varthabharthi


ನಿಮ್ಮ ಅಂಕಣ

ಮಹಿಳೆಯರ ಮೇಲಿನ ಅತ್ಯಾಚಾರಗಳೂ! ಕೋಮುವಾದಿ ಫ್ಯಾಶಿಸ್ಟ್ ಕಾರ್ಯಸೂಚಿಯೂ!

ವಾರ್ತಾ ಭಾರತಿ : 10 Dec, 2019
ನಂದಕುಮಾರ್ ಕೆ. ಎನ್.

ನಮ್ಮ ಪಕ್ಕದ ರಾಜ್ಯ ತೆಲಂಗಾಣದಲ್ಲಿ ದಿಶಾ ಎಂಬ ಹೆಣ್ಣುಮಗಳೊಬ್ಬಳನ್ನು ವಿಕ್ಷಿಪ್ತ ಹಾಗೂ ವಿಕೃತ ಮನಸ್ಸಿನ ಯುವಕರು ಧಾರುಣವಾಗಿ ಅತ್ಯಾಚಾರ ಮಾಡಿ ಪೆಟ್ರೋಲ್ ಹಾಕಿ ಸುಟ್ಟು ಕರಕಲಾಗಿಸಿದ್ದು ಇಡೀ ದೇಶದ ಹೃದಯವನ್ನೇ ಕಲಕಿದ ಘಟನೆ. ಅದೇ ಸಂದರ್ಭದಲ್ಲೇ ನಮ್ಮ ರಾಜ್ಯದ ಕಲಬುರಗಿಯಲ್ಲಿ ಎಂಟು ವರ್ಷದ ಎಳೆಯ ಬಾಲೆಯೊಬ್ಬಳನ್ನು ಅತ್ಯಾಚಾರ ಮಾಡಿ ಕಗ್ಗೊಲೆ ಮಾಡಿದ ಘಟನೆಯೂ ನಡೆಯಿತು. ಅದು ಹೆಚ್ಚು ಸುದ್ದಿಯಾಗಲಿಲ್ಲ. ಇದೇ ಸಮಯದಲ್ಲೇ ದಾನಮ್ಮ ಎಂಬ ಎಳೆಯ ಬಾಲೆಯ ಅತ್ಯಾಚಾರ, ಕೊಲೆ ಘಟನೆಯಲ್ಲಿ ಸುದ್ದಿಗೆ ಗ್ರಾಸವಾಗಿದ್ದ ವಿಜಯಪುರ ಜಿಲ್ಲೆಯ ಜಮಖಂಡಿಯಲ್ಲಿ ಮತ್ತೊಬ್ಬಳು ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರ ಕೊಲೆ ನಡೆದಿದ್ದು ಹೆಚ್ಚಾಗಿ ಸುದ್ದಿ ಮಾಧ್ಯಮಗಳ ಕಣ್ಣಿಗೆ ಬೀಳಲಿಲ್ಲ. ಅಂದರೆ ಹೈದರಾಬಾದ್ ಘಟನೆಯ ಸಂದರ್ಭದಲ್ಲೇ ಕರ್ನಾಟಕವೂ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಕೊಲೆಗಳು ನಡೆದಿವೆ. ಕೆಲವು ಮಾತ್ರ ಒಂದು ಮಟ್ಟದ ಸುದ್ದಿಯಾದವು ಅಷ್ಟೆ. ಅದರಲ್ಲಿ ಒಂದೆರಡು ಘಟನೆಗಳಿಗೆ ಮಾತ್ರ ಸಾರ್ವಜನಿಕ ಆಕ್ರೋಶಗಳು ವ್ಯಕ್ತವಾದವು. ಸುದ್ದಿಯಾಗದೇ ಉಳಿದವುಗಳ ಲೆಕ್ಕಗಳನ್ನು ಯಾರೂ ಮಾಡಲು ಸಾಧ್ಯವಿಲ್ಲ. ದಿಶಾ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆದವು. ಮಹಿಳಾ ಸಮೂಹ ಬೀದಿಗಿಳಿಯಿತು. ಅತ್ಯಾಚಾರಿ ಕೊಲೆಗಡುಕರನ್ನು ನೇಣಿಗೇರಿಸಬೇಕು, ಗುಂಡಿಟ್ಟು ಸಾಯಿಸಬೇಕೆಂದು, ಕಲ್ಲು ಹೊಡೆದು ಸಾಯಿಸಬೇಕೆಂದು, ಸೌದಿ ಮಾದರಿ ಶಿಕ್ಷೆ ನೀಡಬೇಕೆಂದು, ಪುರುಷತ್ವ ಹರಣ ಮಾಡಬೇಕೆಂದು ಹೀಗೆ ಹಲವಾರು ರೀತಿಯಲ್ಲಿ ರೋಷದ ಭಾವಾವೇಶದ ಪ್ರತಿಕ್ರಿಯೆಗಳು ಬಂದವು.

2014ರ ನವೆಂಬರ್‌ನಲ್ಲಿ ಮಲೆನಾಡಿನ ತೀರ್ಥಹಳ್ಳಿಯ ನಂದಿತಾ, ಉಜಿರೆಯಲ್ಲಿ ಸೌಜನ್ಯಾ ಎಂಬ ಹೆಣ್ಣು ಮಗಳ ಮೇಲೆ ಅತ್ಯಾಚಾರ ಹಾಗೂ ಕಗ್ಗೊಲೆ ನಡೆದಿದ್ದು ರಾಜ್ಯದಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಕಳೆದ 2018ರಲ್ಲಿ ಕಾಶ್ಮೀರದ ಕಥುವಾದಲ್ಲಿ ಆಸಿಫಾ ಎನ್ನುವ ಬಕ್ರೆವಾಲ್ ಎಂಬ ಅಲೆಮಾರಿ ಸಮುದಾಯದ ಎಂಟು ವರ್ಷದ ಹೆಣ್ಣು ಮಗುವಿನ ಮೇಲೆ ಭೀಕರ ರೀತಿಯಲ್ಲಿ ಅತ್ಯಾಚಾರ ನಡೆಸಿ ಕಗ್ಗೊಲೆ ಮಾಡಲಾಯಿತು. ಇದು ನಡೆದದ್ದು ದೇವಸ್ಥಾನವೊಂದರಲ್ಲಿ. ಮಾಡಿದವರಲ್ಲಿ ದೇವಸ್ಥಾನದ ಪೂಜಾರಿಯೂ ಸೇರಿದ್ದ. ಈ ಘಟನೆ ಕೂಡ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಉತ್ತರ ಪ್ರದೇಶದ ಉನ್ನಾವೊ ಅತ್ಯಾಚಾರ ಪ್ರಕರಣ ದೇಶಾದ್ಯಂತ ಭಾರೀ ಸುದ್ದಿಗೆ ಗ್ರಾಸವಾದ ಘಟನೆ. ಅಲ್ಲಿ ತಿಂಗಳಾನುಗಟ್ಟಲೆ ಆ ಹೆಣ್ಣು ಮಗಳನ್ನು ಬಂಧಿಯಾಗಿಸಿಕೊಂಡು ನಿರಂತರ ಅತ್ಯಾಚಾರಗಳನ್ನು ನಡೆಸಲಾಗಿತ್ತು.

ಆಕೆ ಅದನ್ನು ದೃಢವಾಗಿ ವಿರೋಧಿಸಿ ಕಾನೂನು ಮೊರೆಹೋಗಿದ್ದರಿಂದ ಆಕೆಯನ್ನು ಈಗ ಹೊಡೆದು, ಇರಿದು ಬೆಂಕಿ ಇಟ್ಟು ಕಗ್ಗೊಲೆ ಮಾಡಲಾಗಿದೆ. ಸರಕಾರ, ಕಾನೂನು, ನ್ಯಾಯಾಲಯ ಹಾಗೂ ಪೊಲೀಸ್ ವ್ಯವಸ್ಥೆ ಆಕೆಗೆ ರಕ್ಷಣೆ ಕೊಟ್ಟು ಕಾಪಾಡಲಿಲ್ಲ. ಇದೇ ಸಂದರ್ಭದಲ್ಲೇ ಉತ್ತರ ಪ್ರದೇಶದ ಮುಝಫ್ಫರ್ ನಗರದಲ್ಲಿ ಅತ್ಯಾಚಾರ ಸಂತ್ರಸ್ತೆಯ ಮೇಲೆ ದೂರು ವಾಪಸ್‌ಪಡೆಯದಿದ್ದುದಕ್ಕಾಗಿ ಆ್ಯಸಿಡ್ ದಾಳಿ ನಡೆದದ್ದು ವರದಿಯಾಗಿದೆ. ಅಲ್ಲಿನ ಯೋಗಿ ಆದಿತ್ಯನಾಥ್ ಸರಕಾರ ಆ ಹೆಣ್ಣು ಮಗಳಿಗೂ ರಕ್ಷಣೆ ನೀಡಲಿಲ್ಲ. ಆಕೆ ಈಗ ಶೇ. 30ರಷ್ಟು ಸುಟ್ಟ ಗಾಯಗಳಿಗೆ ಈಡಾಗಿದ್ದಾಳೆಂಬ ವರದಿಯಿದೆ. ‘ನ ಸ್ತ್ರಿ ಸ್ವಾತಂತ್ರ್ಯಮರ್ಹತಿ’ ಎಂಬ ಮನುವಾದಿ ಸೂತ್ರವನ್ನು ಪಾಲಿಸಬೇಕೆನ್ನುವ ಸಂಘಪರಿವಾರ ಮತ್ತದರ ರಾಜಕೀಯ ಪಕ್ಷವಾದ ಬಿಜೆಪಿ ಹೆಚ್ಚಿನ ಅತ್ಯಾಚಾರ ಪ್ರಕರಣಗಳಲ್ಲಿ ನೇರವಾಗಿಯೂ ಹಾಗೂ ಪರೋಕ್ಷವಾಗಿಯೂ ಶಾಮೀಲಾಗಿರುವ ವರದಿಗಳಿವೆ. ಈ ವಿಚಾರದಲ್ಲಿ ಇತರ ಪಕ್ಷಗಳೂ ಕಡಿಮೆ ಅಪರಾಧಿಗಳೆಂದು ಭಾವಿಸಲಾಗದು. ಆದರೆ ಸಂಘ ಪರಿವಾರ ಅತ್ಯಾಚಾರವನ್ನು ಜಾತೀವಾದಿ ಹಾಗೂ ಕೋಮುವಾದಿ ಅಸ್ತ್ರವನ್ನಾಗಿ ಪ್ರಧಾನವಾಗಿ ಉಪಯೋಗಿಸುತ್ತಾ ಬಂದಿದೆ. ಇದು ಬಾಬರಿ ಮಸೀದಿ ಉರುಳಿಸಿದ ನಂತರ ನಡೆಸಿದ ಕೋಮು ಹಿಂಸಾಚಾರಗಳಲ್ಲಿ, ಗೋದ್ರಾ ಹತ್ಯಾಕಾಂಡಗಳಲ್ಲಿ ಕಂಡಿದ್ದೇವೆ.

ವಿಜಯಪುರ, ಜಮಖಂಡಿ, ಪುತ್ತೂರು, ಉತ್ತರ ಪ್ರದೇಶದ ಉನ್ನಾವೊ, ಮುಝಫ್ಫರ್ ನಗರ ಮೊದಲಾದ ಕಡೆಗಳಲ್ಲಿ ಸಂಘಪರಿವಾರದವರೇ ಆರೋಪಿಗಳಾಗಿದ್ದಾರೆ. ಅದರಲ್ಲಿ ಮಂತ್ರಿಗಳಿಂದ ಹಿಡಿದು ಶಾಸಕ, ಕಾರ್ಯಕರ್ತರವರೆಗೂ ಸೇರಿದ್ದಾರೆ. ಈ ಹಿಂದಿನ ಉನ್ನಾವೊ ಅತ್ಯಾಚಾರ ಘಟನೆಯಲ್ಲಿ ಅಲ್ಲಿನ ಜನಪ್ರತಿನಿಧಿಯೇ ಪ್ರಧಾನ ಆರೋಪಿಯಾಗಿದ್ದಾನೆ. ಉತ್ತರ ಪ್ರದೇಶ ಸರಕಾರ ಆ ಅಪರಾಧಿಗಳನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿದೆ. ಈ ಘಟನೆಯನ್ನು ಕೂಡ ಕೋಮುವಾದೀಕರಣ ಮಾಡಿ ದಿಕ್ಕು ತಪ್ಪಿಸಲು ಸಂಘ ಪರಿವಾರ ಶ್ರಮಿಸಿತ್ತು. ಕಾಶ್ಮೀರದ ಕಥುವಾ ಅತ್ಯಾಚಾರ ಹಾಗೂ ಕಗ್ಗೊಲೆ ಆರೋಪಿಗಳ ಪರವಾಗಿ ಸಂಘ ಪರಿವಾರದ ಬೆಂಬಲಿಗರು ನಿಂತಿದ್ದಲ್ಲದೆ ಅದಕ್ಕಾಗಿಯೇ ಸಂಘಟನೆಯೊಂದನ್ನು ಸೃಷ್ಟಿಸಿದ್ದರು. ಮತೋನ್ಮಾದವನ್ನು ಬಡಿದೆಬ್ಬಿಸಿ, ಆ ಮಗುವಿನ ಮೇಲೆ ನಡೆದ ಅಮಾನುಷತೆಯನ್ನು ಬೆಂಬಲಿಸಿದ್ದರು, ಅಪರಾಧಿಗಳನ್ನು ರಕ್ಷಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದರು. ಸಂತ್ರಸ್ತ ಕುಟುಂಬದ ಪರವಾಗಿ ವಾದಿಸದಂತೆ ವಕೀಲರ ಮೇಲೂ ಬೆದರಿಕೆ ಹಾಕಲಾಗಿತ್ತು. ಸಂಘ ಪರಿವಾರ ಮತ್ತದರ ಸಿದ್ಧಾಂತ ಎಂತಹ ಜೀವವಿರೋಧಿ ಎನ್ನುವುದಕ್ಕೆ ಇವೆಲ್ಲಾ ಕೆಲವು ಉದಾಹರಣೆಗಳಷ್ಟೇ.

ಕರ್ನಾಟಕದ ಹೆಚ್ಚಿನೆಲ್ಲಾ ಅತ್ಯಾಚಾರ ಮತ್ತು ಕಗ್ಗೊಲೆ ಘಟನೆಗಳಲ್ಲಿ ಸಂಘ ಪರಿವಾರದ ಕೋಮುವಾದಿ ಮತ್ತು ಜಾತೀವಾದಿ ಕಾರ್ಯ ಸೂಚಿಗಳು ಕೆಲಸ ಮಾಡಿದ್ದವು. ತೀರ್ಥಹಳ್ಳಿ ಘಟನೆಯಲ್ಲಿ ತಮ್ಮ ಅಪಪ್ರಚಾರದ ಮೂಲಕ ಯಂತ್ರಾಂಗಗಳನ್ನು ಬಳಸಿ ಕೋಮುವಾದೀಕರಣ ಮಾಡಿ ಕೋಮು ಗಲಭೆ ಸೃಷ್ಟಿಸಲು ಇನ್ನಿಲ್ಲದಂತೆ ಪ್ರಯತ್ನಿಸಲಾಗಿತ್ತು. ಹೈದರಾಬಾದ್‌ನ ಘಟನೆಯ ವಿರುದ್ಧ ಜನಾಕ್ರೋಶ ಹೆಚ್ಚಿದಂತೆ ಅದನ್ನು ಕೋಮುವಾದೀಕರಣ ಮಾಡಿ ಜನರ ಆಕ್ರೋಶವನ್ನು ಮುಸ್ಲಿಮ್ ಸಮುದಾಯದ ವಿರುದ್ಧ ತಿರುಗಿಸಲು ಇನ್ನಿಲ್ಲದ ಪ್ರಯತ್ನವನ್ನು ಮಾಡಲಾಯಿತು. ಆ ಪ್ರಯತ್ನ ಇನ್ನೂ ನಿಂತಿಲ್ಲ. ಅತ್ಯಾಚಾರಿ ಆರೋಪಿಗಳಲ್ಲಿ ಒಬ್ಬಾತ ಮುಸ್ಲಿಮ್ ಸಮುದಾಯಕ್ಕೆ ಸೇರಿದ್ದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಲು ನೋಡಿದ್ದರು. ಸಂಘಪರಿವಾರದ ನಮೋ ಬ್ರಿಗೇಡ್‌ನ ಮುಖ್ಯಸ್ಥರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಕೋಮುವಿಷವನ್ನು ವಾಂತಿ ಮಾಡಿಕೊಂಡಿದ್ದರು. ಉಳಿದ ಮೂವರು ಮುಸ್ಲಿಮರಾಗಿರಲಿಲ್ಲ ಎನ್ನುವುದನ್ನು ಮರೆಮಾಚಿ ಆ ಘಟನೆಗೆ ಮುಸ್ಲಿಮರೇ ಕಾರಣವೆನ್ನುವಂತೆ ಬಿಂಬಿಸಲು ಪ್ರಯತ್ನಿಸಿದ್ದರು.

ಆದರೆ ಅವರು ಸೇರಿದಂತೆ ಸಂಘ ಪರಿವಾರದ ಶಕ್ತಿಗಳು ಉತ್ತರ ಭಾರತದ ಅಸಾರಾಂ ಬಾಪೂ ಮತ್ತು ಆತನ ಮಗ, ಸ್ವಾಮಿ ಚಿನ್ಮಯಾನಂದ ಮೊದಲಾದ ಹಿಂದೂ ಧರ್ಮದವರೆಂದು ಬಿಂಬಿಸಿಕೊಂಡಿರುವ ಮಠಾಧೀಶರ, ಆಧ್ಯಾತ್ಮಿಕ ಗುರುಗಳೆನಿಸಿಕೊಂಡವರು ಮಾಡಿರುವ ಅತ್ಯಾಚಾರಗಳ ಬಗ್ಗೆ ಸಾರ್ವಜನಿಕ ಸುದ್ದಿಯಾದರೂ, ನ್ಯಾಯಾಲಯಗಳ ಕಟ್ಟೆ ಏರಿದ್ದರೂ, ಆರೋಪ ಸಾಬೀತಾಗಿ ಶಿಕ್ಷೆಗೆ ಈಡಾಗಿದ್ದರೂ ಯಾವುದೇ ಚಕಾರ ಎತ್ತದೆ ಅಂತಹವರ ಸಂಪೂರ್ಣ ಸಮರ್ಥನೆಗಳಲ್ಲಿ ತೊಡಗಿದ್ದಾರೆ. ತನ್ನ ರಾಜಕೀಯ ಅಂಗ ಪಕ್ಷದ ನಲವತ್ತಕ್ಕೂ ಹೆಚ್ಚು ಸಂಸದರು ಅತ್ಯಾಚಾರ ಸೇರಿದಂತೆ ಕೊಲೆ, ಹಲ್ಲೆ ಮೊದಲಾದ ಅಪರಾಧಗಳನ್ನು ಎಸಗಿದ ಆರೋಪಗಳಲ್ಲಿ ವಿಚಾರಣೆ ಎದುರಿಸುತ್ತಿದ್ದರೂ ಅವರ ಅಪರಾಧ ಕೃತ್ಯಗಳನ್ನು ವಿರೋಧಿಸದೆ ಅವರನ್ನು ಸಮರ್ಥನೆ ಮಾಡುವ ಕಾರ್ಯ ಮಾಡುತ್ತಾ ಬಂದಿದ್ದಾರೆ.

ಬ್ರಾಹ್ಮಣಶಾಹಿ ಧಾರ್ಮಿಕತೆಯ ವಿಚಾರಗಳನ್ನು ವಿರೋಧಿಸದೆ ಮಠ ಮಾನ್ಯಗಳು, ಧಾರ್ಮಿಕ ಗುರುಗಳೆನ್ನಿಸಿಕೊಂಡವರು, ರಾಜಕೀಯ ನಾಯಕರ, ಸರಕಾರಗಳು ಮತ್ತದರ ಅಂಗಗಳ ಇಂತಹ ಮಹಿಳಾ ವಿರೋಧಿ ದುಷ್ಟ ಕೃತ್ಯಗಳನ್ನು ವಿರೋಧಿಸದೇ ಹೋದರೆ ಸಾಂಸ್ಥಿಕಗೊಂಡು ವ್ಯವಸ್ಥೆಯ ಭಾಗವಾಗಿರುವ ಅತ್ಯಾಚಾರ ಎಂಬ ಜೀವ ವಿರೋಧಿ ಪಿಡುಗನ್ನು ತಡೆಗಟ್ಟಲು ಸಾಧ್ಯವಾಗದು. ಹಾಗಾಗಿ ಕೋಮುವಾದ, ಜಾತಿವಾದ, ಕಾರ್ಪೊರೇಟು ಪರ ಚಿಂತನೆಗಳನ್ನು ಗ್ರಹಿಸಿ ಹಿಮ್ಮೆಟ್ಟಿಸುವುದು ಬಹಳ ಅಗತ್ಯ. ಮಹಿಳೆಯರೂ ಸೇರಿದಂತೆ ದಲಿತ ದಮನಿತ ಸಮುದಾಯಗಳಿಗೆ ದೇಶದ ಸಂಪತ್ತು, ರಾಜಕೀಯ ಅಧಿಕಾರ, ಸಾಮಾಜಿಕ ಸ್ಥಾನಮಾನಗಳಲ್ಲಿ ಸಮಾನ ಅವಕಾಶಗಳು ಸಹಜವಾಗಿ ದೊರೆಯುವಂತಾಗದ ಹೊರತು ಅತ್ಯಾಚಾರವೂ ಕಗ್ಗೊಲೆಗಳೂ ಸೇರಿದಂತೆ ಮಹಿಳಾ ಶೋಷಣೆ ತಪ್ಪಲಾರದು.


ಮಿಂಚಂಚೆ: nandakumarnandana67@gmail.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)