varthabharthi

ಸಿನಿಮಾ

ಭರ್ಜರಿ ತಾರಾಗಣದ ಹೌಸ್‌ಫುಲ್ 5

ವಾರ್ತಾ ಭಾರತಿ : 1 Dec, 2019

ಸಾಜಿದ್ ನಡಿಯಾದ್‌ವಾಲಾ ನಿರ್ಮಾಣದ ಹೌಸ್‌ಫುಲ್ ಸರಣಿಯ ಚಿತ್ರಗಳು ಹೆಸರಿಗೆ ತಕ್ಕಂತೆ ಒಂದರ ಹಿಂದೆ ಒಂದರಂತೆ ಸೂಪರ್‌ಹಿಟ್ ಆಗುತ್ತಾ ಬಂದಿವೆ. ಈ ಮಲ್ಟಿಸ್ಟಾರರ್ ಕಾಮಿಡಿ ಸಿಕ್ವೇಲ್‌ಗಳು ಪ್ರೇಕ್ಷಕರನ್ನು ಹೊಟ್ಟೆಹುಣ್ಣಾಗುವಂತೆ ನಗಿಸುವಲ್ಲಿ ಯಶಸ್ವಿಯಾಗಿವೆ.

ಇತ್ತೀಚೆಗೆ ತೆರೆಕಂಡ ಹೌಸ್‌ಫುಲ್ 4 ಚಿತ್ರದ ಭರ್ಜರಿ ಯಶಸ್ಸಿನ ಸಡಗರದಲ್ಲಿ ತೇಲಾಡುತ್ತಿ ರುವ ನಿರ್ಮಾಪಕ ಸಾಜಿದ್ ನಡಿಯಾದ್‌ವಾಲಾ ಈಗ ಹೌಸ್‌ಫುಲ್ 5 ನಿರ್ಮಾಣವನ್ನು ಘೋಷಿಸಿದ್ದಾರೆ. ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳ ಮಹಾ ಸಂಗಮವೇ ಹೌಸ್‌ಫುಲ್ 5’ನಲ್ಲಿದೆ. ಅಕ್ಷಯ್‌ಕುಮಾರ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ, ರಿತೇಶ್ ದೇಶಮುಖ್, ಜಾಕ್ವೆಲಿನ್ ಫೆರ್ನಾಂಡಿಸ್, ಅಭಿಷೇಕ್ ಬಚ್ಚನ್, ಕೃತಿ ಸನೂನ್, ಬಾಬ್ಬಿ ಡಿಯೋಲ್, ಕೃತಿ ಕರಬಂದಾ ಹಾಗೂ ಪೂಜಾ ಹೆಗ್ಡೆ ಹೀಗೆ ಜನಪ್ರಿಯ ತಾರೆಯರು ಒಟ್ಟುಗೂಡಲಿದ್ದಾರೆ.

ಹೌಸ್‌ಫುಲ್ 4 ಚಿತ್ರವನ್ನು ನಿರ್ಮಿಸುತ್ತಿರುವಾಗಲೇ ತನ್ನ ಹೌಸ್‌ಫುಲ್ 5ನ ಚಿತ್ರಕಥೆಯನ್ನು ಕೂಡಾ ಆರಂಭಿಸಿದ್ದಾಗಿ ಸಾಜಿದ್ ಹೇಳಿಕೊಂಡಿದ್ದಾರೆ. ಆದರೆ ಈ ಚಿತ್ರಕ್ಕಾಗಿ ಸೂಪರ್‌ಸ್ಟಾರ್‌ಗಳ ಡೇಟ್ಸ್‌ಗಳನ್ನು ಹೊಂದಿಸಿಕೊಳ್ಳುವುದೇ ಅವರಿಗೆ ದೊಡ್ಡ ಪ್ರಯಾಸದ ಕೆಲಸವಾಗಿದೆ. ಹೀಗಾಗಿ ಹೌಸ್‌ಫುಲ್5ನ ಚಿತ್ರೀಕರಣ ಯಾವಾಗ ಆರಂಭಗೊಳ್ಳಲಿದೆ ಎಂಬ ಬಗ್ಗೆ ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲವೆಂದು ಸಾಜಿದ್ ತಿಳಿಸಿದ್ದಾರೆ. ಈ ಮಧ್ಯೆ ಹೌಸ್‌ಫುಲ್4 ಬಾಕ್ಸ್‌ಆಫೀಸ್‌ನಲ್ಲಿ ತನ್ನ ಗೆಲುವಿನ ಓಟ ವನ್ನು ಮುಂದುವರಿಸಿದೆ. ಭಾರತದಲ್ಲೇ ಬರೋಬ್ಬರಿ 200 ಕೋಟಿ ರೂ. ಬಾಚಿಕೊಳ್ಳುವ ಮೂಲಕ ಅದು ಹೌಸ್‌ಫುಲ್ ಸರಣಿಯ ಚಿತ್ರಗಳಲ್ಲೇ ಅತ್ಯಧಿಕ ಹಣಗಳಿಸಿದ ದಾಖಲೆ ನಿರ್ಮಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)