ಟಿರುವುದರಿಂದ ಮತ್ತು ಲೋಕ ಭಿನ್ನರುಚಿಯದ್ದಾಗಿರುವುದರಿಂದ ಅದನ್ನು ವಿಭಿನ್ನ ದೃಷ್ಟಿಕೋನದಿಂದ ಕಾಣಬಹುದೇ ಹೊರತು, ವಿಕೃತವಾಗಿ ಚಿತ್ರಿಸುವುದು ಸಾಧ್ಯವಿಲ್ಲ. ಸ್ವಲ್ಪಮಟ್ಟಿನ ಗಣಿತಪಾರದರ್ಶಕತೆಯಿರಲೇಬೇಕು. ಜನರು, ಕಾಲ, ದೇಶ ಇವೆಲ್ಲವೂ ಒಟ್ಟಾಗಿ ಚರಿತ್ರೆಯನ್ನು ನಿರ್ಮಿಸುತ್ತವೆ. ಚರಿತ್ರೆಯನ್ನು ನಿರ್ಮಿಸುವುದೆಂದರೆ ತಮಗಿಷ್ಟಬಂದಂತೆ ಬರೆಯುವುದು, ವಿವರಿಸುವುದು, ಅಲ್ಲ. ಆದ್ದರಿಂದ ಯಾವುದೇ ಸಿದ್ಧಾಂತವನ್ನು ಮಂಡಿಸಿದರೂ, ಬೆಂಬಲಿಸಿದರೂ ಮೂಲಚರಿತ್ರೆ ಬದಲಾಗುವುದು ಸಾಧ್ಯವಿಲ್ಲ. ಒಂದು ವೇಳೆ ಯಾರಾದರೂ ಅವಿವೇಕತನದಿಂದ ಅಂತಹ ಶಾಪಗ್ರಸ್ತ ಪ್ರಯತ್ನವನ್ನು ಮಾಡಿದರೆ ಅಂತಹ ವಿರೂಪವು ಆನಂತರದ ವಿವೇಕಯುಗದಲ್ಲಿ ಮತ್ತೆ ತನ್ನ ಹಳೆಯ ಹರಿವನ್ನು ವಿನೂತನವಾಗಿ ಪಡೆದುಕೊಳ್ಳುತ್ತದೆ.

ರಾಮಾಯಣದಲ್ಲಿ ಶಾಪಕ್ಕೊಳಗಾಗಿ ಅಹಲ್ಯೆ ಕಲ್ಲಾಗಿ ಉಳಿದಳು. ರಾಮನ ಪಾದಸ್ಪರ್ಶವಾದೊಡನೆ ಆ ಕಲ್ಲು ಮತ್ತೆ ಹೆಣ್ಣಾಯಿತು. ಮಹಾಭಾರತದ ನಳಚರಿತ್ರೆಯಲ್ಲಿ ಸ್ಪುರದ್ರೂಪಿ ನಳನು ಕಾರ್ಕೋಟಕ ಹಾವಿನ ಕಡಿತಕ್ಕೊಳಗಾಗಿ ಕುರೂಪಿ ಬಾಹುಕನಾಗುತ್ತಾನೆ. ಆದರೆ ರೂಪ ಬದಲಾಯಿತೇ ಹೊರತು ಒಳಗಿನ ತಿರುಳು ಬದಲಾಗಲಿಲ್ಲ. ಹೀಗಾಗಿ ಆತನ ಗುಣಗಳು, ಬುದ್ಧಿಮತ್ತೆ ನೆಲದಡಿಯ ಗರಿಕೆಯಂತೆ ಅಲ್ಲೇ ಉಳಿದುಕೊಂಡಿತು ಮತ್ತು ಒಂದು ಹನಿ ಅಮೃತಘಳಿಗೆಯ ಸಿಂಚನದೊಂದಿಗೆ ಆತನ ಸ್ವರೂಪವು ಮೊದಲಿನಂತೆಯೇ ಆಯಿತು; ಮರುಹುಟ್ಟನ್ನು ಪಡೆಯಿತು. ಶೂನ್ಯದಿಂದ ಯಾವುದೂ ಸೃಷ್ಟಿಯಾಗದೆಂದು ನಂಬಿದರೆ ಇವೆಲ್ಲ ಬರಿಯ ಗೊಡ್ಡುಪುರಾಣಗಳಷ್ಟೇ ಅಲ್ಲ, ಕಾಲಾನುಕಾಲಕ್ಕೆ ಸಂಘಟಿಸಿದ ಯಾವುದೋ ಘಟನೆಗಳ ಸಂವೇದನಾಶೀಲ ರೂಪಕಗಳೆಂಬುದು ಅರ್ಥವಾಗುತ್ತದೆ. ಹಾಗೆಯೇ ಚರಿತ್ರೆಯನ್ನು ಮತ್ತು ಸತ್ಯಗಳನ್ನು ಅಷ್ಟು ಸುಲಭವಾಗಿ (ಅಥವಾ ಕಷ್ಟಪಟ್ಟೂ) ಬದಲಾಯಿಸಲು ಸಾಧ್ಯವಿಲ್ಲ. ಹಿಟ್ಲರ್ 20ನೇ ಶತಮಾನದ ಮತ್ತು ಅಭೂತಪೂರ್ವವಲ್ಲದ/ನಭೂತೋನಭವಿಷ್ಯತಿಯಲ್ಲದ ಒಂದು ತಾಮಸ ಸೃಷ್ಟಿ. ಸುಮಾರಾಗಿ ಬ್ರಾಮ್ ಸ್ಟೋಕರ್‌ನ ಡ್ರಾಕುಲಾವೆಂಬ ಕಾಲ್ಪನಿಕ ಭೂತದ ಸಾಕಾರ. ಇತಿಹಾಸ ಇಂತಹ ಮೈಲಿಗಲ್ಲುಗಳನ್ನು ಮರೆಯುವುದಿಲ್ಲ.

ಆದರೆ ಆತ ತನ್ನ ಕಾಲದಲ್ಲಿ ವಿಶ್ವಮಾನ್ಯ ವ್ಯಕ್ತಿಯೂ ಆಗಿದ್ದ ಸಂದರ್ಭಗಳೂ ಇದ್ದವು. ಟೈಮ್ ಮ್ಯಾಗಝಿನ್‌ನ ಮುಖಪುಟವಾಗಿದ್ದ. ನೊಬೆಲ್ ಪ್ರಶಸ್ತಿಗೆ ನಾಮಕರಣಗೊಂಡವರಲ್ಲಿ ಆತನೂ ಒಬ್ಬ. ಬರ್ಲಿನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ವಂದನೆ ಸ್ವೀಕರಿಸಿದವನು, ರಾಷ್ಟ್ರೀಯ ಸಮಾಜವಾದವೆಂಬ ಸಿದ್ಧಾಂತವನ್ನು ಜರ್ಮನಿಯಲ್ಲಿ ಹುಟ್ಟುಹಾಕಿದವನು ಆತನೇ. ಆದರೆ ಒಂದೆರಡು ವರ್ಷಗಳಲ್ಲೇ ಆತನ ಮಹತ್ವಾಕಾಂಕ್ಷೆ ಆತನನ್ನು ಮಾತ್ರವಲ್ಲ, ಆತನ ವಿಶ್ವವನ್ನೇ ಸುಟ್ಟುಹಾಕಿತು. ಸುವರ್ಣಲಂಕೆ ಸುಟ್ಟುಹೋದ ಪೌರಾಣಿಕ ನಂಬಿಕೆಯನ್ನು ಆಧುನಿಕ ವಾಸ್ತವವಾಗಿಸಿದ ಕೀರ್ತಿ(!) ಹಿಟ್ಲರನದ್ದು. ಚರಿತ್ರೆಯ ಪುಟಗಳನ್ನು ತಿರುವಿದರೆ ಇಂತಹ ನೂರಾರು ಉದಾಹರಣೆಗಳು, ನಿದರ್ಶನಗಳು ಲಭ್ಯವಾಗುತ್ತವೆ. ಒಳ್ಳೆಯದನ್ನು ಹೇಗೆ ನೆನಪಿಸಬೇಕೋ ಹಾಗೇ ಇವರನ್ನೂ ಮತ್ತೆಮತ್ತೆ ನೆನಪಿಸಬೇಕಾಗುತ್ತದೆ ಮತ್ತು ಕೆಲವೊಮ್ಮೆ ಒಳ್ಳೆಯ ಶಕ್ತಿಗಳೊಂದಿಗೆ ಕೇಡಿನ ಶಕ್ತಿಗಳೂ ಅಧ್ಯಯನಯೋಗ್ಯವಾಗುತ್ತವೆ. ಇವೆರಡೂ ಮತ್ತು ಇವುಗಳ ನಡುವೆ ಸಮಾಜದ ಹರಿವನ್ನೂ ಜೀವಂತವಾಗಿರಿಸುವ ಜನಜೀವನದ, ಶ್ರೀಸಾಮಾನ್ಯನ ಕಷ್ಟಕಾರ್ಪಣ್ಯಗಳ, ಅಂಕಿಅಂಶಗಳು ಒಟ್ಟಾಗಿ ಚರಿತ್ರೆಯಾಗುತ್ತವೆ. ಇವುಗಳಲ್ಲಿ ಬಿಡುವುದಾದರೂ ಯಾವುದನ್ನು, ಉಳಿಸಿಕೊಳ್ಳುವುದಾದರೂ ಯಾವುದನ್ನು? ಒಂದು ಹಂತದ ಸೋಸುವಿಕೆ ಅಗತ್ಯ. ಅದಕ್ಕೆ ಜೀವನದೃಷ್ಟಿ ಮತ್ತು ದೃಷ್ಟಿಕೋನ ಪೂರಕವಾಗುತ್ತವೆ. ಆದ್ದರಿಂದಲೇ ಚರಿತ್ರೆಯಲ್ಲಿ ಅವಗಣನೆಗೆ ತುತ್ತಾಯಿತೆಂದು ಭಾವಿಸುವ ಅನೇಕ ವಿಚಾರಗಳು, ಸಂಗತಿಗಳು, ಘಟನೆಗಳು ಕಾಲಾನುಕ್ರಮಣಿಕೆಯಲ್ಲಿ ಮುಖ್ಯವಾಗುತ್ತವೆ. ಆದರೆ ಸಂವಿಧಾನದ ತಿದ್ದುಪಡಿಯಂತೆ ಮೂಲ ಚೌಕಟ್ಟಿಗೆ ಭಂಗವಾಗದಿದ್ದರಾಯಿತು.

ಯಾವಾಗ ಚರಿತ್ರೆಯನ್ನು ನೆನಪಿಸುವಲ್ಲಿ ರಾಜಕಾರಣ ಪ್ರವೇಶವಾಗುತ್ತದೆಯೋ ಆಗ ವಿರೂಪಗಳು ಶತಸ್ಸಿದ್ಧ. ಈಗ ದೇಶದಲ್ಲಿ ನಡೆಯುತ್ತಿರುವುದು ಅದೇ. ರಾಜಕಾರಣಿಗಳು ಚರಿತ್ರೆಯನ್ನು ಮಾತ್ರವಲ್ಲ, ಪುರಾಣಗಳನ್ನೂ ತಿದ್ದಹೊರಟಿದ್ದಾರೆ. ಇವುಗಳಿಗೆ ಬೇಕಾದ ಪ್ರಾಥಮಿಕ ತಿಳಿವಳಿಕೆಯೂ ಇಲ್ಲದೆ ಅವರು ಮಾತನಾಡುವಾಗ ಅವುಗಳು ಸುಳ್ಳೆಂಬುದು ಸಾಬೀತಾಗುವುದು ಮಾತ್ರವಲ್ಲ, ಅವುಗಳು ಹಾಸ್ಯಕ್ಕೆ ಎಡೆಮಾಡಿಕೊಡುತ್ತವೆ; ಹಾಸ್ಯಾಸ್ಪದವಾಗುತ್ತವೆ. ಕುಮಾರವ್ಯಾಸನು ತನ್ನ ‘ಭಾರತ’ವನ್ನು ಬರೆದಾಗ ‘‘ಅರಸುಗಳಿಗಿದು ವೀರ ದ್ವಿಜರಿಗೆಪರಮವೇದದ ಸಾರ ಯೋಗೀಶ್ವರರ ತತ್ವವಿಚಾರ ಮಂತ್ರಿಜನಕೆ ಬುದ್ಧಿಗುಣ॥ ಎಂದು ಬರೆದಿದ್ದ. ಆತ ನಿರ್ಮಿಸಹೊರಟದ್ದು ಒಂದು ಸಮಾಜದ ಪ್ರತಿನಿಧೀಕರಣದ ವಂಶಕಥೆಯ ಮೂಲಕ ಕಲ್ಪನೆಯ ಭಾರತವನ್ನು. ಇಂದು ‘ಭಾರತ’ವನ್ನು ನಿರ್ಮಿಸುವವರು ರಾಜಕಾರಣಿಗಳು ಮತ್ತು ಅವರ (ಅನಕ್ಷರಸ್ತ ಮತ್ತು ಅಕ್ಷರಸ್ತ) ಚೇಲರಾದ್ದರಿಂದ ಇದನ್ನು ಒಂದೇ ವಾಕ್ಯದಲ್ಲಿ ‘‘ಕಾರ್ಟೂನಿಸ್ಟರಿಗಿದು ಸ್ವರ್ಗ, ಚಿಂತಕರಿಗಿದು ಚಿಂತಾಜನಕ, ಅವಕಾಶವಂಚಕರಿಗೆ ಸಕಲಸುಖ, ನಿದ್ರಿಸುವವರಿಗೆ ಹಂಸತೂಲಿಕಾತಲ್ಪ, ಸರ್ವಾಧಿಕಾರಿಗಿದು ರಂಗಸ್ಥಳ...’’ ಎಂದು ಮುಂತಾಗಿ ವಿವರಿಸಬಹುದು. (ಪೂರ್ಣ ಭಾಮಿನಿ ಷಟ್ಪದಿಗೆ ನಾನು ಪ್ರಯತ್ನಿಸಲಿಲ್ಲ!)

ಇದಕ್ಕೆ ಪೂರಕವಾಗಿ ಮತ್ತು ಪ್ರಮಾಣೀಕರಿಸುವಂತೆ ದೇಶದ ಉದ್ದಗಲಕ್ಕೆ (ಗಂಭೀರ ಭಾರತೀಯವಾಗಿ ‘ಅಸೇತು ಹಿಮಾಚಲ’ವೆನ್ನಬಹುದು!) ರಾಜಕಾರಣಿಗಳು ವಾಚಾಳಿಗಳಾಗಿದ್ದಾರೆ. ಮಾತಿಲ್ಲದೆ ರಾಜಕಾರಣ ಅಸಾಧ್ಯ. ‘ಮಾತೇ ಜ್ಯೋತಿರ್ಲಿಂಗ ಬೃಹನ್ನಳೆಗೆ’ ಎಂಬ ಎ. ಕೆ. ರಾಮಾನುಜನ್ ಕಾಲ ಕಳೆದು ಹೊಸ ರಾಜಕೀಯ ನೆಲೆ ಸ್ಥಾಪಿತವಾಗಿದೆ. ಈಗಿನ ದ್ವೇಷಪೂರಿತ ಮತೀಯ ಮತ್ತು ಪೊಳ್ಳು ಭರವಸೆಗಳ ಆರ್ಥಿಕ ಸಂಕಷ್ಟದ ಭಯಾನಕ ವಾತಾವರಣದಲ್ಲಿ ‘ಮೂಕಂ ಕರೋತಿ ವಾಚಾಲಂ’ ಸತ್ಯವಾಗಿದೆ. ಇದಕ್ಕೆ ಭಗವತ್ಕೃಪೆ ಬೇಡ. ಸಾಂದರ್ಭಿಕ ಸುಳ್ಳುಗಳನ್ನು ಸೃಷ್ಟಿಸುವ ಶಕ್ತಿ ಸಾಕು. ಏನನ್ನು ಬೇಕಾದರೂ ಮಾತನಾಡಿದರೆ ಕೇಳುವ ಕುರಿಗಳ ಸಂಖ್ಯೆ ತೀರಾ ಹೆಚ್ಚಾಗಿದೆ. ಇವಕ್ಕೆ ಹುಲ್ಲುಗಾವಲು ಬೇಡ; ತಲೆಯೊಳಗಿರುವ ಒಂದಿಷ್ಟು ಒಣಹುಲ್ಲು ಸಾಕು. (ಏಛಿ ಜಿಛ್ಚಿಛಿ ್ಛಜ್ಝ್ಝಿಛಿ ಡಿಜಿಠಿ ಠ್ಟಿಡಿ!). ಮತ್ತೆ ‘‘ಭಾರತದಲ್ಲಿ ಶೇ. 90 ಜನರು ಮೂರ್ಖರು’’ ಎಂಬ ಅವಮಾನಕಾರಿ ಸತ್ಯವನ್ನು ಹೇಳಿ ಅವಜ್ಞೆಗೆ ಒಳಗಾದ ನ್ಯಾಯಮೂರ್ತಿ ಮಾರ್ಕಾಂಡೇಯ ಕಟ್ಜು ನೆನಪಾಗುತ್ತಾರೆ. ಇಲ್ಲಿ ಗೋವಿನ ಹಾಲಿನಲ್ಲಿ ಚಿನ್ನವಿದೆ; ತುಳಸಿ ಮೊಬೈಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ; ಪ್ರಾರ್ಥನೆಯಿಲ್ಲದೆ ನಿಮ್ಮ ಮಕ್ಕಳು ಪ್ರಪಂಚಕ್ಕೆ ಕಾಲಿಟ್ಟರೆ ಅದೊಂದು ಮಾನವಕೋಟಿಗೆ ಕೊಟ್ಟ ಮಹಾಶಾಪ; ಇಂತಹ ತುಣುಕುಗಳು ಪತ್ರಿಕೆಗಳಲ್ಲಿ ಭಾರೀ ಗಾಂಭೀರ್ಯದ ಕಿರೀಟವನ್ನು ಹೊತ್ತು ಕುಣಿಯುತ್ತವೆ. ತಮಾಷೆಯೆಂದರೆ ಇವುಗಳಲ್ಲಿ ಕೆಲವು ತೀರಾ ನಗೆಹನಿಗಳಂತಿದ್ದರೆ, ಇನ್ನು ಕೆಲವು ವಿಚಾರಗಳಲ್ಲಿ ಅರೆಬರೆ ತಿಳಿದುಕೊಂಡ ಕೆಲವು ಮಹನೀಯರು ತಮ್ಮ ವಾದಕ್ಕೆ ವಿವೇಕಾನಂದ, ಭಗತ್‌ಸಿಂಗ್, ನೇತಾಜಿ ಮುಂತಾದವರನ್ನು ವಸ್ತ್ರಾಪಹಾರಕ್ಕೆ ಎಳೆದುತಂದ ದ್ರೌಪದಿಯಂತೆ ಎಳೆದುತರುತ್ತಾರೆ.

ಗತಕಾಲದ ಈ ಚರಿತ್ರಾರ್ಹರು ಯಾವ ಸಂದರ್ಭದಲ್ಲಿ ಯಾಕೆ ಮತ್ತು ಯಾರನ್ನುದ್ದೇಶಿಸಿ ಹೇಳಿದರೆಂಬುದನ್ನು ಗಮನಿಸದೆ ಬರುವ ಈ ಸುದ್ದಿಗಳು ಮತ್ತು ಇವನ್ನು ವಿವೇಚನೆಯಿಲ್ಲದೆ ಅಥವಾ ಹಾಸ್ಯಪ್ರಸಂಗವೆಂಬ ತಲೆಬರಹವಿಲ್ಲದೆ ವರದಿಮಾಡುವ/ಪ್ರಕಟಿಸುವ ಪ್ರಭೃತಿಗಳು ಈ ದೇಶ ಹಿನ್ನಡೆಯುವ ಹಾದಿಗೆ ಸೂಚಕವಾಗಿವೆ. ಭೂತ ಎಂಬ ಪದವೇ ಗತಕಾಲದ್ದು. ಒಂದು ನಂಬಿಕೆಯಂತೆ ಭೂತಗಳು ಪಾದವನ್ನು ತಿರುವುಮುರುವಾಗಿಟ್ಟುಕೊಂಡು ನಡೆಯುತ್ತವೆ. ಈಗಿನ ಸ್ಥಿತಿಯನ್ನು ಆಲೋಚಿಸಿದರೆ ಈಗ ಎರಡುಕಾಲುಗಳಲ್ಲಿ ನಡೆಯುವ ಬಹುಪಾಲು ಜನರು ಹೀಗೆ ಪಾದಗಳನ್ನು ತಿರುವುಮುರುವಾಗಿ ಇಟ್ಟುಕೊಂಡವರೇನೋ ಎಂಬುದನ್ನು ಚಪ್ಪಲಿ ಕಂಪೆನಿಯವರು ತಮ್ಮ ವ್ಯಾವಹಾರಿಕ ಅಗತ್ಯಗಳಿಗಾಗಿ ಮತ್ತು ವೈದ್ಯರು ತಮ್ಮ ಚಿಕಿತ್ಸಾ ಪದ್ಧತಿಯನ್ನು ಬದಲಾಯಿಸಿಕೊಳ್ಳುವ ಸಲುವಾಗಿ ಸಂಶೋಧಿಸುವುದು ಅನಿವಾರ್ಯ.

ಕರ್ನಾಟಕದಲ್ಲಿ ಚರಿತ್ರೆಯನ್ನು ಬದಲಾಯಿಸುವ ಅಗತ್ಯ ಸರಕಾರಕ್ಕೆ ಪ್ರವಾಹಪೀಡಿತರನ್ನು ಸಂತಸ್ತರನ್ನು ಸಂತೈಸುವ, ಅವರಿಗೆ ಪರಿಹಾರವನ್ನು ನೀಡುವ ಅವಶ್ಯಕತೆಗಿಂತ ಮುಖ್ಯವಾಗಿದೆ. ಟಿಪ್ಪುಸುಲ್ತಾನ್ ಎಂಬವನ ಜಯಂತಿಯನ್ನು ಆಚರಿಸುವುದನ್ನು ಸರಕಾರ ನಿಲ್ಲಿಸಿದೆ. ಇದರ ಮೂಲಕ ಒಂದಷ್ಟು ಹಣ ಉಳಿಯಿತು, ಸಂತೋಷ. ಇದೇ ರೀತಿ ಎಲ್ಲ ಜಯಂತಿಗಳನ್ನೂ ನಿಷೇಧಿಸಿದರೆ ಒಳ್ಳೆಯದು. (ಸಂಬಂಧಿಸಿದ ಮಹಾನುಭಾವರ ಆತ್ಮಕ್ಕೂ ಶಾಂತಿ!) ಆ ಹಣವನ್ನು ಪರಿಹಾರಕ್ಕೆ ಅಥವಾ ಕನಿಷ್ಠ ನಮ್ಮ ರಸ್ತೆಗಳನ್ನು ದುರಸ್ತಿಮಾಡಲು ಉಪಯೋಗಿಸಿದರೆ ಜನರೂ ವಾಹನಗಳೂ ಸ್ವಲ್ಪಆರೋಗ್ಯವಾಗಿರಬಹುದು. ಆದರೆ ಈ ನಿಷೇಧಕ್ಕೆ ಸರಕಾರ ಕೊಟ್ಟ ಸೈದ್ಧಾಂತಿಕ ಮತ್ತು ಚಾರಿತ್ರಿಕ ಕಾರಣಗಳು ಪ್ರಶ್ನಾರ್ಹ ಮಾತ್ರವಲ್ಲ ಹಾಸ್ಯಾಸ್ಪದ. ಟಿಪ್ಪುವಿನ ಕುರಿತ ಚರ್ಚೆಗೆ ಇದು ಸಂದರ್ಭ/ವೇದಿಕೆಯಲ್ಲದಿದ್ದರೂ ಆತನನ್ನು ಹೊರತುಪಡಿಸಿ ಕರ್ನಾಟಕದ ಚರಿತ್ರೆಯನ್ನು ಊಹಿಸಲೂ ಸಾಧ್ಯವಿಲ್ಲವೆಂದು ಹೇಳಬಹುದು. ಆತನ ಹೆಸರನ್ನು ಹೇಳದಿದ್ದರೆ ಆತನಿಗೆ ಯಾವ ನಷ್ಟವೂ ಇಲ್ಲ. ನಷ್ಟವಾಗುವುದು ಚರಿತ್ರೆಗೆ ಮತ್ತು ಚರಿತ್ರೆಯನ್ನು ಕಲಿಯುವ ಮನಸ್ಸುಗಳಿಗೆ.

ವಿಶೇಷವೆಂದರೆ ಟಿಪ್ಪುವನ್ನು ಟೀಕಿಸುವ ಮಂದಿಗೆ ಆತನ ದಿವಾನನಾಗಿ ಕೊನೆಯ ತನಕವೂ ಇದ್ದು ಆನಂತರ (ಈಗಿನ ಭಾಷೆಯಲ್ಲಿ ಹೇಳುವುದಾದರೆ ಪಕ್ಷಾಂತರ ಮಾಡಿ) ಮೈಸೂರು ಒಡೆಯರುಗಳಿಗೆ ದಿವಾನನಾಗಿ ಮುಂದುವರಿದ ಅಪ್ಪಟ ಹಿಂದೂ/ಬ್ರಾಹ್ಮಣ ಪೂರ್ಣಯ್ಯನೆಂದರೆ ಎಲ್ಲಿಲ್ಲದ ಪ್ರೀತಿ. ಗಾಂಧಿಯನ್ನು ಕೊಂದ ಗೋಡ್ಸೆಗೆ ಮಂದಿರ ಕಟ್ಟಿದಂತೆ ಟಿಪ್ಪುವನ್ನು ಟೀಕಿಸುವ ಮಂದಿ ಆತನಿಗೆ ದ್ರೋಹ ಬಗೆದ ಮೀರ್ ಸಾದಿಕನಿಗೆ ನಿಜಕ್ಕೂ ಮಂದಿರ ಕಟ್ಟಬೇಕು! ಹಾಗೆಂದು ಸಾವಿರಾರು ಸ್ವಾತಂತ್ರ್ಯವೀರರನ್ನು ನೇಣಿನ ಶಿಕ್ಷೆಗೊಳಪಡಿಸಿದ, ಸಾವರ್ಕರ್‌ರನ್ನು ಕರಿನೀರಿನ ಶಿಕ್ಷೆಗೊಳಪಡಿಸಿದ ಬ್ರಿಟಿಷ್ ಸರಕಾರವನ್ನಾಗಲೀ ಬ್ರಿಟಿಷರನ್ನಾಗಲೀ ಅಥವಾ ಅವರಿಗಿಂತ ಮೊದಲು ಈ ದೇಶದಲ್ಲಿ ಅನೇಕ ಜಲಿಯನ್‌ವಾಲಾಬಾಗ್‌ಗಳನ್ನು ನಡೆಸಿದ ಪೋರ್ಚುಗೀಸರನ್ನಾಗಲೀ, ಫ್ರೆಂಚರನ್ನಾಗಲೀ, ಡಚ್ಚರನ್ನಾಗಲೀ ಈ ದೇಶಭಕ್ತರು ದ್ವೇಷಿಸುವುದಿಲ್ಲ. ತಮ್ಮ ಮಕ್ಕಳು ಅಲ್ಲೇ ಹೋಗಿ ಅವರ ಅಡಿಯಾಳುಗಳಾಗಿ ಜೀವನ ಸವೆಸಿದರೆ ಸಾರ್ಥಕವೆಂಬ ನಂಬಿಕೆಯನ್ನು ಯಾರೂ ದ್ವೇಷಿಸುವುದಿಲ್ಲ. ಅಂದರೆ ಇವೆಲ್ಲ ಮೂಲತಃ ಮತೀಯ ನಂಬಿಕೆಗಳನ್ನಾಧರಿಸಿ ಮತ್ತು ಸದ್ಯ ನಮ್ಮ ದ್ವೇಷ ಯಾರನ್ನು ಗುರಿಯಾಗಿರಿಸಬೇಕೆಂಬುದನ್ನು ಆಧರಿಸಿದೆ.

 ಜಾಗತಿಕವಾಗಿ ನಮ್ಮ ಸಮಸ್ಯೆಗಳನ್ನು ಇಷ್ಟೇ ಅಂತರದಲ್ಲಿ ಚರ್ಚಿಸಿದರೂ ಭಯಾನಕ ಸತ್ಯಗಳು ಕಾಣಸಿಗುತ್ತವೆ. ಪಾಕಿಸ್ತಾನವು ನಮ್ಮ ಜಮ್ಮು ಮತ್ತು ಕಾಶ್ಮೀರದ ಬಹುದೊಡ್ಡಭಾಗವನ್ನು ಆಕ್ರಮಿಸಿದೆ. ಅದನ್ನು ಪಡೆಯುವುದು ನಮ್ಮ ಹಕ್ಕು. ಆದರೆ ಎದುರಾಳಿಗಳಲ್ಲಿ ತೀರ ಅಸಮರ್ಥನನ್ನು ಮುಖ್ಯನೆಂದು ಬಿಂಬಿಸಿ ರಾಜಸ ಪೌರುಷವನ್ನು ವ್ಯಕ್ತಪಡಿಸುವುದು ಸಾಧುವಲ್ಲ; ಭೂಷಣವೂ ಅಲ್ಲ. ಸರಿಸುಮಾರು ಪಾಕಿಸ್ತಾನ ಆಕ್ರಮಿಸಿಕೊಂಡಷ್ಟೇ ಭಾರತದ ಭೂಭಾಗವನ್ನು ಚೀನಾದೇಶವೂ ಆಕ್ರಮಿಸಿದೆ. ಈ ಕುರಿತು ನಮ್ಮ ನಾಯಕರ ಘೋಷ(ಣಾ)ಯಾತ್ರೆಗಳೆಲ್ಲ ಕಂಠಮಟ್ಟದಲ್ಲೇ ನಿಲ್ಲುತ್ತವೆ. ಅವನ್ನು ಸ್ವಾಧೀನಪಡಿಸದೆ ಭಾರತ ಭಾರತವಾಗಿ ಪೂರ್ಣವಾಗದು. ಭಾರತದ ಆಯ್ಕೆಗಳು ಎದುರಾಳಿಯನ್ನು ಮತ್ತು ವೈರಿದೇಶಗಳನ್ನು ಗುರಿಯಾಗಿಡದೆ ಈ ದೇಶದ ಮತದಾರರನ್ನಷ್ಟೇ ಗುರಿಯಾಗಿಸಿಕೊಂಡಿದೆಯೆಂಬುದಕ್ಕೆ ಇದೊಂದು ಉದಾಹರಣೆ ಮಾತ್ರ. ಹಾಗೆಯೇ ನಮ್ಮ ರಕ್ಷಣಾಪಡೆಗಳು ಗಡಿಯಾಚೆಗೆ ಗುರಿಯಿಟ್ಟ ಗುಂಡುಗಳಿಂದ ಹೆಚ್ಚಾಗಿ ನಮ್ಮ ಜನರನ್ನೇ ಗುರಿಯಾಗಿಸಿ ತಮ್ಮ ಸಾಹಸವನ್ನು ತೋರಿಸಿದೆಯೆಂಬುದೂ ಪಥ್ಯವಾಗದ ಆಹಾರವಾಗಿದೆ. ಕಾಶ್ಮೀರದಲ್ಲಿ ಎಲ್ಲವೂ ಸರಿಯಿದೆ, ಸರಿಯಾಗಿದೆಯಾದರೆ ಅಲ್ಲಿ ಬಂಧಿತರಾದ ನಮ್ಮದೇ ಪ್ರಜೆಗಳು, ಅಲ್ಲಿನ ರಾಜಕೀಯ ನಾಯಕರು ಇನ್ನೂ ಯುದ್ಧಕೆೈದಿಗಳಂತೆ, ಹೊರಜಗತ್ತಿಗೆ ಕಾಲಿಡಲಾರದಂತೆ ಮಾಡಿದ ಶಾಸನವಾದರೂ ಯಾವುದು?

ಚರಿತ್ರೆ ಇಂತಹ ಅವಕುಂಠನಗಳನ್ನು ನಿಧಾನವಾಗಿಯಾದರೂ ಸರಿಸುತ್ತದೆ. ಅಲ್ಲಿಯವರೆಗೆ ರಂಗದಲ್ಲಿ ಏನು ನಡೆಯುತ್ತದೆಯೋ ಅದೇ ಸರಿ, ಅದೇ ನಿಜವೆಂದು ನಂಬುವವರು ಸಾಕಷ್ಟಿರುತ್ತಾರೆ. ಆದರೆ ಚರಿತ್ರೆಯ ಪುಟಗಳು ಸತ್ಯವಾಗಿದ್ದರೆ ಅಷ್ಟು ಸುಲಭವಾಗಿ ಹರಿದುಹಾಕಲು ಸಾಧ್ಯವಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)