varthabharthi


ಬೆಂಗಳೂರು

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ರಾಜ್ಯ ಸರಕಾರ

ವಾರ್ತಾ ಭಾರತಿ : 10 Dec, 2019

ಬೆಂಗಳೂರು, ಡಿ.10: ಅಂಗನವಾಡಿ ಕೇಂದ್ರದಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭ, ಮಾತೃಪೂರ್ಣ ಯೋಜನೆಗಾಗಿ ಹೆಚ್ಚಿನ ಸಹಾಯಕಿಯರ ನೇಮಕ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಮ್ಮಿಕೊಂಡಿದ್ದ, ಭಾರೀ ಪ್ರತಿಭಟನೆಗೆ ರಾಜ್ಯ ಸರಕಾರ ಅನುಮತಿ ನಿರಾಕರಿಸಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ನೇತೃತ್ವದಲ್ಲಿ ಮಹಿಳಾ ನೌಕರರು, ಸಹಾಯಕಿಯರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಂಗಳವಾರದಿಂದ ತುಮಕೂರಿನ ಸ್ವಾತಂತ್ರ ಚೌಕದಿಂದ ಕಾಲ್ನಡಿಗೆಯಲ್ಲಿ ಸಾಗಿ, ಡಿ.12ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಮೈದಾನದಲ್ಲಿ ಜಮಾವಣೆಗೊಂಡು, ಸರಕಾರಕ್ಕೆ ತಮ್ಮ ಬೇಡಿಕೆ ಸಲ್ಲಿಸಲು ನಿರ್ಧರಿಸಿದ್ದರು. ಆದರೆ, ಬೆಂಗಳೂರು ಪೊಲೀಸರು ಅಂಗನವಾಡಿ ಕಾರ್ಯಕರ್ತೆಯರು ರಾಜಧಾನಿ ಪ್ರವೇಶಕ್ಕೆ ತಡೆಹಾಕಿ, ಸಂಘದ ಅಧ್ಯಕ್ಷೆ ವರಲಕ್ಷ್ಮಿ ಸೇರಿದಂತೆ 5 ಜನರು ಗುಂಪು ಸೇರಿ ಪ್ರತಿಭಟನೆ ನಡೆಸುವುದಕ್ಕೆ ನಿಷೇಧ ಹೇರಿರುವುದಲ್ಲದೆ, ಕಲಂ 114(3) ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದೆ.

ನಿಷೇಧ ಏಕೆ?: ಈ ಹಿಂದೆ ಅನೇಕ ಬಾರಿ ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿಯೇ ಸಂಘದ ಅಧ್ಯಕ್ಷೆ ವರಲಕ್ಷ್ಮಿ ನೇತೃತ್ವದಲ್ಲಿ ಹಲವು ದಿನಗಳ ಕಾಲ ಪ್ರತಿಭಟನೆ ನಡೆಸಿದ ಪರಿಣಾಮ, ನಗರದ ವಿವಿಧ ಕಡೆಗಳಿಗೆ ಹೋಗುವ ಬಹುತೇಕ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಹೋರಾಟಗಾರರ ವಿರುದ್ಧ ಮೊಕದ್ದಮೆಯೂ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಅಂಗನವಾಡಿ ನೌಕರರು, ರಾಜಧಾನಿ ಬೆಂಗಳೂರು ಪ್ರವೇಶಿಸುವುದು, ಮೆರವಣಿಗೆ ನಡೆಸುವುದು, ಪ್ರತಿಭಟನೆ ನಡೆಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಭಾಸ್ಕರ್ ರಾವ್ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ಬೆಂಬಲ: ಅಂಗನವಾಡಿ ನೌಕರರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಹೋರಾಟಕ್ಕೆ ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ.

ಈ ಕುರಿತು ಮಂಗಳವಾರ ನಗರ ಪ್ರೆಸ್‌ ಕ್ಲಬ್‌ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಲಿತ ಪರ ಹೋರಾಟಗಾರ ಮಾವಳ್ಳಿ ಶಂಕರ್, ಪೂರ್ವ ಪ್ರಾಥಮಿಕ ಶಾಲೆಗಳನ್ನು ಅಂಗನವಾಡಿಯಲ್ಲೇ ಪ್ರಾರಂಭಿಸಬೇಕು. ಅದೇ ರೀತಿ, ನೌಕರರ ಹಿತಕಾಯಲು ಸರಕಾರ ಮುಂದಾಗಬೇಕು ಎಂದು ಒತ್ತಾಯ ಮಾಡಿದರು.

ಪ್ರತಿಭಟನಾಕಾರರು ವಶಕ್ಕೆ

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ನಾಗರತ್ನಮ್ಮ ನೇತೃತ್ವದಲ್ಲಿ ಕೋಲಾರ ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿದ್ದ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಅದೇ ರೀತಿ, ಬೆಂಗಳೂರಿನ ಸುತ್ತಮುತ್ತಲಿನಿಂದ ಬೆಂಗಳೂರಿಗೆ ಹೊರಟ್ಟಿದ್ದ ಅನೇಕರನ್ನು ಪೊಲೀಸರು ತಡೆದಿದ್ದಾರೆ.

ಸರಕಾರದ ನಡೆ ಅಮಾನುಷ

ಪ್ರತಿಭಟನೆಗೆ ಅನುಮತಿ ನೀಡದ ಪೊಲೀಸರು ಹಾಗೂ ರಾಜ್ಯ ಸರಕಾರದ ನಡೆ ಅಮಾನುಷವಾದದ್ದು, ಇದು ಹೋರಾಟ, ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ಕೆಲಸವಾಗಿದೆ. ಈ ಹೋರಾಟ ಮುಂದುವರೆಯಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರ ವ್ಯರ್ಥ ಪ್ರಯತ್ನ ಮಾಡುವ ಬದಲು, ಬೇಡಿಕೆ ಈಡೇರಿಸಲಿ.

-ಎಸ್.ವರಲಕ್ಷ್ಮಿ, ಅಧ್ಯಕ್ಷೆ ಅಂಗವಾಡಿ ನೌಕರರ ಸಂಘ

ಬೇಡಿಕೆಗಳು

* ಅಂಗನವಾಡಿ ಕೇಂದ್ರಗಳಲ್ಲಿ ಪಾಲನೆಯೊಟ್ಟಿಗೆ ಎಲ್‌ಕೆಜಿ-ಯುಕೆಜಿ ಶಿಕ್ಷಣ ನೀಡಿ

 * ಹೊಸ ಶಿಕ್ಷಣ ನೀತಿಯ ಶಿಫಾರಸ್ಸಿಲ್ಲಿರುವ 3ರಿಂದ 9 ವರ್ಷದ ವರ್ಗೀಕರಣ ವಿರೋಧಿಸಬೇಕು

* ಈಗಿನ ನಿವೃತ್ತಿ ಸೌಲಭ್ಯ ಬದಲಾಯಿಸಿ, ಎಲ್‌ಐಸಿ ಆಧಾರಿತ ಪೆನ್‌ಷನ್ ನೀಡಬೇಕು

* ಸೇವಾ ಜೇಷ್ಠತೆ ಆಧಾರದಲ್ಲಿ ಕನಿಷ್ಠ ವೇತನ ಜಾರಿಗೊಳಿಸಬೇಕು ಸೇರಿದಂತೆ ಒಟ್ಟು 14 ಬೇಡಿಕೆಗಳನ್ನು ಸರಕಾರ ಈಡೇರಿಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)