varthabharthi


ರಾಷ್ಟ್ರೀಯ

ಸಮಸ್ತ ಪೌರತ್ವ ಸಂರಕ್ಷಣಾ ಮಹಾ ಸಮ್ಮೇಳನ

ಭಾರತವು ಯಾವುದೇ ಧರ್ಮದ ಸ್ವತ್ತಲ್ಲ: ಜಿಫ್ರಿ ತಂಙಳ್

ವಾರ್ತಾ ಭಾರತಿ : 14 Dec, 2019

ಕಲ್ಲಿಕೋಟೆ: ಧರ್ಮದ ಹೆಸರಿನಲ್ಲಿ ಒಂದು ವಿಭಾಗಕ್ಕೆ ಮಾತ್ರ ಪೌರತ್ವವನ್ನು ನಿಷೇಧಿಸುವುದು ಸಂವಿಧಾನ ವಿರೋಧಿ ನಡೆಯಾಗಿದ್ದು, ಭಾರತದ ಜಾತ್ಯಾತೀತ ಪರಂಪರೆಯನ್ನು ನಿರಾಕರಿಸುವ ಕೃತ್ಯವಾಗಿದೆ ಎಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದ್ದಾರೆ.

ಕಲ್ಲಿಕೋಟೆಯಲ್ಲಿ ನಡೆದ ಸಮಸ್ತ ಪೌರತ್ವ ಸಂರಕ್ಷಣಾ ಮಹಾ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸಮಾಜದಲ್ಲಿ ವರ್ಗೀಯ ಧ್ರುವೀಕರಣ ನಡೆಸಿ ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುವ ಪ್ರಯತ್ನವನ್ನು ಸಂವಿಧಾನ ಮತ್ತು ಜಾತ್ಯಾತೀತತೆಯ ಮೇಲೆ ನಂಬಿಕೆಯಿರಿಸುವ ಯಾವೊಬ್ಬ ಪ್ರಜೆಗೂ ಅಂಗಿಕರಿಸಲು ಸಾಧ್ಯವಿಲ್ಲ. ಭಾರತವು ಯಾವುದೇ ಧರ್ಮದ ಸ್ವತ್ತಲ್ಲ. ಅಂತಹ ಸನ್ನಿವೇಶವನ್ನು ಸೃಷ್ಟಿಸಲು ನಾವು ಅವಕಾಶ ನೀಡುವುದಿಲ್ಲ ಎಂದು ಅವರು ಜಿಫ್ರಿ ತಂಙಳ್ ಹೇಳಿದರು.

ಸಮಸ್ತ ಉಪಾಧ್ಯಕ್ಷ ಸೈಯದ್ ಹೈದರಲಿ ಶಿಹಾಬ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯದರ್ಶಿ ಉಮರ್ ಮುಸ್ಲಿಯಾರ್ ಕೊಯ್ಯೋಡ್ ಪ್ರತಿಜ್ಞಾ ವಿಧಿ ಬೋಧಿಸಿದರು. ಕಲ್ಲಿಕೋಟೆ ಖಾಝಿ ಮುಹಮ್ಮದ್ ಜಮಲುಲ್ಲೈಲಿ ತಂಙಳ್ ದುವಾ ನೆರವೇರಿಸಿದರು.

ಸಂಸದರಾದ ಪಿ.ಕೆ. ಕುಂಞಾಲಿ ಕುಟ್ಟಿ, ಇ.ಟಿ. ಮುಹಮ್ಮದ್ ಬಶೀರ್, ಅಬ್ದುಲ್ ವಹ್ಹಾಬ್, ಮೇಘಾಲಯ ಮಾಜಿ ರಾಜ್ಯಪಾಲ ಕೆ. ಶಂಕರನಾರಾಯಣ್, ಸಿಪಿಎಂ ಶಾಸಕ, ಇ.ಕೆ. ವಿಜಯನ್, ನಾಸೀರ್ ಫೈಝಿ ಕೂಡತ್ತಾಯಿ, ಮುಹಮ್ಮದ್ ಫೈಝಿ ಓಣಂಪಳ್ಳಿ, ಅಬ್ದುಲ್ ಸತ್ತಾರ್ ಪಂದಲ್ಲೂರು, ಅಬ್ದುಲ್ ಸಮದ್ ಪೂಕೋಟೂರು ಮುಂತಾದವರು ಮಾತನಾಡಿದರು.

ಸಮಸ್ತ ಮುಖಂಡರಾದ ಉಮರ್ ಫೈಝಿ ಮುಕ್ಕಂ, ಯು.ಎಂ. ಉಸ್ತಾದ್, ಕಲ್ಲಿಕೋಟೆ ವಲಿಯ ಖಾಝಿ, ಬಂಬ್ರಾಣ ಉಸ್ತಾದ್ ಹಾಗೂ ಸಮಸ್ತ ಮುಶಾವರ ಸದಸ್ಯರು, ಉಪಸಮಿತಿಯ ನೇತಾರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಎಂ.ಟಿ. ಅಬ್ದುಲ್ಲ ಮುಸ್ಲಿಯಾರ್ ಸ್ವಾಗತಿಸಿ, ಬಶೀರ್ ಫೈಝಿ ದೇಶಮಂಗಲ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)