varthabharthi


ಬೆಂಗಳೂರು

'ಸುರಕ್ಷಾ ಆ್ಯಪ್' ಬಳಕೆ ಹೇಗೆ?: ಇಲ್ಲಿದೆ ಮಾಹಿತಿ

ಮಹಿಳೆಯರು ಸಂಕಷ್ಟದಲ್ಲಿದ್ದರೆ '7 ಸೆಕೆಂಡ್'ಗಳಲ್ಲಿ ಪ್ರತಿಕ್ರಿಯೆ: ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ವಾರ್ತಾ ಭಾರತಿ : 2 Dec, 2019

ಬೆಂಗಳೂರು, ಡಿ.2: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ವರದಿಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ‘ಸುರಕ್ಷಾ ಆ್ಯಪ್‌‘ ಅನ್ನು ಬೆಂಗಳೂರು ವ್ಯಾಪ್ತಿಯಲ್ಲಿರುವ ಮಹಿಳೆಯರು ಹೆಚ್ಚಾಗಿ ಬಳಕೆ ಮಾಡಿಕೊಳ್ಳಬೇಕು ಎನ್ನುವ ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದೆ.

2017ನೆ ಸಾಲಿನ ಏಪ್ರಿಲ್ 10ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರು ಸುರಕ್ಷಾ ಆಪ್‌ಅನ್ನು ಬಿಡುಗಡೆ ಮಾಡಿದ್ದರು. ಇದೀಗ ಗೂಗಲ್ ಫ್ಲೇನಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.

ಆ್ಯಪ್ ಕಾರ್ಯವೇನು?:  ಮಕ್ಕಳು, ಯುವತಿಯರು, ಮಹಿಳೆಯರು ಯಾವುದಾದರು ಸಮಸ್ಯೆಯಲ್ಲಿದ್ದಾಗ ಸುರಕ್ಷಾ ಆ್ಯಪ್‌ನಲ್ಲಿರುವ ಕೆಂಪು ಬಣ್ಣದ ಗುಂಡಿಯನ್ನು ಒತ್ತಿದರೆ ಸಾಕು, ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಹಾಗೂ ಇತರ ಕಾಂಟಾಕ್ಟ್‌ಗಳಿಗೆ ಸಂದೇಶ ರವಾನೆಯಾಗುತ್ತದೆ. ಅಷ್ಟೇ ಅಲ್ಲದೆ, ಸಂತ್ರಸ್ತರು ಇರುವ ಸ್ಥಳವು ಕೂಡಾ ಆ್ಯಪ್ ಮೂಲಕ ಅವರಿಗೆ ತಿಳಿಯುತ್ತದೆ. ಈ ಆಧಾರದಲ್ಲಿ ಪೊಲೀಸರು ತಕ್ಷಣ ಕಾರ್ಯ ಪ್ರವತ್ತರಾಗುರತ್ತಾರೆ.

ಆಯುಕ್ತರು ಹೇಳುವುದೇನು?: ನಗರದಲ್ಲಿನ ಪ್ರತಿಯೊಬ್ಬರಿಗೂ, ಹೊರ ರಾಜ್ಯದ ಹಾಗೂ ಹೊರದೇಶಗಳಿಂದ ಬರುವ ಪ್ರತಿಯೊಬ್ಬರಿಗೂ ಸುರಕ್ಷತೆ ಒದಗಿಸಲು ರಾಜ್ಯ ಪೊಲೀಸ್ ಇಲಾಖೆಯು ಹಲವು ಕ್ರಮಗಳನ್ನು ಕೈಗೊಂಡಿದ್ದು, ಈಗ ಸುರಕ್ಷಾ ಎನ್ನುವ ಈ ಸುರಕ್ಷಾ ಆ್ಯಪ್ ಆರಂಭಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದರು.

ಪ್ರತಿಯೊಬ್ಬರೂ ಮೊಬೈಲ್‌ನಲ್ಲಿ ಸುರಕ್ಷಾ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ಯಾವುದೇ ತೊಂದರೆಗೆ ಒಳಗಾಗುವವರು ಆ್ಯಪ್ ಅನ್ನು ಮುಟ್ಟಿದ ತಕ್ಷಣ ಅಲ್ಲಿನ ಚಿತ್ರಣವನ್ನು ಚಿತ್ರೀಕರಿಸಿ, ಪೊಲೀಸ್ ನಿಯಂತ್ರಣ ಕೊಠಡಿಗೆ ತಲುಪುವ ವ್ಯವಸ್ಥೆ ಮಾಡಲಾಗಿದೆ. ಆ್ಯಪ್‌ನಲ್ಲಿ ತಮ್ಮ ಹೆಸರು, ಹತ್ತಿರದ ವ್ಯಕ್ತಿಗಳ ಮೊಬೈಲ್ ಸಂಖ್ಯೆ ನಮೂದಿಸಬೇಕು ಎಂದು ವಿವರಿಸಿದರು.

7 ಸೆಕೆಂಡ್‌ನಲ್ಲಿ ಸಂದೇಶ: ಹೈದರಾಬಾದ್‌ನಲ್ಲಿ ನಡೆದ ಘಟನೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ರಕ್ಷಣೆ ಒದಗಿಸುವುದಕ್ಕೆ ನಾವು ಬದ್ಧರಾಗಿದ್ದೇವೆ. ಸಹಾಯವಾಣಿ 100ಗೆ ಕರೆ ಮಾಡಿದರೆ ಏಳು ಸೆಕೆಂಡ್‌ನಲ್ಲಿ ನಿಮಗೆ ಪ್ರತಿಕ್ರಿಯೆ ಬರುತ್ತದೆ. ಅಲ್ಲದೇ ಕರೆ ಮಾಡಿದವರ ಮೊಬೈಲ್‌ಗೆ ಸಂದೇಶ ರವಾನೆಯಾಗುತ್ತದೆ. ಅದರ ಜತೆಗೆ ಶೀಘ್ರವಾಗಿ ಹೊಯ್ಸಳ ವಾಹನ ಪೊಲೀಸರು ನಿಮ್ಮ ಬಳಿ ಬರುತ್ತಾರೆ. ಪ್ರತಿ ಠಾಣೆಗೆ 2 ರಂತೆ ಹೊಯ್ಸಳ ವಾಹನಗಳಿದ್ದು, ಸಂತ್ರಸ್ತರ ನೆರವಿಗೆ ಧಾವಿಸಲಿವೆ. ಈ ಕುರಿತು ಈಗಾಗಲೆ ಕಮಾಂಡ್ ಸೆಂಟರ್‌ನಲ್ಲೂ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಹೈದರಾಬಾದ್‌ನಲ್ಲಿ ಯುವತಿ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಪೊಲೀಸ್ ಇಲಾಖೆ ನಗರದ ಯಾವುದೇ ಭಾಗದಲ್ಲೂ ಮಹಿಳೆಯರಿಗೆ ಭಯವಿಲ್ಲದೆ, ಸುರಕ್ಷತೆ ಮೂಡಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದಲ್ಲಿ ಮಹಿಳಾ ಸುರಕ್ಷತಾ ದಳ ಸ್ಥಾಪಿಸಲಾಗಿದೆ.
-ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)