varthabharthi


ರಾಷ್ಟ್ರೀಯ

ಮಹಾರಾಷ್ಟ್ರದ ಸ್ಪೀಕರ್ ಆಗಿ ಕಾಂಗ್ರೆಸ್‌ನ ನಾನಾ ಪಾಟೋಲೆ ಅವಿರೋಧ ಆಯ್ಕೆ

ವಾರ್ತಾ ಭಾರತಿ : 1 Dec, 2019

ಮುಂಬೈ, ಡಿ.1: ಮಹಾರಾಷ್ಟ್ರ ವಿಧಾನಸಭೆಯ ಖಾಯಂ ಸ್ಪೀಕರ್ ಹುದ್ದೆಗೆ ಬಿಜೆಪಿ ಕಣಕ್ಕಿಳಿಸಿದ್ದ ಅಭ್ಯರ್ಥಿ ಕೊನೆಯ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಕಾಂಗ್ರೆಸ್ ಶಾಸಕ, ರೈತ ನಾಯಕ ನಾನಾ ಪಾಟೋಲೆ ನೂತನ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 ಸ್ಪೀಕರ್ ಸ್ಥಾನಕ್ಕೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿತ್ತು. ಬೇರೆ ಶಾಸಕರ ಮನವಿ ಮೇರೆಗೆ ಹಾಗೂ ಶಾಸನ ಸಭೆಯ ಗೌರವ ಕಾಪಾಡುವ ದೃಷ್ಟಿಯಿಂದ ತನ್ನ ಅಭ್ಯರ್ಥಿಯನ್ನು ಬಿಜೆಪಿ ಹಿಂಪಡೆದಿದೆ. ಈಗ ಸ್ಪೀಕರ್ ಆಯ್ಕೆ ಅವಿರೋಧವಾಗಿ ನಡೆಯುತ್ತದೆ ಎಂದು ಎನ್‌ಸಿಪಿಯ ಹಿರಿಯ ಮುಖಂಡ ಛಗನ್ ಭುಜಬಲ್ ಹೇಳಿದ್ದಾರೆ.

 ರವಿವಾರ ನಡೆದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಪಾಟೋಲೆ ಸ್ಪೀಕರ್ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸ್ವಾಗತಿಸಿದ್ದಾರೆ.

ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟ ಹಂಗಾಮಿ ಸ್ಪೀಕರ್,ಎನ್‌ಸಿಪಿ ಶಾಸಕ ದಿಲೀಪ್ ವಳಸೆ ಪಾಟೀಲ್ ನೇತೃತ್ವದಲ್ಲಿ ಶನಿವಾರ ಬಹುಮತ ಸಾಬೀತುಪಡಿಸಿತ್ತು. ರವಿವಾರ ಹೊಸ ಸ್ಪೀಕರ್ ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಬಿಜೆಪಿ ತನ್ನ ಶಾಸಕ ಕಿಶನ್ ಕಥೋರೆ ಅವರನ್ನು ಸ್ಪೀಕರ್ ಚುನಾವಣೆಗೆ ತನ್ನ ಅಭ್ಯರ್ಥಿಯನ್ನಾಗಿ ಹೆಸರಿಸಿತ್ತು. ಕಥೋರೆ ಥಾಣೆಯಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ನಾಲ್ಕು ಬಾರಿ ಶಾಸಕರಾಗಿರುವ 56ರ ವಯಸ್ಸಿನ ಪಾಟೋಲೆ ವಿದರ್ಭದ ಸಾಕೋಲಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಪಾಟೋಲೆ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿ ಎನ್‌ಸಿಪಿ ಬಲಾಢ್ಯ ನಾಯಕ ಪ್ರಫುಲ್ ಪಟೇಲ್‌ರನ್ನು ಭಂಡಾರ-ಗೋಡಿಯಾ ಕ್ಷೇತ್ರದಲ್ಲಿ ಮಣಿಸಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಭಿನ್ನಾಭಿಪ್ರಾಯ ಉಂಟಾದ ಕಾರಣ ಬಿಜೆಪಿಯನ್ನು ತ್ಯಜಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

ಮಾಜಿ ಕಿಸಾನ್ ವಿಂಗ್ ನಾಯಕ ಪಾಟೋಲೆ ಅವರನ್ನು ಸ್ಪೀಕರ್ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ರಾಜ್ಯದ ವಿವಿಧ ವಲಯವನ್ನು ಸಮತೋಲನದಲ್ಲಿರಿಸಲು ಪ್ರಯತ್ನಿಸಲಾಗಿದೆ. ಎನ್‌ಸಿಪಿ ಹಾಗೂ ಕಾಂಗ್ರೆಸ್‌ನ ಹೆಚ್ಚಿನ ನಾಯಕರು ಪಶ್ಚಿಮ ಮಹಾರಾಷ್ಟ್ರಕ್ಕೆ ಸೇರಿದವರಾಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)