varthabharthi


ಸಿನಿಮಾ

ಆರ್ ಆರ್ ಆರ್ ಗೆ ಹಾಲಿವುಡ್ ಸ್ಟಾರ್ಸ್

ವಾರ್ತಾ ಭಾರತಿ : 1 Dec, 2019

ಬಾಹುಬಲಿ ಸರಣಿಯ ಚಿತ್ರಗಳ ಮೂಲಕ ನಿರ್ದೇಶಕ ಎಸ್.ಎಸ್. ರಾಜಾಮೌಳಿ ಭಾರತೀಯ ಚಿತ್ರರಂಗದ ಖ್ಯಾತನಾಮರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. ಬಾಹುಬಲಿ 2 ಚಿತ್ರವಂತೂ ಬರೋಬ್ಬರಿ 2 ಸಾವಿರ ಕೋಟಿ ರೂ. ಗಳಿಸುವ ಮೂಲಕ ಭಾರತೀಯ ಸಿನೆಮಾರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ಇದೀಗ ರಾಜಾಮೌಳಿ ನಿರ್ದೇಶನದ ಮುಂದಿನ ಚಿತ್ರಕ್ಕಾಗಿ ಚಿತ್ರಪ್ರೇಮಿಗಳು ತುದಿಗಾಲಿನಲ್ಲಿ ಕಾದು ನಿಂತಿದ್ದಾರೆ. ಭಾರೀ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ಆರ್‌ಆರ್‌ಆರ್’ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಹಾಗೂ ರಾಮ್‌ಚರಣ್ ಜೊತೆಗೆ ಬಾಲಿವುಡ್‌ನ ಖ್ಯಾತ ನಟಿ ಅಲಿಯಾಭಟ್ ನಟಿಸಿದ್ದಾರೆ. ಬಾಲಿವುಡ್‌ನ ಸೂಪರ್‌ಸ್ಟಾರ್ ಅಜಯ್ ದೇವಗನ್‌ಕೂಡಾ ಇದ್ದಾರೆ. ಬ್ರಿಟಿಶರ ವಿರುದ್ಧ ಭಾರತೀಯರ ಸ್ವಾತಂತ್ರ ಹೋರಾಟದ ಹಿನ್ನೆಲೆಯ ಕಥಾವಸ್ತುವನ್ನು ಈ ಚಿತ್ರ ಹೊಂದಿದೆ.

 ಹೀಗೆ ಹಿಂದಿ ಹಾಗೂ ದಕ್ಷಿಣ ಭಾರತದ ಖ್ಯಾತ ತಾರೆಯರನ್ನು ಆರ್‌ಆರ್‌ಆರ್‌ನಲ್ಲಿ ಒಂದುಗೂಡಿಸಿರುವ ರಾಜಾಮೌಳಿ ಅತ್ತ ಹಾಲಿವುಡ್‌ನಿಂದಲೂ ಮೂವರು ತಾರೆಯರನ್ನು ಕರೆತಂದಿದ್ದಾರೆ. ಅಂತರ್‌ರಾಷ್ಟ್ರೀಯ ಖ್ಯಾತಿಯ ನಟರಾದ ಅಲಿಸನ್ ಡೂಡಿ ಹಾಗೂ ರೇ ಸ್ಟೀವನ್‌ಸನ್ ಈ ಚಿತ್ರದಲ್ಲಿ ಮಹತ್ವದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಲಿವುಡ್ ನಟಿ ಒಲಿವಿಯಾ ಮೊರಿಸ್ ಚಿತ್ರದ ಇನ್ನೋರ್ವ ನಾಯಕಿಯ ಪಾತ್ರದಲ್ಲಿ ನಟಿಸಲಿದ್ದಾರೆ.

ಪ್ರಸಿದ್ಧ ಹಾಲಿವುಡ್ ಚಿತ್ರ ಇಂಡಿಯಾನಾ ಜೋನ್ಸ್‌ನಲ್ಲಿ ಅಭಿನಯಿಸಿದ್ದ ಅಲನ್ ಡೂಡಿ ಹಾಗೂ ಥೋರ್ ಸರಣಿಯ ಚಿತ್ರಗಳ ನಟ ರೇ ಸ್ಟೀವನ್‌ಸನ್, ಐತಿಹಾಸಿಕ ಹಿನ್ನೆಲೆಯ ಕಥೆಯುಳ್ಳ ಈ ಚಿತ್ರದಲ್ಲಿ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಡೂಡಿಯ ಅಭಿನಯದ ಸನ್ನಿವೇಶದ ಚಿತ್ರಗಳ ಶೂಟಿಂಗ್ ಈಗಾಗಲೇ ಮುಗಿದಿದೆ. ಉಳಿದಿಬ್ಬರು ಹಾಲಿವುಡ್ ತಾರೆಯರ ಶೀಘ್ರದಲ್ಲೇ ಆರ್‌ಆರ್‌ಆರ್‌ನ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. 300 ಕೋಟಿ ರೂ. ಬಜೆಚ್‌ನಲ್ಲಿ ನಿರ್ಮಾಣವಾಗುತ್ತಿರುವ ಆರ್‌ಆರ್‌ಆರ್ ಮುಂದಿನ ವರ್ಷದ ಜುಲೈ 30ರಂದು ವಿಶ್ವದಾದ್ಯಂತ ತೆರೆಕಾಣಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)