varthabharthi


ಸಿನಿಮಾ

ಅಳಿದು ಉಳಿದವರು: ಇಲ್ಲಿದ್ದಾರೆ ಮನದೊಳಗಿಳಿದು ಆಳಿದವರು

ವಾರ್ತಾ ಭಾರತಿ : 7 Dec, 2019
ಶಶಿಕರ ಪಾತೂರು

ವಾರ್ತಾವಾಹಿನಿಗಳಲ್ಲಿ ಸದಾ ಜನಪ್ರಿಯತೆ ಇರುವುದು ರಾಜಕೀಯ, ಸಿನೆಮಾ ಮತ್ತು ಕ್ರೈಮ್ ಸುದ್ದಿಗಳಿಗೆ ಎನ್ನುವುದು ಎಲ್ಲರೂ ಒಪ್ಪುವ ಸತ್ಯ! ಅದೇ ಸಂದರ್ಭದಲ್ಲಿ ದೆವ್ವ, ಭೂತ, ಪಿಶಾಚಿಗಳ ನಿಗೂಢ ಲೋಕದ ಕತೆಗಳನ್ನು ಕೂಡ ಆಸಕ್ತಿಯಿಂದ ಕುಳಿತು ನೋಡುವವರಿದ್ದಾರೆ. ಯಾವುದೇ ಒಂದು ಜಾಗದಲ್ಲಿ ದೆವ್ವವಿದೆ ಎಂದುಕೊಂಡು ಸುದ್ದಿ ಹರಡಲು ಕಾರಣವೇನು ಎನ್ನುವುದನ್ನು ಭೇದಿಸಿ ತೋರಿಸುವ ‘ಕಾರಣ..?’ ಎನ್ನುವ ರಿಯಾಲಿಟಿ ಶೋನ ನಿರೂಪಕನೇ ಚಿತ್ರದ ನಾಯಕ. ಆತನ ಕಾರಣ ಕಾರ್ಯಕ್ರಮದ ನೂರನೇ ಎಪಿಸೋಡ್‌ನಲ್ಲಿ ನಡೆಯುವ ನಾಟಕೀಯ ಘಟನೆಗಳ ಸುತ್ತ ಸಾಗುವ ಚಿತ್ರವೇ ‘ಅಳಿದು ಉಳಿದವರು’.

ಶೀಲಂ ಒಬ್ಬ ಯಶಸ್ವಿ ಕಾರ್ಯಕ್ರಮ ನಿರೂಪಕ. ನಿರೂಪಕನಷ್ಟೇ ಅಲ್ಲ ಆತ ಕಾರ್ಯಕ್ರಮದ ನಿರ್ಮಾಪಕ ಹಾಗೂ ಎಲ್ಲವೂ ಎಂದು ಹೇಳಬಹುದು. ಶೀಲಂ ಕಾರ್ಯನಿರ್ವಹಿಸುವ ವಾಹಿನಿ ಆತನ ಶೋನಿಂದಾಗಿಯೇ ಜನಪ್ರಿಯತೆ ಪಡೆದಿರುತ್ತದೆ. ಅದೇ ರೀತಿ ಎಲ್ಲ ಕಾರ್ಯಕ್ರಮಗಳು ಕೂಡ ನಂಬರ್ ಒನ್ ಆಗಬೇಕೆಂದು ಬೆನ್ನುಬಿದ್ದಿರುವ ವಾಹಿನಿಯ ಮುಖ್ಯಸ್ಥನೂ ಅಲ್ಲಿರುತ್ತಾನೆ. ಶೀಲಂನದ್ದು ಎಲ್ಲ ಕಡೆಯಿಂದಲೂ ಒತ್ತಡದ ಬದುಕಾಗಿರುತ್ತದೆ. ಪ್ರೀತಿಸುವ ಹುಡುಗಿಯಿಂದ ಮದುವೆಗೆ ಒತ್ತಡ ಇರುತ್ತದೆ. ಆಕೆಯ ತಂದೆಯಿಂದ ಆತನ ಆತಂಕದ ವೃತ್ತಿ ಬದುಕಿನ ಬಗ್ಗೆಯೇ ವಿರೋಧವಿರುತ್ತದೆ. ಎದುರಾಳಿ ವಾಹಿನಿಯೊಂದರ ಮಾಲಕನಿಂದ ಅವರ ವಾಹಿನಿಗೆ ಬರುವಂತೆ ಒತ್ತಡದ ಆಹ್ವಾನವಿರುತ್ತದೆ. ಸ್ವತಃ ಕಾರ್ಯನಿರ್ವಹಿಸುವ ವಾಹಿನಿಯಲ್ಲೇ ನಂಬಿಕೆಯ ವಿಚಾರದಲ್ಲಿ ಜ್ಯೋತಿಷಿಯೊಬ್ಬರನ್ನು ಎದುರು ಹಾಕಿಕೊಂಡಿರುತ್ತಾನೆ.

ಇಷ್ಟೆಲ್ಲ ಒತ್ತಡಗಳ ನಡುವೆ ಹೊರಗಿನಿಂದ ಮಹಾಂತೇಶ ಎನ್ನುವ ಯುವಕನೊಬ್ಬ ಹೊಸ ಕೋರಿಕೆಯೊಂದಿಗೆ ಬರುತ್ತಾನೆ. ಅದು ಕಾರ್ಯಕ್ರಮದ ನೂರನೇ ಎಪಿಸೋಡ್ ತಮ್ಮದೇ ದೆವ್ವದ ಮನೆಯಲ್ಲಿ ನಡೆಯಬೇಕು ಎನ್ನುವುದಾಗಿರುತ್ತದೆ. ಅದನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಶೀಲಂಗೆ ಬರುತ್ತದೆ. ಆದರೆ ಆ ಘಟನೆ ನಾಯಕನ ಜೀವವನ್ನೇ ಪಣಕ್ಕಿಡುವಂಥ ಸಂದರ್ಭ ಸೃಷ್ಟಿಸುತ್ತದೆ. ಅದೇನು ಎನ್ನುವುದೇ ಚಿತ್ರದ ಪ್ರಮುಖ ಅಂಶ. ಇದೊಂದು ಹದವಾಗಿ ಹಾರರ್ ಬೆರೆತಿರುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ನವ ನಾಯಕನಟರಿಗೆ ಚಿತ್ರರಂಗ ಪ್ರವೇಶಿಸಲು ಪ್ರೇಮಕಥೆಗಳ ಬಳಿಕ ಹೆಚ್ಚು ಸೂಕ್ತವೆನಿಸುವುದೇ ಹಾರರ್ ಸಬ್ಜೆಕ್ಟ್. ಹಾಗಾಗಿಯೇ ಹಾರರ್ ಜತೆಯಲ್ಲಿ ತಮಗೆ ಚೆನ್ನಾಗಿ ಪರಿಚಯವಿರುವ ಕಿರುತೆರೆ ವಾಹಿನಿಗಳ ಅಂತರಂಗದ ಕಥೆಯ ಮೂಲಕ ಅರಂಗೇಂಟ್ರ ಮಾಡಿದ್ದಾರೆ ಅಶು ಬೆದ್ರ. ಅವರ ಈ ಪ್ರಯತ್ನಕ್ಕೆ ಅರವಿಂದ ಶಾಸ್ತ್ರಿಯವರ ಹಿಡಿತ ತುಂಬಿದ ನಿರ್ದೇಶನ ಸಾಥ್ ನೀಡಿದೆ. ನವನಟನೋರ್ವನಲ್ಲಿ ಸಹಜವೆನಿಸುವ ಕೊರತೆಗಳು ಅಶು ಬೆದ್ರರಲ್ಲಿಯೂ ಇಲ್ಲ ಎನ್ನಲಾಗದು. ಆದರೆ ಅದನ್ನು ಮರೆಸುವಂತೆ ಅವರ ಪಾತ್ರ ಸಾಗುವ ಸಂದರ್ಭಗಳು ಚಿತ್ರವನ್ನು ಆಕರ್ಷಕಗೊಳಿಸಿವೆ. ಮಹಾಂತೇಶನಾಗಿ ಪವನ್ ಕುಮಾರ್ ನಟಿಸಿದ್ದಾರೆ. ಒಂದು ಸಣ್ಣ ಗ್ಯಾಪ್ ಬಳಿಕ ಎಂಟ್ರಿ ನೀಡಿರುವ ಅವರ ಪಾತ್ರದ ಅವಧಿ ಚಿಕ್ಕದಾದರೂ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ನಾಯಕ ಕಾರ್ಯನಿರ್ವಹಿಸುವ ವಾಹಿನಿಯ ಮುಖ್ಯಸ್ಥರಾಗಿ ಬಿ. ಸುರೇಶ್ ನಾವು ಕಂಡಿರುವ ಯಾವುದೋ ವಾಹಿನಿ ಮುಖ್ಯಸ್ಥರನ್ನು ನೆನಪಿಸುವಂತೆ ಮಾಡಿದ್ದಾರೆ. ಎದುರಾಳಿ ವಾಹಿನಿಯ ಚೀಫ್ ಆಗಿ ಅರವಿಂದ ರಾವ್ ಸಿಡುಕು ಮುಖದಿಂದಲೇ ಗಮನ ಸೆಳೆದಿದ್ದಾರೆ. ನಿರೂಪಕನ ನೂರನೇ ಸಂಚಿಕೆಯಲ್ಲಿ ನಡೆಯುವ ನಿಗೂಢತೆಯನ್ನು ಭೇದಿಸಲು ಬರುವ ಅಧಿಕಾರಿಯಾಗಿ ಅತುಲ್ ಕುಲಕರ್ಣಿ ನಾಯಕನಿಲ್ಲದೆ ಮುಂದುವರಿಯುವ ಕಥೆಗೆ ಜೀವ ತುಂಬುತ್ತಾರೆ. ಆದರೆ ಅಂತ್ಯದಲ್ಲಿನ ಅನಿರೀಕ್ಷಿತ ತಿರುವು ಚಿತ್ರವನ್ನು ಮರಳಿ ನಾಯಕ ಪ್ರಧಾನವಾಗಿಸುತ್ತದೆ. ಹಾಗೆ ಪ್ರಥಮ ಚಿತ್ರದಲ್ಲೇ ನಾಯಕರಾಗಿ ಅಶುಬೆದ್ರ ತಮ್ಮ ಛಾಪು ಉಳಿಸಿಕೊಳ್ಳುತ್ತಾರೆ. ಆದರೆ ನಾಯಕಿ ಪ್ರಧಾನ ಚಿತ್ರಗಳಿಂದಲೇ ಗಮನ ಸೆಳೆದಿದ್ದ ಸಂಗೀತಾ ಭಟ್ ಅವರಿಗೆ ಚಿತ್ರದಲ್ಲಿ ನಾಯಕನ ಪ್ರೇಯಿಸಿ ಎನ್ನುವುದರ ಹೊರತು ಹೇಳಿಕೊಳ್ಳುವಂಥ ವಿಶೇಷ ಅವಕಾಶಗಳಿಲ್ಲ. ಜ್ಯೋತಿಷಿ ಗುರೂಜಿಯಾಗಿ ದಿನೇಶ್ ಮಂಗಳೂರು ಮತ್ತು ಕೆಲವೇ ದೃಶ್ಯಗಳಲ್ಲಿ ಬರುವ ನಾಗೇಂದ್ರ ಶಾ ಪಾತ್ರವಾಗಿ ನೆನಪಲ್ಲಿ ಉಳಿಯುತ್ತಾರೆ. ಹಾಡುಗಳಿಲ್ಲದ ಈ ಚಿತ್ರದಲ್ಲಿ ಛಾಯಾಗ್ರಹಣ, ಹಿನ್ನೆಲೆ ಸಂಗೀತ ಮತ್ತು ಗ್ರಾಫಿಕ್ಸ್‌ಗಳು ಚಿತ್ರದ ಹೈಲೈಟ್.

ದೆವ್ವ ಇಲ್ಲವೆಂದು ಕಾರ್ಯಕ್ರಮ ನಡೆಸುವ ನಾಯಕ ದೆವ್ವ ಇರಲಿಲ್ಲವೆಂದೇ ಸಾಬೀತು ಮಾಡುವಲ್ಲಿ ಗೆಲ್ಲುತ್ತಾನೆ. ಆದರೆ ಪ್ರೇಕ್ಷಕರಿಗೆ ದೆವ್ವದ ಕುರಿತಾಗಿ ಬರುವ ಸಂದೇಹಕ್ಕಿಂತಲೂ ಒಬ್ಬ ಮಾಧ್ಯಮ ಕ್ಷೇತ್ರದ ಪ್ರಮುಖನ ಆರೋಗ್ಯದ ಬಗ್ಗೆ ನಮ್ಮ ವೈದ್ಯರು ತೋರಬಹುದಾದ ಕಾಳಜಿ ಇಷ್ಟೇನಾ ಎಂದು ಅನಿಸದಿರದು. ಅಳಿದವರು ಹೇಗೆ ಉಳಿಯುತ್ತಾರೆ ಎನ್ನುವ ಸಂದೇಹಕ್ಕೆ ಚಿತ್ರ ಉತ್ತರಿಸದಿದ್ದರೂ ಒಂದೊಳ್ಳೆಯ ಥ್ರಿಲ್ಲರ್ ಆಗಿ ಮನರಂಜಿಸುತ್ತದೆ.

ತಾರಾಗಣ: ಅಶು ಬೆದ್ರ, ಸಂಗೀತಾ ಭಟ್, ಪವನ್ ಕುಮಾರ್
ನಿರ್ದೇಶನ: ಅರವಿಂದ ಶಾಸ್ತ್ರಿ
ನಿರ್ಮಾಣ: ಅಶು ಬೆದ್ರ ವೆಂಚರ್ಸ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)