varthabharthi


ಕರ್ನಾಟಕ

ಅಧಿಕಾರದ ಭಜನೆ ಬಿಟ್ಟು ಕೇಂದ್ರದ ಬಳಿ ಗಟ್ಟಿ ಧ್ವನಿಯಲ್ಲಿ ಮಾತನಾಡಿ: ಬಿಎಸ್‌ವೈಯನ್ನು ಕುಟುಕಿದ ಸಿದ್ದರಾಮಯ್ಯ

ವಾರ್ತಾ ಭಾರತಿ : 8 Dec, 2019

ಬೆಂಗಳೂರು, ಡಿ. 8: ‘ಕೇಂದ್ರದಿಂದ ಬರಬೇಕಿದ್ದ ಜಿಎಸ್ಟಿ ಸಂಗ್ರಹಣೆಯ ರಾಜ್ಯದ ಪಾಲು 5,600 ಕೋಟಿ ರೂ.ಹಣ ಬಂದಿಲ್ಲ, ಬಿ.ಎಸ್.ಯಡಿಯೂರಪ್ಪನವರಿಗೆ ಆರ್ಥಿಕ ನಿರ್ವಹಣೆಯ ಜ್ಞಾನವಿಲ್ಲ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ರವಿವಾರ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ಕುರ್ಚಿ ಮೇಲೆ ಕೂತು ಅಧಿಕಾರ ಉಳಿಸಿಕೊಳ್ಳಲು ಭಜನೆ ಮಾಡುವ ಬದಲು, ಕೇಂದ್ರದ ಬಳಿ ಗಟ್ಟಿ ಮಾತನಾಡಿದರೆ ಸರಕಾರಿ ನೌಕರರಿಗೆ ಸಂಬಳವೂ ಸಿಗುತ್ತೆ, ನೆರೆ ಪರಿಹಾರದ ಹಣವೂ ಬರುತ್ತೆ’ ಎಂದು ಕಿಡಿಕಾರಿದ್ದಾರೆ.

‘ಹೊಸಕೋಟೆ ಕ್ಷೇತ್ರವನ್ನು ಮಾದರಿ ತಾಲೂಕು ಮಾಡ್ತೀನಿ ಎಂದು ಹೇಳುವ ಮುಖ್ಯಮಂತ್ರಿ ಬಿಎಸ್‌ವೈ ಅವರಿಗೆ, ಪ್ರವಾಹದಲ್ಲಿ ಆಸ್ತಿಪಾಸ್ತಿ ಕಳೆದುಕೊಂಡು ಬೀದಿಯಲ್ಲಿ ಬದುಕು ಸಾಗಿಸುತ್ತಿರುವ ಜನ ಮರೆತುಹೋಗಿದ್ದಾರೆ. ಅವರ ಬದುಕು ಸರಿ ಮಾಡೋದು ಯಾವಾಗ? ಹುಸಿ ಭರವಸೆ, ಸುಳ್ಳು ಜಾಹಿರಾತು ಜನರ ಹೊಟ್ಟೆ ತುಂಬಿಸುತ್ತಾ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಮಹಾರಾಷ್ಟ್ರ, ಹರಿಯಾಣದ ಚುನಾವಣಾ ಫಲಿತಾಂಶವನ್ನು ಮರೆತು ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ಭ್ರಮೆಯಲ್ಲಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಮಾಡ್ತೀನಿ ಅಂದವರೆಲ್ಲ ಅವರೇ ನಿಧಾನವಾಗಿ ಒಂದೊಂದೆ ರಾಜ್ಯಗಳಲ್ಲಿ ಕಣ್ಮರೆಯಾಗುತ್ತಿದ್ದಾರೆ. ದೇಶದ ಜನಕ್ಕೆ ಯಾರು ತಮ್ಮ ಹಿತ ಕಾಯುವವರು ಎಂದು ಕ್ರಮೇಣ ಅರ್ಥವಾಗುತ್ತಿದೆ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)