varthabharthi


ಕ್ರೀಡೆ

ರಶ್ಯಕ್ಕೆ ನಾಲ್ಕು ವರ್ಷಗಳ ಕಾಲ ಒಲಿಂಪಿಕ್ಸ್ ಕ್ರೀಡೆಗಳಿಂದ ನಿಷೇಧ

ವಾರ್ತಾ ಭಾರತಿ : 9 Dec, 2019

Photo:  International Olympic Committee (IOC) 

ಮಾಸ್ಕೋ, ಡಿ.9:ಡೋಪಿಂಗ್ ವರದಿಯನ್ನು ತಿರುಚಿದ ಆರೋಪದಲ್ಲಿ ರಶ್ಯ 4 ವರ್ಷಗಳ ಕಾಲ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಿಂದ ನಿಷೇಧಕ್ಕೊಳಗಾಗಿದೆ.

ರಶ್ಯ ಡೋಪಿಂಗ್ ಪ್ರಕರಣದಲ್ಲಿ ಮೂಲ ದಾಖಲೆಗಳನ್ನು ತಿರುಚಿದ ಆರೋಪವನ್ನು ಎದುರಿಸುತ್ತಿದ್ದು, ಈ ಕಾರಣದಿಂದಾಗಿ ವಿಶ್ವ ಉದ್ದೀಪನಾ ದ್ರವ್ಯ ಸೇವನೆ ನಿಗ್ರಹ ಸಂಸ್ಥೆ (ವಾಡಾ) ಕಾರ್ಯಕಾರಿ ಸಮಿತಿಯು ರಶ್ಯಕ್ಕೆ ನಾಲ್ಕು ವರ್ಷಗಳ ನಿಷೇಧ ಹೇರುವ ನಿರ್ಧಾರ ಕೈಗೊಂಡಿದೆ.

ಪ್ರಯೋಗಾಲಯದ ದತ್ತಾಂಶವನ್ನು ಕುಶಲತೆಯಿಂದ ಅಳಿಸಿ ಹಾಕಿ ಸಾಕ್ಷವನ್ನು ನಾಶ ಮಾಡಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ ಆರೋಪ ರಶ್ಯದ ಮೇಲಿದೆ.

ಕ್ರೀಡಾಪಟುಗಳು ನಿಷೇಧಿತ ಉದ್ದೀಪನಾ ಸೇವಿಸಿರುವುದು ವರದಿಯಿಂದ ಬಹಿರಂಗಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರಶ್ಯ ಸಾಕ್ಷವನ್ನು ನಾಶಮಾಡಿತ್ತು ಎಂದು ತಿಳಿದು ಬಂದಿದೆ.

ರಶ್ಯದ ಕ್ರೀಡಾಪಟುಗಳು ಉದ್ದೀಪನಾ ಮದ್ದು ಸೇವಿಸುತ್ತಿದ್ದಾರೆ ಎಂಬ ವಿಚಾರ 2015ರ ವಾಡಾ ವರದಿಯಲ್ಲಿ ಬೆಳಕಿಗೆ ಬಂದಿತ್ತು. ಬಳಿಕ ರಶ್ಯದ ಮೇಲೆ ವಾಡಾ ಕಣ್ಣಿಟ್ಟಿತ್ತು. ಡೋಪಿಂಗ್ ಹಗರಣದ ಹಬೆಯಲ್ಲಿ ಬೇಯುತ್ತಿರುವ ರಶ್ಯಕ್ಕೆ ಮುಂದಿನ ಹಾದಿ ಕಠಿಣವಾಗಿದ್ದು, 2020 ಟೋಕಿಯೊ ಒಲಿಂಪಿಕ್ಸ್ ಮತ್ತು 2022 ಫಿಫಾ ವಿಶ್ವಕಪ್‌ನಲ್ಲಿ ರಶ್ಯದ ಧ್ವಜ ಮತ್ತು ಗೀತೆಯನ್ನು ನಿಷೇಧಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಮುಂದಿನ 4 ವರ್ಷಗಳ ಕಾಲ ರಶ್ಯ ಯಾವುದೇ ಪ್ರಮುಖ ಕ್ರೀಡಾ ಕೂಟಗಳ ಆತಿಥ್ಯ ವಹಿಸುವಂತಿಲ್ಲ.

ಸಚ್ಛಾರಿತ್ರವನ್ನು ಹೊಂದಿರುವ ರಶ್ಯದ ಕ್ರೀಡಾಪಟುಗಳಿಗೆ ಪ್ರಮುಖ ಕ್ರೀಡಾಕೂಟಗಳಲ್ಲಿ ಭಾಗವಹಿಸಬಹುದಾದರೂ, ರಾಷ್ಟ್ರಧ್ವಜದಡಿ ಸ್ಪರ್ಧಿಸುವಂತಿಲ್ಲ. ಆದರೆ ತಟಸ್ಥ ಧ್ವಜದ ಅಡಿಯಲ್ಲಿ ಸ್ಪರ್ಧಿಸಲು ಅವಕಾಶವಿರುತ್ತದೆ.

ಮುಂದಿನ ವರ್ಷ ಟೋಕಿಯೊ ಒಲಿಂಪಿಕ್ಸ್ ಮತ್ತು 2022 ರ ಕತಾರ್‌ನಲ್ಲಿ ನಡೆಯಲಿರುವ ಫುಟ್ಬಾಲ್ ವಿಶ್ವಕಪ್‌ನಲ್ಲಿ ರಶ್ಯದ ಧ್ವಜ ಹಾರುವುದನ್ನು ನೋಡಲು ಸಾಧ್ಯವಿಲ್ಲ. ರಶ್ಯದ ರಾಷ್ಟ್ರಗೀತೆ ಮೊಳಗದು ಎಂದು ಮೂಲಗಳು ತಿಳಿಸಿವೆ.

ತನ್ನನ್ನು ಜಾಗತಿಕ ಕ್ರೀಡಾ ಶಕ್ತಿ ಎಂದು ಬಿಂಬಿಸಲು ಪ್ರಯತ್ನಿಸಿದ ರಶ್ಯ ಡೋಪಿಂಗ್ ಹಗರಣಗಳಲ್ಲಿ ಸಿಲುಕಿಕೊಂಡಿದೆ, 2015 ರಲ್ಲಿ ವಾಡಾ ನಿಯೋಜಿಸಿದ ವರದಿಯು ರಶ್ಯದ ಅಥ್ಲೀಟ್‌ಗಳು ಸಾಮೂಹಿಕವಾಗಿ ಡೋಪಿಂಗ್‌ನಲ್ಲಿ ಭಾಗಿಯಾಗಿರುವುದಕ್ಕೆ ಪುರಾವೆ ಒದಗಿಸಿತ್ತು. 

ಕಳೆದ ಎರಡು ಒಲಿಂಪಿಕ್ಸ್‌ಗಳಲ್ಲಿ ರಶ್ಯದ ಹಲವು ಕ್ರೀಡಾಪಟುಗಳು ಹೊರಗುಳಿದಿದ್ದರು. ಕಳೆದ ವರ್ಷ ಪ್ಯಾಂಗ್‌ಚಾಂಗ್ ಚಳಿಗಾಲದ ಕ್ರೀಡೆಗಳಲ್ಲಿ ರಶ್ಯದ ಕ್ರೀಡಾಪಟುಗಳು ಸ್ವಂತ ರಾಷ್ಟ್ರಧ್ವಜದಡಿ ಭಾಗವಹಿಸುವುದಕ್ಕೆ ನಿಷೇಧ ಹೇರಲಾಗಿತ್ತು.

2014ರ ಸೋಚಿ ಕ್ರೀಡೆಗಳಲ್ಲಿ ಉದ್ದೀಪನ ಮದ್ದು ಸೇವನೆ ಪ್ರಕರಣವನ್ನು ಮುಚ್ಚಿಟ್ಟ ಕಾರಣದಿಂದಾಗಿ ರಶ್ಯ ಸಮಸ್ಯೆ ಎದುರಿಸುವಂತಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)