varthabharthi


ಕರಾವಳಿ

​ಚಿನ್ನಾಭರಣ ಕಳವು ಪ್ರಕರಣ: ಏಳು ಮಂದಿ ಆರೋಪಿಗಳಿಗೆ ನ್ಯಾಯಾಂಗ ಬಂಧನ

ವಾರ್ತಾ ಭಾರತಿ : 9 Dec, 2019

ಮಂಗಳೂರು : ನಗರದ ಬಲ್ಮಠ-ಬೆಂದೂರ್ ರಸ್ತೆಯ ಫ್ಲಾಟ್‌ವೊಂದರಿಂದ ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಏಳು ಮಂದಿ ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕದ್ರಿ ಶಿವಭಾಗ್‌ನ ರಾಕೇಶ್ ಬೋನಿಪಾಸ್ ಡಿಸೋಜ (37), ಗೋವಾ ಮಡಗಾಂವ್‌ನ ಅಶೋಕ್ ಬಂಡ್ರಗಾರ್(36), ಗಣೇಶ್ ಬಾಪು ಪರಾಬ್(37), ಶಾಹೀರ್ ಮುಹಮ್ಮದ್(43), ಸೋಮೇಶ್ವರ ಕೋಟೆಕಾರ್ ನಿವಾಸಿ ಜನಾರ್ದನ ಆಚಾರ್ಯ(41), ಮಂಗಳಾದೇವಿ ನಿವಾಸಿ ಚಂದನ್ ಆಚಾರ್ಯ(44), ಕೋಟೆಕಾರ್ ಬೀರಿ ನಿವಾಸಿ ಪುರುಷೋತ್ತಮ ಆಚಾರ್ಯ(46) ನ್ಯಾಯಾಂಗ ಬಂಧನಕ್ಕೊಳಗಾದವರು.

ಆರೋಪಿಗಳು ಸೆ.8ರಿಂದ 13ರ ನಡುವೆ ಅಭಿಮಾನ್ ಟೆಕ್ಸಾಸ್ ಅಪಾರ್ಟ್‌ಮೆಂಟ್‌ನ ಅನಿತಾ ಶೆಟ್ಟಿ ಎಂಬವರ ಪ್ಲಾಟ್‌ಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿದ್ದರು. ಪ್ಲಾಟ್‌ನ ಬಾತ್ ರೂಮ್ ಮುಖಾಂತರ ಒಳಗೆ ಪ್ರವೇಶಿಸಿದ್ದ ಆರೋಪಿಗಳು ಬೆಡ್ ರೂಮ್‌ನಲ್ಲಿದ್ದ ಲಾಕರ್‌ನ್ನು ಆಯುಧದಿಂದ ಮುರಿದು ಅದರಲ್ಲಿದ್ದ 65,000 ರೂ. ನಗದು ಹಾಗೂ ಸುಮಾರು 35 ಲಕ್ಷ ರೂ. ಮೌಲ್ಯದ ಚಿನ್ನದ ಕಿವಿಯೋಲೆ, ಚಿನ್ನದ ಬಳೆಗಳು, ಚಿನ್ನದ ಬ್ರಾಸ್‌ಲೈಟ್, ಚಿನ್ನದ ನೆಕ್ಲೇಸ್, ಡೈಮಂಡ್ ನೆಕ್ಲೇಸ್, ಡೈಮಂಡ್ ಉಂಗುರ, ಚಿನ್ನದ ವಾಚ್ ಹಾಗೂ ಚಿನ್ನದ ನಾಣ್ಯಗಳನ್ನು ಕಳವುಗೈದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಡಿ.5ರಂದು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದರು.

ವಿಚಾರಣೆಯನ್ನು ಮುಗಿಸಿ ಸೋಮವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಧೀಶರು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)