varthabharthi


ಸಂಪಾದಕೀಯ

ಬುಲ್ಡೋಜರ್‌ಗೆ ಡಿಕ್ಕಿ ಹೊಡೆದ ಬಜಾಜ್ ಸ್ಕೂಟರ್

ವಾರ್ತಾ ಭಾರತಿ : 2 Dec, 2019

ಕಲಬುರ್ಗಿ, ಗೌರಿಲಂಕೇಶ್ ಹತ್ಯೆ ಘಟನೆ ದೇಶದಲ್ಲಿ ಹೆಚ್ಚುತ್ತಿರುವ ‘ಅಸಹಿಷ್ಣುತೆ’ಯ ವಿರುದ್ಧ ಚಿಂತಕರು,ಸಾಹಿತಿಗಳು ಧ್ವನಿಯೆತ್ತುವಂತೆ ಮಾಡಿತು. ಇದು ಕೇವಲ ವಿಚಾರವಾದಿಗಳ ಹತ್ಯೆಗಳಿಗಷ್ಟೇ ಸೀಮಿತವಾಗಿರಲಿಲ್ಲ. ಗೋರಕ್ಷಣೆ, ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಗುಂಪು ಥಳಿತ, ಅಭಿವ್ಯಕ್ತಿ ಸ್ವಾತಂತ್ರದ ದಮನ ಇತ್ಯಾದಿಗಳೆಲ್ಲವನ್ನು ಮುಂದಿಟ್ಟು ಸಾಹಿತಿಗಳು, ಚಿಂತಕರು ತಮ್ಮ ಪ್ರಶಸ್ತಿಗಳನ್ನು ಸರಕಾರಕ್ಕೆ ಮರಳಿಸುವ ಆಂದೋಲನವೊಂದನ್ನು ಹಮ್ಮಿಕೊಂಡರು. ಹಲವು ಹಿರಿಯ ಸಾಹಿತಿಗಳು ತಮ್ಮ ಅಕಾಡಮಿ ಪ್ರಶಸ್ತಿಗಳನ್ನು ಸರಕಾರಕ್ಕೆ ಮರಳಿಸುವ ಮೂಲಕ, ದೇಶದಲ್ಲಿ ಪ್ರಜಾಸತ್ತೆ ಮರುಸ್ಥಾಪನೆಯಾಗಬೇಕು ಎಂದು ಸರಕಾರವನ್ನು ಒತ್ತಾಯಿಸಿದರು. ಆದರೆ ಸರಕಾರದ ವಿರುದ್ಧ ಧ್ವನಿಯೆತ್ತಿದ ವಿಚಾರವಾದಿಗಳನ್ನೇ ದಮನಿಸುವ ಪ್ರಯತ್ನ ನಡೆಯಿತೇ ಹೊರತು, ದೇಶದಲ್ಲಿ ಹೆಚ್ಚುತ್ತಿರುವ ಹಿಂಸೆ, ಗುಂಪು ಥಳಿತ, ಹತ್ಯೆ ಇತ್ಯಾದಿಗಳನ್ನು ನಿಯಂತ್ರಿಸುವ ಪ್ರಾಮಾಣಿಕ ಪ್ರಯತ್ನವನ್ನು ಸರಕಾರ ನಡೆಸಲೇ ಇಲ್ಲ. ಸಾಹಿತಿಗಳು, ಲೇಖಕರ ಸಮಾಜಪರ ಕಾಳಜಿಯನ್ನು ಬಿಜೆಪಿ ವಿರೋಧಿ ಆಂದೋಲನ ಎಂದು ವ್ಯಾಖ್ಯಾನಿಸಿ ತಮ್ಮದೇ ಕಾರ್ಯಕರ್ತರ ಮೂಲಕ ಅವರನ್ನು ಬಗ್ಗು ಬಡಿಯಲು ಯತ್ನಿಸಿತು. ಇದೇ ಸಂದರ್ಭದಲ್ಲಿ ಈ ದೇಶದ ಪರಿಸರ ಪರ ಸಂಘಟನೆಗಳೂ ಸರಕಾರದ ಕೆಂಗಣ್ಣಿಗೆ ಗುರಿಯಾವು.

ಪರಿಸರವನ್ನು ಬಲಿ ಹಾಕಿ ಅಭಿವೃದ್ಧಿಯ ಹೆಸರಿನಲ್ಲಿ ಬಡವರು, ರೈತರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಧ್ವನಿಯೆತ್ತುತ್ತಿದ್ದ ಸರಕಾರೇತರ ಸಂಘಟನೆಗಳನ್ನೆಲ್ಲ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಸರಕಾರ ಮಟ್ಟ ಹಾಕಲು ಯತ್ನಿಸಿತು. ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಅದು ನೇರವಾಗಿ ‘ಗ್ರೀನ್ ಪೀಸ್’ ವಿರುದ್ಧ ತನ್ನ ದಾಳಿಗಳನ್ನು ನಡೆಸಿರುವುದನ್ನು ನಾವು ಸ್ಮರಿಸಬಹುದು. ಇದಾದ ಬಳಿಕ ಇತರ ಎನ್‌ಜಿಒ ಸಂಸ್ಥೆಗಳಿಗೆ ದಾಳಿಯನ್ನು ವಿಸ್ತರಿಸಿತು. ಬೃಹತ್ ಉದ್ಯಮಿಗಳ ವಿರುದ್ಧ ಜನಸಾಮಾನ್ಯರ ಪರವಾಗಿ ಯಾರೂ ಧ್ವನಿಯೆತ್ತ ಬಾರದು ಎನ್ನುವುದು ಈ ದಾಳಿಯ ಪ್ರಮುಖ ಉದ್ದೇಶವಾಗಿತ್ತು. ಇದು ಬೃಹತ್ ಕಾರ್ಪೊರೇಟ್ ಶಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ಕೂಡಿತ್ತು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಇವೆಲ್ಲದರ ಬೆನ್ನಿಗೇ ದೇಶದಲ್ಲಿ ಹೆಚ್ಚುತ್ತಿರುವ ದಲಿತ ದೌರ್ಜನ್ಯಗಳು ಮಾಧ್ಯಮಗಳಲ್ಲಿ ಸುದ್ದಿಯಾಗತೊಡಗಿದವು. ಗೋಮಾಂಸದ ಹೆಸರಿನಲ್ಲಿ ಮುಸ್ಲಿಮರು ಮಾತ್ರವಲ್ಲ ದಲಿತರೂ ಸಾರ್ವಜನಿಕವಾಗಿ ಥಳಿತಕ್ಕೊಳಗಾಗ ತೊಡಗಿದರು. ‘ರೋಹಿತ್ ವೇಮುಲಾ ’ ಆತ್ಮಹತ್ಯೆ, ಉನಾದಲ್ಲಿ ದಲಿತರ ಮೇಲೆ ನಡೆದ ಹಲ್ಲೆ ದೇಶಾದ್ಯಂತ ದಲಿತರನ್ನು ಸಂಘಟಿತ ಗೊಳಿಸತೊಡಗಿತು. ಹಲವೆಡೆ ಹೊಸ ಯುವ ದಲಿತ ನಾಯಕರು ಹುಟ್ಟಿಕೊಂಡರು.

ಉತ್ತರ ಪ್ರದೇಶದಲ್ಲಿ ಚಂದ್ರಶೇಖರ ಆಝಾದ್, ದಿಲ್ಲಿಯಲ್ಲಿ ಕನ್ಹಯ್ಯಿ, ಗುಜರಾತ್‌ನಲ್ಲಿ ಜಿಗ್ನೇಶ್ ಮೇವಾನಿಯಂತಹ ತರುಣರು ಸರಕಾರದ ವಿರುದ್ಧ ಧ್ವನಿಯೆತ್ತತೊಡಗಿದರು. ಆದರೆ ಈ ಟೀಕೆಯನ್ನೂ ಧನಾತ್ಮಕವಾಗಿ ತೆಗೆದುಕೊಳ್ಳದ ಸರಕಾರ, ಟೀಕಿಸಿದವರನ್ನೇ ದಮನಿಸುವುದಕ್ಕೆ ಮುಂದಾಯಿತು. ಧ್ವನಿಯೆತ್ತಿದವರ ವಿರುದ್ಧ ದೇಶದ್ರೋಹದ ಆರೋಪಗಳನ್ನು ಜಡಿದು ಜೈಲಿಗೆ ತಳ್ಳುವ ಹುನ್ನಾರ ನಡೆಸಿತು. ಪೇಶ್ವೆಗಳ ಜಾತೀಯತೆಯ ವಿರುದ್ಧ ದಂಗೆಯೆದ್ದು ವಿಜಯವನ್ನು ಪಡೆದ ದಲಿತರ ಸ್ಮರಣಾರ್ಥ ಪ್ರತಿ ವರ್ಷ ನಡೆಸುವ ‘ಕೋರೆಗಾಂವ್ ವಿಜಯ’ ಸಮಾವೇಶ ಸಂಘಟಿಸಿದ ಚಿಂತಕರನ್ನು ‘ಅರ್ಬನ್ ನಕ್ಸಲ್’ ಎಂದು ಜೈಲಿಗೆ ತಳ್ಳಿತು. ಆದಿವಾಸಿಗಳು, ಬುಡಕಟ್ಟು ಜನರ ಪರವಾಗಿ ಹೋರಾಟ ನಡೆಸಿದವರೂ ಇಂದು ಜೈಲಿನಲ್ಲಿ ದಿನ ಎಣಿಸುತ್ತಿದ್ದಾರೆ. ಸರಕಾರದ ಈ ಎಲ್ಲ ಕೃತ್ಯಗಳನ್ನು ಗುರುತಿಸಿ ಬರೆದ ಪತ್ರಕರ್ತರನ್ನು, ಚಾನೆಲ್‌ಗಳನ್ನು ಕೂಡ ಸರಕಾರ ಬಿಡಲಿಲ್ಲ. ಬೇರೆ ಬೇರೆ ರೀತಿಯಲ್ಲಿ ಅವರಿಗೆ ಮಾನಸಿಕ ಹಿಂಸೆಯನ್ನು ನೀಡಿತು. ಐಟಿ ಅಧಿಕಾರಿಗಳನ್ನು ಬಳಸಿಕೊಂಡು ಬೆದರಿಸಿತು.

ಇತ್ತ ವಿರೋಧ ಪಕ್ಷದ ರಾಜಕೀಯ ನಾಯಕರು ಕೂಡ ಸರಕಾರದ ವಿರುದ್ಧ ಟೀಕೆ ಮಾಡದಂತಹ ಸನ್ನಿವೇಶ ನಿರ್ಮಾಣವಾಯಿತು. ವಿರೋಧ ಪಕ್ಷದಲ್ಲಿರುವ ಯಾರೆಲ್ಲ ನಾಯಕರು ಸರಕಾರಕ್ಕೆ ಸಮಸ್ಯೆಯಾಗಬಹುದೋ ಅವರನ್ನೆಲ್ಲ ಗುರುತಿಸಿ ಅವರ ವಿರುದ್ಧ ತನಿಖಾ ಸಂಸ್ಥೆಗಳನ್ನು ಛೂಬಿಟ್ಟಿತು. ಆದುದರಿಂದಲೇ ಇಂದು, ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ದೊಡ್ಡ ಧ್ವನಿಯಲ್ಲಿ ಮಾತನಾಡುವ ಧೈರ್ಯ ವಿರೋಧ ಪಕ್ಷದ ನಾಯಕರಲ್ಲೇ ಕಾಣುತ್ತಿಲ್ಲ. ಇಷ್ಟೇ ಅಲ್ಲ, ಬ್ಲಾಕ್‌ಮೇಲ್ ಮೂಲಕ ವಿವಿಧ ಪಕ್ಷಗಳ ಹಿರಿಯ ನಾಯಕರನ್ನು ತನ್ನ ಪಕ್ಷಕ್ಕೆ ಸೇರಿಸಿಕೊಂಡಿತು. ಎಸ್. ಎಂ. ಕೃಷ್ಣ, ರೋಷನ್‌ಬೇಗ್‌ರಂತಹ ನಾಯಕರು ತಮ್ಮ ರಾಜಕೀಯ ಸಿದ್ಧಾಂತಗಳನ್ನೆಲ್ಲ ಬಿಟ್ಟು ಬಿಜೆಪಿಗೆ ಸೇರುವಂತಹ ಅನಿವಾರ್ಯತೆ ಸೃಷ್ಟಿಯಾದದ್ದು ಹೀಗೆ. ಇಂದು ಚಿಂತಕರು, ವಿಚಾರವಾದಿಗಳು, ಪತ್ರಿಕೆಗಳು, ದಲಿತ ಸಂಘಟನೆಗಳು, ವಿರೋಧಪಕ್ಷಗಳು ಸರಕಾರದ ವಿರುದ್ಧ ಜೋರಾಗಿ ಧ್ವನಿಯೆತ್ತದಂತಹ ಭಯದ ವಾತಾವರಣವಿದೆ.

 ಆದರೆ ದುರದೃಷ್ಟಕ್ಕೆ ಇದು ಇಲ್ಲಿಗೇ ಮುಗಿಯಲಿಲ್ಲ. ಇದೀಗ ಈ ದೇಶದ ಖ್ಯಾತ ಉದ್ಯಮಿಗಳು ಕೂಡ ಸರಕಾರದ ವಿರುದ್ಧ ಮಾತನಾಡದಂತಹ ಸನ್ನಿವೇಶ ಸೃಷ್ಟಿಯಾಗಿದೆ. ಬಜಾಜ್ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ರಾಹುಲ್ ಬಜಾಜ್ ಅವರು ದೇಶದ ಗೃಹ ಸಚಿವರ ಮುಂದೆಯೇ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ನೋಟು ನಿಷೇಧ ಮತ್ತು ಆ ಬಳಿಕದ ಸರಕಾರದ ಆರ್ಥಿಕ ನೀತಿಗಳು ಹಂತಹಂತವಾಗಿ ಈ ದೇಶದ ಉದ್ಯಮದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತಿವೆ. ಆಟೋಮೊಬೈಲ್ ಉದ್ಯಮ ನೆಲಕಚ್ಚಿವೆ. ಜಿಡಿಪಿ ಕುಸಿಯುತ್ತಿದೆ. ದೇಶದ ಅರ್ಥವ್ಯವಸ್ಥೆ ಪಾತಾಳ ತಲುಪಿದೆ. ಇಷ್ಟಾದರೂ ಇದನ್ನು ದೊಡ್ಡ ಧ್ವನಿಯಲ್ಲಿ ಹೇಳಿ ಸರಕಾರವನ್ನು ಎಚ್ಚರಿಸುವಂತಹ ಎದೆಗಾರಿಕೆ ಉದ್ಯಮವಲಯದಲ್ಲಿ ಇಲ್ಲ. ಇದೀಗ ಅನಿವಾರ್ಯ ಎನ್ನುವಂತಹ ಸ್ಥಿತಿಯಲ್ಲಿ ರಾಹುಲ್ ಬಜಾಜ್ ಅವರು ‘‘ದೇಶದಲ್ಲಿ ಸರಕಾರವನ್ನು ಟೀಕಿಸಲು ಜನರು ಹೆದರುವಂತಹ ಸನ್ನಿವೇಶವಿದೆ’’ ಎಂದು ಹೇಳಿದ್ದಾರೆ. ಸರಕಾರದ ನೀತಿ ಇಲ್ಲಿನ ಕೈಗಾರಿಕೋದ್ಯಮವನ್ನು ಸರ್ವನಾಶ ಮಾಡುತ್ತಿದ್ದರೂ, ಅದರ ವಿರುದ್ಧ ಮಾತನಾಡುವುದಕ್ಕೆ ಉದ್ಯಮವಲಯ ಹಿಂಜರಿಯುತ್ತಿದೆ ಎನ್ನುವುದನ್ನು ಅವರು ಅಮಿತ್ ಶಾ ಮುಂದೆಯೇ ಹೇಳಿ ಬಿಟ್ಟರು. ಈ ಹಿಂದಿನ ಸರಕಾರವನ್ನು ಟೀಕಿಸುವ ಅವಕಾಶ ನಮಗಿತ್ತು. ಆದರೆ ಇಂದು ಆ ಪರಿಸ್ಥಿತಿಯಿಲ್ಲ ಎಂದು ಅವರು ಹೇಳಿದ್ದಾರೆ. ಅಂದರೆ, ಯಾವುದೇ ಉದ್ಯಮಿ ಸರಕಾರದ ವಿರುದ್ಧ ಮಾತನಾಡಿದ್ದೇ ಆದರೆ, ಆತನನ್ನು ತನಿಖಾ ಸಂಸ್ಥೆಗಳ ಮೂಲಕ ಬೆದರಿಸಲಾಗುತ್ತದೆ ಎನ್ನುವ ಅರ್ಥವನ್ನು ಇದು ನೀಡುತ್ತಿದೆ.

ಐಟಿ ಅಧಿಕಾರಿಗಳು ತಮ್ಮ ಅಧಿಕಾರವನ್ನು ಬೇಕಾಬಿಟ್ಟಿಯಾಗಿ ಬಳಸುತ್ತಿದ್ದಾರೆ ಎನ್ನುವ ಆರೋಪಗಳು ಇಂದು ನಿನ್ನೆಯದಲ್ಲ. ಕಾಫಿ ಡೇ ಮಾಲಕ ಸಿದ್ಧಾರ್ಥ ಅವರ ಆತ್ಮಹತ್ಯೆ ಬಳಿಕ, ಸರಕಾರದ ಈ ಬೆದರಿಕೆಯ ತಂತ್ರ ಹೇಗೆ ಸಣ್ಣ ಪುಟ್ಟ ಉದ್ದಿಮೆದಾರರನ್ನು ನಾಶ ಮಾಡುತ್ತಿದೆ ಎನ್ನುವುದು ಬೆಳಕಿಗೆ ಬಂದಿತ್ತು. ಬಜಾಜ್ ಅವರು ಹೀಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಿದ ಬೆನ್ನಿಗೇ ಅವರ ಜೊತೆಗೆ ಹಲವು ಉದ್ಯಮಿಗಳು ಧ್ವನಿಗೂಡಿಸಿದ್ದಾರೆ. ಈ ಕಳವಳವನ್ನು ಗಂಭೀರವಾಗಿ ತೆಗೆದುಕೊಂಡು ಅವರಲ್ಲಿ ಆತ್ಮವಿಶ್ವಾಸವನ್ನು ಬಿತ್ತಬೇಕಾದ ಸರಕಾರ ಮಾತ್ರ ಬಜಾಜ್ ಹೇಳಿಕೆಗೆ ಬೇರೆಯದೇ ಬಣ್ಣವನ್ನು ಹಚ್ಚುತ್ತಿದೆ. ಬಜಾಜ್ ಅವರನ್ನು ಸಂತೈಸಬೇಕಾದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ‘ಇಂತಹ ಹೇಳಿಕೆಗಳಿಂದ ದೇಶದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ’ ಎಂದು ಹೇಳಿದ್ದಾರೆ.

ಉದ್ಯಮಿಗಳು ಆತಂಕದ ಪರಿಸರದಲ್ಲಿ ಬದುಕುತ್ತಿರುವುದು ದೇಶದ ಹಿತಾಸಕ್ತಿಗೆ ಧಕ್ಕೆ ತರಬಹುದೇ ಹೊರತು, ಆ ಆತಂಕವನ್ನು ವ್ಯಕ್ತಪಡಿಸಿದ ಕಾರಣಕ್ಕೆ ಹೇಗೆ ದೇಶದ ಹಿತಾಸಕ್ತಿಗೆ ಹಾನಿಯಾಗುತ್ತದೆ ಎನ್ನುವುದನ್ನು ವಿತ್ತ ಸಚಿವರೇ ವಿವರಿಸಬೇಕು. ಇದೇ ಸಂದರ್ಭದಲ್ಲಿ ತನ್ನ ತಂದೆಯವರ ಧೈರ್ಯವನ್ನು ಶ್ಲಾಘಿಸುತ್ತಲೇ ಪುತ್ರ ರಾಜೀವ್ ಬಜಾಜ್ ‘‘ಇದೊಂದು ರೀತಿಯ ಭಂಡತನವೂ ಆದೀತು’’ ಎಂದು ಎಚ್ಚರಿಸಿದ್ದಾರೆ. ಅಂದರೆ ಇಂತಹ ಹೇಳಿಕೆಗಳಿಗೆ ಬಜಾಜ್ ಸಂಸ್ಥೆ ಬೆಲೆ ತೆರಬೇಕಾಗಿ ಬರಬಹುದು ಎನ್ನುವುದು ಅವರ ಆತಂಕವಾಗಿದೆ. ಜೊತೆಗೆ ಬಿಜೆಪಿಯ ಕೆಲವು ಮುಖಂಡರೂ ಬಜಾಜ್ ವಿರುದ್ಧ ಟೀಕೆಗಳನ್ನು ಮಾಡುತ್ತಾ ಬಜಾಜ್ ಅವರ ಆತಂಕ ನಿಜ ಎನ್ನುವುದಕ್ಕೆ ಸಾಕ್ಷಗಳನ್ನು ಒದಗಿಸುತ್ತಿದ್ದಾರೆ. ಬಜಾಜ್ ಸ್ಕೂಟರ್ ಭಾರತದ ಹೆಮ್ಮೆ. ಈ ದೇಶದ ಉದ್ಯಮ ಕ್ಷೇತ್ರದಲ್ಲಿ ಅದಕ್ಕೊಂದು ದೊಡ್ಡ ಇತಿಹಾಸವಿದೆ. ಎಲ್ಲ ಬೃಹತ್ ವಾಹನಗಳು ತತ್ತರಿಸಿ ಕೂತಿರುವಾಗ ಆ ಸ್ಕೂಟರ್ ಸರಕಾರವೆನ್ನುವ ಬುಲ್ಡೋಜರ್ ವಿರುದ್ಧ ಬುಸುಗುಟ್ಟಿದ್ದು, ಬಜಾಜ್‌ನ ಗುಣಮಟ್ಟವನ್ನು ಎತ್ತಿ ಹಿಡಿದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)