varthabharthi


ಬೆಂಗಳೂರು

ಇದು ದೇಶದಲ್ಲಿಯೇ ಮೊಟ್ಟ ಮೊದಲ ಪ್ರಕರಣ !

ಬೆಂಗಳೂರು: ಮನೆ ಹಿತ್ತಲಲ್ಲಿ ಹೈಡ್ರೋ ಗಾಂಜಾ ಬೆಳೆದ ಪದವೀಧರರು; ಆರೋಪಿಗಳ ಬಂಧನ

ವಾರ್ತಾ ಭಾರತಿ : 13 Dec, 2019

ಬೆಂಗಳೂರು, ಡಿ.13: ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಆಧುನಿಕ ತಂತ್ರಜ್ಞಾನ ಮೂಲಕ ಮನೆಯ ಹಿತ್ತಲಲ್ಲಿ ಮಾದಕ ವಸ್ತು ಹೈಡ್ರೋ ಗಾಂಜಾ ಬೆಳೆದ ಪದವೀಧರರ ಪ್ರಕರಣವೊಂದನ್ನು ಸಿಸಿಬಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬಿಹಾರ ಮೂಲದ ಅಮಾತ್ಯರಿಶಿ ಜೈನ್(23), ಮಂಗಲ್‌ ಮುಕ್ಯ(30) ಹಾಗೂ ಹೊಸಕೆರೆಹಳ್ಳಿಯ ದ್ವಾರಕಾನಗರದ ಆದಿತ್ಯಕುಮಾರ್(21) ಎಂಬುವರು ಬಂಧಿತ ಪದವೀಧರರು ಎಂದು ಮಾಹಿತಿ ನೀಡಿದರು.

ಬಂಧಿತರಿಂದ 225 ಎಸ್‌ಎಲ್‌ಡಿ ಸ್ಲಿಪ್ಸ್‌ಗಳು, 2 ಕೆಜಿ ಗಾಂಜಾ, 10 ಸಾವಿರ ರೂ. ನಗದು, ಗಾಂಜಾ ಗಿಡಗಳಿದ್ದ ಕುಂಡಗಳು, 3 ಮೊಬೈಲ್‌ಗಳು, ಎಲ್‌ಇಡಿ ಲೈಟ್‌ಗಳು, ಕಂಪ್ಯೂಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಪ್ರಮುಖ ಆರೋಪಿ ಅಮಾತ್ಯರಿಶಿ ಜೈನ್ ಬಿಬಿಎಂ ವಿದ್ಯಾಭ್ಯಾಸಕ್ಕೆ ನಗರಕ್ಕೆ ಬಂದಿದ್ದ. ತನ್ನದೇ ರಾಜ್ಯದಿಂದ ವಿದ್ಯಾಭ್ಯಾಸಕ್ಕಾಗಿ ಬಂದಿದ್ದ ಮತ್ತೊಬ್ಬ ಆರೋಪಿ ಮಂಗಲ್‌ಮುಕ್ಯನನ್ನು ಪರಿಚಯ ಮಾಡಿಕೊಂಡಿದ್ದು, ಇವರಿಬ್ಬರಿಗೆ ವಿದ್ಯಾಭ್ಯಾಸದ ವೇಳೆ ಆದಿತ್ಯಕುಮಾರ್ ಸ್ನೇಹಿತನಾಗಿದ್ದ. ಸುಲಭವಾಗಿ ಹಣ ಗಳಿಸಿ ಶ್ರೀಮಂತರಾಗಲು ಈ ಮೂವರು ಡಾರ್ಕ್ ವೆಬ್‌ಸೈಟ್‌ನಲ್ಲಿ ಹುಡುಕಾಟ ನಡೆಸಿ ಮನೆಯಲ್ಲಿಯೇ ಸೂರ್ಯನ ಪ್ರಖರವಾದ ಬೆಳಕಿನ ಎಲ್‌ಇಡಿ ಲೈಟ್‌ಗಳ ವ್ಯವಸ್ಥೆ ಮಾಡಿ ಹೈಡ್ರೋ ಗಾಂಜಾ ಗಿಡಗಳನ್ನು ಬೆಳೆಸುವುದು ಕಂಡುಕೊಂಡಿದ್ದಾರೆ.

ಬಳಿಕ, ಹೈಡ್ರೊ ಗಾಂಜಾ ಬೀಜಗಳು ನೆದರ್‌ಲ್ಯಾಂಡ್‌ನಲ್ಲಿ ದೊರೆಯುವ ಮಾಹಿತಿ ಲಭ್ಯವಾಗಿದೆ. ಕೂಡಲೇ ಅಲ್ಲಿಂದ ಕೊರಿಯರ್ ಮೂಲಕ ಬೀಜಗಳನ್ನು ತರಿಸಿ 3 ವರ್ಷಗಳ ಹಿಂದೆ, ನಗರದ ಶಾಂಘ್ರಿಲಾ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್‌ವೊಂದರಲ್ಲಿ ಅತ್ಯಾಧುನಿಕ ಎಲ್‌ಇಡಿ ಲೈಟ್‌ಗಳನ್ನು ಬಳಸಿ ಹೂ ಕುಂಡಗಳಲ್ಲಿ ಅವುಗಳನ್ನು ಬಿತ್ತಿ ರಾಸಾಯನಿಕಗಳನ್ನು ಸಿಂಪಡಿಸಿ 3 ತಿಂಗಳೊಳಗೆ ಹುಲುಸಾಗಿ ಬೆಳೆಯುವಂತೆ ಮಾಡಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ನಂತರ, ಮೊಬೈಲ್, ಆನ್‌ಲೈನ್ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ ಗಾಂಜಾ ಮಾರಾಟ ಮಾಡುತ್ತಿದ್ದರು. ಇದಲ್ಲದೆ ಸ್ಟಾಂಪ್ ಮಾದರಿಯಲ್ಲಿದ್ದ ಎಲ್‌ಎಸ್‌ಡಿ ಸ್ಲಿಪ್ಸ್‌ಗಳನ್ನು ತರಿಸಿ ಮಾರಾಟ ಮಾಡುತ್ತಿದ್ದು, ಒಂದು ಸ್ಟಾಂಪ್‌ನಲ್ಲಿ ಸುಮಾರು 100ರವರೆಗೆ ಸ್ಲಿಪ್ಸ್‌ಗಳನ್ನು ಮಾಡುತ್ತಿರುವುದು ಕಂಡು ಬಂದಿದೆ.

ಬೇಡಿಕೆ ಅನುಗುಣವಾಗಿ ಸ್ಲಿಪ್ಸ್‌ಗಳು ಸಾವಿರದಿಂದ ಲಕ್ಷ ರೂಪಾಯಿವರೆಗೂ ಮಾರಾಟವಾಗುತ್ತಿದ್ದವು. ಸ್ಥಳೀಯರಿಗೆ ಗೊತ್ತಾಗಿರಲಿಲ್ಲ. ಈ ಬಗ್ಗೆ ಯಾರಿಗೂ ಯಾವುದೇ ರೀತಿಯಲ್ಲಿ ಅನುಮಾನ ಬರದಂತೆ ಆರೋಪಿಗಳು ಕೃತ್ಯ ನಡೆಸುತ್ತಿದ್ದರು. ಗಿರಾಕಿಯೊಬ್ಬರು ನೀಡಿದ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಆಯುಕ್ತರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ಕುಲ್‌ದೀಪ್ ಕುಮಾರ್ ಜೈನ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮೊದಲ ಪ್ರಯತ್ನ, ಆತಂಕಕಾರಿ

ಮನೆಯಲ್ಲಿ ಎಲ್‌ಇಡಿ ಲೈಟ್‌ಗಳನ್ನು ಬಳಸಿ ಗಾಂಜಾ ಬೆಳೆಸುತ್ತಿರುವುದು ದೇಶದಲ್ಲೇ ನೂತನ ಪ್ರಯೋಗವಾಗಿದೆ. ಐಪಿಎಸ್ ಅಧಿಕಾರಿಯಾದ ನನಗೇ ಈ ಬಗ್ಗೆ ತಿಳಿದಿರಲಿಲ್ಲ. ಇಂತಹ ವ್ಯವಸ್ಥಿತ ಕೃತ್ಯ ನಡೆಸಿ ಮುಂದಿನ ಪೀಳಿಗೆಯನ್ನು ಮಾದಕವಸ್ತು ಜಾಲಕ್ಕೆ ತಳ್ಳುತ್ತಿರುವುದು ಆತಂಕಕಾರಿ ಸಂಗತಿ.

-ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)