varthabharthi


ರಾಷ್ಟ್ರೀಯ

ಶ್ರೀನಗರದಲ್ಲಿ ಅಂಗಡಿಗಳಿಗೆ ಬೆಂಕಿ ಹಚ್ಚುವ ಯತ್ನ ವಿಫಲ

ವಾರ್ತಾ ಭಾರತಿ : 2 Dec, 2019

ಶ್ರೀನಗರ,ಡಿ.2: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿಯ ಐಷಾರಾಮಿ ಮಾರುಕಟ್ಟೆಯೊಂದರಲ್ಲಿಯ ಅಂಗಡಿಗಳಿಗೆ ಬೆಂಕಿ ಹಚ್ಚಲು ರವಿವಾರ ರಾತ್ರಿ ನಡೆದ ಪ್ರಯತ್ನವು ಕೂದಲೆಳೆಯ ಅಂತರದಿಂದ ವಿಫಲಗೊಂಡಿದೆ ಎಂದು ಅಧಿಕಾರಿಗಳು ಸೋಮವಾರ ಇಲ್ಲಿ ತಿಳಿಸಿದರು.

ಇದು ನಗರದಲ್ಲಿ ನಡೆಯುತ್ತಿರುವ ಸರಣಿ ನಿಗೂಢ ಘಟನೆಗಳಲ್ಲಿ ಇತ್ತೀಚಿನದಾಗಿದೆ. ವಿಧಿ 370ನ್ನು ಹಿಂದೆಗೆದುಕೊಂಡಿದ್ದನ್ನು ವಿರೋಧಿಸಿ ಅಘೋಷಿತ ಬಂದ್‌ನ್ನು ಉಲ್ಲಂಘಿಸಿದ ಅಂಗಡಿ ಮಾಲಕರನ್ನು ದುಷ್ಕರ್ಮಿಗಳು ಗುರಿಯಾಗಿಸಿಕೊಂಡಿದ್ದಾರೆ ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದರು.

ರವಿವಾರ ತಡರಾತ್ರಿ ರೆಸಿಡೆನ್ಸಿ ರಸ್ತೆಯ ಲಂಬರ್ಟ್ ಲೇನ್ ಮಾರ್ಕೆಟ್‌ನ ಕೆಲವು ಅಂಗಡಿಗಳ ಮೇಲೆ ಪೆಟ್ರೋಲ್ ಎರಚಲಾಗಿತ್ತು. ಪೆಟ್ರೋಲ್ ವಾಸನೆಯನ್ನು ಗ್ರಹಿಸಿದ ಕಟ್ಟಡದ ಕೆಲವು ಜಾಗ್ರತ ನಿವಾಸಿಗಳು ಧಾವಿಸಿ ಬಂದು ಬೆಂಕಿ ಹಚ್ಚುವ ಪ್ರಯತ್ನವನ್ನು ವಿಫಲಗೊಳಿಸಿದರು. ಅಷ್ಟರಲ್ಲಾಗಲೇ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದರು.

ಇದು ಕಳೆದ ಮೂರು ರಾತ್ರಿಗಳಲ್ಲಿ ಇಂತಹ ಮೂರನೇ ಘಟನೆಯಾಗಿದೆ. ಶುಕ್ರವಾರ ರಾತ್ರಿ ಗೋನಿ ಖಾನ್ ಮಾರ್ಕೆಟ್ ಮತ್ತು ಶನಿವಾರ ರಾತ್ರಿ ಬಡ್‌ಶಾ ಚೌಕ್‌ನಲ್ಲಿ ಇಂತಹುದೇ ಘಟನೆಗಳು ನಡೆದಿದ್ದವು.

ಆ.5ರಂದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಹಲವಾರು ನಿಗೂಢ ಬೆಂಕಿ ಘಟನೆಗಳು ನಗರದಲ್ಲಿ ನಡೆದಿದ್ದು,ಅಂಗಡಿಗಳನ್ನು ನಾಶಗೊಳಿಸಲಾಗಿದೆ ಅಥವಾ ಭಾಗಶಃ ಹಾನಿಯನ್ನುಂಟು ಮಾಡಲಾಗಿದೆ.

ವಿಧಿ 370ರ ರದ್ದತಿಯನ್ನು ವಿರೋಧಿಸಿ ಮಳಿಗೆಗಳನ್ನು ಮಧ್ಯಾಹ್ನದೊಳಗೆ ಮುಚ್ಚಬೇಕು ಎಂಬ ಅಘೋಷಿತ ಬಂದ್ ಕರೆಯನ್ನು ಉಲ್ಲಂಘಿಸಿ ವ್ಯಾಪಾರ ನಡೆಯುತ್ತಿರುವ ಮಾರುಕಟ್ಟೆಗಳಲ್ಲಿನ ಅಂಗಡಿಗಳು ಇಂತಹ ದಾಳಿಗಳ ಪ್ರಮುಖ ಗುರಿಗಳಾಗಿವೆ. ಆದರೆ ಬೆಂಕಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎಂದೇ ಪೊಲೀಸರು ಈವರೆಗೆ ಹೇಳಿಕೊಂಡು ಬಂದಿದ್ದಾರೆ.

ಉಗ್ರರು ಕಳೆದ ತಿಂಗಳು ಗೋನಿ ಖಾನ್ ಮಾರುಕಟ್ಟೆಯಲ್ಲಿ ನಡೆಸಿದ್ದ ಗ್ರೆನೇಡ್ ದಾಳಿಯಲ್ಲಿ ಇಬ್ಬರು ಮೃತಪಟ್ಟು,30ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)