varthabharthi


ಕ್ರೀಡೆ

ಬ್ಯಾಡ್ಮಿಂಟನ್ ಆಟಗಾರ ಸಾಯಿಪ್ರಣೀತ್‌ಗೆ ವಿವಾಹ

ವಾರ್ತಾ ಭಾರತಿ : 8 Dec, 2019

ಹೈದರಾಬಾದ್, ಡಿ.8: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿರುವ ಸಾಯಿ ಪ್ರಣೀತ್ ರವಿವಾರ ನಡೆದ ಖಾಸಗಿ ಸಮಾರಂಭದಲ್ಲಿ ಶ್ವೇತಾ ಜಯಂತಿ ಅವರನ್ನು ವಿವಾಹವಾದರು. ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಭಾರತದ ಡಬಲ್ಸ್ ಸ್ಟಾರ್ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಅವರು ಮದುವೆಯ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಾಯಿಪ್ರಣೀತ್ ನವೆಂಬರ್‌ನಲ್ಲಿ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ರವಿವಾರ ನಡೆದ ಮದುವೆ ಸಮಾರಂಭದಲ್ಲಿ ಪ್ರಣೀತ್ ಅವರ ಬ್ಯಾಡ್ಮಿಂಟನ್ ಸಹಆಟಗಾರರು ಭಾಗವಹಿಸಿದ್ದರು. ಎಚ್.ಎಸ್. ಪ್ರಣಯ್ ಹಾಗೂ ಕಿಡಂಬಿ ಶ್ರೀಕಾಂತ್ ಮತ್ತೊಬ್ಬ ಸ್ನೇಹಿತನ ಮದುವೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ತೆರಳಿದ್ದ ಕಾರಣ ಪ್ರಣೀತ್ ಮದುವೆಗೆ ಯಾರೆಲ್ಲೂ ತೆರಳಿದ್ದರೆಂಬ ಬಗ್ಗೆ ಖಾತ್ರಿ ಇಲ್ಲ.

ಸಾತ್ವಿಕ್‌ಸಾಯಿರಾಜ್ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊವನ್ನು ಹಾಕಿದ್ದು, ಬ್ಯಾಡ್ಮಿಂಟನ್ ಸ್ಟಾರ್‌ಗೆ ಶುಭಾಶಯ ಕೋರಿದ್ದಾರೆ.

 ಪಿ.ಕಶ್ಯಪ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಣೀತ್ ಅವರೊಂದಿಗಿದ್ದ ಫೋಟೊವನ್ನು ಹಂಚಿಕೊಂಡಿದ್ದು, ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಹ ಆಟಗಾರಿಗೆ ಶುಭಾಶಯ ಕೋರಿದ್ದಾರೆ. ವೈಯಕ್ತಿಕ ಹಾಗೂ ವೃತ್ತಿಪರ ಬದುಕಿನಲ್ಲಿ ಈ ವರ್ಷ ಪ್ರಣೀತ್‌ಗೆ ಅದೃಷ್ಟದಾಯಕವಾಗಿತ್ತು. ಈ ವರ್ಷ ಮದುವೆ ಆಗಿರುವ ಅವರು ವೃತ್ತಿಜೀವನದಲ್ಲಿ ಉನ್ನತಮಟ್ಟ ತಲುಪಿದ್ದಾರೆ. ಪ್ರಣೀತ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಜಯಿಸುವ ಮೂಲಕ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ 36 ವರ್ಷಗಳಿಂದ ಎದುರಿಸುತ್ತಿದ್ದ ಪದಕದ ಬರ ನೀಗಿಸಿದ್ದರು. 1983ರಲ್ಲಿ ಪ್ರಕಾಶ್ ಪಡುಕೋಣೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸಿದ್ದ ಪುರುಷರ ಸಿಂಗಲ್ಸ್ ನ ಏಕೈಕ ಆಟಗಾರನಾಗಿದ್ದರು. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯುವತ್ತ ಪ್ರಯತ್ನ ಮುಂದುವರಿಸಿರುವ ಪ್ರಣೀತ್ ಪ್ರಸ್ತುತ ವಿಶ್ವ ರ್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿದ್ದಾರೆ. ಪ್ರಣೀತ್‌ಗೆ ಈ ವರ್ಷ ಅರ್ಜುನ ಪ್ರಶಸ್ತಿ ಕೂಡ ಒಲಿದುಬಂದಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)