varthabharthi

ಅನುಗಾಲ

ಕರ್ನಾಟಕ ಪಂಚತಂತ್ರ

ವಾರ್ತಾ ಭಾರತಿ : 5 Dec, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಅಧಮಾಧಮ ಮೌಲ್ಯಗಳ ಸಾಕಾರಗಳಂತೆ ಕಂಗೊಳಿಸುವ ಅಭ್ಯರ್ಥಿಗಳು ತಮ್ಮ ಪಕ್ಷಗಳು ಎದುರಾಳಿಯೆದುರು ನಿಲ್ಲಿಸಿದ ಶಿಖಂಡಿಗಳಂತೆ ಇರುತ್ತಾರೆ. ಆದರೆ ಎದುರು ನಿಂತವರು ಭೀಷ್ಮರಲ್ಲದ್ದರಿಂದ ನಾಚುವ ಪ್ರಶ್ನೆಯೇ ಇಲ್ಲ. ಯುದ್ಧ ನಡೆದೇ ನಡೆಯುತ್ತದೆ. ಕೊನೆಗೆ ಉಳಿಯುವುದು ಮಾನಹೀನ ಹೆಣಗಳ ರಾಶಿ ಮಾತ್ರ.


ಕರ್ನಾಟಕದಲ್ಲಿ ಇದೀಗ ಅನರ್ಹರ ಮತ್ತು ಅರ್ಹರ ನಡುವಣ ಆಯ್ಕೆಯ ಚುನಾವಣೆ ನಡೆಯಲಿದೆ. ಈ ದೇಶ ಅನೇಕ ರಾಜಕೀಯ ಪ್ರಹಸನಗಳನ್ನು ಕಂಡಿದೆ. ಆದರೆ ಇದೀಗ ನಾವು ನೋಡುತ್ತಿರುವುದು ಮತ್ತು ಎದುರುನೋಡುತ್ತಿರುವುದು ಪ್ರಾಯಃ ನಮ್ಮ ತಲೆಮಾರಿನ ಅತ್ಯಂತ ಹಾಸ್ಯಾಸ್ಪದ ಪ್ರಸಂಗವೊಂದನ್ನು. ಅನರ್ಹತೆಯನ್ನು ಎತ್ತಿಹಿಡಿದ ಸರ್ವೋಚ್ಚ ನ್ಯಾಯಾಲಯವು ಅವರಿಗೆ ಮರುಸ್ಪರ್ಧೆಯ ಅವಕಾಶವನ್ನು ನೀಡಿದ ಅಡ್ಡಗೋಡೆಯ ಮೇಲಣ ದೀಪದಿಂದಾಗಿ ಕರ್ನಾಟಕಕ್ಕೆ ಅನರ್ಹರು ಗೆದ್ದರೆ ಇದೊಂದು ದುರಂತವಾಗಿ ಮತ್ತು ಸೋತರೆ ವ್ಯಂಗ್ಯವಾಗಿ, ಅನರ್ಹರ ಯೋಗ್ಯತೆ-ಅಯೋಗ್ಯತೆಯ ಪ್ರಶ್ನೆಗಿಂತಲೂ ಜನರ ಯೋಗ್ಯತೆ-ಅಯೋಗ್ಯತೆಯ ಪ್ರಶ್ನೆಯಾಗಿ, ಉಳಿಯಲಿದೆ. ಯಾರೇ ಆಯ್ಕೆಯಾದರೂ ಇದು ಸ್ವರ್ಗದಲ್ಲಿ ನಡೆದ/ನಡೆಯುವ ಮದುವೆಗಳಂತೆ ಬಾಳಿಯಾವು.

ಯಾವುದೇ ದೇಶದ ಜನರು ತಮ್ಮ ಯೋಗ್ಯತೆಗೆ ತಕ್ಕಂತಹ ಸರಕಾರವನ್ನು ಪಡೆಯುತ್ತಾರಂತೆ. ಇದಕ್ಕೆ ಪ್ರಸಕ್ತ ದೇಶದಲ್ಲಿ, ರಾಜ್ಯದಲ್ಲಿ ನಡೆಯುವ ಮಾನಹೀನ ವಿದ್ಯಮಾನಗಳೇ ಸಾಕ್ಷಿ. ನಮ್ಮ ಜನರು ಎಷ್ಟೊಂದು ಭ್ರಷ್ಟರಾಗಿದ್ದಾರೆಂದರೆ ಜನರು ಈ ಚುನಾವಣೆಯಿಂದಾಗಿ ಆಗಬಹುದಾದ ತೆರಿಗೆ ಹಣದ ಕೋಟಿಗಟ್ಟಲೆ ವೆಚ್ಚದ ಬಗ್ಗೆ ಪ್ರಶ್ನಿಸುವುದೇ ಇಲ್ಲ. ಚುನಾವಣೆ ನಡೆದರೆ ತಮಗೆ ಲೂಟಿಹೊಡೆಯಲು ಎಷ್ಟು ಸಿಗಬಹುದು ಎಂಬ ಲೆಕ್ಕಾಚಾರದ ಹೊರತಾಗಿ ಇನ್ನೇನೂ ರಜತಪರದೆಯಲ್ಲಿ ಕಾಣಿಸುವುದೇ ಇಲ್ಲ. ಅಭ್ಯರ್ಥಿಗಳಿಗೆ ಈ ಚುನಾವಣೆಗೆ ಕಾರಣ ಯಾರು? ಎಂಬುದನ್ನು ಪ್ರಶ್ನಿಸುವುದಿಲ್ಲ. ಗಂಡ ಯಾವಾಗ ಹೇಗೆ ಬಂದರೂ ಕಾಲುತೊಳೆಯುವುದಕ್ಕೆ ನೀರು ಕೊಟ್ಟು ಆತನನ್ನು ಸತ್ಕರಿಸುವುದೇ ತನ್ನ ಕರ್ತವ್ಯವೆಂಬಂತೆ ನಡೆದುಕೊಳ್ಳುವ ಹಳೇಕಾಲದ ವಿಧೇಯ ಪತ್ನಿಯಂತೆ ಅಭ್ಯರ್ಥಿಗಳನ್ನು ಹಾಡಿಹೊಗಳುವವರೇ ಹೆಚ್ಚು. ಈ ಚುನಾವಣೆಯಲ್ಲಿ ಒಬ್ಬರಾದರೂ ರಾಜ್ಯದ ಹಿತವನ್ನು, ಜನರ ಹಿತವನ್ನು ಕುರಿತು ಚಿಂತಿಸಿದಂತಿಲ್ಲ. ಯಾರು ಗೆದ್ದರೆ ತನಗೇನು ಲಾಭ, ತನಗೇನು ಅಧಿಕಾರ ಬಂದೀತು ಮತ್ತು ಅದರಿಂದ ಪ್ರಜೆಗಳನ್ನು ಹೇಗೆ ಮತ್ತಷ್ಟು ಹಿಂಡಬಹುದು ಎಂಬ ರಾಕ್ಷಸನಗೆಯನ್ನೂ ಜನರು ಮೆಚ್ಚಿಕೊಳ್ಳುತ್ತಾರೆಂದರೆ ಅವರ ಹಣೆಯಲ್ಲಿ ಸುಡುಗಾಡನ್ನೇ ಬರೆದಿದ್ದಾರೆಂದರ್ಥ.

ಈ ಬಾರಿ ಚುನಾವಣೆಯ ಕಣದಲ್ಲಿರುವವರ ಕುರಿತು ಹೇಳುವುದಕ್ಕೇನೂ ಉಳಿದಿಲ್ಲ. ಅವರ ಕುರಿತು ಇವರು, ಇವರ ಕುರಿತು ಅವರು ಸಾರ್ವಜನಿಕವಾಗಿ ಹೇಳುವುದರಿಂದ ‘ಹನಿಟ್ರ್ಯಾಪ್’ ಮುಖ್ಯವಾಗುವುದೇ ಇಲ್ಲ. ಊರಿನ ವೇಶ್ಯೆಯರಿಬ್ಬರು ಜಗಳಾಡಿದರೆ ಮಹನೀಯರೆನಿಸಿಕೊಂಡ ಊರಜಾರರ ಮಾನ ಹರಾಜಾಗುತ್ತದೆಂಬ ನಂಬಿಕೆಯಿದೆ. ಆದರೆ ಇಲ್ಲಿ ನೇರವಾಗಿ ಮಾನಹಾನಿಯಾಗುವುದು ಅಭ್ಯರ್ಥಿಗಳು ಮತ್ತು ಅವರ ಪರ-ವಿರೋಧ ಪ್ರಚಾರ ಮಾಡುವ ರಾಜಕಾರಣಿಗಳು ಮಾತ್ರವಲ್ಲ; ಮತದಾರರ ಮತ್ತು ಅವರು ಪ್ರತಿನಿಧಿಸುವವರ ಮಾನ ಇತಿಹಾಸದ ಪುಟಗಳಲ್ಲಿ ಕಳೆದುಹೋಗುತ್ತದೆ. ಅಧಮಾಧಮ ಮೌಲ್ಯಗಳ ಸಾಕಾರಗಳಂತೆ ಕಂಗೊಳಿಸುವ ಅಭ್ಯರ್ಥಿಗಳು ತಮ್ಮ ಪಕ್ಷಗಳು ಎದುರಾಳಿಯೆದುರು ನಿಲ್ಲಿಸಿದ ಶಿಖಂಡಿಗಳಂತೆ ಇರುತ್ತಾರೆ. ಆದರೆ ಎದುರು ನಿಂತವರು ಭೀಷ್ಮರಲ್ಲದ್ದರಿಂದ ನಾಚುವ ಪ್ರಶ್ನೆಯೇ ಇಲ್ಲ. ಯುದ್ಧ ನಡೆದೇ ನಡೆಯುತ್ತದೆ. ಕೊನೆಗೆ ಉಳಿಯುವುದು ಮಾನಹೀನ ಹೆಣಗಳ ರಾಶಿ ಮಾತ್ರ. ಹೋಗಲಿ, ಪಕ್ಷಗಳಿಗಾದರೂ ಯಾವುದಾದರೂ ಬದ್ಧತೆಯಿದೆಯೇ ಎಂದರೆ ಅದೂ ಇಲ್ಲ. ಪ್ರಮುಖ ಮೂರು ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಗಳು ಲಂಗೋಟಿ ಬಿಚ್ಚಿಕೊಂಡು ಸುತ್ತುತ್ತ ಮಾನವಿದ್ದರೆ ಅವರವರ ಮನೆಗಳ ಬಾಗಿಲುಗಳನ್ನು ಮುಚ್ಚಿಕೊಳ್ಳಿ ಎಂದು ಪ್ರಜೆಗಳಿಗೆ ಸವಾಲು ನೀಡಿದವರಂತೆ ಪ್ರಚಾರ ಮಾಡುತ್ತಿವೆ. ಹೀಗಾಗಿ ಮಾನವಂತ ಸಮಾಜವು ಅಘೋಷಿತ ಬಂದ್ ಆಚರಿಸುತ್ತಿದೆ. ನಾಲ್ಕು ಜನರಿಗಿಂತ ಹೆಚ್ಚು ಮಂದಿ ರಸ್ತೆಯಲ್ಲಿ ಅಡ್ಡಾಡದಿರುವುದಕ್ಕೆ ಯಾವ 144ನೇ ಸೆಕ್ಷನಿನನ್ವಯ ಪ್ರತಿಬಂಧಕಾಜ್ಞೆ, ನಿಷೇಧಾಜ್ಞೆಯೂ ಬೇಕಿಲ್ಲ. ಏಕೆಂದರೆ ಮಾನವ(ಂತ)ರು ರಸ್ತೆಯಲ್ಲಿ ಸುತ್ತುವಂತೆಯೇ ಇಲ್ಲ. ಮನುಷ್ಯರಲ್ಲದಿರುವವರಿಗೆ ಬೀಡಾಡಿ ದನಗಳ, ಬೀದಿ ನಾಯಿಗಳ ಸ್ಥಾನವೇ ಇರುವುದರಿಂದ ಅವರಿಗೆ ಈ ಕಾನೂನು ಅನ್ವಯಿಸುವುದಿಲ್ಲ.

ಆದ್ದರಿಂದ ಈ ಚುನಾವಣೆಯು ಒಂದು ರೀತಿ ಮಾನಹೀನತೆಯ ಸರ್ಟಿಫಿಕೇಟ್ ಕೋರ್ಸ್. ಪಡೆಯುವವರಿಗೆ ಉಚಿತ ಅರ್ಜಿಗಳು ಮತಪತ್ರಗಳೊಂದಿಗೆ ಲಭ್ಯ. ಪಾಸೊ ನಪಾಸೋ ಚುನಾವಣೆಯ ಫಲಿತಾಂಶದೊಂದಿಗೆ ಲಭ್ಯ.

ಇಷ್ಟಾದರೂ ಸಾಂವಿಧಾನಿಕ ಹುದ್ದೆಯಲ್ಲಿರುವವರು, ಸರಕಾರದ ಹೊಣೆ ಹೊತ್ತವರು ಒಂದಿಷ್ಟು ಲಜ್ಜೆಯನ್ನು ಪ್ರದರ್ಶಿಸಿಯಾರೆಂದು ಊಹಿಸಿದರೆ ಅಲ್ಲೂ ಶೂನ್ಯಸಂಪಾದನೆ. ಕರ್ನಾಟಕದ ಸಕಲ ಹಿಂದೂ ಸಮಾಜದ ಪ್ರತಿನಿಧಿಗಳಂತೆ ವ್ಯವಹರಿಸಿಕೊಂಡಿದ್ದ ಭಾಜಪದ ನಾಯಕರು ಈಗ ತಮ್ಮ ತಮ್ಮ ಜಾತಿಯ ಜಪ ಮಾಡುತ್ತಿದ್ದಾರೆ. ಒಂದು ರೀತಿಯಲ್ಲಿ ಇದು ಎಲ್ಲ ಪಕ್ಷಗಳ ಜೀವಾಳ. ಹೇಗೆ ನೋಡಿದರೂ ಜಾತಿಯೆಂಬುದೊಂದಿಲ್ಲದಿದ್ದರೆ ಜಾತೀಯತೆಯೂ ಇಲ್ಲ; ಜಾತ್ಯತೀತತೆೆಯೂ ಇಲ್ಲ. ಎರಡು ಪದಗಳಿಗೆ ಧಾತು ಜಾತಿಯೇ!

ಕರ್ನಾಟಕದ ಮುಖ್ಯಮಂತ್ರಿಗಳಂತೂ ಎಲ್ಲಿ ತನ್ನ ಅಧಿಕಾರದ ಹೊಕ್ಕಳುಬಳ್ಳಿ ಕಡಿದುಹೋಗುತ್ತದೋ ಎಂಬಂತೆ ಅದನ್ನು ಕೈಯಲ್ಲಿ ಹಿಡಿದುಕೊಂಡೇ ಓಡಾಡುತ್ತಿದ್ದಾರೆ. ಮಾಧ್ಯಮಗಳಲ್ಲಿ ಬಂದ ಈ ಅಮೃತ ವಾಣಿ ನಮ್ಮ ಸನ್ಮಾನ್ಯ ಮುಖ್ಯಮಂತ್ರಿಗಳದ್ದು: ‘‘ಈ ಸರಕಾರ ಪೂರ್ಣಾವಧಿಯ ವರೆಗೆ ನನ್ನ ವೀರಶೈವ-ಲಿಂಗಾಯತ ಸಮುದಾಯದವರ ಒಂದೂ ಮತ ಬೇರೆ ಪಕ್ಷಗಳಿಗೆ ಹೋಗಬಾರದು. ಯಾವುದೇ ವ್ಯಾಮೋಹಕ್ಕೆ ಬಲಿಯಾಗದೇ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕು.’’

ಅಖಿಲ ಜೀವರಾಶಿಗಳ ರಕ್ಷಕರಂತೆ ಸಂವಿಧಾನದ ಹೆಸರಿನಲ್ಲಿ ಪ್ರಮಾಣಮಾಡಿ ಅಧಿಕಾರಕ್ಕೆ ಬಂದವರು ಈಗ ಹೇಳುವ ಮಾತುಗಳನ್ನು ಕೇಳಿದರೆ ‘ಎನ್ನ ಕಿವುಡನ ಮಾಡಯ್ಯೆ’ ಎಂದು ಗೋಗರೆಯುವುದರ ಹೊರತು ಅನ್ಯ ಮಾರ್ಗವಿಲ್ಲ.

ತಾನು ಹೀಗೆ ಹೇಳಿಲ್ಲವೆಂದು ನಿರಾಕರಿಸುವ ಕೆಟ್ಟಚಾಳಿಯಿಂದ ಮುಖ್ಯಮಂತ್ರಿಗಳು ಮುಕ್ತರಲ್ಲವಾದ್ದರಿಂದ ಅವರ ನಿರಾಕರಣವನ್ನು ನಿರೀಕ್ಷಿಸಿಯೂ ಈ ಮಾತುಗಳ ಗುಣಾವಗುಣಗಳನ್ನು ಅಳೆಯಬಹುದು. ಗುಣವೇನು ಬಂತು? ಕಾಯಿಲೆಯನ್ನು ಸೃಷ್ಟಿಸುವ ಅವಗುಣವಿದು. ‘ಈ ಸರಕಾರ’ ಎಂದರೆ ಅವರ ಸದ್ಯದ ಭಾಜಪ ಸರಕಾರ. ‘ನನ್ನ ವೀರಶೈವ-ಲಿಂಗಾಯತ ಸಮುದಾಯ’ ಎಂದರೆ ಅವರೇ ಹುಟ್ಟುಹಾಕಿದ ಮತಾಂಧ ಹಿಂದೂ ಧರ್ಮದೊಳಗಿದ್ದೇ ಅದರ ಹೊರತಾದ ಅಸ್ತಿತ್ವವನ್ನು ಸ್ಥಾಪಿಸಿದ ಎಂದರ್ಥ. ‘ಒಂದೂ ಮತ ಬೇರೆ ಪಕ್ಷಗಳಿಗೆ ಹೋಗಬಾರದು’ ಎಂಬುದನ್ನು ಸಾಂದರ್ಭಿಕವಾಗಿ ‘ಒಂದೂ ಮತ ಬೇರೆ ಜಾತಿಗಳಿಗೆ ಹೋಗಬಾರದು’ ಎಂದು ಬದಲಾಯಿಸಿ ಓದಿಕೊಳ್ಳಬೇಕು. ‘ಯಾವುದೇ ವ್ಯಾಮೋಹಕ್ಕೆ ಬಲಿಯಾಗದೆ’ ಎಂಬ ಪದಪುಂಜವು ವಚನಕಾರರಿಗೆ ಮತ್ತು ಗೀತಾಚಾರ್ಯನಿಗೆ ಪಂಥಾಹ್ವಾನ ನೀಡಬಲ್ಲ ಸಾಮರ್ಥ್ಯದ್ದು. ಮತಾಂಧತೆಯೇ ಖಂಡನಾರ್ಹ ವ್ಯಾಮೋಹ. ಜಾತ್ಯಂಧತೆಯು ಅದಕ್ಕಿಂತಲೂ ಕೆಳಮಟ್ಟದ ವಿನಾಶಕಾರೀ ಮತ್ತು ಆಘಾತಕಾರೀ ವ್ಯಾಮೋಹ. ಅಂಬೇಡ್ಕರ್ ತನ್ನ ಜೀವನ ಮತ್ತು ಜೀವವನ್ನು ಸವೆಸಿದ್ದೇ ಹಿಂದೂ ಧರ್ಮದ ಈ ಘಾತುಕ ಶಕ್ತಿಗಳನ್ನು ಸದೆಬಡಿಯುವುದಕ್ಕೆ. ಜಾತಿಯು ನಾಶವಾಗಬೇಕೆಂದು ಹೇಳಬೇಕಾದವರು ‘ನಮ್ಮ ಪಕ್ಷದ ಅಭ್ಯರ್ಥಿಗಳನ್ನು’ ಎಂದಾಗ ಅದನ್ನು ‘ನಮ್ಮ ಜಾತಿಯ ಅಭ್ಯರ್ಥಿಗಳನ್ನು’ ಎಂದು ಓದಿಕೊಳ್ಳಬಹುದು. ಒಟ್ಟಿನಲ್ಲಿ ‘ಒಂದೂ ಮತ ಬೇರೆ ಪಕ್ಷಗಳಿಗೆ ಹೋಗಬಾರದು’ ಎಂದು ಹೇಳಿದಾಗ ಜನರಲ್ ಡೈಯರ್ ಜಲಿಯಾನ್‌ವಾಲಾಭಾಗ್‌ನಲ್ಲಿ ಒಬ್ಬರೂ ತಪ್ಪಿಸಿಕೊಳ್ಳದ ಹಾಗೆ ಗುಂಡುಹಾರಿಸಿದ್ದು ನೆನಪಾಗುತ್ತದೆ. ಕೊನೆಗೂ ಜೀವಕ್ಕೂ ಮತಕ್ಕೂ ಅಷ್ಟೇನೂ ವ್ಯತ್ಯಾಸವಿಲ್ಲ; ಶಾಶ್ವತವಾಗಿ ಕೊಡುವುದನ್ನು ಐದು ವರ್ಷಗಳಿಗೊಮ್ಮೆ ಕೊಡುವುದು, ಅನರ್ಹತೆಯ ರಕ್ತಬೀಜರು ಹುಟ್ಟಿಕೊಂಡಾಗ ಇನ್ನೂ ತ್ವರಿತವಾಗಿ ಕೊಡುವುದು-ಅಷ್ಟೆ!

ಈ ಪ್ರತಿಪದಾರ್ಥವನ್ನು ಅವರದೇ ಪಕ್ಷದ ಉಳಿದ ಹಿಂದೂಗಳು ಹೇಗೆ ಒಪ್ಪಿಕೊಂಡರು ಅಥವಾ ಸಹಿಸಿದರು ಎಂಬುದು ಚಿದಂಬರ ರಹಸ್ಯವೇನಲ್ಲ. ಇಂದು ಹೇಳಿದ್ದು ನಾಳೆಗಿಲ್ಲದ ರಾಜಕಾರಣದಲ್ಲಿ ಇವೆಲ್ಲವೂ ಮಲಶುದ್ಧಿಯ ಟಿಷ್ಯೂ ಪೇಪರಿನಂತೆ ಬಳಸಿ ಎಸೆಯುವ ವಸ್ತುಗಳಾಗುತ್ತವೆ. ಇವರೆಲ್ಲ ವಾರ್ಷಿಕ ಲೆಕ್ಕತಖ್ತೆ ಇರಲಿ, ಮಾಸಿಕ, ಕೊನೆಗೆ ವಾರದ ಲೆಕ್ಕತಖ್ತೆಯನ್ನೂ ಇಟ್ಟುಕೊಳ್ಳುವುದಿಲ್ಲ. ದಿನದ ಆದಾಯ, ವೆಚ್ಚವನ್ನು ಮಾತ್ರ ಕೂಡಿಸಿ, ಗುಣಿಸಿ ನಿವ್ವಳ ಲಾಭ-ನಷ್ಟವನ್ನು ಲೆಕ್ಕಹಾಕುವ ಇಂತಹವರು ನಾಳಿನ ಭಾರತಕ್ಕೆ ಇಂದಿನ ಕೊಡುಗೆ ನೀಡುವ ಮುನಿಸಿಪಾಲಿಟಿ ತೊಟ್ಟಿಯಲ್ಲಿರಲೂ ಯೋಗ್ಯರೇ ಎಂಬುದನ್ನು ಮತದಾರರು ಯೋಚಿಸಬೇಕು.

ಆದರೆ ಈ ದೇಶದಲ್ಲಿ ಇದನ್ನು ಸ್ವೀಕರಿಸುವ ಜೋಡು ಬೊಗಸೆಗಳಿವೆ. ಅಧಿಕಾರ ಉಳಿಯಬೇಕಾದರೆ ಏನು ಮಾಡಿದರೆ ಮತ್ತು ಏನನ್ನು ಮಾತನಾಡಿದರೆ ಒಳ್ಳೆಯದು ಎಂಬುದೇ ಸರಕಾರ ಉಳಿಸುವ ಸರಕು. ಇದನ್ನು ರಾಷ್ಟ್ರಮಟ್ಟದಲ್ಲಿ ಹಿಗ್ಗಿಸಿ ನೋಡಿದರೆ ಪ್ರಜ್ಞಾಠಾಕೂರ್ ಮತ್ತು ಕೇಂದ್ರ ಸರಕಾರದ ಸಂಬಂಧದ ವ್ಯಾಮೋಹವು ನೆನಪಾಗುತ್ತದೆ. ಫೂಲನ್‌ದೇವಿಯಂತೆ ಆಕಸ್ಮಿಕವಾಗಿ ಆಯ್ಕೆಯಾದ ಸಂಸದೆ ಪ್ರಜ್ಞಾ ಠಾಕೂರ್‌ಳನ್ನು ‘ಭಯೋತ್ಪಾದಕಿ’ ಎಂದು ಈಗಲೇ ಹೇಳುವಂತಿಲ್ಲ. ಏಕೆಂದರೆ ಆಕೆ ಇನ್ನೂ ತಪ್ಪಿತಸ್ಥಳೆಂದು ನ್ಯಾಯಾಲಯವು ಹೇಳಿಲ್ಲ. ಆದರೆ ಗೋಡ್ಸೆಯ ಕುರಿತು ಆಕೆ ದೇಶಭಕ್ತನೆಂದು ಹೊಗಳಿದಾಗ ಸ್ವತಃ ಪ್ರಧಾನಿಯವರೇ ಈ ಮಾತುಗಳಿಗಾಗಿ ಆಕೆಯನ್ನು ಕ್ಷಮಿಸಲಾರೆ ಎಂದಿದ್ದರು. ಆಕೆ ಮುಂಬೈಯ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾದ ಹೇಮಂತ್ ಕರ್ಕರೆಯ ಹುತಾತ್ಮ ಅಂತ್ಯವನ್ನು ಶಪಿಸಿದಾಗ ಅದನ್ನು ವಿಷಕಂಠನಂತೆ ನಮ್ಮ ಪ್ರಧಾನಿ ನುಂಗಿದರು. ಹಾಗೆಂದು ಆಕೆಯ ಅಭ್ಯರ್ಥಿತನವನ್ನು ಹಿಂದೆ ಪಡೆಯಲಿಲ್ಲ. ಗೆದ್ದ ಮೇಲೆ ಆಕೆಯನ್ನು ತಮ್ಮ ಪಡೆಯಲ್ಲೇ ಉಳಿಸಿಕೊಂಡರು ಮಾತ್ರವಲ್ಲ ಆಕೆಗೆ ರಕ್ಷಣಾ ಸಚಿವಾಲಯದ ಸಂಸದೀಯ ಸಮಿತಿಯ ಸದಸ್ಯತನದ ಗೌರವ ನೀಡಿದರು. (ಅದನ್ನೀಗ ವಿಧಿಯಿಲ್ಲದೆ ಹಿಂಪಡೆದದ್ದು ಇನ್ನೊಂದು ಅನಿವಾರ್ಯ ರಾಜಕೀಯ!) ಈಗ ಮತ್ತೊಮ್ಮೆ ಆಕೆ ಗೋಡ್ಸೆ ಮಂದಿರದ ಪೂಜಾರಿಯಂತೆ ಮಾತನಾಡಿದರೂ ಆಕೆ ದೇಶಭಕ್ತಪಾಳಯದ ಸ್ವಯಂಪ್ರಭೆಯಾಗಿ ಮುಂದುವರಿದಿದ್ದಾಳೆ. ಆದ್ದರಿಂದ ಅನರ್ಹತೆಯ ಮಾತೇ ಪೊಳ್ಳು ಎನ್ನುವಂತೆ ಈ ದೇಶದ ರಾಜಕೀಯವು ಶೋಭಿಸುತ್ತಿದೆ!

ಇಡೀ ದೇಶದಲ್ಲಿ ಅನರ್ಹರು ತಾಂಡವವಾಡುತ್ತಿದ್ದಾರೆ. ಸಂವಿಧಾನದ ಮೂಲಭೂತಹಕ್ಕು ಈಗ ಮೂಲಭೂತವಾದಿಗಳ ಹಕ್ಕಾಗಿದೆ. ಹಿಂಸೆಗೆ, ಸಮೂಹಧಾಳಿಗೆ ಒಮ್ಮೆ ಪ್ರೋತ್ಸಾಹ ನೀಡಿದರೆಂದರೆ ಆನಂತರ ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲದಾಗುತ್ತದೆ. ವಿಕೃತಿಯ ನೂರೆಂಟು ರೂಪಗಳನ್ನು ಬಲ್ಲವರ್ಯಾರು? ಅದು ಹತ್ಯೆಯ ಹಂತಕ್ಕೂ ತಲುಪಬಹುದು; ಹೆಣ್ಣಿನ ಮಾನಹಾನಿಯ ಹಂತಕ್ಕೂ ತಲುಪಬಹುದು. ‘‘ವಿಜೃಂಭಿಸಿತು ರಾಮಬಾಣ; ನಿಜ, ಕತ್ತಲಿಗೆ ಹತ್ತೆ ತಲೆ? ನೂರಾರೆ? ಅದು ಅಸಂಖ್ಯ; ಕತ್ತರಿಸಿದರೆ ಬೆಳೆವ, ಬೆಳೆದು ಕತ್ತಿಗೆ ಬರುವ ಅನಾದಿ; ಕೋದಂಡ ದಂಡವೂ ಹೀಗೆ ದಂಡ;’’ ಎಂಬ ಕವಿವಾಣಿ ಇಷ್ಟೊಂದು ವ್ಯಂಗ್ಯವಾಗಿ ಬೃಹತ್ತಾಗಿ ಬೆಳೆಯಬಹುದು, ತನ್ನ ಬಿಳಲುಗಳನ್ನು ಇಳಿಸಬಹುದು ಎಂದು ಯಾವ ರಾಮನೂ ತಿಳಿದಿರಲಿಕ್ಕಿಲ್ಲ. ದುರಂತವೆಂದರೆ ಸಮಾಜದ ಭವಿಷ್ಯ ಯಾರಿಗೂ ಬೇಡ. ಮುಖ್ಯಮಂತ್ರಿಗಳ ಇಂತಹ ನೀತಿಸಂಹಿತೋಲ್ಲಂಘನಾ ಸೂಕ್ತಿಗಳ ನಡುವೆಯೂ ಇತರ ಪಕ್ಷಗಳು ತಮಗಿರುವ ಅಪಾಯ- ಅಲ್ಲ- ತನಗಿರುವ ಅಪಾಯವನ್ನಷ್ಟೇ ಗಣನೆಗೆ ತೆಗೆದುಕೊಂಡಿವೆ. ಮಾಜಿ ಪ್ರಧಾನಿಯೊಬ್ಬರು ರಾಜ್ಯ ಸರಕಾರವನ್ನು ಬೀಳಲು ಬಿಡುವುದಿಲ್ಲ ಎಂದು ತಮ್ಮ ಬಿಳಲುಗಳನ್ನು ಸುತ್ತಿ ನೆರಳಾಗಿ ಹಿಡಿದಿದ್ದಾರೆ. ಅವರದ್ದು ಯಾವಾಗಲೂ ಹಾವಿನ ಹೆಡೆಯೇ!

ಇದೆಲ್ಲ ಗಮನಿಸಿದರೆ ಎಂದೋ ಪಂಚತಂತ್ರವನ್ನು ಬರೆದ ದುರ್ಗಸಿಂಹನ ಕಾಲದಲ್ಲೇ ಇಂತಹ ಅಥವಾ ಇವರೇ ಇದ್ದರೇನೋ ಅನ್ನಿಸಬೇಕು. ಪರಮವಿಭೂತಿ ಶಿವಭೂತಿ ಎಂಬ ಕಥಾನಕದಲ್ಲಿ ಕಂಬಳಕನೆಂಬ ಬೇಡನೊಬ್ಬ ಹುಲಿ ತನ್ನನ್ನು ಅಟ್ಟಿಸಿಕೊಂಡು ಬರುತ್ತಿರುವಾಗ ಪ್ರಾಣಭಯದಿಂದ ದಾರಿಕಾಣದೆ ಒಂದು ಹಳೆಬಾವಿಗೆ ಬೀಳುತ್ತಾನೆ. ಬೇಡನನ್ನು ಅಟ್ಟಿಸಿಕೊಂಡು ಬಂದ ಹುಲಿಯೂ ಬಾವಿಗೆ ಬೀಳುತ್ತದೆ. ಅಷ್ಟರಲ್ಲಿ ಚಪಲಕನೆಂಬೊಂದು ಕಪಿ ಬಾವಿಯಿಂದ ನೀರುಕುಡಿಯಲೆಂದು ಇಣುಕುವಾಗ ಆ ಬಾವಿಯ ಕಟ್ಟೆಯಲ್ಲಿದ್ದ ಹಾವಿನ ಬಾಲವನ್ನು ಬಳ್ಳಿಯೆಂದು ಬಗೆದು ಎಳೆಯಲಾಗಿ ಹಾವಿನ ಸಹಿತ ಬಾವಿಗೆ ಬೀಳುತ್ತದೆ. ಇವರಿಗೆಲ್ಲ ತಾವು ಪಾರಾಗುವುದು ಹೇಗೆಂಬ ಚಿಂತೆ. ಪರಸ್ಪರ ವೈರ. ಇಂತಹವರನ್ನು ಭವಭೂತಿಯೆಂಬೊಬ್ಬ ಪಥಿಕ ಪಾರುಮಾಡುವ ಮತ್ತು ಉಳಿದ ಪ್ರಾಣಿಗಳು ಆತನ ಉಪಕಾರವನ್ನು ಸ್ಮರಿಸುವ ಮತ್ತು ಕಂಬಳಕನು ಮಾತ್ರ ಹೇಗೆ ಕೃತಘ್ನನಾಗಿ ವರ್ತಿಸುತ್ತಾನೆಂಬ ಕಥೆ ಮುಂದಿದೆ. ನಮ್ಮ ಚುನಾವಣೆಗಳಲ್ಲಿರುವ ರಾಜಕಾರಣಿಗಳು ಬಾವಿಯೊಳಗಿದ್ದು ಮೇಲೆ ಬಂದ ಬಳಿಕ ಕೃತಘ್ನನಾಗುವ ಕಂಬಳಕನ ಸಂತತಿ ಸಾವಿರವಾಗುವುದೇ ಆಧುನಿಕ ಕರ್ನಾಟಕ ಪಂಚತಂತ್ರ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)