varthabharthiಅನುಗಾಲ

ವಿದ್ಯೆ, ಬುದ್ಧಿ ಮತ್ತು ವಿವೇಕ

ವಾರ್ತಾ ಭಾರತಿ : 19 Dec, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಬುದ್ಧಿಯೆಂಬುದು ಶಾಲೆಗಳಲ್ಲಿ ಸಿಗುವ ಸರಕಲ್ಲ. ಅದು ಮನೆಯಲ್ಲಿ ಅಥವಾ ಪ್ರಯಾಣದಲ್ಲಿ, ಮಾತಿನಲ್ಲಿ, ಒಟ್ಟಾರೆ ಅನುಭವದಲ್ಲಿ ಸಿಗುವ ಮದ್ದು; ಪರಿಮಳದ್ರವ್ಯ. ಪರಿಮಳವೇಕೆಂದರೆ ಬುದ್ಧಿಯಿದೆಯೇ ಇಲ್ಲವೇ ಎಂಬುದು ಸ್ವಂತಕ್ಕೆ ಮನವರಿಕೆಯಾಗುವ ಮೊದಲೇ ಹೊರಜಗತ್ತಿಗೆ ಗೊತ್ತಾಗುತ್ತದೆ. ಸೌಜನ್ಯ, ಸರಳತೆ, ಪ್ರಾಮಾಣಿಕತೆ, ಮುಂತಾದ ಅನೇಕ ಒಳ್ಳೆಯ ಗುಣಗಳು ಇರುವವನೇ ಬುದ್ಧಿವಂತ. ತಾನು ಬುದ್ಧಿವಂತನೆಂದು ಹೇಳಿಕೊಂಡು ಹೋಗುವವನು ಬುದ್ಧಿವಂತನಾಗಲಾರ.


ಸರ್ವೇಸಾಮಾನ್ಯವಾಗಿ ವೇದಾಂತಿಗಳು, ತತ್ವಜ್ಞಾನಿಗಳು ಮಾತನಾಡಬಯಸುವ, ಬರೆಯಲಿಚ್ಛಿಸುವ ವಿಚಾರವಿದು. ಆದರೆ ಇಂದಿನ ಭಾರತದಲ್ಲಿ ಅತ್ಯಂತ ಹೆಚ್ಚಿನ ಅಭಾವವಿದ್ದರೆ ಅದು ಈ ಮೂರು ಅಂಶಗಳದ್ದು. ಆದ್ದರಿಂದ ಈ ಕುರಿತು ಸ್ವಲ್ಪ ಗಮನಿಸೋಣ.

ಐಸಿಸ್ ಎಂದು ಗುರುತಿಸಲ್ಪಟ್ಟ ಸ್ವಯಂ ಅಸ್ತಿತ್ವದ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ರಾಷ್ಟ್ರ. ಇದರ ನಾಯಕ ಬಗ್ದಾದಿ ಈಚೆಗೆ ಅಮೆರಿಕ ಧಾಳಿಯಲ್ಲಿ ಹತನಾದ. ಮಧ್ಯಪೂರ್ವ ಜಗತ್ತಿನ (ಮತ್ತು ಅಮೆರಿಕದ!) ನಿದ್ರೆಕೆಡಿಸಿದ ಕೀರ್ತಿ ಈ ಗುಂಪಿನದ್ದು. ಪ್ರಾಯಃ ಅಲ್‌ಖಾಯಿದ, ಮತ್ತಿತರ ಪಾಕಿಸ್ತಾನದ ನೆಲದ ಭಯೋತ್ಪಾದಕ ಸಂಘಟನೆಗಳಿಗಿಂತಲೂ ಕಠಿಣ ಹೃದಯದ ಅತೀವ ಮಹತ್ವಾಕಾಂಕ್ಷೆಯ ಮತ್ತು ಅಮೆರಿಕವನ್ನು ವಿರೋಧಿಸುವ ಉದ್ದೇಶದೊಂದಿಗೆ ಇತರರನ್ನು ಮತಾಂಧತೆ ಮತ್ತು ಕ್ರೌರ್ಯಕ್ಕೆ ಸೆಳೆಯುವ ಯೋಜನೆಯ ಈ ಸಂಘಟನೆಯ ಆಕರ್ಷಣೆಗೆ ಭಾರತದ ಯುವಕರೂ ಬಲಿಬಿದ್ದಿದ್ದರು. ಆದರೆ ಈ ಸಂಘಟನೆಯ ಭಯೋತ್ಪಾದನೆಗೆ ಹೆಚ್ಚು ಒಳಗಾದವರು ಮಧ್ಯಪೂರ್ವದ ಮತ್ತು ಯುರೋಪಿನ ಅಮಾಯಕ ಸಾಹಸೀ ಮುಗ್ಧಜನರು. ಐಸಿಸ್ ಅಂತಲ್ಲ ಜಗತ್ತಿನ ಬಹುತೇಕ ಭಯೋತ್ಪಾದಕ ಸಂಘಟನೆಗಳು ಮುಗ್ಧರನ್ನು ಒಲಿಸುವುದರೊಂದಿಗೆ ತಮ್ಮ ಕಾರಸ್ಥಾನವನ್ನಾರಂಭಿಸುತ್ತವೆ. ವಿದ್ಯೆ, ಅನ್ನಾಹಾರ, ಬಟ್ಟೆ, ವಸತಿಯಿಲ್ಲದವರಿಗೆ ಆಮಿಷಗಳನ್ನೊಡ್ಡಿ ತಮ್ಮ ಸಂಘಟನೆಗಳನ್ನು ಸೇರಲು ಪ್ರೇರೇಪಿಸುತ್ತವೆ. ಆನಂತರ ಅವರನ್ನು ಸಮ್ಮೋಹನ (ಬ್ರೈನ್‌ವಾಷ್) ಗೊಳಿಸುವ ಪತಿತ ಕಾಯಕದಲ್ಲಿ ತೊಡಗುತ್ತವೆ. ಅನೇಕರನ್ನು ಭಯಪಡಿಸಿ ಸೇರಿಸುವುದೂ ಉಂಟು. ಯುವತಿಯರನ್ನು ಮಾತ್ರವಲ್ಲ, ಬಾಲಿಕೆಯರನ್ನೂ ತಮ್ಮ ಸಂಘಟನೆಯ ಕ್ರೂರ ದೈಹಿಕತೀಟೆಯ ಮೋಜಿಗೆ ಬಳಸಿದ ಉದಾಹರಣೆಗಳು ಬೇಕಷ್ಟಿವೆ. ಒಟ್ಟಾರೆಯಾಗಿ ಮನುಷ್ಯರನ್ನು ಅಸ್ತ್ರಗಳಂತೆ, ವಸ್ತುಗಳಂತೆ ಉಪಯೋಗಿಸಿ ಅಷ್ಟೇ ನಿರ್ದಾಕ್ಷಿಣ್ಯವಾಗಿ ಎಸೆಯುವ ಸಂವಿಧಾನ ಈ ಭಯೋತ್ಪಾದಕರದ್ದು. ಈ ಸಂಚು ಇಡೀ ಜಗತ್ತಿಗೆ ತಿಳಿದಿದ್ದರೂ ಅದನ್ನು ನಿಯಂತ್ರಿಸಲು ಯಾವ ಅಧಿಕಾರಸ್ಥ ಸರಕಾರಕ್ಕೂ ಸಾಧ್ಯವಾಗಿಲ್ಲ. ಒಂದು ಕಡೆ ಇನ್ನೇನು ನಿಯಂತ್ರಣಕ್ಕೆ ಬಂತೆನ್ನುವ ಹೊತ್ತಿಗೆ ಇನ್ನೆಲ್ಲೋ ಅದರ ಅಕ್ರಮ ಸಂತತಿ ಸೃಷ್ಟಿಯಾಗುತ್ತಿರುತ್ತದೆ. ರಕ್ತಪಿಪಾಸು ರಕ್ತಬೀಜನ ಪೌರಾಣಿಕ ಕಲ್ಪನೆ ಆಧುನಿಕ ಜಗತ್ತಿಗೆ ಎಷ್ಟೊಂದು ಮಹತ್ವದ್ದು!

ಸಮಾಜ ಸುಶೀಕ್ಷಿತವಾಗದೆ ಈ ಮತ್ತು ಇಂತಹ ಪರಿಸ್ಥಿತಿ ಅಪರಿಹಾರ್ಯ. ಅದು ವಿವಿಧ ಧರ್ಮ/ಮತಗಳಲ್ಲಿ ವಿವಿಧ ರೀತಿಯಲ್ಲಿ ಪ್ರತ್ಯಕ್ಷವಾಗುತ್ತಿರುತ್ತದೆ. ಧರ್ಮಕ್ಕೆ ಗ್ಲಾನಿ ಬಂದಾಗಲೆಲ್ಲ ಅವತರಿಸುತ್ತೇನೆ ಎಂದಿದ್ದ ಭಗವಂತ ಭಯಪಟ್ಟು ಅದೃಶ್ಯನಾಗಿದ್ದಾನೆ. ಆದರೆ ಅಧರ್ಮಕ್ಕೆ ಇಂಬು ಕೊಡುವ ಇಂತಹ ಭಯೋತ್ಪಾದನಾ ಸಂಘಟನೆಗಳ ರೂಪದಲ್ಲಿ ತಾಮಸಶಕ್ತಿಯು ಅವತರಿಸುತ್ತಲೇ ಇರುತ್ತದೆ. ಅದರ ಅವತಾರಕ್ಕೆ ದಶದ ಮಿತಿಯಿಲ್ಲ. ಅದು ಅಸಂಖ್ಯ.

ಕರ್ನಾಟಕದ ಕರಾವಳಿಯ ಕಲ್ಲಡ್ಕದಲ್ಲಿ ಶ್ರೀರಾಮನ ಹೆಸರಿನಲ್ಲಿರುವ ಶಾಲೆಯಲ್ಲಿ ಈಚೆಗೆ ಒಂದು ಪ್ರಸಂಗ ನಡೆದ ಬಗ್ಗೆ ವರದಿಯಾಗಿದೆ: ಕೇಂದ್ರ ಸಚಿವ ಸದಾನಂದ ಗೌಡರು ಮತ್ತು ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ (ಈಕೆ ಮಾಜಿ ಪೊಲೀಸ್ ಅಧಿಕಾರಿ!) ಇನ್ನಿತರ ಗಣ್ಯರು ಅತಿಥಿಗಳಾಗಿ ಭಾಗವಹಿಸಿದ ಶಾಲಾ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳಿಂದ ರೂಪಕವೊಂದನ್ನು ಪ್ರದರ್ಶಿಸಲಾಯಿತು. ಅಯೋಧ್ಯೆಯ ಬಾಬರಿ ಮಸೀದಿಯನ್ನು ಕೆಡವಿ ಅಲ್ಲಿ ಶ್ರೀರಾಮ ಮಂದಿರವು ಎದ್ದುಬರುವ ದೃಶ್ಯವನ್ನು ಜನಪ್ರಿಯವಾಗಿಸಲಾಯಿತು. ಅದು ಮಾಧ್ಯಮಗಳಲ್ಲಿ ಪ್ರಸಾರವೂ ಆಯಿತು. ಈ ರೂಪಕದ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಲಾಗಿ ಅವರು ಧರ್ಮದ್ವೇಷಕ್ಕೆ ಮತ್ತು ಕೋಮು ಸೌಹಾರ್ದ ಭಂಗಕ್ಕೆ ಕುಮ್ಮಕ್ಕು ನೀಡಬಲ್ಲ ಶಿಕ್ಷಾರ್ಹ ಅಪರಾಧಗಳ ಪ್ರಕರಣವನ್ನು ಈ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ದಾಖಲುಮಾಡಿಕೊಂಡರು. ಈ ಆರೋಪಿಗಳಲ್ಲೊಬ್ಬರು ವೈದ್ಯರೂ ಉಳಿದವರು ಶಿಕ್ಷಕರಿರಲೂಬಹುದು. (ಶಿಕ್ಷಣವು ಒಳ್ಳೆಯವರನ್ನು ಇನ್ನಷ್ಟು ಒಳ್ಳೆಯವರನ್ನಾಗಿ ಮತ್ತು ಕೆಟ್ಟವರನ್ನು ಇನ್ನಷ್ಟು ಕೆಟ್ಟವರನ್ನಾಗಿ ಮಾಡುವ ಗೊಬ್ಬರವೇ ಹೊರತು ಯಾವುದನ್ನೂ ಬಂಗಾರವಾಗಿಸಬಲ್ಲ ಪರುಷಮಣಿಯಲ್ಲ. ವಕೀಲ ವೃತ್ತಿಯಾಗಲೀ, ಪೊಲೀಸ್ ಸೇವೆಯಾಗಲೀ, ವೈದ್ಯಕೀಯವಾಗಲೀ, ಶಿಕ್ಷಕವೃತ್ತಿಯಾಗಲೀ ಮನುಷ್ಯತ್ವವನ್ನು ಬೆಳೆಸಬಹುದೆಂದು ಯಾರು ಭ್ರಮಿಸಬೇಕಾದ್ದಿಲ್ಲ. ಅವೆಲ್ಲವೂ ಸ್ವಾರ್ಥಸಾಧನೆಯ, ಉದರನಿಮಿತ್ತದ ಬಹುಕೃತವೇಷಗಳೆಂದು ತಿಳಿದರೆ ಸಾಕು.) ಎಲ್ಲೆಡೆ ಖಂಡನೆ ವ್ಯಕ್ತವಾಯಿತಾದರೂ ಅದರ ದೂರಗಾಮೀ ಪರಿಣಾಮಗಳ ಕುರಿತು ಸರಕಾರವು ತಕ್ಷಣದ ಯಾವ ಕ್ರಮವನ್ನೂ ಕೈಗೊಂಡಿಲ್ಲ.

ಇಂತಹ ಧೋರಣೆ ಮತ್ತು ಸಿದ್ಧಾಂತಗಳನ್ನು ಬೆಂಬಲಿಸುವ ರಾಜ್ಯ ಮತ್ತು ಕೇಂದ್ರ ಸರಕಾರವಿರುವಾಗ ದಾಖಲಾದ ಕ್ರಿಮಿನಲ್ ಪ್ರಕರಣಗಳ ಹಣೆಬರಹ ಸರ್ವವಿಧಿತ. ಅಯೋಧ್ಯೆಯ ಕುರಿತ ಸರ್ವೋಚ್ಚ ನ್ಯಾಯಾಲಯದ ತೀರ್ಪು ಇತ್ತೀಚೆಗೆ ಬಂದಿದೆ. ತೀರ್ಪನ್ನು ಈ ದೇಶದ ಅಲ್ಪಸಂಖ್ಯಾತರು ಅತ್ಯಂತ ವಿಶಾಲ ಮನಸ್ಸಿನಿಂದ ಸ್ವಾಗತಿಸಿದ್ದಾರೆ. ತೀರ್ಪಿನಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು ತಪ್ಪೆಂದು ನ್ಯಾಯಾಲಯ ಹೇಳಿದೆ. ಹಿರಿಯ ರಾಜಕಾರಣಿಗಳನ್ನೊಳಗೊಂಡ ಈ ಕುರಿತ ಕ್ರಿಮಿನಲ್ ಪ್ರಕರಣ ಇನ್ನೂ ಇತ್ಯರ್ಥವಾಗಬೇಕಿದೆ. ಈ ಹಂತದಲ್ಲಿ ಅದನ್ನು ಎಳೆಯ ಮನಸ್ಸುಗಳ ಮೂಲಕ ವೈಭವೀಕರಿಸುವುದರ ದುರುದ್ದೇಶ ತೀರಾ ಕೀಳುಮಟ್ಟದ್ದು. ಅಮಾನುಷವಾದದ್ದು. ಇದನ್ನು ಸ್ವತಃ ವಕೀಲರಾಗಿದ್ದವರು, ಪೊಲೀಸು ಅಧಿಕಾರಿಯಾಗಿದ್ದವರು ಸಹಿಸಿದರು ಮಾತ್ರವಲ್ಲ ಮೆಚ್ಚಿದರೆಂದರೆ ಈ ದೇಶ ಮತ್ತು ಈ ದೇಶದಲ್ಲಿ ಶಿಕ್ಷಣದ ಹೆಸರಿನಲ್ಲಿ ನಡೆಯುವ ಕುಟಿಲ ವಿದ್ಯಮಾನಗಳ ನೆಲೆ, ದಿಕ್ಕು ಸ್ಪಷ್ಟವಾಗಿದೆ.

ಆದರೆ ಇದಷ್ಟೇ ಆತಂಕಕ್ಕೆ ಕಾರಣವಲ್ಲ. ಇವೆಲ್ಲ ಆಂತರಿಕ ಭಯೋತ್ಪಾದನೆಯನ್ನು ವೈಭವೀಕರಿಸುವುದರೊಂದಿಗೆ, ಭಯೋತ್ಪಾದಕರನ್ನೂ ಸೃಷ್ಟಿಸಬಲ್ಲವು. ಸಾಮಾನ್ಯವಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವವರು ನಿಮ್ಮಲ್ಲೊಬ್ಬರಾದರೂ ಸಿ.ವಿ.ರಾಮನ್ ಆದರೆ, ಟಾಗೋರ್ ಆದರೆ, ಈ ಶಾಲೆ ಧನ್ಯ ಎಂದು ಹೇಳುವರು. ಆದರೆ ಇಂತಹ ಪರಿಸ್ಥಿತಿಯಲ್ಲಿ ನಿಮ್ಮಲ್ಲೊಬ್ಬರಾದರೂ ಭಯೋತ್ಪಾದಕರಾದರೆ... ಎಂಬ ಮಾತನ್ನು ಹೇಳುವ ಸಂದರ್ಭ ಬಂದೀತು. ಮಕ್ಕಳು ಒದ್ದೆ ಮಣ್ಣಿನಂತೆ. ಏನನ್ನಾದರೂ ಅವರು ಬೇಗ ಅಂಟಿಸಿಕೊಳ್ಳುತ್ತಾರೆ. ನಾವೆಲ್ಲ ಕಟ್ಟುವೆವು ಹೊಸನಾಡೊಂದನು.. ಎಂದೋ ಹಚ್ಚೇವು ಕನ್ನಡದ ದೀಪ.. ಎಂದೋ ಕಲಿತವರು. ಶಿಕ್ಷಕರು, ಶಾಲೆಗಳು ಕಟ್ಟುವುದನ್ನು ಹೇಳಿಕೊಡಬೇಕೇ ಹೊರತು ಕುಟ್ಟಿಮುರಿಯುವುದನ್ನಲ್ಲ; ದೀಪ ನಂದಿಸುವುದನ್ನಲ್ಲ. ಇಂತಹ ನಿದರ್ಶನಗಳು ನಮ್ಮ ಶಿಕ್ಷಣದ ಮತ್ತು ಶಿಕ್ಷಕರ ಮಿತಿಯನ್ನು, ದಾರುಣ ಸ್ಥಿತಿಯನ್ನು ಪ್ರದರ್ಶಿಸುತ್ತವೆ. ಅವರು ಪೊಲೀಸರಂತೆ ವ್ಯವಸ್ಥೆಯ ಅಡಿಯಾಳುಗಳಾಗಿ ತಮಗೆ ನಿರ್ದೇಶಿಸಿದ್ದನ್ನು ವಿದ್ಯಾರ್ಥಿಗಳ ಮೂಲಕ ಪ್ರದರ್ಶಿಸುತ್ತಾರೆ. ಮುಂದಕ್ಕೆ ವಿದ್ಯಾರ್ಥಿಗಳ ಕೈಯಲ್ಲಿ ಕತ್ತಿ-ಚೂರಿ, ಪಿಸ್ತೂಲು-ಕೋವಿ ಅಥವಾ ಪಂಜು ಮತ್ತು ಸೀಮೆಎಣ್ಣೆ ಬಂದರೆ, ಅಚ್ಚರಿಯಿಲ್ಲ. ಈ ಪರಿಸ್ಥಿತಿಯಲ್ಲಿ ಇಂತಹ ಭಗ್ನ-ರುಗ್ಣ ವ್ಯವಸ್ಥೆಯ ಅಡಿಯಲ್ಲಿ ಇವನ್ನು ಇನ್ನಷ್ಟು ಉರಿಸುವ ಬದಲು, ಕೆಲವಾದರೂ ಮೂಲಭೂತವಾದ ವೌಲ್ಯಗಳನ್ನು ನೆನಪಿಸಬೇಕಾಗಿದೆ:

ಶಿಕ್ಷಣದ ಮಹತ್ವವನ್ನು ಎಲ್ಲರೂ ಬಲ್ಲರು. ಪ್ರಾಚೀನ ಭಾರತದಲ್ಲಿತ್ತೆನ್ನಲಾದ ಶಿಕ್ಷಣ ಪದ್ಧತಿಯು ಆಧುನಿಕತೆಯ ಭರಾಟೆಯಲ್ಲಿ ಮತ್ತು ಪಶ್ಚಿಮಬುದ್ಧಿಯಲ್ಲಿ ನವೆದು ಹೋಗಿ ಹೊಸ ಬೆಳಕು ಎಲ್ಲಿ ಹೇಗೆ ಬರುವುದೆಂಬ ಹುಡುಕಾಟದಲ್ಲೇ ಕೆಲವು ತಲೆಮಾರು ಕಳೆದಿದೆ. ಡಿಗ್ರಿಗಳೇ ವಿದ್ಯೆಯೆಂಬ ನವತರ್ಕದಿಂದಾಗಿ ಎಲ್ಲರೂ ಬಿಳಿಕಾಲರ್ ಚಾಕರಿ ಮಾಡಹೊರಟಿರುವುದರಿಂದ ವಸಾಹತುಶಾಹಿಗಿಂತ ಭಿನ್ನವಾದ ಗುಲಾಮಗಿರಿಯಲ್ಲಿ ಬಹಳಷ್ಟು ಮಂದಿ ತೊಳಲಾಡುತ್ತಿದ್ದಾರೆ. ಹಾಗೆ ಹೇಳುವುದೂ ತಪ್ಪಾಗುತ್ತದೆ: ಏಕೆಂದರೆ ಮದುವೆಗೋ ಮಸಣಕೋ ಹೋಗೆಂದ ಕಡೆಗ್ಹೋಗುವ ಚಾಕರಿಯಲ್ಲಿರುವ ಮನುಷ್ಯರು ತಾವೇನೋ ಬಹಳ ಮಹತ್ವದ್ದನ್ನು ಮಾಡುತ್ತಿದ್ದೇವೆಂದು ಬೀಗುತ್ತಿದ್ದಾರೆ. ಡಿಗ್ರಿಯೇ ಮುಖ್ಯವಾದ್ದರಿಂದ ಇತರ ಯಾವ ಅರ್ಹತೆಯೂ ಅಧಿಕೃತ ಮಾನ್ಯತೆಯನ್ನು ಪಡೆಯುವುದಿಲ್ಲ. ಆದರೆ ಸಮಾಜದ ಘನತೆಯನ್ನು ಹೆಚ್ಚಿಸುವಲ್ಲಿ ಈ ಡಿಗ್ರಿಧಾರಿಗಳು ವಿಫಲರಾಗಿದ್ದಾರೆ. ಇದು ನಮ್ಮನ್ನು ಕಾಡಿಲ್ಲವೆಂದಲ್ಲ. ಆದ್ದರಿಂದಲೇ ಶಿಕ್ಷಕರೂ ಸೇರಿದಂತೆ ಚಿಂತಿಸಬಲ್ಲ ಕೆಲವರಾದರೂ ನಮ್ಮ ಶಿಕ್ಷಣ ಪದ್ಧ್ದತಿಯು ಬದಲಾಗಬೇಕೆಂದು ಹೇಳುತ್ತಿದ್ದಾರೆ. ಆದರೆ ಈ ಬದಲಾವಣೆ ಹೇಗಿರಬೇಕು ಎಂಬುದರ ನಿರ್ದಿಷ್ಟ ಕಲ್ಪನೆ ಯಾರಿಗೂ ಇದ್ದಂತಿಲ್ಲ. ಯಾವುದನ್ನು ಹೇಳಿಕೊಡಬೇಕು ಯಾವುದನ್ನು ಹೇಳಿಕೊಡಬಾರದು ಎಂಬುದರ ಜಿಜ್ಞಾಸೆಯಲ್ಲಿ ಒಂದಷ್ಟು ತಲೆಮಾರುಗಳು ಕಳೆದುಹೋದವು. ಮುಂದೇನು ಎಂಬುದು ದಿಗಂತಕ್ಕೆ ದೃಷ್ಟಿ ನೆಟ್ಟ ಪ್ರಶ್ನೆಯಾಗಿ ನಿಂತಿದೆ.

ಇವಕ್ಕೆ ಪರಿಹಾರವೇನು? ವಿದ್ಯೆಯೇ ಬುದ್ಧಿಯಲ್ಲ, ವಿದ್ಯಾವಂತರಾದರೆ ಸಮಾಜದ ಸಮಸ್ಯೆಗಳೆಲ್ಲವೂ ಪರಿಹಾರವಾಯಿತು ಎಂದರ್ಥವಲ್ಲ. ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಹೇಗೋ ಹಾಗೆಯೇ ಅವುಗಳನ್ನು ಸೃಷ್ಟಿಸುವುದರಲ್ಲಿ ವಿದ್ಯಾವಂತರ ಮತ್ತು ಅವಿದ್ಯಾವಂತರ ಕೊಡುಗೆಗಳಲ್ಲಿ ವ್ಯತ್ಯಾಸವಿಲ್ಲ. ದೇವರನ್ನು ನಂಬುವ ಬಹಳ ಮಂದಿ ಸ್ವಂತಬುದ್ಧಿಯನ್ನು ಅಡವಿಟ್ಟಂತೆ ದೇವರನ್ನು ನಂಬುತ್ತಾರೆ. ಅದಕ್ಕೇ ಆಸ್ತಿಕರೆಲ್ಲ ವಿದ್ಯೆ ಕೊಡು, ಬುದ್ಧಿ ಕೊಡು ಎಂದು ಅನವರತವೂ ಭಗವಂತನನ್ನು ಬೇಡುವುದು. ಕೊಡುವುದಕ್ಕೆ ಅವನಿರಬೇಕಲ್ಲ! ಇದ್ದಿದ್ದರೆ ಖಂಡಿತವಾಗಿಯೂ ಕೊಡುತ್ತಿದ್ದ! ಅದರ ಬದಲಿಗೆ, ನೀನು ಸತ್ತು ಹೋದರೂ ಬದುಕಿರುವ ನಮ್ಮನ್ನು ಕ್ಷಮಿಸು ಎಂದು ಸಾರ್ತ್ರ್‌ನಂತೆ ಉದ್ಗರಿಸುವುದು ಒಳ್ಳೆಯದು. ಏಕೆಂದರೆ ಅನ್ಯಾಯಕ್ಕೂ ಆಸ್ತಿಕತೆಗೂ ಸಂಬಂಧವೇ ಇಲ್ಲ. (ಒಂದು ಚಿಕ್ಕ ಬದಲಾವಣೆಯನ್ನು ಸೂಚಿಸುವುದಾದರೆ-ಹಳ್ಳಿಗಳಾಗಲೀ ಪಟ್ಟಣ/ನಗರಗಳಾಗಲೀ ಶಾಲೆ, ಕಾಲೇಜುಗಳ ಸುತ್ತ ಒಂದಷ್ಟು ಮಂದಿ ಬುದ್ಧಿವಂತ ಜನರಿರುವುದನ್ನು ಶಾಲೆ, ಕಾಲೇಜುಗಳ ಮಂದಿ ಬಲ್ಲರು. ಇವರಲ್ಲಿ ಪ್ರವೃತ್ತ-ನಿವೃತ್ತ ಅಧಿಕಾರಿಗಳೋ, ವ್ಯಾಪಾರಸ್ಥರೋ, ಕೃಷಿಕರೋ ಇರಬಲ್ಲರು. ಶಾಲಾ ವಾರ್ಷಿಕೋತ್ಸವ, ಕ್ರೀಡೋತ್ಸವ ಮುಂತಾದ ವಿಶೇಷ ಹಬ್ಬಹರಿದಿನಗಳಂತಿರುವ ಆಚರಣೆಗೆ ಅತಿಥಿಗಳಾಗಿ ಈ ಮಂದಿ ಆಹ್ವಾನಿಸಲ್ಪಡುತ್ತಾರೆಯೇ ಹೊರತು ಅವರ ಅನುಭವ, ಅರಿವು ಶಾಲೆಯ ಮಕ್ಕಳಿಗೆ ಅನುಕೂಲ/ನೆರವಾಗಬಹುದೆಂದೂ ಶಾಲೆಯ ಕಾರ್ಯಕಾರಣರು ಯೋಚಿಸಿದರೆ ಮಕ್ಕಳಿಗೆ ಶಾಲೆಯ ಏಕತಾನತೆಯ ಬದಲಿಗೆ ವೈಶಿಷ್ಟ್ಯಪೂರ್ಣ ತಿಳಿವಿನ ಕಾಮನಬಿಲ್ಲಿನ ಬಣ್ಣಗಳು ಗೋಚರಿಸಬಲ್ಲವು.) ಬುದ್ಧಿಯೆಂಬುದು ಶಾಲೆಗಳಲ್ಲಿ ಸಿಗುವ ಸರಕಲ್ಲ. ಅದು ಮನೆಯಲ್ಲಿ, ಅಥವಾ ಪ್ರಯಾಣದಲ್ಲಿ, ಮಾತಿನಲ್ಲಿ, ಒಟ್ಟಾರೆ ಅನುಭವದಲ್ಲಿ ಸಿಗುವ ಮದ್ದು; ಪರಿಮಳದ್ರವ್ಯ.

ಪರಿಮಳವೇಕೆಂದರೆ ಬುದ್ಧಿಯಿದೆಯೇ ಇಲ್ಲವೇ ಎಂಬುದು ಸ್ವಂತಕ್ಕೆ ಮನವರಿಕೆಯಾಗುವ ಮೊದಲೇ ಹೊರಜಗತ್ತಿಗೆ ಗೊತ್ತಾಗುತ್ತದೆ. ಸೌಜನ್ಯ, ಸರಳತೆ, ಪ್ರಾಮಾಣಿಕತೆ, ಮುಂತಾದ ಅನೇಕ ಒಳ್ಳೆಯ ಗುಣಗಳು ಇರುವವನೇ ಬುದ್ಧಿವಂತ. ತಾನು ಬುದ್ಧಿವಂತನೆಂದು ಹೇಳಿಕೊಂಡು ಹೋಗುವವನು ಬುದ್ಧಿವಂತನಾಗಲಾರ. ಎನಗಿಂತ ಕಿರಿಯರಿಲ್ಲ ಎಂಬವನೇ ನೈಜ ಹಿರಿಯ, ಜ್ಯೇಷ್ಠ, ಶ್ರೇಷ್ಠ. ನಮ್ಮಲ್ಲನೇಕರು ಯಾವುದೇ ವಿಚಾರವನ್ನು ಇನ್ನೊಬ್ಬರಿಂದ ತಿಳಿದುಕೊಳ್ಳಲಾರರು. ನೀವು ಏನೇ ಹೇಳಿ- ಅವರು ನಿನಗೆ ಗೊತ್ತಿಲ್ಲ, ನಾನು ಬಲ್ಲೆ; ವಿವರಿಸುತ್ತೇನೆ ಎಂಬ ಪೀಠಿಕೆಯೊಂದಿಗೆ ತಮ್ಮ ಪಂಥವನ್ನು ಪ್ರಚಾರಮಾಡುವಂತೆ ಉಪನ್ಯಾಸಮಾಡುತ್ತಾರೆ. ಹಾಳಾಗಿ ಹೋಗಲಿ ಇವನೊಂದಿಗೆ ಚರ್ಚೆ ಯಾಕೆ ಬೇಕು ಎಂಬ ಕಾರಣಕ್ಕೆ ಅನೇಕರು ಈ ಬೃಹಸ್ಪತಿಗಳನ್ನು ಒಪ್ಪಿಕೊಳ್ಳುವುದುಂಟು. ಬುದ್ಧಿವಂತನಿಗೆ ಅವಕಾಶ ಕೊಟ್ಟಿರೋ ಆತ ತನ್ನ ಹೆಜ್ಜೆಗಳನ್ನು ಭೂಮ್ಯಾಕಾಶಕ್ಕೆ ವ್ಯಾಪಿಸಬಲ್ಲನಾದರೂ ವಾಮನನಂತೆ ಇನ್ನೊಬ್ಬನನ್ನು ತುಳಿಯಲು ತನ್ನ ಬುದ್ಧಿಯನ್ನು ಬಳಸಲಾರ.

ಬಲಿಯ ಬಲಿ ಹೀಗೆ ಒಂದು ಅನ್ಯಾಯದ ಕತೆಯಂತೆ ದುರಂತದಂತೆ ಕಾಣುವುದು ನಾವು ಪಕ್ಷಪಾತಿಗಳಾಗದೆ ನೋಡಿದರೆ ಮಾತ್ರ. ಅಲ್ಲಿಯ ವರೆಗೆ ತುಳಿತವೇ ಯೋಗ್ಯತೆಯ ಮತ್ತು ಶಿಕ್ಷಣದ ಮಾನದಂಡ. ಶಿಕ್ಷಣ ಇಲಾಖೆಯಲ್ಲೂ ಲಂಚ ನೀಡದೆ ವರ್ಗಾವಣೆ ಹೋಗಲಿ, ಸಂಬಳದ ಬಿಲ್ಲೂ ಪಾಸಾಗುವುದಿಲ್ಲವಂತೆ! ಇಂತಹ ಪರಿಸ್ಥಿತಿಯಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳು ಸುಡುಗಾಡುಗಳಾಗದೆ ಇನ್ನೇನಾಗಬಲ್ಲವು? ಕೊನೆಗೂ ವಿದ್ಯೆ ಮತ್ತು ಬುದ್ಧಿಯನ್ನು ಬೆಳೆಸಬಲ್ಲ ಸಂಸ್ಥೆಗಳು ಸಮಾಜದ ಅಡಿಗಲ್ಲುಗಳು. ಇವು ವಿದ್ಯೆ, ಆ ಮೂಲಕ ಬುದ್ಧಿ ಮತ್ತು ಕೊನೆಯ ಹಂತದಲ್ಲಿ ವಿವೇಕವನ್ನು ಸೃಷ್ಟಿಸಬೇಕು; ಜಾಗೃತಗೊಳಿಸಬೇಕು. ವಿದ್ಯಾರ್ಥಿಗಳನ್ನು ರಾಜಕೀಯ, ಮತೀಯ/ಕೋಮು ಸಿದ್ಧಾಂತಗಳ ಪರಿಕರಗಳಂತೆ ಬಳಸಿಕೊಂಡರೆ ಅವರು ಭಸ್ಮಾಸುರರಂತೆ ಬೆಳೆದು ನಮ್ಮನ್ನು, ನಮ್ಮ ಸಮಾಜವನ್ನು ಸುಟ್ಟುಹಾಕಬಲ್ಲ ದುಷ್ಟಶಕ್ತಿಗಳಾದಾವೇ ವಿನಾ ಸಜ್ಜನ ಪ್ರಜೆಗಳಾಗಲಾರರು. ಇಂದು ತೋರಿದ (ಕು)ಪ್ರದರ್ಶನ ಕೊನೆಗೊಮ್ಮೆ ಪಶ್ಚಾತ್ತಾಪಪಡುವ ದುರ್ಘಟನೆಯಾಗಬಾರದೆಂಬ ಎಚ್ಚರವಿದ್ದರೆ ಮಾತ್ರ ನಮ್ಮ ವಿದ್ಯೆ ಸಾರ್ಥಕ. ಅದನ್ನು ಸದ್ಯದ ಕುರುಡುಸ್ಥಿತಿಯಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)