varthabharthi


ಮಾಹಿತಿ - ಮಾರ್ಗದರ್ಶನ

ಜಲಕಳೆ ನಿಯಂತ್ರಣಕ್ಕೆ ಬ್ರಹ್ಮಾವರ ಕೃಷಿ ವಿಜ್ಞಾನಿಗಳಿಂದ ಸಂಶೋಧನೆ

ಕೃಷಿ ಮಾರಕ ‘ಅಂತರಗಂಗೆ’ಗೆ ಎರೆಹುಳ ಕಾಂಪೋಸ್ಟ್‌ನಿಂದ ಪರಿಹಾರ

ವಾರ್ತಾ ಭಾರತಿ : 17 Dec, 2019
ನಝೀರ್ ಪೊಲ್ಯ

ಉಡುಪಿ, ಡಿ.16: ಕೃಷಿಭೂಮಿಗಳಿಗೆ ಮಾರಕವಾಗಿ ಪರಿಣಮಿಸಿರುವ ‘ವಾಟರ್‌ಪರ್ನ್’ ಎಂಬ ಅಂತರಗಂಗೆ ಜಲಕಳೆಯನ್ನು ನಿಯಂತ್ರಿಸುವಲ್ಲಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭೌತಿಕ ವಿಧಾನದ ಮೂಲಕ ಕೊನೆಗೂ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ವಿಜ್ಞಾನಿಗಳು ಎರೆಹುಳ ಕಾಂಪೋಸ್ಟ್ ಗೊಬ್ಬರ ತಯಾರಿಕೆಯ ಪ್ರಯೋಗವನ್ನು ನಡೆಸಿದ್ದಾರೆ.

ಆವೆ ಮಣ್ಣಿನ ಹೊಂಡ, ಕೆರೆ, ಹೊಳೆ, ತೋಡುಗಳಲ್ಲಿ ಕಂಡು ಬರುವ ಈ ಜಲಕಳೆಯು ಮಳೆಗಾಲದಲ್ಲಿ ಹೆಚ್ಚಾಗಿ ವಿಸ್ತರಣೆಯಾಗುತ್ತದೆ. ಮಳೆಯ ಶುದ್ಧ ನೀರಿನಲ್ಲಿ ಆಮ್ಲಜನಕ ಹೆಚ್ಚು ಇರುವುದರಿಂದ ಅದರಲ್ಲಿನ ಸಾರಜನಕ ಅಂಶವನ್ನು ಬಳಸಿಕೊಂಡು ಇವು ಅತ್ಯಂತ ವೇಗವಾಗಿ ಬೆಳವಣಿಗೆಯಾಗುತ್ತದೆ.

ಹೀಗೆ ಇದು ಸಹಸ್ರ ಸಂಖ್ಯೆಯಲ್ಲಿ ಬೆಳೆದು ಮಳೆಗಾಲದಲ್ಲಿ ನೆರೆಯ ನೀರಿನೊಂದಿಗೆ ಕೃಷಿಭೂಮಿಯನ್ನು ಸೇರುತ್ತದೆ. ಇದರಿಂದ ಭತ್ತದ ನೇಜಿಯ ಬೆಳವಣಿಗೆ ಕುಂಠಿತವಾಗುತ್ತದೆ. ಜಲಮೂಲಗಳ ನೀರನ್ನು ಕಲ್ಮಶ ಮಾಡಿ, ರೋಗ ಹರಡುವ ಕೀಟಗಳ ಬೆಳವಣಿಗೆಗೆ ಆಶ್ರಯ ಮಾಡಿಕೊಡುತ್ತದೆ. ಅಲ್ಲದೆ, ನೀರಿನಲ್ಲಿರುವ ಎಲ್ಲ ಆಮ್ಲಜನಕವನ್ನು ಇವು ಬಳಸಿಕೊಳ್ಳುವುದರಿಂದ ಉಳಿದ ಜಲಚರಗಳಿಗೆ ಆಮ್ಲಜನಕ ಕೊರತೆ ಆಗುವ ಸಾಧ್ಯತೆಗಳು ಕೂಡ ಇರುತ್ತವೆ ಎನ್ನುತ್ತಾರೆ ಕೇಂದ್ರದ ವಿಜ್ಞಾನಿ ಡಾ.ಎನ್.ನವೀನ್.

ಪ್ರಯೋಗಗಳು ವಿಫಲ: ಕೃಷಿ ಮಾತ್ರವಲ್ಲದೆ ಜಲಸಸ್ಯ ಹಾಗೂ ಜಲಚರಗಳಿಗೂ ಕಂಟಕವಾಗಿ ಪರಿಣಮಿಸಿರುವ ಅಂತರಗಂಗೆ ಜಲಕಳೆಯನ್ನು ನಿಯಂತ್ರಿಸುವಂತೆ ಸ್ಥಳೀಯ ರೈತರು ಸಾಕಷ್ಟು ಹೋರಾಟಗಳನ್ನು ನಡೆಸಿದ್ದರು. ಅಲ್ಲದೆ, ಈ ವಿಚಾರ ಸರಕಾರದ ಮಟ್ಟದಲ್ಲೂ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಉಳಿದ ಪ್ರದೇಶಗಳಿಗಿಂತ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿ ನ ಸಂಖ್ಯೆಯಲ್ಲಿ ಕಂಡುಬರುವ ಈ ಜಲಕಳೆಗಳು, ಇಂದು ಬಹಳ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಬೇರೆ ಬೇರೆ ಪ್ರದೇಶಗಳಲ್ಲಿದ್ದರೂ ಕೂಡ ನಮ್ಮಲ್ಲಿ ಅದು ಹೆಚ್ಚು ವ್ಯಾಪಿಸಿದೆ. ಈವರೆಗೆ ಸಾಮಾನ್ಯವಾಗಿದ್ದ ಈ ಸಮಸ್ಯೆ ಈಗ ಕೃಷಿಭೂಮಿಗೆ ವ್ಯಾಪಿಸಿುವುದರಿಂದ ಇದೀಗ ಗಂಭೀರವಾಗಿದೆ.

ಈ ನಿಟ್ಟಿನಲ್ಲಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ರಾಸಾಯನಿಕ ಹಾಗೂ ಜೈವಿಕ ವಿಧಾನಗಳಲ್ಲಿ ನಡೆಸಿದ ಸಂಶೋಧನೆಗಳು ಕೈಗೂಡದೆ ವಿಫಲವಾಗಿದ್ದವು. ಅಂತರಗಂಗೆ ನಿಯಂತ್ರಣಕ್ಕಾಗಿ ಸುಮಾರು ಎರಡು ವರ್ಷಗಳ ಹಿಂದೆ ಕೇಂದ್ರದ ವಿಜ್ಞಾನಿ ಡಾ.ಎನ್.ನವೀನ್, ಜೈವಿಕ ವಿಧಾನದಲ್ಲಿ ಸರ್ಟೋ ಬೇಗಸ್ ಸಾಲ್ವಿನಿಯಾ ಎಂಬ ದುಂಬಿಯನ್ನು ಬಳಸಿಕೊಂಡು ಪ್ರಯೋಗವನ್ನು ನಡೆಸಿದ್ದರು. ಅದರ ನಂತರ ರಾಸಾಯನಿಕ ವಿಧಾನದಲ್ಲಿ ಸಸ್ಯನಾಶಕಗಳನ್ನು ಬಳಸಿ ಪ್ರಯೋಗ ಮಾಡಿದ್ದರು. ಆದರೆ, ಇು ಎರಡು ಕೂಡ ಯಶಸ್ವಿಯಾಗಿರಲಿಲ್ಲ.

ಭೌತಿಕ ಪ್ರಯೋಗ ಯಶಸ್ವಿ: ಕೃಷಿ ಇಲಾಖೆ ನೀಡಿದ ಸೂಚನೆಯಂತೆ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ನವೀನ್ ನೇತೃತ್ವದ ತಂಡ, ಅಂತರಗಂಗೆ ನಿಯಂತ್ರಣಕ್ಕೆ ಕಳೆದ ಎರಡು ವರ್ಷಗಳ ಕಾಲ ಭೌತಿಕ ವಿಧಾನದ ಮೂಲಕ ಎರೆಹುಳ ಕಾಂಪೋಸ್ಟ್ ಗೊಬ್ಬರ ತಯಾರಿಕೆಯ

ಪ್ರಯೋಗ ನಡೆಸಿಯಶಸ್ವಿ ಕಂಡಿದೆ.

ಈ ಪ್ರಯೋಗದಂತೆ ನೀರಿನಿಂದ ಅಂತರಗಂಗೆಯನ್ನು ತೆಗೆದು, ಅಂತರಗಂಗೆ ಮತ್ತು ಸೆಗಣಿ ಗೊಬ್ಬರವನ್ನು ಮಿಶ್ರಣ ಮಾಡಿ ಆ ಮಿಶ್ರಣಕ್ಕೆ ಭಾರತೀಯ ಸಾವಯವ ಸಂಸ್ಥೆ ಬಿಡುಗಡೆ ಮಾಡಿರುವ ವೆಸ್ಟ್ ಡಿಕಂಪೋಸರ್‌ನ ದ್ರಾವಣವನ್ನು ಬೆರೆಸಲಾಗುತ್ತದೆ. ಇದನ್ನು 30 ದಿನಗಳವರೆಗೆ ಇಟ್ಟು ಕೊಳೆಯುವಂತೆ ಮಾಡಿ, ನಂತರ ಅದರಲ್ಲಿ ಎರೆಹುಳುಗಳನ್ನು ಬಿಡಲಾಗುತ್ತದೆ.

ಅದು ಅಂತರಗಂಗೆ ಎರೆಕಾಂಪೋಸ್ಟ್ ಆಗಿ ಪರಿವರ್ತನೆಯಾಗುತ್ತದೆ ಮತ್ತು ಈ ಕಂಪೋಸ್ಟ್ ಸಾರಜನಕ, ರಂಜಕ, ಪೋಟ್ಯಾಶ್ ಅಂಶಗಳು ಸೆಗಣಿ ಗೊಬ್ಬರಕ್ಕಿಂತ ಹೆಚ್ಚು ಪೋಷಕಾಂಶದಿಂದ ಕೂಡಿರುತ್ತದೆ. ಆದುದರಿಂದ ಇದು ಬೆಳೆಗಳಿಗೆ ಉತ್ತಮ ಸಾರವಾಗಲಿದೆ ಎಂದು ವಿಜ್ಞಾನಿ ಡಾ.ಎನ್. ನವೀನ್ ತಿಳಿಸಿದ್ದಾರೆ.

ಸರಕಾರಕ್ಕೆ ಸಂಶೋಧನಾ ವರದಿ ಸಲ್ಲಿಕೆ

 ಅಂತರಗಂಗೆ ಸಮಸ್ಯೆಯನ್ನು ಈ ಹಿಂದೆ ವಿಧಾನಪರಿಷತ್‌ನಲ್ಲಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಪ್ರತಾಪ್ ಚಂದ್ರ ಶೆಟ್ಟಿ ಪ್ರಸ್ತಾಪಿಸಿದ್ದರು. ಇದರಿಂದಾಗಿ ಈ ವಿಚಾರ ಪರಿಷತ್‌ನ ಅರ್ಜಿ ಸಲಹಾ ಸಮಿತಿಯ ಮುಂದೆ ಚರ್ಚೆಗೆ ಒಳಪಟ್ಟಿತ್ತು.

ಅದರಂತೆ ಸಮಿತಿಯಲ್ಲಿರುವ ಕೃಷಿ ಆಯುಕ್ತರು ಅಂತರಗಂಗೆಯ ನಿಯಂತ್ರಣಕ್ಕೆ ಸಂಶೋಧನೆ ನಡೆಸುವಂತೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರಕ್ಕೆ ನಿರ್ದೇಶನ ನೀಡಿದ್ದರು. ಅದರಂತೆ ನವೀನ್ ನೇತೃತ್ವದ ತಂಡ ಎರಡು ವರ್ಷಗಳ ಈ ಸಂಶೋಧನೆ ನಡೆಸಿ, ಅರ್ಜಿ ಸಮಿತಿ ಹಾಗೂ ಕೃಷಿ ಇಲಾಖೆಯ ಆಯುಕ್ತರಿಗೆ ಈ ವರದಿಯನ್ನು ಸಲ್ಲಿಸಿದ್ದಾರೆ.

ಅಂತರಗಂಗೆ ನಿಯಂತ್ರಣಕ್ಕೆ ಮಾಡಿರುವ ಸಂಶೋಧನೆ ಯಶಸ್ವಿಯಾಗಿದ್ದು, ಈ ಕುರಿತ ವರದಿಯನ್ನು ಕೃಷಿ ಇಲಾಖೆಗೆ ಸಲ್ಲಿಸಲಾಗಿದೆ. ಅದನ್ನು ಮುಂದುವರಿಸಲು ಇಲಾಖೆ ಈಗಾಗಲೇ ಸೂಚನೆ ನೀಡಿದೆ. ಮುಂದೆ ಕ್ಷೇತ್ರದಲ್ಲಿಯೂ ಬೇರೆ ಬೇರೆ ಕಡೆ ಹೇಗೆ ಪರಿಣಾಮ ಬೀರುತ್ತದೆ ಎಂಬುದಾಗಿಯೂ ಪರಿಶೀಲನೆ ನಡೆಸಲಾಗುತ್ತದೆ. ಮುಂದೆ ರೈತರಿಗೆ ಮಾಹಿತಿ ಕಾರ್ಯಾಗಾರವನ್ನು ನಡೆಸಿ ಅಂತರಗಂಗೆ ನಿಯಂತ್ರಣ ಕುರಿತು ಮಾಹಿತಿ ನೀಡಲಿದ್ದೇವೆ.

-ಡಾ.ಎನ್.ನವೀನ್, ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)