varthabharthi


ನಿಮ್ಮ ಅಂಕಣ

ಭಾರತೀಯ ಜನತಾ ಪಕ್ಷದ ಏಕರೂಪೀಕರಿಸುವ ಯೋಜನೆಗಳೇ ವಿಭಿನ್ನ ರಾಜಕೀಯ ಪ್ರಯೋಗಗಳ ಅಗತ್ಯವನ್ನು ಹುಟ್ಟುಹಾಕುತ್ತಿದೆ.

ಮಹಾರಾಷ್ಟ್ರ ರಾಜಕಾರಣದ ಪಲ್ಲಟಗಳು

ವಾರ್ತಾ ಭಾರತಿ : 4 Dec, 2019
ಕೃಪೆ: Economic and Political Weekly

ಮಹಾರಾಷ್ಟ್ರ ಶಾಸನ ಸಭಾ ಚುನಾವಣಾ ಫಲಿತಾಂಶಗಳು ಹೊರಬಿದ್ದ ಒಂದು ತಿಂಗಳ ನಂತರ ಸರಕಾರವೊಂದು ರಚನೆಯಾಗಿದೆ. ಹಾಲಿ ಇದ್ದ ರಾಜಕೀಯ ಸಂದರ್ಭವು ಸೃಷ್ಟಿಸಿದ ಅನಿವಾರ್ಯತೆಯಿಂದಾಗಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ತ್ರಿವಳಿ ಮೈತ್ರಿಕೂಟದ ಸರಕಾರ ಅಸ್ತಿತ್ವಕ್ಕೆ ಬಂದಿದೆ. ತಾಂತ್ರಿಕವಾಗಿ ನೋಡಿದರೆ ಚುನಾವಣಾ ಪೂರ್ವ ಮೈತ್ರಿಕೂಟವನ್ನು ರಚಿಸಿಕೊಂಡಿದ್ದ ಬಿಜೆಪಿ-ಶಿವಸೇನೆ ಕೂಟವು ಬಹುಮತವನ್ನು ಪಡೆದಿದ್ದರಿಂದ ಅವೆರಡೂ ಕೂಡಿ ಸರಕಾರವನ್ನು ರಚಿಸಬಹುದಾಗಿತ್ತು. ಆದರೆ ಆ ಎರಡೂ ಪಕ್ಷಗಳಿಗೆ ಮಾತ್ರ ಗೊತ್ತಿರಬಹುದಾದ ಕಾರಣಗಳಿಂದಾಗಿ ಆ ಮೈತ್ರಿಕೂಟ ತನ್ನ ಸರಕಾರವನ್ನು ರಚಿಸಲಾಗಲಿಲ್ಲ. ಆದರೆ ಅಧಿಕಾರಕ್ಕೆ ಬಂದಿರುವ ತ್ರಿವಳಿ ಕೂಟ ಸರಕಾರವು ಸಹ ಅಸಾಧಾರಣವಾದ ಮೈತ್ರಿಕೂಟವಾಗಿದೆ.

ಏಕೆಂದರೆ ಈ ಕೂಟದ ಸದಸ್ಯ ಪಕ್ಷಗಳು ಈವರೆಗೆ ಪರಸ್ಪರ ಬದ್ಧ ರಾಜಕೀಯ ವೈರಿಗಳಾಗಿದ್ದವು. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಏಕರೂಪೀಕರಣವನ್ನು ಹೇರುವ ಧೋರಣೆಗಳ ಪ್ರವೃತ್ತಿಗೆ ಪ್ರತಿಕ್ರಿಯಾ ರೂಪದಲ್ಲಿ ಈ ಮೈತ್ರಿಕೂಟವು ಹುಟ್ಟಿಕೊಂಡಿದೆ. ಆದ್ದರಿಂದ ಈ ಬೆಳವಣಿಗೆಯನ್ನು ಮತ್ತೊಂದು ಅವಕಾಶವಾದಿ ನಡೆಯೆಂದು ಸಿನಿಕವಾಗಿ ನೋಡುವುದರಿಂದ ಅಥವಾ ಇತರರಿಗಿಂತ ಪರಿಶುದ್ಧ ರಾಜಕೀಯ ನಿಲುವು ತೆಗೆದುಕೊಳ್ಳುತ್ತಾ ಈ ಬೆಳವಣಿಗೆಯನ್ನು ಸೈದ್ಧಾಂತಿಕ ಶರಣಾಗತಿ ಎಂದು ಭಾವಿಸುವುದರಿಂದ ಎದುರುಗಿರುವ ರಾಜಕೀಯ ಸಂದರ್ಭವನ್ನು ಕಡೆಗಣಿಸಿದಂತಾಗುತ್ತದೆ. ಎರಡನೆಯ ನಿಲುವನ್ನು ವ್ಯಕ್ತಪಡಿಸುವವರಲ್ಲಿ ಒಂದು ವರ್ಗವು ಮುಂದಿಡುತ್ತಿರುವ ಕಾಳಜಿ ಮತ್ತು ಕಳವಳಗಳಲ್ಲಿ ಹುರುಳಿಲ್ಲವೆಂದಲ್ಲ. ಆದರೆ ಸಕ್ರಿಯ ರಾಜಕಾರಣವೂ ನಿರ್ವಾತ ಸ್ಥಿತಿಯನ್ನು ತಲುಪಲು ಸಾಧ್ಯವಿಲ್ಲವಾದ್ದರಿಂದ ಪ್ರಾಯೋಗಿಕ ಪರ್ಯಾಯಗಳನ್ನು ಒದಗಿಸಬೇಕಾಗುತ್ತದೆ. ಅಂತಹ ಪ್ರಾಯೋಗಿಕ ಪರ್ಯಾಯಗಳನ್ನು ಒದಗಿಸದಿದ್ದರೆ ಇತರ ಶಕ್ತಿಗಳು ಆ ನಿರ್ವಾತವನ್ನು ತುಂಬುತ್ತವೆ. ಮಹಾರಾಷ್ಟ್ರದ ಸಂದರ್ಭದಲ್ಲಿ ಅಂತಹ ನಿರ್ವಾತ ಪರಿಸ್ಥಿತಿಯಿಂದ ಬಿಜೆಪಿಗೆ ಅಧಿಕಾರ ದಕ್ಕುತ್ತಿತ್ತು. ಅಂತಹ ಒಂದು ಸಾಧ್ಯತೆಯು ಕೇವಲ ಈ ಮೂರು ಪಕ್ಷಗಳ ಆಸಕ್ತಿಗೆ ಮಾತ್ರವಲ್ಲದೆ ಬಹುಪಾಲು ಸಂತ್ರಸ್ತ ಜನತೆಯ ಹಿತಾಸಕ್ತಿಯ ಪರವಾಗಿಯೂ ಇಲ್ಲದಿದ್ದುದೇ ಈ ತ್ರಿವಳಿ ಮೈತ್ರಿಕೂಟಕ್ಕೆ ಸಾಕಷ್ಟು ಸಮರ್ಥನೆಯನ್ನು ಒದಗಿಸುತ್ತದೆ.

ಚುನಾವಣಾ ಫಲಿತಾಂಶಗಳು ಹೊರಬಿದ್ದ ನಂತರದ ಸನ್ನಿವೇಶದಲ್ಲಿ ಈ ತ್ರಿವಳಿ ಮೈತ್ರಿಕೂಟದ ಪಕ್ಷಗಳು ತಟಸ್ಥರಾಗುಳಿಯದೆ ಎನ್‌ಸಿಪಿ ಅಧ್ಯಕ್ಷರಾದ ಶರದ್ ಪವಾರ್ ನೇತೃತ್ವದಲ್ಲಿ ಸಕ್ರಿಯವಾಗಿ ಮಧ್ಯಪ್ರವೇಶ ಮಾಡುವ ನಡೆಯನ್ನು ಅನುಸರಿಸಿದರು. ಯಾವುದೇ ರಾಜಕೀಯ ಸಂಕಥನಗಳನ್ನು ತನ್ನ ಪರವಾಗಿ ಮಾರ್ಪಡಿಸಿಕೊಳ್ಳುವಷ್ಟು ಸಾಮರ್ಥ್ಯವನ್ನು ಆಡಳಿತರೂಢ ಪಕ್ಷವು ಹೊಂದಿರುವಾಗ ಇಂತಹ ಸಕ್ರಿಯ ಮಧ್ಯಪ್ರವೇಶಗಳು ಮಾತ್ರ ಆಡಳಿತರೂಢರನ್ನು ಬಿಕ್ಕಟ್ಟಿಗೆ ದೂಡಬಲ್ಲದಾಗಿತ್ತು. ಒಂದು ವಿರೋಧ ಪಕ್ಷವಾಗಿ ಕಾಂಗ್ರೆಸ್ ಪಕ್ಷದ ಈವರೆಗಿನ ಧೋರಣೆಯು ನಿಷ್ಕ್ರಿಯತೆ ಮತ್ತು ಜಡತೆಯಿಂದಲೇ ಕೂಡಿದೆ. ಆದ್ದರಿಂದಲೇ ಅದು ಎದುರಿಗಿರುವ ಸಂದರ್ಭವನ್ನು ಬಳಸಿಕೊಂಡು ತಾನೇ ರಾಜಕೀಯ ಅಜೆಂಡಾವನ್ನು ನಿಗದಿ ಪಡಿಸುವ ಅಥವಾ ಮಾತುಕತೆಯ ಶರತ್ತುಗಳನ್ನು ರೂಪಿಸುವ ಮುಂದೊಡಗನ್ನು ತೆಗೆದುಕೊಳ್ಳಲಿಲ್ಲ. ಆದ್ದರಿಂದಲೇ ಆ ಅವಕಾಶವನ್ನು ಆಳುವ ಪಕ್ಷವು ಬಳಸಿಕೊಂಡಿತು. ಪ್ರಾಯಶಃ ಶರದ್ ಪವಾರ್ ಸಲಹೆಯ ಮೇರೆಗೆ ಕಾಂಗ್ರೆಸ್ ಪಕ್ಷವು ತನ್ನ ತಂತ್ರವನ್ನು ಬದಲಿಸಿಕೊಂಡು ವಿಶಾಲವಾದ ರಾಜಕೀಯ ಗುರಿಯನ್ನು ಸಾಧಿಸಲು ಈ ಸಂದರ್ಭದಲ್ಲಿ ಕಿರಿಯ ಪಾಲುದಾರನ ಪಾತ್ರವಹಿಸಲು ಒಪ್ಪಿಕೊಂಡಿರಬಹುದು. ಬಿಜೆಪಿಯು ತನ್ನ ಒಕ್ಕೂಟ ವಿರೋಧಿ ಮತ್ತು ಏಕರೂಪಿ ಧೋರಣೆಗಳಿಗೆ ಅನುಗುಣವಾಗಿ ರಾಜಕೀಯವಾಗಿ ಹೆಚ್ಚೆಚ್ಚು ಪೆಡಸಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ರಾಜಕೀಯ ಕಾರ್ಯತಂತ್ರಗಳಲ್ಲಿ ಇದೇ ರೀತಿಯ ಸಡಿಲತೆಯನ್ನು ಮುಂದುವರಿಸುವುದಾದರೆ ಆಳುವ ಪಕ್ಷದ ಆಧಿಪತ್ಯದ ವಿರುದ್ಧ ವಿಶಾಲ ಐಕ್ಯರಂಗಗಳನ್ನು ಕಟ್ಟುವುದರಲ್ಲಿ ಮುಂದೆ ಪ್ರಮುಖ ಪಾತ್ರ ವಹಿಸಬಹುದು.

ಆಳುವ ಪಕ್ಷದ ಆಧಿಪತ್ಯದಲ್ಲಿ ಬಿರುಕುಗಳನ್ನು ತರಲೂ ಸಹ ಬಹುಪಕ್ಷೀಯತೆ ಯನ್ನು ಗೌರವಿಸುವುದು ಮತ್ತು ವೈವಿಧ್ಯತೆಯನ್ನು ಒಳಗೊಳ್ಳುವುದು ಅತ್ಯಗತ್ಯವಾಗಿದೆ. ಏಕೆಂದರೆ ಪ್ರತಿಸವಲೇ ಇಲ್ಲವೆಂಬಂತೆ ಸ್ಥಾಪಿತವಾಗಿರುವ ಆಳುವ ಪಕ್ಷದ ಆಧಿಪತ್ಯವು ಈ ಮೌಲ್ಯಗಳ ನಿರಾಕರಣೆಯನ್ನೇ ಆಧರಿಸಿದೆ. ವಿವಿಧ ಬಗೆಯ ಅಸಮಾನತೆಗಳನ್ನೂ ಹಾಗೂ ವೈವಿಧ್ಯತೆಗಳನ್ನೂ ಒಳಗೊಂಡಿರುವ ಭಾರತದಂತಹ ದೇಶದಲ್ಲಿ ಆಳುವ ಪಕ್ಷದ ಯೋಜನೆಯನ್ನು ಯಾವುದಾದರೊಂದು ಬಗೆಯ ಸರ್ವಾಧಿಕಾರವನ್ನೂ ಜಾರಿ ಮಾಡದೆ ಸಾಧಿಸಲಾಗುವುದಿಲ್ಲ. ಆದರೆ ಒಂದು ಪ್ರಜಾತಾಂತ್ರಿಕ ಚೌಕಟ್ಟಿನೊಳಗೇ ಇಂತಹ ಸರ್ವಾಧಿಕಾರಗಳನ್ನು ಜಾರಿಗೊಳಿಸುವುದಕ್ಕೆ ಹಲವಾರು ಮಿತಿಗಳಿವೆ ಮತ್ತು ಆಳುವ ಪಕ್ಷವು ಮಾಡುವ ಅಂತಹ ಪ್ರಯತ್ನಗಳು ಕೆಲವೊಮ್ಮೆ ಹೀನಾಯವಾಗಿ ಸೋಲುತ್ತವೆ.

ಮಹಾರಾಷ್ಟ್ರದಲ್ಲಿ ನಡೆಸಿದಂತೆ ಕಳ್ಳ ಮಾರ್ಗದಲ್ಲಿ ಅಧಿಕಾರ ಹಿಡಿಯಲು ನಡೆಸಿದ ಪ್ರಯತ್ನಗಳೂ ಸಹ ಅದೇ ಮಿತಿಯನ್ನು ಸಾಬೀತು ಮಾಡಿದೆ. ಅಧಿಕಾರವನ್ನು ಪಡೆದುಕೊಳ್ಳಲು ಮತ್ತು ಅಧಿಕಾರದಲ್ಲುಳಿಯಲು ಏನು ಬೇಕಾದರೂ ಮಾಡಲು ಸಿದ್ಧವೆಂಬ ಖ್ಯಾತಿಯ ಮರುಳಿಂದ ರಾತ್ರೋರಾತ್ರಿ ರಾಜಕೀಯ ತಂತ್ರಗಾರಿಕೆ ನಡೆಸಿ 2019ರ ನವೆಂಬರ್ 23ರಂದು ಬಿಜೆಪಿಯ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಆಗ ಬಿಜೆಪಿಯ ಕೇಂದ್ರದ ಹಾಗೂ ರಾಜ್ಯದ ನಾಯಕತ್ವವು ತಮ್ಮ ಸಾಮರ್ಥ್ಯಕ್ಕೂ ಮೀರಿದ್ದನ್ನು ಮಾಡುತ್ತಿದ್ದೇವೆಂಬ ಅರಿವನ್ನು ಹೊಂದಿರಲಿಲ್ಲ. ತಮ್ಮಲ್ಲಿರುವ ಅಪಾರ ಧನಬಲ ಹಾಗೂ ಅಧಿಕಾರದಿಂದ ಒತ್ತಡಗಳನ್ನು ಹೇರಿ ವಿರೋಧ ಪಕ್ಷಗಳ ಸದಸ್ಯರ ಐಕ್ಯವನ್ನು ಮುರಿದು, ಒಡಕನ್ನು ಸೃಷ್ಟಿಸಬಹುದೆಂದೂ ಮತ್ತದನ್ನು ಯಾರೂ ಪ್ರಶ್ನಿಸಲಾರರೆಂದು ಅದು ಭಾವಿಸಿದ್ದಿರಬಹುದು. ಆದರೆ ಒಂದು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಜನರ ನಡುವೆ ಬೇರುಬಿಟ್ಟಿರುವ ರಾಜಕೀಯ, ಬಲವಾದ ಸಾಮಾಜಿಕ ನೆಲೆ ಮತ್ತು ಬಹಳಷ್ಟು ಕಾಲ ಆಳುವ ಸರಕಾರದ ಭಾಗವಾಗಿದ್ದರಿಂದ ಕಟ್ಟಿಕೊಂಡಿರುವ ಸಂಬಂಧ ಜಾಲಗಳು ಒಟ್ಟುಸೇರಿದರೆ ಆಳುವ ಪಕ್ಷದ ತಂತ್ರಗಳಿಗೆ ಪ್ರತಿತಂತ್ರಗಳನ್ನೂ ರೂಪಿಸಬಹುದು. ಮಾತ್ರವಲ್ಲದೆ ಕೆಲವೊಮ್ಮೆ ಆಳುವ ಪಕ್ಷದ ಹತಾಶ ತಂತ್ರಗಳನ್ನು ಸೋಲಿಸಲೂಬಹುದೆಂಬುದನ್ನು ಇದು ಸಾಬೀತುಮಾಡಿದೆ.

ಬಿಜೆಪಿ ನಾಯಕತ್ವದ ಹತಾಷೆಯೂ ಸಹ ಅಧಿಕಾರದಲ್ಲುಳಿಯಲು ಅದು ಯಾವರೀತಿ ಪ್ರತಿಯೊಂದು ಹಂತದಲ್ಲೂ ತನ್ನೆಲ್ಲಾ ಅಧಿಕಾರವನ್ನು ಬಳಸಬೇಕಾಗಿದೆಯೆಂಬುದನ್ನೂ ಹಾಗೂ ಅದನ್ನು ಸೋಲಿಸಲು ಅಗತ್ಯವಿರುವ ಪರಿಣಿತಿಯ ಪ್ರಯತ್ನಗಳ ಅಗತ್ಯವನ್ನೂ ಒತ್ತಿಹೇಳುತ್ತದೆ. ಆಳುವ ಪಕ್ಷದ ಪ್ರಯತ್ನಗಳನ್ನು ಸೋಲಿಸುವಲ್ಲಿ ಸಫಲವಾದ ತ್ರಿವಳಿ ಮೈತ್ರಿಕೂಟವು ಈಗ ತನ್ನ ನೀತಿಗಳು ಮತ್ತು ಕಾರ್ಯಕ್ರಮಗಳ ಮೂಲಕ ಜನರೆದುರು ತನ್ನ ವಿಶ್ವಾಸಾರ್ಹತೆಯನ್ನು ಸಾಬೀತುಮಾಡಿಕೊಳ್ಳಬೇಕಿದೆ. ಹಾಗೆ ಮಾಡುವಾಗ ಸಂತ್ರಸ್ತ ಜನತೆಗೆ ಕೂಡಲೇ ತುರ್ತು ಪರಿಹಾರವನ್ನು ಒದಗಿಸಬೇಕೆಂಬ, ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ಉಲ್ಲೇಖವಾಗಿರುವ, ನೀತಿಗಳಿಗೆ ಒಳಪಟ್ಟು ಕೆಲಸ ನಿರ್ವಹಿಸಬೇಕಿದೆ. ಅದರ ಜೊತೆಗೆ ಬಿಜೆಪಿ ಹಾಗೂ ಕೆಲವು ಮಾಧ್ಯಮಗಳು ರೂಪಿಸುವ ಸಂಚಿಗೆ ಬಲಿಯಾಗದೆ ಪರ್ಯಾಯವನ್ನು ಒದಗಿಸುವ ಪ್ರಧಾನ ಕರ್ತವ್ಯದಿಂದ ದಾರಿತಪ್ಪದಂತೆ ನಡೆಯಬೇಕಿದೆ. ಸೈದ್ಧಾಂತಿಕವಾಗಿ ತದ್ವಿರುದ್ಧವಾದ ಧೋರಣೆಯನ್ನು ಹೊಂದಿರುವ ಶಿವಸೇನೆಯೊಂದಿಗೆ ಅಧಿಕಾರ ರಚಿಸಿರುವ ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೇಲೆ ಸೈದ್ಧಾಂತಿಕ ಸ್ಪಷ್ಟತೆಯನ್ನು ಅಭಿವ್ಯಕ್ತಿಸುತ್ತಾ ಶಿವಸೇನೆಯ ಮೇಲೆ ಪ್ರಭಾವ ಬೀರುವ ಹಾಗೂ ತಾನೇ ರಾಜಕೀಯ ಸಂಕಥನಗಳ ಕೇಂದ್ರೀಯತೆಯನ್ನು ಪಡೆದುಕೊಳ್ಳುವ ಗುರುತರವಾದ ಜವಾಬ್ದಾರಿಯಿದೆ. ಇದನ್ನು ಸಾಧಿಸಬೇಕೆಂದರೆ ಸಿದ್ಧಾಂತದಲ್ಲಿ ದೃಢತೆ ಮತ್ತು ತಂತ್ರಗಳಲ್ಲಿ ಸಡಿಲತೆ ಎಂಬ ಸೂತ್ರವನ್ನು ಸಮರ್ಥವಾಗಿ ಅನುಷ್ಠಾನಕ್ಕೆ ತರುವುದು ನಿರ್ಣಾಯಕವಾಗಿರುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)