varthabharthi


ಕರಾವಳಿ

ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ

ಬ್ರಹ್ಮಾವರದ ಪೃಥ್ವಿ ಪೂಜಾರಿ ಆತ್ಮಹತ್ಯೆ ಪ್ರಕರಣ: ಆರೋಪಿ ದೋಷಮುಕ್ತ

ವಾರ್ತಾ ಭಾರತಿ : 2 Dec, 2019

ಉಡುಪಿ, ಡಿ.2: ಸುಮಾರು ಎಂಟು ವರ್ಷಗಳ ಹಿಂದೆ ಉಡುಪಿ ಜಿಲ್ಲೆ ಯಾದ್ಯಂತ ಸಂಚಲನ ಮೂಡಿಸಿದ್ದ ರಾಷ್ಟ್ರೀಯ ಕ್ರೀಡಾಪಟು ಪೃಥ್ವಿ ಪೂಜಾರಿ ಅಂಪಾರು (17) ಆತ್ಮಹತ್ಯೆ ಪ್ರಕರಣದ ಆರೋಪಿಯನ್ನು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಡಿ.2ರಂದು ದೋಷಮುಕ್ತಗೊಳಿಸಿ ಆದೇಶ ನೀಡಿದೆ.

ಈ ಪ್ರಕರಣದ ಆರೋಪಿ ಬ್ರಹ್ಮಾವರ ಆಕಾಶವಾಣಿ ನಿವಾಸಿ ಮಿಸ್ಬಾನ್ ಹುಸೈನ್ (30) ಎಂಬಾತ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವನ್ನು ಎದುರಿಸುತ್ತಿದ್ದನು.

ಪೋಲ್‌ವಾಲ್ಟ್‌ನಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದ ಅಂಪಾರಿನ ಶೇಖರ್ ಪೂಜಾರಿ ಎಂಬವರ ಮಗಳು ಬ್ರಹ್ಮಾವರ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಪೃಥ್ವಿ, 2011ರ ಸೆ.27ರಂದು ವಾರಂಬಳ್ಳಿ ಯಲ್ಲಿರುವ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ವೇಳೆ ಆಕೆ ಬರೆದಿದ್ದ ಮರಣ ಪತ್ರದಲ್ಲಿ ಬ್ರಹ್ಮಾವರದ ಮಿಸ್ಬಾನ್, ನನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಎಂಬುದಾಗಿ ಉಲ್ಲೇಖಿಸಲಾಗಿತ್ತು. ಅದರಂತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಮಿಸ್ಬಾನ್ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದರ ವಿರುದ್ಧ ಆ ಸಂದರ್ಭದಲ್ಲಿ ಬಿಲ್ಲವ ಸಂಘ ಹಾಗೂ ರಾಜಕೀಯ ಪಕ್ಷಗಳಿಂದ ಭಾರೀ ಪ್ರತಿಭಟನೆ ವ್ಯಕ್ತವಾಗಿದ್ದವು.

ಆಗಿನ ಕುಂದಾಪುರ ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದ ಡಾ.ಎಚ್. ರಾಮ್ ನಿವಾಸ್ ಸೆಪಟ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ 24 ಸಾಕ್ಷಿಗಳ ಹೇಳಿಕೆ ಯನ್ನು ಪಡೆದುಕೊಂಡಿತ್ತು. ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಸಿ.ಎಂ.ಜೋಷಿ, ಆರೋಪಿ ವಿರುದ್ಧದ ಆರೋಪ ಸಾಬೀತು ಪಡಿಸುವಲ್ಲಿ ಪ್ರಾಸಿ ಕ್ಯುಶನ್ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟು ಆರೋಪಿಯನ್ನು ಖುಲಾಸೆ ಗೊಳಿಸಿ ಆದೇಶ ನೀಡಿದೆ. ಆರೋಪಿ ಪರ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದ ಮಂಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)