varthabharthi


ರಾಷ್ಟ್ರೀಯ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ವ್ಯಾಪಕ ಪ್ರತಿಭಟನೆ: 5 ರೈಲುಗಳಿಗೆ ಬೆಂಕಿ

ವಾರ್ತಾ ಭಾರತಿ : 14 Dec, 2019

ಕೋಲ್ಕತಾ, ಡಿ.14: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರುದ್ಧ ಪಶ್ಚಿಮ ಬಂಗಾಳ ದಲ್ಲಿ ಭುಗಿಲೆದ್ದಿರುವ ಪ್ರತಿಭಟನೆಗಳು ಶನಿವಾರವೂ ಮುಂದುವರಿದಿದ್ದು,ವಿವಿಧೆಡೆ ಉದ್ರಿಕ್ತ ಜನರ ಗುಂಪುಗಳು ಹಲವಾರು ಬಸ್ಸುಗಳು,ಅಂಗಡಿಗಳಿಗೆ ಹಾನಿಯುಂಟು ಮಾಡಿದ್ದಾರೆ. ಹೌರಾ ಜಿಲ್ಲೆಯಲ್ಲಿ ರೈಲು ನಿಲ್ದಾಣಕ್ಕೆ ಬೆಂಕಿ ಹಚ್ಚಲಾಗಿದೆ.

ಮುರ್ಶಿದಾಬಾದ್‌ನ ಲಾಗೊಲಾ ರೈಲು ನಿಲ್ದಾಣದಲ್ಲಿ ಪ್ರತಿಭಟನಕಾರರು ಪ್ರಯಾಣಿಕರಿಲ್ಲದ ಐದು ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ. ಮುರ್ಶಿದಾಬಾದ್ ಹಾಗೂ ಉತ್ತರ 24 ಪರಗಣ ಹಾಗೂ ಹೌರಾ ಗ್ರಾಮಾಂತರ ಜಿಲ್ಲೆಗಳಲ್ಲಿಯೂ ಭಾರೀ ಹಿಂಸಾಚಾರದ ಘಟನೆಗಳು ವರದಿಯಾಗಿವೆ.

ರಾಷ್ಟ್ರೀಯ ಹೆದ್ದಾರಿ ಎನ್‌ಎಚ್6 (ಮುಂಬೈ ರಸ್ತೆ) ಹಾಗೂ ಎನ್‌ಎಚ್2 (ದಿಲ್ಲಿ ರಸ್ತೆ)ಗಳನ್ನು ಕೋಲ್ಕತಾ ನಗರಕ್ಕೆ ಸಂಪರ್ಕಿಸುವ ಹೌರಾದ ಕೊನಾ ಎಕ್ಸ್‌ಪ್ರೆಸ್‌ ವೇ ಹೆದ್ದಾರಿಯಲ್ಲಿ ಪ್ರತಿಭಟನಕಾರರು ಸುಮಾರು 15 ಸರಕಾರಿ ಹಾಗೂ ಖಾಸಗಿ ಬಸ್ಸುಗಳಿಗೆ ಬೆಂಕಿಹಚ್ಚಿದ್ದಾರೆ.

ಉತ್ತರ ಹಾಗೂ ದಕ್ಷಿಣ ಬಂಗಾಳವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳ ಲ್ಲೊಂದಾದ ರಾಷ್ಟ್ರೀಯ ಹೆದ್ದಾರಿ 34ರಲ್ಲಿ ಪ್ರತಿಭಟನಾಕಾರರು ಮುರ್ಷಿದಾಬಾದ್‌ನಲ್ಲಿ ರಸ್ತೆ ತಡೆ ನಿರ್ಮಿಸಿದ್ದಾರೆ ಹಾಗೂ ಹಲವಾರು ಬಸ್‌ಗಳಿಗೆ ಬೆಂಕಿ ಹಚ್ಚಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಹೌರಾ ಜಿಲ್ಲೆಯ ಡೊಮ್‌ಜುರ್‌ನಲ್ಲಿ ಪ್ರತಿಭಟನಾನಿರತರು ರಸ್ತೆಗಳಲ್ಲಿ ಟಯರ್‌ಗಳಿಗೆ ಸುಟ್ಟು ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಹಾಗೂ ಹಲವಾರು ವಾಹನಗಳನ್ನು ಜಖಂಗೊಳಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಅಲ್ಲಿಗೆ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ರವಾನಿಸಲಾಗಿದೆ. ಹೌರಾ ಗ್ರಾಮಾಂತರ ಜಿಲ್ಲೆಯ ಬಗ್ನಾನ್ ಪ್ರದೇಶದಲ್ಲಿ ಸುಮಾರು 20 ಅಂಗಡಿಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎಂದವರು ಹೇಳಿದ್ದಾರೆ.

ಹೌರಾ ಜಿಲ್ಲೆಯ ಸಂಕ್ರೈಲ್‌ನಲ್ಲಿ ಶನಿವಾರ ದಾಂಧಲೆ ನಡೆಸಿದ ನೂರಾರು ಮಂದಿ ಪ್ರತಿಭಟನಕಾರರು ರೈಲುನಿಲ್ದಾಣದ ಕಟ್ಟಡದ ಒಂದು ಭಾಗಕ್ಕೆ ಬೆಂಕಿ ಹಚ್ಚಿದ್ದಾರೆ. ಅಲ್ಲಿದ್ದ ರೈಲ್ವೆ ಪೊಲೀಸ್ ಸಿಬ್ಬಂದಿಯ ಮೇಲೂ ಅವರು ಹಲ್ಲೆ ನಡೆಸಿದ್ದಾರೆ.

ಪೂರ್ವ ರೈಲ್ವೆಯ ಸಿಲ್ಡಾ ಹಾಗೂ ಹಸ್ನಾಬಾದ್ ವಿಭಾಗದಲ್ಲಿ ರೈಲುಗಳ ಸಂಚಾರಕ್ಕೆ ತಡೆಯುಂಟು ಮಾಡಿರುವ ಬಗ್ಗೆಯೂ ವರದಿಗಳು ಬಂದಿವೆ.

ಆಗ್ನೇಯ ರೈಲು ವಲಯದ ಹೌರಾ-ಖರಗಪುರ ವಿಭಾಗದಲ್ಲಿ ಪ್ರತಿಭಟನಕಾರರು ರೈಲು ಹಳಿಗಳಲ್ಲಿ ಧರಣಿ ನಡೆಸಿದ್ದರಿಂದ ಇಂದು ಬೆಳಗ್ಗೆ 11:00 ಗಂಟೆಯಿಂದ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಪೌರತ್ವ ಕಾಯ್ದೆ ಪ.ಬಂಗಾಳದಲ್ಲಿ ಜಾರಿಗೆ ಅವಕಾಶ ನೀಡಲಾರೆ: ಮಮತಾ ಗುಡುಗು

ತನ್ನ ರಾಜ್ಯದಲ್ಲಿ ಯಾವುದೇ ಸನ್ನಿವೇಶದಲ್ಲಿಯೂ ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿಗೆ ಅವಕಾಶ ನೀಡುವುದಿಲ್ಲವೆಂದು ಈ ಮಧ್ಯೆ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಪುನರುಚ್ಚರಿಸಿದ್ದಾರೆ.

ರಸ್ತೆ ಹಾಗೂ ರೈಲು ತಡೆ ನಡೆಸದಂತೆ ಹಾಗೂ ಹಿಂಸಾಚಾರಕ್ಕಿಳಿಯದಂತೆ ಜನರಿಗೆ ಮನವಿ ಮಾಡಿದ್ದಾರೆ ಗಲಭೆಗಳನ್ನು ಸೃಷ್ಚಿಸುವವರು ಹಾಗೂ ಕಾನೂನನ್ನು ಕೈಗೆತ್ತಿಕೊಳ್ಳುವವರನ್ನು ಸುಮ್ಮನೆ ಬಿಡಲಾಗುವುದಿಲ್ಲ. ಸಾರ್ವಜನಿಕ ಸೊತ್ತುಗಳಿಗೆ ಹಾನಿಯೆಸಗುವವರು ಕಠಿಣ ಕ್ರಮವನ್ನು ಎದುರಿಸಬೇಕಾಗೀತೆಂದು ಅವರು ಎಚ್ಚರಿಕೆ ನೀಡಿದ್ದಾರೆ.ಮಮತಾ ಬ್ಯಾನರ್ಜಿ ಅವರು ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರಬಲ ವಿರೋಧಿಯಾಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)