ಶಾ ಹಿಟ್ಲರ್ನ ಗುಂಪಿಗೆ ಸೇರಲಿದ್ದಾರೆ: ಅಸದುದ್ದೀನ್ ಉವೈಸಿ
ಪೌರತ್ವ ತಿದ್ದುಪಡಿ ಮಸೂದೆ
ಹೊಸದಿಲ್ಲಿ,ಡಿ.9: ಲೋಕಸಭೆಯಲ್ಲಿ ಸೋಮವಾರ ಕೇಂದ್ರ ಗೃಹಸಚಿವ ಅಮಿತ್ ಶಾ ವಿರುದ್ಧ ತೀವ್ರ ದಾಳಿಯನ್ನು ನಡೆಸಿದ ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ವರಿಷ್ಠ ಅಸದುದ್ದೀನ್ ಉವೈಸಿ ಅವರ,ಶಾ ಹಿಟ್ಲರ್ನ ಗುಂಪಿಗೆ ಸೇರಲಿದ್ದಾರೆ ಎಂದು ಕುಟುಕಿದರು.
ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಶಾ ಸದನದಲ್ಲಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆಯನ್ನು ೆ ಮಂಡಿಸಿದ ಬಳಿಕ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಉವೈಸಿ,‘‘ಇಂತಹ ಕಾನೂನಿನಿಂದ ದೇಶವನ್ನು ರಕ್ಷಿಸುವಂತೆ ನಾನು ನಿಮ್ಮಲ್ಲಿ (ಸ್ಪೀಕರ್) ಮನವಿ ಮಾಡುತ್ತೇನೆ. ಗೃಹ ಸಚಿವರನ್ನು ಕೂಡ ರಕ್ಷಿಸಿ. ಇಲ್ಲದೇ ಇದ್ದರೆ ನ್ಯೂರೆಂಬರ್ಗ್ ಜನಾಂಗ ಕಾನೂನುಗಳು ಹಾಗೂ ಇಸ್ರೇಲ್ನ ಪೌರತ್ವ ಕಾಯ್ದೆಯಂತೆ ಶಾ ಅವರ ಹೆಸರೂ ಹಿಟ್ಲರ್ ಮತ್ತು ಡೇವಿಡ್ ಬೆನ್-ಗುರಿಯನ್ ಅವರ ಸಾಲಿನಲ್ಲಿ ಸೇರಿಕೊಳ್ಳುತ್ತದೆ ಎಂದರು. ಪೌರತ್ವ ತಿದ್ದುಪಡಿ ಮಸೂದೆಯು ದೇಶದ ಜನರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದೂ ಅವರು ಹೇಳಿದರು.
ಉವೈಸಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ಪೀಕರ್ ಓಂ ಬಿರ್ಲಾ ಅವರು, ಇಂತಹ ಅಸಂಸದೀಯ ಶಬ್ದಗಳನ್ನು ಸದನದಲ್ಲಿ ಬಳಸಬೇಡಿ,ನಿಮ್ಮ ಈ ಹೇಳಿಕೆಯನ್ನು ದಾಖಲೆಗಳಿಂದ ಅಳಿಸಲಾಗುವುದು ಎಂದು ತಿಳಿಸಿದರು.