varthabharthi


ಕರ್ನಾಟಕ

'ವಾರ್ತಾಭಾರತಿ'ಗೆ ನೀಡಿದ ಸ್ಪಷ್ಟನೆಯಲ್ಲಿ ಶೃಂಗೇರಿ ಶಾಸಕ ಹೇಳಿದ್ದೇನು ?

ಚುನಾವಣೆ ಬಳಿಕ ಶಾಸಕ ರಾಜೇಗೌಡ ಬಿಜೆಪಿ ಸೇರುತ್ತಾರಾ?: ಊಹಾಪೋಹಗಳಿಗೆ ಕಾರಣವಾಯಿತು ಪತ್ರ

ವಾರ್ತಾ ಭಾರತಿ : 5 Dec, 2019

ಚಿಕ್ಕಮಗಳೂರು, ಡಿ.5: ಉಪಚುನಾವಣೆಯ ಹೊತ್ತಿನಲ್ಲಿ ಜಿಲ್ಲೆಯ ಶೃಂಗೇರಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಅವರು ಬಿಜೆಪಿ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರಿಗೆ ಪತ್ರವೊಂದನ್ನು ಬರೆದಿದ್ದು, ಈ ಪತ್ರ ಸಮಾಜಿಕ ಜಾಲತಾಣಗಳೂ ಸೇರಿದಂತೆ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ವಿಧಾನಪರಿಷತ್ ಸದಸ್ಯ ಪ್ರಾಣೇಶ್ ಅವರಿಗೆ ಶಾಸಕ ರಾಜೇಗೌಡ ಅವರು ಬರೆದಿರುವ ಪತ್ರದಲ್ಲಿ, 'ನಾವಿಬ್ಬರು ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ವೇಳೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇವೆ. ಬೇರೆ ಬೇರೆ ಪಕ್ಷಗಳಲ್ಲಿದ್ದರೂ ಸ್ನೇಹಿತರಾಗಿ ಆತ್ಮೀಯವಾಗಿದ್ದೇವೆ. ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಡಿಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರವನ್ನು ನೋಡಲ್ ಕ್ಷೇತ್ರವನ್ನಾಗಿ ಪಡೆದು ಅಭಿವೃದ್ಧಿ ಅನುದಾನ ಬಳಸಲು ಮುಂದಾಗಿರುವ ನೀವು ಕ್ಷೇತ್ರದ ಅಭಿವೃದ್ಧಿ, ಜನರ ಸಮಸ್ಯೆ ಸಂಬಂಧ ಕಾರ್ಯ ನಿರ್ವಹಿಸಲು ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ತಾಲೂಕು ಕೇಂದ್ರಗಳಲ್ಲಿರುವ ಶಾಸಕರ ಕಚೇರಿಯನ್ನು ಬಳಸಿಕೊಳ್ಳಬಹುದು. ಕ್ಷೇತ್ರದ ಅಭಿವೃದ್ಧಿಗೆ ಜತೆಯಾಗಿ ಶ್ರಮಿಸೋಣ' ಎಂಬಿತ್ಯಾಧಿಯಾಗಿ ಪತ್ರದಲ್ಲಿ ರಾಜೇಗೌಡ ಬರೆದುಕೊಂಡಿದ್ದಾರೆ.

ಇದೀಗ ರಾಜೇಗೌಡ ಅವರು ಬರೆದಿರುವ ಪತ್ರವನ್ನೇ ಮುಂದಿಟ್ಟುಕೊಂಡು ಭಾರೀ ಚರ್ಚೆಗಳು ಜಿಲ್ಲೆಯಾದ್ಯಂತ ಕೇಳಿ ಬರುತ್ತಿದೆ. ಶಾಸಕ ರಾಜೇಗೌಡ ಅವರನ್ನು ಈ ಹಿಂದೆ ಬಿಜೆಪಿಯವರು ತಮ್ಮ ಪಕ್ಷಕ್ಕೆ ಸೆಳೆಯಲು ಮುಂದಾಗಿದ್ದು, ಆಗ ಶಾಸಕ ರಾಜೇಗೌಡ ಇದನ್ನು ನಯವಾಗಿಯೇ ತಿರಸ್ಕರಿಸಿದ್ದರು. ಇದೀಗ ಉಪಚುನಾವಣೆ ಬಳಿಕ ಶಾಸಕ ರಾಜೇಗೌಡ ಅವರನ್ನು ಆಪರೇಷನ್ ಕಮಲದ ಖೆಡ್ಡಾಕ್ಕೆ ಕೆಡವಿಕೊಳ್ಳಲು ಎಲ್ಲ ಸಿದ್ಧತೆಗಳು ನಡೆದಿದ್ದು, ಚುನಾವಣೆ ಬಳಿಕ ಟಿ.ಡಿ.ರಾಜೇಗೌಡ ಬಿಜೆಪಿಗೆ ಹೋದರೂ ಆಶ್ಚರ್ಯವಿಲ್ಲ ಎಂಬಂತಹ ಮಾತುಗಳು ಕೇಳಿ ಬರುತ್ತಿವೆ.

ಈ ಹಿನ್ನೆಲೆಯಲ್ಲಿ 'ವಾರ್ತಾಭಾರತಿ' ಶಾಸಕ ರಾಜೇಗೌಡ ಅವರನ್ನು ಗುರುವಾರ ಮಾತನಾಡಿಸಿದಾಗ ಪ್ರತಿಕ್ರಿಯಸಿದ ಅವರು, 'ಇದೆಲ್ಲವೂ ಊಹಾಪೋಹಗಳು, ನಾನು ಹುಟ್ಟು ಕಾಂಗ್ರೆಸ್ಸಿಗನಾಗಿದ್ದು, ಯಾವುದೇ ಪಕ್ಕಕ್ಕೆ ನಾನು ಮಾರಾಟವಾಗುವುದಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.

ನಾನು ಒಂದು ನಿರ್ದಿಷ್ಟ ತತ್ವ ಸಿದ್ಧಾಂತಗಳನ್ನು ನಂಬಿಕೊಂಡು ಅದನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿದ್ದೇನೆ. ನಾನು ಇದಕ್ಕೆ ಸದಾಕಾಲ ಬದ್ಧನಾಗಿರುತ್ತೇನೆ. ಶೃಂಗೇರಿ ಕ್ಷೇತ್ರದ ಜನರು ತನ್ನನ್ನು ಕಾಂಗ್ರೆಸ್ ಪಕ್ಷದ ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ಅವರ ನಂಬಿಕಗೆ ನಾನು ದ್ರೋಹ ಮಾಡುವುದಿಲ್ಲ. ಐದು ವರ್ಷಗಳ ಕಾಲ ನಾನು ಆ ಕ್ಷೇತ್ರದ ಆಶೋತ್ತರಗಳಿಗೆ, ಸಮಸ್ಯೆಗಳಿಗೆ ಧ್ವನಿ ಆಗಿರಬೇಕಾದದ್ದು ಕರ್ತವ್ಯವಾಗಿದೆ. ಇದನ್ನು ಚಾಚು ತಪ್ಪದೇ ಪಾಲಿಸುತ್ತೇನೆ. ಕ್ಷೇತ್ರದ ಜನರು ಇಂತಹ ಊಹಾಪೋಹಗಳನ್ನು ನಂಬಬಾರದು ಎಂದು ಶಾಸಕ ರಾಜೇಗೌಡ ಹೇಳಿದ್ದಾರೆ.

ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರಿಗೆ ತಾನು ಪತ್ರ ಬರೆದಿರುವುದು ನಿಜ. ಆದರೆ ಪತ್ರಕ್ಕೂ ಆಪರೇಷನ್ ಕಮಲಕ್ಕೂ ಸಂಬಂಧವಿಲ್ಲ. ಪ್ರಾಣೇಶ್ ಅವರು ಶೃಂಗೇರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕೊಪ್ಪ ತಾಲೂಕನ್ನು ನೋಡನ್ ಕ್ಷೇತ್ರವನ್ನಾಗಿ ಆಯ್ಕೆ ಮಾಡಿದ್ದಾರೆ. ಇದರಿಂದಾಗಿ ಅವರ ಶಾಸಕರ ಅನುದಾನ ಈ ತಾಲೂಕಿನ ಅಭಿವೃದ್ಧಿಗೆ ಬಳಕೆಯಾಗುತ್ತದೆ. ತನ್ನ ಕ್ಷೇತ್ರದ ಅಭಿವೃದ್ಧಿಗೆ ಪ್ರಾಣೇಶ್ ಮುಂದಾಗಿರುವುದು ಸಂತಸದ ವಿಷಯವಾಗಿದೆ. ಅಭಿವೃದ್ಧಿ ಕಾರ್ಯಗಳ ಚರ್ಚೆಗೆಂದು ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕು ಕೇಂದ್ರಗಳಲ್ಲಿ ಸರಕಾರಿ ಕಟ್ಟಡದಲ್ಲಿ ನನ್ನ ಶಾಸಕರ ಕಚೇರಿ ಇದ್ದು, ಇದನ್ನು ಅಭಿವೃದ್ಧಿಗೆ ಕೆಲಸಗಳಿಗೆ ಬಳಸಿಕೊಳ್ಳಬಹುದು ಎಂದು ಪತ್ರದಲ್ಲಿ ತಿಳಿಸಿದ್ದೇನಷ್ಟೆ. ಇದರಲ್ಲಿ ಬೇರೆ ರಾಜಕೀಯವೇನಿಲ್ಲ ಎಂದು ಶಾಸಕ ರಾಜೇಗೌಡ ಸ್ಪಷ್ಟನೆ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)