varthabharthi


ಪ್ರಚಲಿತ

ಪೌರತ್ವ ಕಾಯ್ದೆ: ಬಿಜೆಪಿಯ ತಪ್ಪಿದ ಲೆಕ್ಕಾಚಾರ

ವಾರ್ತಾ ಭಾರತಿ : 23 Dec, 2019
ಸನತ್ ಕುಮಾರ್ ಬೆಳಗಲಿ

ಯಾವುದೇ ಸಮಾಜ ಇಲ್ಲವೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚಳವಳಿಗಳಿಲ್ಲದಿದ್ದರೆ ಸರ್ವಾಧಿಕಾರಿಗಳು ಹುಟ್ಟಿಕೊಳ್ಳುತ್ತಾರೆ. ತಮದೇ ಭಕ್ತ ಪಡೆಗಳು ಮತ್ತು ಭಜನಾ ಮಂಡಳಿಗಳನ್ನು ಕಟ್ಟಿಕೊಂಡು ಉದೋ ಉದೋ ಹೇಳಿಸಿಕೊಳ್ಳುತ್ತಾರೆ. ಅಂಥ ಸಮಾಜ ಇಲ್ಲವೇ ದೇಶ ನಿಧಾನವಾಗಿ ಸತ್ತು ಹೋಗುತ್ತದೆ. ಭಾರತದಲ್ಲಿ ಈಗ ಅಂಥ ಸನ್ನಿವೇಶ ನಿರ್ಮಾಣ ವಾಗಿದೆ. ಬಹುತ್ವ ಭಾರತವನ್ನು ನಾಶ ಮಾಡಲು ಬಿಡುವುದಿಲ್ಲ ಎಂದು ಎಲ್ಲ ಜನಸಮುದಾಯಗಳ ಜನ ಬೀದಿಗೆ ಬಂದಿದ್ದಾರೆ. ಇದೇ ಭಾರತದ ಇಂದಿನ ಭರವಸೆಯ ನಂದಾದೀಪವಾಗಿದೆ.


ಎಲ್ಲ ಜನ ಸಮುದಾಯಗಳ ಸೌಹಾರ್ದ ತಾಣವಾದ ಬಹುತ್ವ ಭಾರತಕ್ಕೆ ಬೆಂಕಿ ಹಚ್ಚುವ ಕೋಮುವಾದಿ ಫ್ಯಾಶಿಸ್ಟ್ ಹುನ್ನಾರ ಈಗ ಮೋಶಾ ಜೋಡಿಗೆ ತಿರುಗು ಬಾಣವಾಗಿ ಪರಿಣಮಿಸಿದೆ. ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದು ಭಾರತೀಯರನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಅವರ ಮಸಲತ್ತು ವಿಫಲಗೊಂಡಿದೆ. ಈ ಕರಾಳ ಕಾಯ್ದೆಯ ವಿರುದ್ಧ ಮುಸ್ಲಿಮರು ಮಾತ್ರ ಬೀದಿಗಿಳಿಯುತ್ತಾರೆ.ಅವರನ್ನು ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಮಾತ್ರ ಬೆಂಬಲಿಸುತ್ತಾರೆ ಎಂದು ಈ ಖಳನಾಯಕರು ಅಂದಾಜು ಮಾಡಿದ್ದರು. ಆ ಮೂಲಕ ಹಿಂದೂ ಓಟ್ ಬ್ಯಾಂಕ್ ನಿರ್ಮಿಸುವುದು ಮಾತ್ರವಲ್ಲ ಸದ್ಯದ ಆರ್ಥಿಕ ಬಿಕ್ಕಟ್ಟಿನಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಕುತಂತ್ರ ನಡೆಸಿದ್ದರು. ಆದರೆ ಅದೀಗ ಉಲ್ಟಾ ಆಗಿದೆ.

ಪೌರತ್ವ ತಿದ್ದುಪಡಿ ವಿಧೇಯಕ ತಂದಾಗಿನಿಂದ ದೇಶದಲ್ಲಿ ಅದರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬರೀ ಮುಸ್ಲಿಮರು ಮಾತ್ರವಲ್ಲ. ಬಹುದೊಡ್ಡ ಸಂಖ್ಯೆಯಲ್ಲಿ ಹಿಂದೂಗಳು, ಜೈನರು, ಕ್ರೈಸ್ತರು ಎಲ್ಲಕ್ಕಿಂತ ಮುಖ್ಯವಾಗಿ ಹೊಸ ಆಲೋಚನೆಯನ್ನು ಹೊಂದಿದ ಬಿಸಿರಕ್ತದ ಮೂವತ್ತರೊಳಗಿನ ತರುಣರು ಭಾರೀ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರಿಂದ ಗುರು ಶಿಷ್ಯರಿಬ್ಬರಿಗೂ ದಿಕ್ಕು ತಪ್ಪಿದೆ. ಈ ಚಳವಳಿಗೆ ಸಿಗುತ್ತಿರುವ ಜನ ಬೆಂಬಲದಿಂದ ಇವರು ಕಂಗಾಲಾಗಿದ್ದಾರೆ.

ಹೀಗೆ ಎಲ್ಲವೂ ಉಲ್ಟಾ ಹೊಡೆಯುತ್ತಿದ್ದಂತೆ ರಾಜ್ಯಸಭೆಯಲ್ಲಿ ಈ ಮಸೂದೆಗೆ ಬೆಂಬಲ ನೀಡಿದ್ದ ಎನ್‌ಡಿಎ ಮಿತ್ರ ಪಕ್ಷಗಳಾದ ಬಿಹಾರದ ಜೆಡಿಯು ಮತ್ತು ಒಡಿಶಾದ ಬಿಜೆಡಿ ಪಕ್ಷಗಳು ತಮ್ಮ ಪ್ಲೇಟು ಬದಲಿಸಿವೆ. ತಮ್ಮ ರಾಜ್ಯದಲ್ಲಿ ಪೌರತ್ವ ಕಾನೂನು ಜಾರಿಯಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಒಡಿಶಾದ ಮುಖ್ಯ ಮಂತ್ರಿ ನವೀನ್ ಪಟ್ನಾಯಕ್ ಸ್ಪಷ್ಟವಾಗಿ ಹೇಳಿದ್ದಾರೆ.

ಇದೆಲ್ಲ ಬೆಳವಣಿಗೆಗಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕೂಡ ಮೋದಿ ಸರಕಾರದ ಇಮೇಜಿಗೆ ಧಕ್ಕೆ ತಂದಿವೆ. ದೇಶದ ವಿದ್ಯಾವಂತರು ಸಂಪೂರ್ಣವಾಗಿ ತಿರುಗಿ ಬಿದ್ದಿದ್ದಾರೆ. ಇಷ್ಟು ದಿನ ಯುವಕರು ಮೋದಿ ಜೊತೆಗೆ ಇದ್ದಾರೆಂಬ ನಂಬಿಕೆ ಅನೇಕರಿಗಿತ್ತು. ಆದರೆ ಈ ಬಾರಿ ಬನಾರಸ್ ಹಿಂದೂ ಯುನಿವರ್ಸಿಟಿ ಸೇರಿದಂತೆ ಬಹುತೇಕ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಈ ಕರಾಳ ಮನುಷ್ಯ ವಿರೋಧಿ ಕಾನೂನಿನ ವಿರುದ್ಧ ಬೀದಿಗೆ ಬಂದಿದ್ದಾರೆ. ಇದರಿಂದ ಬಿಜೆಪಿ ಎಷ್ಟು ಹತಾಶಗೊಂಡಿದೆ ಅಂದರೆ ಆವರಿಗೆ ಇದರಿಂದ ಪಾರಾಗುವ ದಾರಿ ಗೋಚರಿಸುತ್ತಿಲ್ಲ. ತೀವ್ರ ಕಂಗಾಲಾಗಿರುವ ಮೋದಿ, ಅಮಿತ್‌ಶಾ ಈ ಚಳವಳಿಯ ಹಿಂದೆ ಕಮ್ಯುನಿಸ್ಟರಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ ಕಮ್ಯುನಿಸ್ಟ್ ನಾಯಕ ಸೀತಾರಾಮ್ ಯೆಚೂರಿ ನಾವು ಚಳವಳಿಯ ಹಿಂದಿಲ್ಲ ಮುಂಚೂಣಿಯಲ್ಲಿದ್ದೇವೆ ಎಂದು ತಿರುಗೇಟು ನೀಡಿದರು.

ಬಿಜೆಪಿಯಲ್ಲೀಗ ಸಾಮೂಹಿಕ ನಾಯಕತ್ವವಿಲ್ಲ.ಎಲ್ಲ ತೀರ್ಮಾನಗಳನ್ನು ಅಮಿತ್‌ಶಾ ಮತ್ತು ಮೋದಿ ಇಬ್ಬರೇ ತೆಗೆದುಕೊಳ್ಳುತ್ತಿರುವುದರಿಂದ ಉಳಿದ ಹಿರಿಯ ನಾಯಕರಿಗೆ ಒಳಗೊಳಗೆ ಅಸಮಾಧಾನ ಇದೆ. ಈ ಪೌರತ್ವ ಕಾಯ್ದೆ ಬಗ್ಗೆ ನಾಗಪುರದ ಗುರುಗಳೂ ಬಾಯಿ ಬಿಡುತ್ತಿಲ್ಲ. ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್, ಭಯ್ಯೆಜಿ ಜೋಶಿ ಮತ್ತು ದತ್ತಾತ್ರೇಯ ಹೊಸಬಾಳೆ ಮೌನಕ್ಕೆ ಜಾರಿದ್ದಾರೆ.

ಈ ಮನವಾದಿ, ಮನಿವಾದಿ ಹುನ್ನಾರಕ್ಕೆ ಇಷ್ಟೊಂದು ತೀವ್ರ ಪ್ರತಿರೋಧ ಬರುತ್ತದೆ ಎಂದು ಅವರು ನಿರೀಕ್ಷಿಸಿರಲಿಲ್ಲ. ಯುವಕರನ್ನು ಬುಟ್ಟಿಗೆ ಹಾಕಿಕೊಂಡಿದ್ದೇವೆ ಎಂದು ಭಾವಿಸಿದ್ದರು. ಆದರೆ ಅವರ ಲೆಕ್ಕಾಚಾರ ಉಲ್ಟಾ ಆಗಿದೆ. ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು, ಮಹಿಳೆಯರು ಯುವಕರು, ಯುವತಿಯರು ಜಾತಿ, ಧರ್ಮ ಭೇದ ಮರೆತು ಬೀದಿಗೆ ಬಂದಿದ್ದಾರೆ. ಇದಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ಗೊತ್ತಾಗದೆ ಮೋದೀಜಿ ಕಾಂಗ್ರೆಸ್ ಕೈವಾಡ ಎಂಬ ಹಳೆಯ ಕ್ಯಾಸೆಟ್ ಹಾಕುತ್ತಿದ್ದಾರೆ. ವಾಸ್ತವವಾಗಿ ಕಾಂಗ್ರೆಸ್‌ಗೆ ಇಂಥ ಯಾವ ಆಂದೋಲನವನ್ನು ಸಂಘಟಿಸುವ ಸಾಮರ್ಥ್ಯ ಈಗ ಉಳಿದಿಲ್ಲ. ಅದಕ್ಕೆ ತಾಕತ್ತಿದ್ದರೆ ನೋಟ್ ಬ್ಯಾನ್ ಆದಾಗಲೇ ಬೀದಿಗಿಳಿಯುತ್ತಿತ್ತು. ಈ ಬಾರಿ ಜನ ತಾವಾಗಿ ರಸ್ತೆಗೆ ಇಳಿದಿದ್ದಾರೆ. ಭಾರತ ಎಂಬುದು ಅವರ ಮನೆ, ತಾವು ಶತಮಾನಗಳಿಂದ ನೆಲೆಸಿದ ಮನೆಯಿಂದಲೇ ಹೊರದಬ್ಬುವ ಗಂಡಾಂತರ ಎದುರಾದಾಗ ಸಿಟ್ಟಿಗೆದ್ದು ರಸ್ತೆಗೆ ಬಂದಿದ್ದಾರೆ. ಕಮ್ಯುನಿಸ್ಟ್ ಪಕ್ಷಗಳು ಅನೇಕ ಕಡೆ ನೊಂದವರ ಧ್ವನಿಯಾಗಿ ನಿಂತಿವೆ. ಇದನ್ನು ಬಿಟ್ಟರೆ ಬೇರೇನೂ ಇಲ್ಲ.

ಈಗ ನಡೆದ ಸಂಘರ್ಷ ಕೇವಲ ಸಂಬಳಕ್ಕಾಗಿ, ಬೋನಸ್‌ಗಾಗಿ ಅಥವಾ ಯಾವುದೇ ಆರ್ಥಿಕ ಬೇಡಿಕೆಗಾಗಿ ಮಾತ್ರ ಅಲ್ಲ. ಇದು ಘನತೆಯ ಬದುಕಿಗಾಗಿ ನಡೆದ ಸೋಲಿಲ್ಲದ ಸಮರ.ಬಹುತ್ವ ಭಾರತದ ಉಳಿವಿಗಾಗಿ ನಡೆದ ದಣಿವಿಲ್ಲದ ಹೋರಾಟ. ಇಷ್ಟು ದಿನ ಹೋರಾಡಿ ದಣಿದ ಹಿರಿಯರು ಪಕ್ಕಕ್ಕೆ ನಿಂತು ದಾರಿ ಮಾಡಿ ಕೊಡುತ್ತಿದ್ದಾರೆ. ಬಿಸಿರಕ್ತದ ಬಿಸಿಯುಸಿರಿನ ಹರೆಯದ ಯುವಕರು ಫ್ಯಾಶಿಸ್ಟ್ ಶಕ್ತಿಗಳ ಸವಾಲನ್ನು ಸ್ವೀಕರಿಸಿ ರಣರಂಗಕ್ಕೆ ಧುಮುಕಿದ್ದಾರೆ. ಹೊಸ ಕಾಲದ ಹೊಸ ಬಾಳಿನ ಕನ್ಹಯ್ಯೆ ಕುಮಾರ್‌ನ ಆಝಾದಿ ಘೋಷಣೆ ಎಲ್ಲೆಡೆ ಮೊಳಗುತ್ತಿದೆ. ನಿಜ ಇದು ಕಲ್ಲು ಮುಳ್ಳಿನ ಹಾದಿ, ಕೆಂಡದ ಮೇಲೆ ನಡೆದು ಈ ಭಾರತವನ್ನು ಅಂದರೆ, ಗಾಂಧೀಜಿ, ಅಂಬೇಡ್ಕರ್, ಸುಭಾಶ್ಚಂದ್ರ ಬೋಸ್, ಭಗತ್‌ಸಿಂಗ್, ವಿವೇಕಾನಂದ, ಬಸವಣ್ಣ, ಕುವೆಂಪು, ಶಿಶುನಾಳ ಶರೀಫ ಸಾಹೇಬರ, ಗುರು ಗೋವಿಂದ ಭಟ್ಟರ ಭಾರತವನ್ನು ಉಳಿಸಿಕೊಳ್ಳಬೇಕಾಗಿದೆ. ನಮ್ಮ ಕನ್ಹಯ್ಯಿ ಕುಮಾರ್‌ನಂಥ ಯುವಕರು ಈ ಭಾರತವನ್ನು ಖಂಡಿತ ಉಳಿಸಿಕೊಳ್ಳುತ್ತಾರೆ.

ಯಾವುದೇ ಸಮಾಜ ಇಲ್ಲವೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚಳವಳಿಗಳಿಲ್ಲದಿದ್ದರೆ ಸರ್ವಾಧಿಕಾರಿಗಳು ಹುಟ್ಟಿಕೊಳ್ಳುತ್ತಾರೆ. ತಮ್ಮದೇ ಭಕ್ತ ಪಡೆಗಳು ಮತ್ತು ಭಜನಾ ಮಂಡಳಿಗಳನ್ನು ಕಟ್ಟಿಕೊಂಡು ಉದೋ ಉದೋ ಹೇಳಿಸಿಕೊಳ್ಳುತ್ತಾರೆ. ಅಂಥ ಸಮಾಜ ಇಲ್ಲವೇ ದೇಶ ನಿಧಾನವಾಗಿ ಸತ್ತು ಹೋಗುತ್ತದೆ. ಭಾರತದಲ್ಲಿ ಈಗ ಅಂಥ ಸನ್ನಿವೇಶ ನಿರ್ಮಾಣ ವಾಗಿದೆ. ಬಹುತ್ವ ಭಾರತವನ್ನು ನಾಶ ಮಾಡಲು ಬಿಡುವುದಿಲ್ಲ ಎಂದು ಎಲ್ಲ ಜನಸಮುದಾಯಗಳ ಜನ ಬೀದಿಗೆ ಬಂದಿದ್ದಾರೆ. ಇದೇ ಭಾರತದ ಇಂದಿನ ಭರವಸೆಯ ನಂದಾದೀಪವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)