varthabharthi


ಕರಾವಳಿ

ಕರಾವಳಿ ಜಿಲ್ಲೆಗಳಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಹತ್ತರ ಕೊಡುಗೆ-ಸಾಜಿದ್ ಮುಲ್ಲಾ

ವಾರ್ತಾ ಭಾರತಿ : 2 Dec, 2019

ಭಟ್ಕಳ : ಕರಾವಳಿ ಜಿಲ್ಲೆಗಳು ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ್ದು ಇದನ್ನು ಪ್ರತಿಯೊಬ್ಬರು ಮೆಚ್ಚಲೆಬೇಕು, ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಜನಿಸಿದ ಬ್ಯಾಂಕುಗಳು ಜಗತ್ತಿನಲ್ಲೆ ತಮ್ಮ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿವೆ ಎಂದು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಸಾಜಿದ್ ಅಹ್ಮದ್ ಮುಲ್ಲಾ ಹೇಳಿದರು. 

ಅವರು ಕರ್ಣಾಟಕ ಬ್ಯಾಂಕ್ ಭಟ್ಕಳ ಶಾಖೆಯ ಸ್ಥಳಾಂತರ ಕಾರ್ಯಕ್ರಮದಲ್ಲಿ ಬ್ಯಾಂಕಿನ ಪ್ರಾಂಗಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ಇ-ಬ್ಯಾಂಕಿಂಗ್ ಹಾಗೂ ಇಂಟರ್ ನೆಟ್ ಬ್ಯಾಂಕಿಂಗ್‍ನಿಂದಾಗಿ ಬ್ಯಾಂಕುಗಳ ಜವಾಬ್ದಾರಿ ಜಾಸ್ತಿಯಾಗಿದೆ  ಇಂದಿನ ತಂತ್ರಜ್ಞಾನದ ಯುಗದಲ್ಲಿ ಅನೇಕ ವಿದ್ಯಾವಂತರೇ ಮೋಸ ಹೋಗಿರುವ ಉದಾಹರಣೆಗಳಿವೆ.  ಅಂತಹ ಸಂದರ್ಭದಲ್ಲಿ ಬ್ಯಾಂಕುಗಳು ತಮ್ಮ ಗ್ರಾಹಕರ ಹಿತ ಕಾಪಾಡುವಲ್ಲಿ ಮುತುವರ್ಜಿ ವಹಿಸಬೇಕು ಎಂದರು. ಕರ್ಣಾಟಕ ಬ್ಯಾಂಕ್ ಉತ್ತಮ ವ್ಯವಹಾರ ಮಾಡುವ ಬ್ಯಾಂಕ್ ಆಗಿದ್ದು ಹೊಸ ಯೋಜನೆಗಳೊಂದಿಗೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಮುಂದಿನ ದಿನಗಳಲ್ಲಿ ಬ್ಯಾಂಕುಗಳಲ್ಲಿ ಖಾತೆ ಹೊಂದುವುದು ಪ್ರತಿಯೋರ್ವರಿಗೂ ಅನಿವಾರ್ಯ ಎಂದ ಅವರು ಸರಕಾರ ಇನ್ನು ಮುಂದೆ ಯಾವುದೇ ಹಣವನ್ನು ಚೆಕ್ ಇಲ್ಲವೇ ನಗದಾಗಿ ನೀಡುವುದಿಲ್ಲ ಎಲ್ಲಾ ಸಬ್ಸಿಡಿ, ಪರಿಹಾರ ಸೇರಿದಂತೆ ಯಾವುದೇ ಪಾವತಿ ಇದ್ದರೂ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಚೀಫ್ ಬಿಸೆನೆಸ್ ಮೆನೆಜರ್ ಗೋಕುಲದಾಸ ಪೈ ಮಾತನಾಡಿ ಭಟ್ಕಳ ಶಾಖೆ ಕಳೆದ 44 ವರ್ಷಗಳಿಂದ ಉತ್ತಮ ವ್ಯವಹಾರವನ್ನು ಮಾಡುತ್ತಾ ಬಂದಿದ್ದು 50 ಕೋಟಿಯಷ್ಟು ಠೇವಣಿ ಹಾಗೂ 21 ಕೋಟಿಯಷ್ಟು ಮುಂಗಡ ನೀಡಿದ್ದು ಇದಕ್ಕೆ ಗ್ರಾಹಕರ ಸಹಕಾರವೇ ಕಾರಣವಾಗಿದೆ. ಬ್ಯಾಂಕಿಂಗ್ ವಲಯದಲ್ಲಿ ಅನೇಕ ಬದಲಾವಣೆಗಳಾಗುತ್ತಿದ್ದು ಮುಂದಿನ ದಿನಗಳಲ್ಲಿ ಬ್ಯಾಂಕುಗಳಿಗೆ ಗ್ರಾಹಕರು ಬರುವ ಅವಶ್ಯಕತೆಯೇ ಇರದು. ಎಲ್ಲವೂ ಕೂಡಾ ಫಿಂಗರ್ ಟಿಪ್ಸ್ ನಲ್ಲಿ ದೊರೆಯಲಿದೆ ಎಂದರು. ನಮ್ಮ ಬ್ಯಾಂಕು ಅತ್ಯಂತ ಉತ್ತಮ ಮೊಬೈಲ್ ಬ್ಯಾಂಕಿಂಗ್ ಸಿಸ್ಟಮ್ ಹೊಂದಿದ್ದು ಇನ್ನು ಮುಂದೆ ಲೋನ್‍ಗಳನ್ನು ಕೂಡಾ ಆನ್‍ಲೈನ್‍ನಲ್ಲಿ ಮಂಜೂರಿ ಮಾಡುವುದನ್ನು ಜಾರಿಗೆ ತರಲಿದ್ದೇವೆ ಎಂದರು. 

ಬ್ಯಾಂಕಿನ ನೂತನ ಶಾಖೆಯನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ ಉಧ್ಯಮಿ ನಾಗೇಶ ಮೋಹನ ಭಟ್ಟ,  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ಬ್ಯಾಂಕುಗಳು ಉದಯವಾಗಿದ್ದು ದೇಶದಲ್ಲಿಯೇ ಯಾವೊಂದು ಜಿಲ್ಲೆಯಲ್ಲಿಯೂ ಇಷ್ಟೊಂದು ವಾಣಿಜ್ಯ ಬ್ಯಾಂಕು ಗಳು ಉದಯವಾಗಿಲ್ಲ ಎನ್ನುವ ಹೆಮ್ಮ ನಮ್ಮದು ಎಂದರು.

ಕಳೆದ ಹತ್ತು ವರ್ಷಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳಾಗಿದ್ದು ಟೆಕ್ನಾಲಜಿಯಲ್ಲಿ ಅತ್ಯಂತ ವೇಗವಾಗಿ ಮುಂದುವರಿಯುತ್ತಿರುವ ಬ್ಯಾಂಕುಗಳಿಗೆ ಇನ್ನು ಮುಂದೆ ಗ್ರಾಹಕರು ಹೋಗಿ ವ್ಯವಹಾರ ಮಾಡುವ ಅಗತ್ಯವೇ ಬರುವುದಿಲ್ಲ ಎಂದರು. ಕರ್ನಾಟಕ ಬ್ಯಾಂಕ್‍ನಲ್ಲಿ ದೊರೆಯುವ ಸೇವೆಯು ಇಲ್ಲಿನ ಯುವ ಸಿಬ್ಬಂದಿಗಳಿಂದ ಸಾಧ್ಯವಾಗಿದೆ ಎಂದ ಅವರು ಬ್ಯಾಂಕಿನೊಂದಿಗೆ ಇರುವ ತಮ್ಮ ಉತ್ತಮ ಅನುಭವಗಳನ್ನು ಹಂಚಿಕೊಂಡರು. ಗ್ರಾಹಕರ ಪರವಾಗಿ ನಾಮಧಾರಿ ಸಮಾಜದ ಅಧ್ಯಕ್ಷ ಎಂ. ಆರ್. ನಾಯಕ, ಉಧ್ಯಮಿ ಮುನೀರ್ ಅಹ್ಮದ್ ಅವರು ಮಾತನಾಡಿದರು. 

 ವೈಷ್ಣವಿ ಪ್ರಾರ್ಥಿಸಿದರು. ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಬಿ. ಗೋಪಾಕೃಷ್ಣ ಸಾಮಗ ಸ್ವಾಗತಿಸಿದರು. ಉಡುಪಿಯ ವಲಯ ಕಚೇರಿಯ ಸಿಬ್ಬಂದಿಗಳಾದ ಚಕ್ರಪಾಣಿ ಹಾಗೂ ದಯಾನಂದ ನಿರೂಪಿಸಿದರು. ಭಟ್ಕಳ ಶಾಖಾ ವ್ಯವಸ್ಥಾಪಕ ವಿನಾಯಕ ಮೊಗೇರ ವಂದಿಸಿದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)