varthabharthi


ಕರ್ನಾಟಕ

ಬುರುಡೆ ಸಿದ್ದರಾಮಯ್ಯರ ಜ್ಯೋತಿಷ್ಯಾಲಯ ಮುಚ್ಚಿದೆ ಎಂದ ಸಚಿವ ಆರ್.ಅಶೋಕ್

ವಾರ್ತಾ ಭಾರತಿ : 10 Dec, 2019

ಹುಬ್ಬಳ್ಳಿ, ಡಿ.10: ಉಪಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲ್ಲುತ್ತಾರೆ ಎಂದಿದ್ದ ಸಿದ್ದರಾಮಯ್ಯರ ಜ್ಯೋತಿಷ್ಯಾಲಯ ಮುಚ್ಚಿಹೋಗಿದ್ದು, ಈಗ ಅವರೊಬ್ಬ ಬುರುಡೆ ಸಿದ್ದರಾಮಯ್ಯ ಆಗಿದ್ದಾರೆಂದು ಕಂದಾಯ ಮತ್ತು ಪೌರಾಡಳಿತ ಸಚಿವ ಆರ್.ಅಶೋಕ್ ಲೇವಡಿ ಮಾಡಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಉಪಚುನಾವಣೆ ಯಲ್ಲಿ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆಂದು ಹೇಳಿದ್ದ ಸಿದ್ದರಾಮಯ್ಯರ ಭವಿಷ್ಯ ಫಲಿತಾಂಶದ ಬಳಿಕ ಡೋಲಾಯಮಾನವಾಗಿದೆ. ಜನತೆ ಯಾರಿಗೆ ತಕ್ಕ ಪಾಠ ಕಲಿಸಿದ್ದಾರೆಂದು ನಾಡಿಗೆ ಗೊತ್ತಾಗಿದೆ ಎಂದರು.

ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿಯೇ ಮುಂದುವರಿಯಬೇಕು. ಅವರು ಯಾವುದೇ ಪಕ್ಷಕ್ಕೆ ಹೋದರೂ ಪಕ್ಷವನ್ನು ಇಬ್ಭಾಗ ಮಾಡುವುದರಲ್ಲಿಯೇ ಇರುತ್ತಾರೆ. ಈಗಾಗಲೇ ಕಾಂಗ್ರೆಸ್ಸನ್ನು ಮೂರು ಭಾಗವಾಗಿ ಮಾಡಿ, ನಮಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರ ನಡೆಗಳು ಮುಂದೆಯೂ ನಮಗೆ ಅನುಕೂಲಕರವಾಗಿರುತ್ತವೆ ಎಂದು ಅವರು ವ್ಯಂಗ್ಯವಾಡಿದರು.

ಅರ್ಹರಿಗೆ ಪಿಂಚಣಿ

ಪಿಂಚಣಿಗಾಗಿ ಸರಕಾರಿ ಕಚೇರಿಗಳಿಗೆ ವೃದ್ಧರು ಅಲೆಯುವುದನ್ನು ತಪ್ಪಿಸಲು ಕ್ರಾಂತಿಕಾರಿ ಯೋಜನೆ ರೂಪಿಸುತ್ತಿದ್ದೇವೆ. ವಾರದೊಳಗೆ ಯೋಜನೆಗೆ ಹೆಸರು ಇಟ್ಟು, ಅನುಷ್ಠಾನಗೊಳಿಸಲಾಗುವುದು. ಆಧಾರ ಕಾರ್ಡ್ ಮೂಲಕ ಸರಕಾರವೇ ಅವರ ವಯಸ್ಸು ತಿಳಿದು, ಅರ್ಹರಿಗೆ ಪಿಂಚಣಿ ತಲುಪಿಸಲಿದೆ. ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿ, ದಾಖಲೆಗಳ ಸಂಗ್ರಹ ಹೇಗೆ ಮಾಡಬೇಕೆಂದು ನಿರ್ಧರಿಸಲಾಗುವುದು.

-ಆರ್.ಅಶೋಕ್, ಕಂದಾಯ ಸಚಿವ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)