varthabharthi


ಕರ್ನಾಟಕ

10 ಸಾವಿರಕ್ಕೂ ಅಧಿಕ ಮಂದಿ ಭಾಗಿ

ವಿವಾದಾಸ್ಪದ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಕಲಬುರ್ಗಿಯಲ್ಲಿ ಬೃಹತ್ ಪ್ರತಿಭಟನೆ

ವಾರ್ತಾ ಭಾರತಿ : 13 Dec, 2019

ಕಲಬುರ್ಗಿ, ಡಿ. 13: ಪೊಲೀಸರ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ವಿವಾದಾಸ್ಪದ ‘ಪೌರತ್ವ ತಿದ್ದುಪಡಿ ಮಸೂದೆ’ ವಿರೋಧಿಸಿ ನಗರದ ಮುಸ್ಲಿಂ ಚೌಕದಲ್ಲಿ ಎಡಪಕ್ಷಗಳು ಸೇರಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಬೃಹತ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಕಲಬುರ್ಗಿ ನಗರದಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳು ರ‍್ಯಾಲಿ ಹಮ್ಮಿಕೊಂಡಿದ್ದವು. ಆದರೆ, ಕೊನೆಯ ಕ್ಷಣದಲ್ಲಿ ಪೊಲೀಸರು ಅನುಮತಿ ನಿರಾಕರಿಸಿ ನಗರದಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಪೊಲೀಸರ ಕ್ರಮವನ್ನು ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಜಗರ ಚುಲಬುಲ್, ಇಲಿಯಾಸ್ ಸೇಠ್ ಸೇರಿದಂತೆ ಇನ್ನಿತರರು ನಗರ ಪೊಲೀಸ್ ಆಯುಕ್ತರ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ಕೂಡಲೇ ಸ್ಥಳಕ್ಕೆ ಧಾವಿಸಿದ ನಗರ ಪೊಲೀಸ್ ಆಯುಕ್ತರು, ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ದೇಶದ ವಿವಿಧೆಡೆ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೋಮು ಸೌಹಾರ್ದ ಕಾಪಾಡಬೇಕಿದೆ. ಹೀಗಾಗಿ ರ‍್ಯಾಲಿಗೆ ಅನುಮತಿ ನೀಡುವುದಿಲ್ಲ. ಬದಲಿಗೆ ಸಾರ್ವಜನಿಕ ಸಭೆ ನಡೆಸಲು ಅವಕಾಶ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಹೀಗಾಗಿ ವಿವಿಧ ಸಂಘಟನೆಗಳ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಇಲ್ಲಿನ ಮುಸ್ಲಿಂ ಚೌಕದಲ್ಲಿ ಸೇರಿ ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಮುಖಂಡರು, ‘ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನ ಮತ್ತು ಧರ್ಮ ಸಮಾನತೆಗೆ ವಿರುದ್ಧವಾಗಿದೆ. ದೇಶದಲ್ಲಿನ ಮುಸ್ಲಿಮರನ್ನು 2ನೆ ದರ್ಜೆ ಪ್ರಜೆಗಳನ್ನಾಗಿ ಮಾಡಲಿದ್ದು, ಸ್ವಾತಂತ್ರದ ಬಳಿಕ ದೇಶದಲ್ಲಿನ ನಾಗರಿಕರು ತಮ್ಮ ಇರುವಿಕೆಯನ್ನು ಸಾಬೀತುಪಡಿಸಬೇಕಿದೆ. ಆರ್ಥಿಕ ಹಿಂಜರಿತ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳನ್ನು ಮರೆಮಾಚಲು ಕೇಂದ್ರ ಸರಕಾರ ಪೌರತ್ವ ಮಸೂದೆ ನೆಪದಲ್ಲಿ ಜನರ ಪ್ರತಿರೋಧವನ್ನು ದಿಕ್ಕು ತಪ್ಪಿಸುತ್ತದೆ’ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸರಕಾರ ಈ ಕೂಡಲೇ ವಿವಾದಾಸ್ಪದ ಪೌರತ್ವ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕೆಂದು ಒಕ್ಕೂರಲಿನಿಂದ ಆಗ್ರಹಿಸಿದರು. ಈ ವೇಳೆ ಶಾಸಕಿ ಖನೀಝ್ ಫಾತಿಮಾ, ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ವಾಹೇದ್ ಅಲಿ ಫಾತೇಖಾನಿ ಸೇರಿದಂತೆ ಇನ್ನಿತರರು ಹಾಜರಿದ್ದರು.

‘ಕೇಂದ್ರದ ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನ ಮತ್ತು ಜನವಿರೋಧಿ. ಹೀಗಾಗಿ ಪೊಲೀಸರ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಸೇರಿ ಬೃಹತ್ ಪ್ರತಿಭಟನೆ ನಡೆಸಿದ್ದೇವೆ. ಡಿ.19ಕ್ಕೆ ಎಡಪಕ್ಷಗಳು ಹಾಗೂ ಜನಪರ ಸಂಘಟನೆಗಳ ನೇತೃತ್ವದಲ್ಲಿ ಮತ್ತೊಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’

-ಮಾರುತಿ ಮಾನ್ಪಡೆ, ಪ್ರಾಂತ ರೈತ ಸಂಘದ ಉಪಾಧ್ಯಕ್ಷ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)