varthabharthi


ರಾಷ್ಟ್ರೀಯ

ಪೌರತ್ವ ಮಸೂದೆಗೆ ವಿರೋಧ: ಅಕಾಡಮಿ ಪ್ರಶಸ್ತಿ ವಾಪಸ್‌ಗೆ ಪ್ರೊ.ಯಾಕೂಬ್ ನಿರ್ಧಾರ

ವಾರ್ತಾ ಭಾರತಿ : 13 Dec, 2019

ಫೋಟೊ ಕೃಪೆ : caravandaily

ಹೊಸದಿಲ್ಲಿ,ಡಿ.13: ವಿವಾದಾತ್ಮಕ ಪೌರತ್ವ ತಿದ್ದುಪಡಿ ವಿಧೇಯಕವನ್ನು ನರೇಂದ್ರ ಮೋದಿ ಸರಕಾರ ಅಂಗೀಕರಿಸಿರುವುದನ್ನು ಪ್ರತಿಭಟಿಸಿ ತನಗೆ ಉತ್ತರಪ್ರದೇಶ ಉರ್ದು ಅಕಾಡಮಿ ನೀಡಿರುವ ಪ್ರಶಸ್ತಿಯನ್ನು ಹಿಂತಿರುಗಿಸುವುದಾಗಿ ಪ್ರಸಿದ್ಧ ಉರ್ದು ಭಾಷಾಂತರಕಾರ ಮತ್ತು ಬನಾರಸ್ ವಿವಿಯ ಉರ್ದು ವಿಭಾಗದ ಮಾಜಿ ಮುಖ್ಯಸ್ಥ ಪ್ರೊ. ಯಾಕೂಬ್ ಯಾವರ್ ಗುರುವಾರ ಘೋಷಿಸಿದ್ದಾರೆ.

ಹಿರಿಯ ಉರ್ದು ಪತ್ರಕರ್ತ ಹಾಗೂ ಸಾಹಿತಿ ಶಿರಿನ್ ದಲವಿ ಉತ್ತರಪ್ರದೇಶ ಉರ್ದು ಅಕಾಡಮಿ ನೀಡಿದ್ದ ಪ್ರಶಸ್ತಿಯನ್ನು ಹಿಂತಿರುಗಿಸುವುದಾಗಿ ಪ್ರಕಟಿಸಿದ ಬೆನ್ನಲ್ಲೇ ಯಾಕೂಬ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಪ್ರಶಸ್ತಿಯ ಜೊತೆಗೆ ನೀಡಲಾದ 1 ಲಕ್ಷ ರೂ. ಮೌಲ್ಯ ಚೆಕ್‌ನ್ನು ವಾಪಸ್ ಮಾಡುವುದಾಗಿ ಯಾವರ್ ಅವರು ಕಾರವಾನ್ ದಿನಪತ್ರಿಕೆಗೆ ತಿಳಿಸಿದ್ದಾರೆ.

ವಿವಾದಾತ್ಮಕ ಪೌರತ್ವ ತಿದ್ದುಪಡಿ ವಿಧೇಯಕದ ವಿರುದ್ಧ ಪ್ರತಿಭಟನೆಯಾಗಿ ಕನಿಷ್ಠ ಪಕ್ಷ ತನಗೆ ಇಷ್ಟನ್ನಾದರೂ ಮಾಡಲು ಸಾಧ್ಯವೆಂದು ಅವರು ಹೇಳಿದ್ದಾರೆ. ‘‘ನಾನು ಪ್ರಶಸ್ತಿಯನ್ನು ಹಿಂತಿರುಗಿಸುವುದರಿಂದ ಯಾವುದೇ ಪರಿಣಾಮವಾಗು ವುದಿಲ್ಲವಾದರೂ, ನನ್ನ ಆತ್ಮಸಾಕ್ಷಿಯು ನನ್ನನ್ನು ಮೌನವಾಗಿ ಉಳಿಯಲು ಬಿಡುತ್ತಿಲ್ಲ’’ ಎಂದು ಅವರು ಹೇಳಿದರು.

ಭಾಷಾಂತರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಯಾಕೂಬ್ ಅವರಿಗೆ ಕಳೆದ ವರ್ಷ ಉತ್ತರಪ್ರದೇಶ ಉರ್ದು ಅಕಾಡಮಿಯು ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿತ್ತು.

ವಿವಾದಾತ್ಮಕ ಪೌರತ್ವ ತಿದ್ದುಪಡಿ ವಿಧೇಯಕವು ಮುಸ್ಲಿಮರನ್ನು ಹೊರತುಪಡಿಸಿ ಪಾಕಿಸ್ತಾನ, ಬಾಂಗ್ಲಾ ಹಾಗೂ ಅಫ್ಘಾನಿಸ್ತಾನಗಳಿಂದ ವಲಸೆ ಬಂದವರನ್ನು ನಿರಾಶ್ರಿತರೆಂದು ಪರಿಗಣಿಸಿ ಅವರಿಗೆ ಭಾರತೀಯ ಪೌರತ್ವವನ್ನು ನೀಡುವುದಕ್ಕೆ ಅವಕಾಶ ನೀಡುತ್ತದೆ. ರಾಷ್ಟ್ರೀಯ ಪೌರರ ನೋಂದಣಿ (ಎನ್‌ಆರ್‌ಸಿ) ಯೋಜನೆಯಡಿ ಪೌರತ್ವ ಪಡೆಯಲು ವಿಫಲರಾದ ಮುಸ್ಲಿಮೇತರರಿಗೆ ಪೌರತ್ವವನ್ನು ಪಡೆಯುವ ಅವಕಾಶವನ್ನು ಸಿಎಬಿ ಒದಗಿಸುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)