varthabharthi

ಅನುಗಾಲ

ಸ್ವಾತಂತ್ರ್ಯ ಹೋರಾಟದೊಂದು ತೊರೆಗೆ ಶತಮಾನದ ಸಂಭ್ರಮ

ವಾರ್ತಾ ಭಾರತಿ : 12 Dec, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ತಿರುಮಲೇಶ್ವರ ಭಟ್ಟರ ಸಾಮಾಜಿಕ ದೃಷ್ಟಿಕೋನ ಇಂದಿನ ತಲೆಮಾರಿಗೆ ಮಾದರಿಯಾಗಬೇಕಿತ್ತು. ಕೋಮುವಾದಕ್ಕೆ ಪ್ರಚೋದನೆ ನೀಡುವ ಇಂದಿನ ಸ್ಥಿತಿಯಲ್ಲಿ ಅವರ ವಿಶಾಲ ಮನೋಸ್ಥಿತಿಯು ಅನುಕರಣೀಯ. ಜಾತಿ-ವರ್ಗವ್ಯತ್ಯಾಸವನ್ನು ಅವರು ಸಹಿಸುತ್ತಿರಲಿಲ್ಲ. ಅಷ್ಟೇ ಅಲ್ಲ, ಸಾರ್ವಜನಿಕ ಜೀವನದಲ್ಲಿ ಶುದ್ಧಹಸ್ತರಾಗಿರಬೇಕೆಂದು ಅವರು ಸದಾ ಹೇಳುತ್ತಿದ್ದರು ಮಾತ್ರವಲ್ಲ ಅದನ್ನು ಕಾಪಾಡುವುದಕ್ಕಾಗಿ ಪ್ರತಿಭಟನೆ ಮತ್ತು ಹೋರಾಟದ ಹಾದಿಯನ್ನು ಹಿಡಿದಿದ್ದರು.

ಸ್ವಾತಂತ್ರ್ಯದ ದಾಹ ಎಲ್ಲರಿಗೂ ಇದೆ; ಇತ್ತು. ಭಾರತದ ಚರಿತ್ರೆಯನ್ನು ಮತ್ತು ವಿಶೇಷವಾಗಿ 18ರಿಂದ 20ನೇ ಶತಮಾನದ ಪೂರ್ವಾರ್ಧದ ವರೆಗೆ ನಡೆದ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಗಮನಿಸಿದವರಿಗೆ ಅದರ ಮಹತ್ವ ಎರಡು ಮಜಲುಗಳಲ್ಲಿ ಗೋಚರಿಸುತ್ತದೆ. ಮೊದಲನೆಯದು, ರಾಜಕೀಯವಾಗಿ ಪರದಾಸ್ಯದಿಂದ ಮುಕ್ತಿ ಪಡೆದದ್ದು; ಎರಡನೆಯದು, ಈ ಹೋರಾಟದ ಹಾದಿಯಲ್ಲಿ ಎಲ್ಲ ಭಿನ್ನತೆಗಳನ್ನು ಮರೆತು ಒಂದಾದದ್ದು. ಪ್ರಾಯಃ ವಸಾಹತುಶಾಹಿಯಲ್ಲದಿದ್ದರೆ ಭಾರತ ಇನ್ನೂ ನೂರೆಂಟು ಅರಸೊತ್ತಿಗೆಗಳ ಕಣಜವಾಗಿರುತ್ತಿತ್ತೇ ಹೊರತು ಒಂದು ರಾಷ್ಟ್ರವಾಗುತ್ತಿರಲಿಲ್ಲ. ಹಾಗೆಯೇ ಸ್ವಾತಂತ್ರ್ಯ ಹೋರಾಟವಲ್ಲದಿದ್ದರೆ ಜನರು ಜಾತಿ, ವರ್ಗ, ಧರ್ಮ/ಮತ, ಭಾಷೆ ಈ ಸಂಕುಚಿತ ಮನೋಭಾವದಿಂದಲೇ ದಬ್ಬಾಳಿಕೆಯೊಳಗಿನ ಅವಕಾಶವಾದಿಗಳಾಗಿ ಮುಂದುವರಿಯುತ್ತಿದ್ದರೇನೋ? ಇದನ್ನು ಇಲ್ಲವಾಗಿಸಿದ ಸಾವಿರಾರು ತೊರೆಗಳು ಸ್ವಾತಂತ್ರ್ಯದ ಹೆಸರಿನಲ್ಲಿ ಸೇರಿಕೊಂಡವು. ಆದ್ದರಿಂದ ಸ್ವಾತಂತ್ರ್ಯ ಹೋರಾಟದ ಮಹತ್ವವು ತ್ಯಾಗ, ಬಲಿದಾನ ಮುಂತಾದ ದೊಡ್ಡದೊಡ್ಡ ಪದಗಳ ಹೊರತಾಗಿಯೂ ರಾಜಕೀಯವಾಗಿ ಮಾತ್ರವಲ್ಲ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿಯೂ ಇದ್ದೇ ಇದೆ.

ಅದನ್ನು ಎದುರಿಸಲಾಗದವರು, ಅದಕ್ಕಾಗಿ ಶ್ರಮಪಡಲು ಸಿದ್ಧರಿಲ್ಲದವರು, ಗುಲಾಮಗಿರಿಯಿಂದ ಸ್ವಾರ್ಥಸಾಧನೆಯಾಗುವುದಿದ್ದರೆ ಅದನ್ನೇ ಆಯ್ಕೆಮಾಡಿಕೊಂಡವರು ಸ್ವಾತಂತ್ರ್ಯ ಹೋರಾಟಗಾರರಾಗಲಿಲ್ಲ. ಆದರೆ ಎಲ್ಲರೂ ಸ್ವಾತಂತ್ರ್ಯ ಹೋರಾಟದ ಫಲವನ್ನು ಉಂಡರು. ಪರಿಣಾಮವಾಗಿ ಜನರು ಸ್ವಾತಂತ್ರ್ಯ ಹೋರಾಟಗಾರರನ್ನು ಮರೆತರೂ ಅವರಿಂದ ಅವರ ಹೋರಾಟದಿಂದ ಬಂದ ಲಾಭಾಂಶವನ್ನು ಹಂಚಿಕೊಂಡು ಸುಖಿಸಲು ಮರೆಯಲಿಲ್ಲ. ಇಂದಿಗೂ ಈ ದೇಶದ ಇತ್ಯಾತ್ಮಕ ಮೌಲ್ಯಗಳಿದ್ದರೆ ಅವು ಸ್ವಾತಂತ್ರ್ಯ ಹೋರಾಟದ ಮತ್ತು ಅದನ್ನು ಸ್ಮರಿಸಿದ್ದರ ಫಲ; ನೇತ್ಯಾತ್ಮಕವಾದದ್ದಿದ್ದರೆ ಅವು ಸ್ವತಂತ್ರರ ಅವಕಾಶವಾದ ಮತ್ತು ಸ್ವಾರ್ಥದಾಹದ ಫಲ.

ಇವುಗಳೆಲ್ಲದರ ನಡುವೆ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಸಂದರ್ಭಗಳಿದ್ದರೆ ಅವ(ರ)ನ್ನು ಕೊಂಡಾಡುವುದು ಭವಿಷ್ಯದ ಭಾರತದ ಒಳಿತಿಗೆ ದಾರಿಯಾಗುತ್ತದೆ. ಇಂತಹ ಒಬ್ಬ ಹೋರಾಟಗಾರರ ಜನ್ಮಶತಮಾನೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಅವರನ್ನು ಅವರ ಸಾರ್ಥಕ ಬದುಕನ್ನು ನೆನಪಿಸುವ ಪ್ರಯತ್ನ ನನ್ನದು.

ಎ. ಜಿ. ತಿರುಮಲೇಶ್ವರ ಭಟ್ಟರು ಕರಾವಳಿಯಿಂದಾಚೆ ಪ್ರಾಯಃ ಅಷ್ಟಾಗಿ ಪರಿಚಯವಿರಲಿಕ್ಕಿಲ್ಲ. ಕರಾವಳಿಯ ಒಳಗೂ ಹೊಸ ತಲೆಮಾರಿಗೆ ಅವರ ಮಾಹಿತಿಯಿಲ್ಲ. ಆದರೆ ಕನ್ನಡದ ಹೆಸರಾಂತ ಸಾಹಿತಿ ಚಿರಸ್ಮರಣೆಯ ನಿರಂಜನರಂತೆ ಸ್ವಾತಂತ್ರ್ಯ ಹೋರಾಟದ ಜೊತೆಜೊತೆಯಲ್ಲೇ ಸಾಂಸ್ಕೃತಿಕ ಸಂಪನ್ನರಾಗಿದ್ದು, ಸೃಜನಶೀಲ, ಸಂವೇದನಶೀಲ ಕ್ರಿಯಾಶೀಲರಾಗಿ ಸುಮಾರು 41 ವರ್ಷ (12-09-1918ರಿಂದ 02-04-1959) ಬದುಕಿದ ಹಿರಿಮೆ ತಿರುಮಲೇಶ್ವರ ಭಟ್ಟರದ್ದು. ಅವರ ಬದುಕು-ಬರಹದ ಕುರಿತು 1997ರಲ್ಲಿ ಒಂದು ಕೃತಿ ಪ್ರಕಟವಾಗಿತ್ತು. ಈಗ ಕಾಂತಾವರ ಕನ್ನಡ ಸಂಘವು ತನ್ನ ‘ನಾಡಿಗೆ ನಮಸ್ಕಾರ’ ಮಾಲಿಕೆಯಲ್ಲಿ ಅವರ ಕುರಿತು ಕೃತಿಯೊಂದನ್ನು ಹೊರತಂದಿದೆ. ಈ ಚಿರಸ್ಮರಣೀಯರಿಗೆ ಇದೇ ಶನಿವಾರ (14-12-2019) ವಿಟ್ಲದಲ್ಲಿ ಶತಮಾನದ ನೆನಪು. ತಡವಾಗಿದೆ ನಿಜ: ಆದರೂ ನಡೆಸುತ್ತಾರಲ್ಲ! (Better late than never!) ಅದೇ ಸಂತೋಷ.

ತಿರುಮಲೇಶ್ವರ ಭಟ್ಟರ ಹುಟ್ಟು ದಕ್ಷಿಣಕನ್ನಡದೊಳಗಣ ವಿಟ್ಲಸೀಮೆಯ ಸಾಂಪ್ರದಾಯಿಕ ಸರಳ ಮಧ್ಯಮ ವರ್ಗದ ಹವ್ಯಕಬ್ರಾಹ್ಮಣ ಕುಟುಂಬದಲ್ಲಿ. ಕೌಟುಂಬಿಕ ಹಿನ್ನೆಲೆ, ಇತಿಹಾಸ ಜಗದ್ವ್ಯಾಪಿ ಹಬ್ಬಿಹರಡಿದ ವ್ಯಕ್ತಿತ್ವಗಳಿಗೆ ಅಗತ್ಯವಿರುವುದಿಲ್ಲ. ವಿಟ್ಲದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸದ ಆನಂತರ ಪುತ್ತೂರು ಮತ್ತು ಆನಂತರ ನೀಲೇಶ್ವರದ ಪ್ರೌಢಶಾಲೆಗಳಲ್ಲಿ ಮಾಧ್ಯಮಿಕ ವಿದ್ಯಾಭ್ಯಾಸವನ್ನು ನಡೆಸಿದರು. ಅವರ ಶಿಕ್ಷಣವೂ ಅಲ್ಲಿಗೇ ಕೊನೆಯಾಯಿತು. 1932ರಲ್ಲಿ ತನ್ನ 14ನೇ ಎಳೆಯ ವಯಸ್ಸಿನಲ್ಲಿ ಸಾಹಿತಿ ಶಿವರಾಮ ಕಾರಂತರನ್ನು ಕಂಡಲ್ಲಿಂದ ಅವರ ಓದಿನ, ಬರಹದ ಆಸಕ್ತಿ ಮೊಳೆಯಿತೆಂದು ಅವರ ಸರೀಕರೊಬ್ಬರು ಹೇಳುತ್ತಾರೆ. ನೀಲೇಶ್ವರದಲ್ಲಿ ಎಲ್ಲ ಕ್ರಾಂತಿಯ ಬಸಿರಿತ್ತು. ನಿರಂಜನರೂ ನೀಲೇಶ್ವರದಲ್ಲಿಯೇ ಓದಿದ್ದು! ನೀಲೇಶ್ವರದ ಬಳಿಯ ಕಯ್ಯೂರು ಕ್ರಾಂತಿಯ ದೊಡ್ಡ ಜ್ವಾಲಾಮುಖಿಯಾಗಿತ್ತು. 1940ರ ಹೊತ್ತಿಗೆ ತಿರುಮಲೇಶ್ವರ ಭಟ್ಟರು ಎಲ್ಲ ಬಗೆಯ ಸ್ವಾತಂತ್ರ್ಯ ಚಳವಳಿ-ಸತ್ಯಾಗ್ರಹಗಳಲ್ಲಿ ಭಾಗವಹಿಸುತ್ತಿದ್ದರು. ಅಷ್ಟೇ ಅಲ್ಲ, ಫಲಾಪೇಕ್ಷೆಯಿಲ್ಲದೆ, ಪರಿಣಾಮದ ಭಯವಿಲ್ಲದೆ, ಉತ್ಸಾಹದಿಂದ ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೋರಾಟದ ಶಂಖನಾದವನ್ನು ಮಾಡುತ್ತ ಅಡ್ಡಾಡುತ್ತಿದ್ದರು. ಇದು ಬರಿಯ ಓಡಾಟವಾಗದೆ ಆಡಳಿತವನ್ನು ಕೆಣಕುವಷ್ಟು ಸಮರ್ಥವಾಗಿತ್ತು. ಅವರ ಪರಿಸರವನ್ನು ಸಮಾನಶೀಲರನ್ನು ಗಮನಿಸಿದರೆ ಅವರೊಬ್ಬ ಪ್ರಖರ ಭಾಷಣಕಾರರೂ ಆಗಿದ್ದರೆಂಬುದು ಗೊತ್ತಾಗುತ್ತದೆ. ಪರಿಣಾಮವಾಗಿ 27-06-1941ರಂದು ಅವರನ್ನು ಹೊನ್ನಾವರದಲ್ಲಿ ಬಂಧಿಸಲಾಯಿತು. ಅಲ್ಲಿಂದ ಮಂಗಳೂರು ಹಾಗೂ ಬೆಳಗಾವಿಯ ಹಿಂಡಲಗಾ ಕಾರಾಗೃಹಗಳಲ್ಲಿ ಶಿಕ್ಷೆಗೊಳಗಾಗಿ 24-12-1941ರಂದು ಬಿಡುಗಡೆಯಾದರು. ಅಲ್ಲಿಂದ ಆನಂತರ ಅವರು ದಕ್ಷಿಣ ಕನ್ನಡದಲ್ಲೇ ಉಳಿದು ಗಾಂಧಿಮಾರ್ಗದಲ್ಲಿ ಸಾಮಾಜಿಕ ಸೇವೆಗೆ ತೊಡಗಿದರು. 1942ರಲ್ಲಿ ಮಂಗಳೂರಿನ ವ್ಯವಸಾಯ ವರ್ತಕ ಸಂಘದಲ್ಲಿ ದುಡಿದರು. ಜೊತೆಗೆ ಪತ್ರಕರ್ತರಾಗಿಯೂ ಕಡೆಂಗೋಡ್ಲು ಶಂಕರಭಟ್ಟರಿಗೆ ಸಾಥ್ ನೀಡಿದರು. (ನಿರಂಜನರೂ ಕಡೆಂಗೋಡ್ಲು ಅವರ ಶಿಷ್ಯ!) ಎಲ್ಲ ಸ್ವಾತಂತ್ರ್ಯ ಹೋರಾಟಗಾರರಂತೆ ಅವರೂ ಸ್ವಾತಂತ್ರ್ಯಾನಂತರ ಕಾಂಗ್ರೆಸಿನ ಪರವಾಗಿ ದುಡಿದರು. ಆದರೆ ಸ್ವಂತಕ್ಕೆ ಏನೂ ಬಯಸಲಿಲ್ಲ; ಸಂಪಾದಿಸಲಿಲ್ಲ. ವಿಟ್ಲದಲ್ಲಿ ಪ್ರೌಢಶಾಲೆಯ ಸ್ಥಾಪನೆಯಲ್ಲಿ ಅವರ ಕೊಡುಗೆ ಮಹತ್ವದ್ದೆಂದು ವಿಟ್ಲದ ಜನರು ಇಂದಿಗೂ ನೆನೆಯುತ್ತಾರೆ. ಇನ್ನು ಅನೇಕ ಕೆಲಸಗಳು ಬಾಕಿಯಿದ್ದಾಗಲೇ ಕ್ಯಾನ್ಸರಿಗೆ ಬಲಿಯಾದರು. ‘ನೆನೆ ನೆನೆ ಆ ದಿನವ!’ ಎಂಬಂತೆಯೇ ‘ನೆನೆ ನೆನೆ ಆ ಜನವ!’

 ಒಂದು ವ್ಯಕ್ತಿತ್ವ ಇಷ್ಟಕ್ಕೇ ಮುಗಿದರೆ ಅದು ಏಕಮುಖಿಯಾಗುತ್ತದೆ. ತಿರುಮಲೇಶ್ವರ ಭಟ್ಟರು ಆರಂಭದಿಂದಲೂ ಒಳ್ಳೆಯ ಓದುಗರು; ಬರಹಗಾರರು. ಪ್ರಾಯಃ ಸ್ವಾತಂತ್ರ್ಯ ಹೋರಾಟವೆಂಬ ಬೆಳಕಿನ ದಾಹ ಅವರ ಸೃಜನಶೀಲತೆಯನ್ನು ಸ್ವಲ್ಪಮಟ್ಟಿಗೆ ಕುಂಠಿತಗೊಳಿಸಿತೇನೋ? ಕಡೆಂಗೋಡ್ಲು ಶಂಕರ ಭಟ್ಟ, ಮಂಜೇಶ್ವರ ಗೋವಿಂದ ಪೈ, ಕೆ. ಆರ್. ಕಾರಂತ ಮುಂತಾದವರ ನಿಕಟ ಸಂಪರ್ಕ ಅವರಿಗಿತ್ತು. ಕವಿ ಕಯ್ಯಿರರು ಭಟ್ಟರನ್ನು ‘‘ನನ್ನ ಆತ್ಮೀಯ ಸ್ನೇಹಿತರು’’ ಎಂದು ಬಣ್ಣಿಸಿದ್ದಾರೆ. ಕನ್ನಡದ ಕಟ್ಟಾಳು (ಉಳ್ಳಾಲ ಕ್ಷೇತ್ರದಿಂದ 3 ಬಾರಿ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದ ಮತ್ತು ಆನಂತರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದ) ಬಿ.ಎಂ. ಇದಿನಬ್ಬ ಅವರು ತಿರುಮಲೇಶ್ವರಭಟ್ಟರ ಜೊತೆಯವರು. ಭಟ್ಟರು ವಿಟ್ಲದಲ್ಲಿ ಓದುತ್ತಿದ್ದಾಗ ಇದಿನಬ್ಬರು ಉಪ್ಪಿನಂಗಡಿಯಲ್ಲಿ ಓದುತ್ತಿದ್ದರು. ಕಾರಂತರ ಮುಂದಾಳತ್ವದಲ್ಲಿ ನಡೆದ ಸಾಹಿತ್ಯ ಚಟುವಟಿಕೆಗಳಲ್ಲಿ ಇವರೆಲ್ಲ ಭಾಗವಹಿಸುತ್ತಿದ್ದರು. ಸುಮಾರು 50 ಎಳೆಯರು ಭಾಗವಹಿಸಿದ ಸ್ವರಚಿತ ಕವಿತೆಗಳ ವಾಚನದಲ್ಲಿ ತಿರುಮಲೇಶ್ವರ ಭಟ್ಟರ ‘ಅಂಬಡೆ’ ಕವಿತೆಗೆ ಮೊದಲ ಸ್ಥಾನ ದಕ್ಕಿದರೆ ಇದಿನಬ್ಬರ ಕವಿತೆಗೆ ದ್ವಿತೀಯ ಸ್ಥಾನ ಲಭಿಸಿತ್ತೆಂದು ಇದಿನಬ್ಬರು ನೆನಪು ಮಾಡಿಕೊಂಡಿದ್ದಾರೆ. ಆನಂತರ ಇಬ್ಬರೂ ಮಂಗಳೂರಿನಲ್ಲೇ ಕೆಲಸಮಾಡುತ್ತಿದ್ದಾಗ ಕೃಷ್ಣಭವನದಲ್ಲಿ ಜೊತೆಯಲ್ಲಿ ಸಾಹಿತ್ಯವನ್ನು ಹರಟುತ್ತ ಆನಂತರ ಭಟ್ಟರ ಆಮಂತ್ರಣದ ಮೇಲೆ ಇದಿನಬ್ಬರು ಭಟ್ಟರ ಜೊತೆಯಲ್ಲಿ ಸುಮಾರು 8 ತಿಂಗಳ ಕಾಲ ಒಂದೇ ಕೋಣೆಯಲ್ಲಿ ಸಹಭಾಗಿಗಳಾಗಿದ್ದರು. ‘‘ಕೋಣೆಯಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಸಾಹಿತ್ಯದ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಬೇಂದ್ರೆ, ಕುವೆಂಪು, ವಿ.ಸೀ., ರಾಜರತ್ನಂ, ಕಿಞ್ಞಣ್ಣ ರೈ, ಇಂತಹ ಖ್ಯಾತ ಕವಿಗಳ ಕವನ ಸಂಗ್ರಹವನ್ನು ಹಿಡಿದುಕೊಂಡು, ಅವರ ಕವನಗಳ ಕೆಲವು ಸಾಲುಗಳನ್ನು ವಾಚನ ಮಾಡುತ್ತಿದ್ದೆವು. ಶ್ರೀಯುತ ಭಟ್ಟರು ಬೇಂದ್ರೆಯವರ ‘ಸಖೀಗೀತ’ವನ್ನು ಭಾರೀ ಸೊಗಸಾಗಿ ವಾಚನ ಮಾಡುತ್ತಿದ್ದರು. ರತ್ನನ ಪದಗಳಿಂದ ಕೆಲವನ್ನು ನಾನೂ ಪಠಿಸುತ್ತಿದ್ದೆ. ಹೀಗೆ 8 ತಿಂಗಳು ನಮ್ಮ ಜೀವನದಲ್ಲಿ ಒಂದು ರಸನಿಮಿಷವೆಂದೇ ಹೇಳಬಹುದು. ಶ್ರೀ ಭಟ್ಟರು ಕನ್ನಡ ಕವಿತಾ ಪುಸ್ತಕಗಳನ್ನು ಹಣಕೊಟ್ಟು ಪಡೆದು ಒಂದು ಸಂಗ್ರಹವನ್ನೇ ಆ ಕಾಲದಲ್ಲಿ ಮಾಡಿರುವುದು ನನಗೆ ನೆನಪಾಗುತ್ತದೆ.’’ ಎಂದು ಇದಿನಬ್ಬರು ತಮ್ಮದೊಂದು ಲೇಖನದಲ್ಲಿ ಹೇಳುತ್ತಾರೆ.

ಆ ಕಾಲದಲ್ಲಿ ಸಾಹಿತ್ಯ ಮತ್ತು ಪತ್ರಿಕೋದ್ಯಮ ಜೊತೆಯಾಗಿ ಸಾಗುತ್ತಿತ್ತು. ಪತ್ರಿಕೋದ್ಯಮವೆಂಬ ಹೆಸರಿದ್ದರೂ ಅದು ಉದ್ಯಮವಾಗದೆ ಗೌರವಯುತ ಸಂತವೃತ್ತಿಯಾಗಿತ್ತು. (ಇಂದು ಸಂತತನವೂ ವೃತ್ತಿಯಾಗಿದೆ; ಉದ್ಯಮವಾಗಿದೆ!) ಇದನ್ನು ಪುಷ್ಟೀಕರಿಸುವಂತೆ ತಿರುಮಲೇಶ್ವರಭಟ್ಟರು ನವಭಾರತ, ರಾಷ್ಟ್ರಬಂಧು, ಧುರೀಣ, ಉದಯಚಂದ್ರ, ಬಡವರ ಬಂಧು, ರಾಷ್ಟ್ರಮತ, ಜ್ಯೋತಿ, ಮದ್ರಾಸು ಸಮಾಚಾರ, ಅಂತರಂಗ ಮುಂತಾದ ಆ ಕಾಲದ ಪ್ರಮುಖ ಮತ್ತು ಜನಪ್ರಿಯ ಪತ್ರಿಕೆಗಳಲ್ಲಿ ಅವ್ಯಾಹತವಾಗಿ ಕಥೆ, ಕವಿತೆ, ವಿಮರ್ಶೆ, ಅಧ್ಯಯನ ಮತ್ತು ಚಿಂತನಪೂರ್ಣ ಲೇಖನಗಳನ್ನು ಬರೆಯುತ್ತಿದ್ದರು. 1938ರಲ್ಲಿ ಪ್ರಕಟವಾದ ಅವರ ‘ಕೊಡಗಿನ ಕುಡಿಯರು ಮತ್ತು ಅವರ ನಡೆನುಡಿಗಳು’ ಎಂಬ ಲೇಖನ ಸ್ವತಂತ್ರವೂ ವಿದ್ವತ್ಪೂರ್ಣವೂ ಸಂಶೋಧನಾತ್ಮಕವೂ ಆಗಿದೆ. ನವೋದಯ ಮಾದರಿಯ ಅವರ ಕಥೆಗಳಲ್ಲಿ ಪ್ರಗತಿಶೀಲತೆಯ ಜೊತೆಗೆ ಹಾಸ್ಯ, ವ್ಯಂಗ್ಯ, ವಿಷಾದ ಎಲ್ಲವೂ ಸೇರಿವೆ.

ತಿರುಮಲೇಶ್ವರ ಭಟ್ಟರ ಸಾಮಾಜಿಕ ದೃಷ್ಟಿಕೋನ ಇಂದಿನ ತಲೆಮಾರಿಗೆ ಮಾದರಿಯಾಗಬೇಕಿತ್ತು. ಕೋಮುವಾದಕ್ಕೆ ಪ್ರಚೋದನೆ ನೀಡುವ ಇಂದಿನ ಸ್ಥಿತಿಯಲ್ಲಿ ಅವರ ವಿಶಾಲ ಮನೋಸ್ಥಿತಿಯು ಅನುಕರಣೀಯ. ಜಾತಿ-ವರ್ಗವ್ಯತ್ಯಾಸವನ್ನು ಅವರು ಸಹಿಸುತ್ತಿರಲಿಲ್ಲ. ಅಷ್ಟೇ ಅಲ್ಲ, ಸಾರ್ವಜನಿಕ ಜೀವನದಲ್ಲಿ ಶುದ್ಧಹಸ್ತರಾಗಿರಬೇಕೆಂದು ಅವರು ಸದಾ ಹೇಳುತ್ತಿದ್ದರು ಮಾತ್ರವಲ್ಲ ಅದನ್ನು ಕಾಪಾಡುವುದಕ್ಕಾಗಿ ಪ್ರತಿಭಟನೆ ಮತ್ತು ಹೋರಾಟದ ಹಾದಿಯನ್ನು ಹಿಡಿದಿದ್ದರು. 1947ರಲ್ಲಿ ಕಾಸರಗೋಡಿನಲ್ಲಿ ನಡೆದ 31ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಣಕಾಸಿನ ಕುರಿತಾಗಿ ಅವರು ಬರೆದ ಲೇಖನವು ಇಂದಿನ ಸಾಹಿತ್ಯಸಂಘಟಕರನ್ನು ಬಡಿದೆಬ್ಬಿಸಿ ಬೆಚ್ಚಿಬೀಳಿಸುವಂತಿದೆ. ಪತ್ರಿಕಾರಂಗದ ಕುರಿತು ಅವರು ಬರೆದ ‘ನಿತ್ಯ ಜೀವನದಲ್ಲಿ ಪತ್ರಿಕೆಗಳ ಸ್ಥಾನ’, ‘ಜಾಹೀರಾತೂ ಒಂದು ಕಲೆಯೇ!’ ಮತ್ತು ‘ಪತ್ರಿಕಾ ಪ್ರಪಂಚದಲ್ಲಿ ಜಾಹೀರಾತಿನ ಸ್ಥಾನ’ ಎಂಬ ಲೇಖನಗಳು ಪತ್ರಿಕೋದ್ಯಮ ವಿದ್ಯಾರ್ಥಿಗಳು ಮಾತ್ರವಲ್ಲ ಈ ತಲೆಮಾರಿನ ಪತ್ರಕರ್ತರೂ ಓದಬೇಕಾದ ಲೇಖನಗಳು. ಚಲನಚಿತ್ರಗಳ ಕುರಿತ ಅವರ ಲೇಖನಗಳೂ ಉತ್ತಮ ಗುಣಮಟ್ಟದವು. ಎಲ್ಲಕ್ಕಿಂತ ಹೆಚ್ಚಾಗಿ ಅವರ ವಿಚಾರಧಾರೆ ಸ್ವತಂತ್ರಮನೋದಾಹದ್ದು.

ಇದಿನಬ್ಬರು ಹೇಳಿದಂತೆ ತಿರುಮಲೇಶ್ವರ ಭಟ್ಟರು ವಿಶಾಲ ಮನಸ್ಸಿನ ಒಬ್ಬ ಆದರ್ಶವಾದಿ, ಸಾಹಿತ್ಯ ಪ್ರೇಮಿ, ಚಿಂತಕರಾಗಿ ಬಾಳಿದರು. ಇನ್ನೂ ಮುಖ್ಯವಾಗಿ ಅವರ ಗಾಂಧಿಚಿಂತನೆಗಳು ಅವರನ್ನು ಕೈಹಿಡಿದು ನಡೆಸಿದವು. ಅವರು ವ್ಯಕ್ತಿಯಲ್ಲ-ಆತ್ಮಶಕ್ತಿ ಎಂಬ ಲೇಖನದಲ್ಲಿ ಅವರು ಗಾಂಧಿಯ ಕುರಿತ ತನ್ನ ಅಭಿಮಾನವನ್ನು ಪ್ರಕಟಿಸಿದ್ದಾರೆ. ಸ್ವಾತಂತ್ರ್ಯ ಸಿಕ್ಕಿ ಒಂದು ವರ್ಷವಾದಾಗ (15-08-1948 ರಂದು) ‘ಅವರು ಹಳ್ಳಿ ಸ್ವತಂತ್ರವಾಯಿತೇ?’ ಎಂಬ ಮಾರ್ಮಿಕವಾದ ಗಾಂಧೀ ಪ್ರಣೀತ ಸಮಾಜವಾದೀ ಲೇಖನವನ್ನು ಬರೆದಿದ್ದರು. ರೈತನ ಕುರಿತು ‘‘ಬ್ರಿಟಿಷ್ ಭಾರತದಲ್ಲಿ ಆತ ಒಂದು ತೆರನಾದ ಕಷ್ಟ ಅನುಭವಿಸಿದರೆ, ಸ್ವತಂತ್ರ ಭಾರತದಲ್ಲಿ ಆತನು ಎಲ್ಲಾ ವಿಧದ ಕಷ್ಟವನ್ನೂ ಅನುಭವಿಸಿದ, ಸೇದುವ ಗಾಳಿಗೂ ಹೆದರಿ ಬದುಕಬೇಕಾಯ್ತು.’’ ಎಂದು, ಮತ್ತು ‘‘ಇಂದು ಆತ ಏನು ಮಾಡುತ್ತಿದ್ದಾನೆ ಗೊತ್ತೆ?- ಏಳಲಾರದ ಎತ್ತುಗಳೊಡನೆ, ನಿಸ್ಸಾರವಾದ ಭೂಮಿಯನ್ನು ಬಂಜರು ಬಿಡಲು ಮನವೊಪ್ಪದೆ, ದುಡಿಯುವ ಉತ್ಸಾಹ ಕುಂದಿ, ಅಭ್ಯಾಸದಂತೆ ಮಾತ್ರ ದುಡಿಯುತ್ತಾನೆ. ಎಷ್ಟು ದುಡಿದರೂ, ಹೇಗೆ ನೋಡಿದರೂ, ದುಡಿತದ ಫಲ ಅನ್ಯರ ಪಾಲಿಗಾದರೆ ತಾನೇಕೆ ದುಡಿಯಬೇಕು?’’ ಎಂದು ಬರೆದರು. ‘‘ಹಸಿದವನ ಮುಂದೆ ದೇವರೂ ಬರಲಾರ, ಬಂದರೆ ಅನ್ನವಾಗಿ ಬರಬೇಕು’’ ಎಂಬ ಗಾಂಧಿಯ ಮಾತನ್ನು ಅವರು ಉಲ್ಲೇಖಿಸಿದ್ದರು. ಹಿಂದೂ ಮುಸ್ಲಿಮ್ ಎಂಬ ಎರಡು ಕಲ್ಲುಗಳನ್ನು ಜೋಡಿಸಲು ಗಾರೆಗಾಗಿ ನನ್ನ ರಕ್ತವನ್ನು ಕೊಡಲು ಸಿದ್ಧ ಎಂಬ ಗಾಂಧಿವಾದದೊಂದಿಗೆ ಅವರು ಸಮಾಜದ ಜೋಡಣೆಗೆ ಸದಾ ಪ್ರಯತ್ನಿಸಿದರು. ತಿರುಮಲೇಶ್ವರ ಭಟ್ಟರ ಪಾಲಿಗೆ ಯುಗಾದಿಯೂ ಒಂದು ದೊಡ್ಡ ಹಬ್ಬ; ಮೊಹರಮ್ ಹಾಗೆಯೇ. ಅಂತೆಯೇ ಕ್ರಿಸ್‌ಮಸ್. ಅವರ ಸಹವರ್ತಿಯೂ ಮುಂದೆ ಮೈಸೂರು ರಾಜ್ಯದ ಮಂತ್ರಿಗಳೂ ಆದ ಬಿ.ವಿಠಲದಾಸ ಶೆಟ್ಟರು ಹೇಳಿದಂತೆ ಅವರು ‘Non-communal’. ತಿರುಮಲೇಶ್ವರ ಭಟ್ಟರ ಪದ್ಯವೊಂದರ ಈ ಸಾಲುಗಳು ಅವರ ಉದಾತ್ತ ಮಾನವೀಯತೆಯನ್ನು ಸಾರುತ್ತವೆಯೆಂಬುದರೊಂದಿಗೆ ಅವರನ್ನು ಈ ಶತಮಾನದ ಹೊತ್ತಿಗೆ ಸ್ಮರಿಸಬಹುದು:

ಉರಿದು ನಂದಿರುವಂಥ ಬಡಜನರ ಜೀವವನು; ಕೊಂದವರು ಇಂದೀಗ ಸುಖದಿ ಜೀವಿಪರು.

ಹಸಿವಿನಾ ನೋವಿಂದ ಬಡಜನರು ಬೊಬ್ಬಿಡಲು

ಆ ಬೇನೆ ಅರಿಯದೆನೆ ಸಿರಿವಂತ ಜನರು,

ನಾವೇನು ಮಾಡಲಿದೆ ಬಡವರಿಗೆ?-ಸತ್ತಿರಲಿ!-

ಅವರವರ ಕರ್ಮಫಲ ಎಂದೆನುತಲಿಹರು!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)