varthabharthiಅನುಗಾಲ

ಭಿನ್ನಮತದ ಹಕ್ಕು

ವಾರ್ತಾ ಭಾರತಿ : 25 Dec, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಬ್ರಿಟಿಷರು ಹೇಳಿದರೆಂದು ಅವರು ಕಾಂಗ್ರೆಸಿಗರ ಮೇಲೆ ಲಾಠಿ ಬೀಸಿದರು; ಕಾಂಗ್ರೆಸಿಗರು ಹೇಳಿದರೆಂದು ವಿರೋಧಪಕ್ಷಗಳ ಮೇಲೆ ಲಾಠಿ ಬೀಸಿದರು; ಈಗ ಭಾಜಪ ಹೇಳುತ್ತದೆಂದು ಇತರರ ಮೇಲೆ ಲಾಠಿ ಬೀಸುತ್ತಾರೆ. ಇಷ್ಟೊಂದು ಸ್ಥಿತಪ್ರಜ್ಞೆ ಮತ್ತು ವೈಕುಂಠದ ಜಯ-ವಿಜಯರ ವಿಧೇಯತೆಯನ್ನು ನಮ್ಮ ಪೊಲೀಸರು ತೋರಿಸುತ್ತಿದ್ದಾರೆಂದೇ ಅವರಿಗಿನ್ನೂ ಸಿಗಬೇಕಾದ ಸೌಕರ್ಯಗಳು ಸಿಕ್ಕಿರುವುದಿಲ್ಲ. ಆದ್ದರಿಂದ ಅವರಿಂದ ವಿವೇಚನಾಪೂರ್ವಕ ನಡೆನುಡಿಗಳನ್ನು ಅಪೇಕ್ಷಿಸುವುದಿರಲಿ, ನಿರೀಕ್ಷಿಸುವುದೇ ಸಾಧ್ಯವಿಲ್ಲ.


ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಚಳವಳಿಯನ್ನು ಹತ್ತಿಕ್ಕಲು ಕೇಂದ್ರ ಸರಕಾರವೂ ಅದೇ ಪಕ್ಷದ ಆಡಳಿತವಿರುವ ರಾಜ್ಯ ಸರಕಾರಗಳೂ ನಡೆಸುತ್ತಿರುವ ಪ್ರಯತ್ನಗಳು ತುರ್ತುಸ್ಥಿತಿಯನ್ನು ನಾಚಿಸುವಷ್ಟು ಕೀಳುಮಟ್ಟದ್ದು. ಈ ಎರಡೂ ಕಾನೂನುಗಳು ಏನೆಂಬುದು ಇಂದು ಪ್ರತಿಭಟಿಸುವವರ ಪೈಕಿ ಬಹುಪಾಲು ಜನರಿಗೆ ಮತ್ತು ಬೆಂಬಲಿಸುವವರ ಪೈಕಿ ಕೆಲವರಿಗಾದರೂ ತಿಳಿದಿದೆ. ವಿಚಿತ್ರವೆಂದರೆ ಈ ಶಾಸನಗಳ ಪರವಾಗಿ ಸರಕಾರವು ತನ್ನ ಭಕ್ತರ ತಂಡವನ್ನು ಕಟ್ಟಿಕೊಂಡು ಎಲ್ಲೆಡೆ ಮೆರವಣಿಗೆ ನಡೆಸುತ್ತಿದ್ದರೂ ಅದು ಇಲ್ಲಿಯ ವರೆಗೆ ಯಶಸ್ವಿಯಾಗಿಲ್ಲ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿದ್ದ ‘ಪ್ರಭಾತ್‌ಫೇರಿ’, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನ, ಮಿಲಿಟರಿಯವರ ಧ್ವಜಮೆರವಣಿಗೆಯಂತಹ ತಂತ್ರಗಳನ್ನು ಸರಕಾರಗಳು ಇನ್ನೂ ಆರಂಭಿಸಿಲ್ಲ. ಯಾವುದೇ ಹಕ್ಕುಗಳ ಹೋರಾಟವನ್ನು ದಂಗೆಯೆಂದು ಬಿಂಬಿಸುವುದು ಪ್ರಭುತ್ವದ ಕುಟಿಲ ತಂತ್ರ. 1857ರ ಸ್ವಾತಂತ್ರ್ಯ ಹೋರಾಟವನ್ನು ಬ್ರಿಟಿಷರು ‘ಸಿಪಾಯಿದಂಗೆ’ಯೆಂದು ದಾಖಲಿಸಿದರು. ಯಾವ ಕಡೆಯಿಂದ ಹೋರಾಟವನ್ನು ನೋಡುತ್ತೀರೆಂಬುದು ಮುಖ್ಯವಾಗುತ್ತದೆ.

ಸಂವಿಧಾನ ರಕ್ಷಣೆಗಾಗಿ, ಸಂವಿಧಾನದತ್ತ ಹಕ್ಕುಗಳಿಗಾಗಿ ನಡೆಯುವ ಹೋರಾಟವನ್ನು ದಿಕ್ಕುತಪ್ಪಿಸಲು ಆಳುವ ಶಕ್ತಿಗಳು ತಮ್ಮ ಎಲ್ಲ ರಾಕ್ಷಸೀ ಶಕ್ತಿಗಳನ್ನು ಪ್ರಯೋಗಿಸುವುದು ಸಹಜ. ಒಂದೆಡೆ ಆಳುವ ಶಕ್ತಿ ಮತ್ತು ಇದಕ್ಕೆ ಮುಖಾಮುಖಿಯಾಗಿರುವ ಜನಶಕ್ತಿ ಇವುಗಳ ನಡುವೆ ಈ ಹೋರಾಟ ಎಲ್ಲಿಯ ತನಕ ಹೇಗೆ ಮುಂದುವರಿಯುತ್ತದೆಂಬುದು ಕುತೂಹಲದ ಸಂಗತಿ. ಭಿನ್ನಮತವನ್ನು ದಮನಿಸಲು ಸರ್ವಾಧಿಕಾರಿಗಳು ನಡೆಸುವ ತಂತ್ರವೆಂದರೆ ಪೊಲೀಸ್ ಶಕ್ತಿ. ಪಾಕಿಸ್ತಾನದಲ್ಲಿ ಮಿಲಿಟರಿ ಪಡೆ ಸರಕಾರವನ್ನು ನಿಯಂತ್ರಿಸುತ್ತಿದೆಯೆಂಬುದು ಈಗ ಹಳೆಯ ಸುದ್ದಿ. ಆದರೆ ಭಾರತದಲ್ಲಿ ಹಾಗಿಲ್ಲ. ಮಿಲಿಟರಿ ರಾಜಕಾರಣದಲ್ಲಿ ಮತ್ತು ಆಡಳಿತದಲ್ಲಿ ಕೈಹಾಕದು. ಇವರನ್ನು ಹೊರತುಪಡಿಸಿದರೆ ನಮ್ಮ ಭಾರತೀಯ ವಿದೇಶಾಂಗ, ಆಡಳಿತ, ಪೊಲೀಸ್ ಅಧಿಕಾರಿಗಳೇ ಸರಕಾರಿ ವಿಧೇಯರು. ಒಬ್ಬ ಹರ್ಷಮಂದರ್, ಸಸಿಕಾಂತ ಸೆಂಥಿಲ್, ಕಣ್ಣನ್ ಗೋಪಿನಾಥನ್ ಬಿಟ್ಟರೆ ನ್ಯಾಯನಿಷ್ಠೆಗಾಗಿ ತಮ್ಮನ್ನು ತಾವು ಅವರೆಂದೂ ಸ್ವತಂತ್ರಗೊಳಿಸಲಾರರು. ವಿಶೇಷವೆಂದರೆ ಇಂತಹ ಗುಲಾಮಗಿರಿಯ ಸೇವೆಗೆ ಹೋಗಲು ನಮ್ಮ ಅತ್ಯಂತ ಪ್ರತಿಭಾವಂತರು ಕ್ಯೂ ನಿಲ್ಲುತ್ತಾರೆ; ಬೇಕಾದ ತರಬೇತಿ ಪಡೆಯುತ್ತಾರೆ. ಕೊನೆಗೆ ರಾಜಕಾರಣಿಗಳೆದುರು ಇಲಿಗಳಂತಿದ್ದು ಪ್ರಜೆಗಳೆದುರು ಹುಲಿಗಳಂತಿರುತ್ತಾರೆ. ಸೌಕರ್ಯದೆದುರು ಇವರಿಗೆ ಸ್ವಾತಂತ್ರ್ಯ ಮತ್ತು ಭಿನ್ನಮತವೆಂದರೇನೆಂದೇ ಗೊತ್ತಿಲ್ಲ.

ಪೊಲೀಸರು ಸಿಎಎ ಅಥವಾ ಎನ್‌ಆರ್‌ಸಿ ಎಂದರೇನೆಂದು ತಿಳಿದುಕೊಳ್ಳುವ ವ್ಯವಧಾನದವರಲ್ಲ, ಅದಕ್ಕೆ ಬೇಕಾದ ಸಮಯವಾಗಲೀ ಬೌದ್ಧಿಕ ವ್ಯಾಯಾಮವಾಗಲೀ ಅವರಿಗಿಲ್ಲ. ಅವರು ಏನಿದ್ದರೂ ಲಾಠಿ ಬೀಸುವವರು; ಆಜ್ಞೆ ಸಿಕ್ಕಿತೆಂದರೆ ಗುಂಡು ಹಾರಿಸುವವರು. ಅದು ರೈತರ, ವಿದ್ಯಾರ್ಥಿಗಳ, ಮಹಿಳೆಯರ, ಹೀಗೆ ಯಾರದೇ ಚಳವಳಿಯಾಗಲೀ ಅದರ ಫಲಾಫಲಗಳ, ಯುಕ್ತಾಯುಕ್ತತೆಯ, ಹಿತ-ಅಹಿತಗಳ, ಇಷ್ಟಾನಿಷ್ಟಗಳ ಪರಿವೆ ಅವರಿಗಿರುವುದಿಲ್ಲ. ಬ್ರಿಟಿಷರು ಹೇಳಿದರೆಂದು ಅವರು ಕಾಂಗ್ರೆಸಿಗರ ಮೇಲೆ ಲಾಠಿ ಬೀಸಿದರು; ಕಾಂಗ್ರೆಸಿಗರು ಹೇಳಿದರೆಂದು ವಿರೋಧಪಕ್ಷಗಳ ಮೇಲೆ ಲಾಠಿ ಬೀಸಿದರು; ಈಗ ಭಾಜಪ ಹೇಳುತ್ತದೆಂದು ಇತರರ ಮೇಲೆ ಲಾಠಿ ಬೀಸುತ್ತಾರೆ. ಇಷ್ಟೊಂದು ಸ್ಥಿತಪ್ರಜ್ಞೆ ಮತ್ತು ವೈಕುಂಠದ ಜಯ-ವಿಜಯರ ವಿಧೇಯತೆಯನ್ನು ನಮ್ಮ ಪೊಲೀಸರು ತೋರಿಸುತ್ತಿದ್ದಾರೆಂದೇ ಅವರಿಗಿನ್ನೂ ಸಿಗಬೇಕಾದ ಸೌಕರ್ಯಗಳು ಸಿಕ್ಕಿರುವುದಿಲ್ಲ. ಆದ್ದರಿಂದ ಅವರಿಂದ ವಿವೇಚನಾಪೂರ್ವಕ ನಡೆನುಡಿಗಳನ್ನು ಅಪೇಕ್ಷಿಸುವುದಿರಲಿ, ನಿರೀಕ್ಷಿಸುವುದೇ ಸಾಧ್ಯವಿಲ್ಲ.
ಇಂತಹ ಸಂದರ್ಭದಲ್ಲಿ ಭಿನ್ನಮತದ ಹಕ್ಕನ್ನು ಯಾರು ಹೇಳಬೇಕು? ಸ್ವತಂತ್ರರು, ವೃತ್ತಿಪರರು, ಯೋಚಿಸಬಲ್ಲವರು.
*
ಸೋಲಿ ಜೆ. ಸೋರಾಬ್ಜೀ ಈ ದೇಶ ಕಂಡ ಒಬ್ಬ ಶ್ರೇಷ್ಠ ನ್ಯಾಯಪಟು. ಸಾಲಿಸಿಟರ್ ಜನರಲ್ ಆಗಿ, ಅಟಾರ್ನಿ ಜನರಲ್ ಆಗಿ ಸರಕಾರವನ್ನು ಪ್ರತಿನಿಧಿಸಿದರೂ ನ್ಯಾಯದ ಪ್ರಶ್ನೆ ಬಂದಾಗ ಅದನ್ನು ಎತ್ತಿಹಿಡಿಯಲು ಹಿಂಜರಿಯದವರು. ಅವರು ಭಿನ್ನಮತದ ಬಗ್ಗೆ 2019ರ ಆದಿಯಲ್ಲಿ ಆ ವರೆಗೆ ನಡೆದ ಅನೇಕ ಪ್ರಕರಣಗಳನ್ನು ಮತ್ತು ತೀರ್ಪುಗಳನ್ನು ಉಲ್ಲೇಖಿಸಿ Right to dissent ಎಂಬ ಒಂದು ಲೇಖನದಲ್ಲಿ ಭಿನ್ನಮತದ ಅಗತ್ಯ ಮಾತ್ರವಲ್ಲ, ಅದರ ಅನಿವಾರ್ಯತೆಯನ್ನೂ ವಿವರಿಸಿ ಅದು ಹೇಗೆ ಭವಿಷ್ಯದ ದಿಕ್ಸೂಚಿಯಾಗುತ್ತದೆಯೆಂದು ಸಾಧಾರವಾಗಿ ವಿವರಿಸಿದ್ದಾರೆ.*

ತಾನು ಪ್ರಜಾಪ್ರಭುತ್ವವೆಂದು ಯಾವುದೇ ದೇಶ ಹೇಳಿಕೊಂಡರೆ ಅದನ್ನು ನಿರ್ಧರಿಸಲು ಇರುವ ಒಂದು ನಿಕಷ ಪರೀಕ್ಷೆಯೆಂದರೆ ಅದು ಭಿನ್ನಾಭಿಪ್ರಾಯಗಳ ಕುರಿತು ಹೊಂದಿರುವ ಸಹನೆ ಮತ್ತು ಭಿನ್ನರಿಗೆ ಅದು ನೀಡುವ ರಕ್ಷಣೆ. ಈಚೆಗೆ ಯಾವುದೇ ಆರ್ಥಿಕ ಲಾಭವಿಲ್ಲದೆ ನಡೆದ ಗೌರಿ ಲಂಕೇಶ್ ಅವರ ಪೂರ್ವಯೋಜಿತ ಕೊಲೆಯು ತೀವ್ರ ಖಂಡನಾರ್ಹ. ಅಷ್ಟೇ ಶೋಚನೀಯವಾದದ್ದು ತತ್ಪರಿಣಾಮದ ಪ್ರಜಾಪ್ರಭುತ್ವದ ಕೊಲೆ, ಏಕೆಂದರೆ ಭಿನ್ನಾಭಿಪ್ರಾಯವು ಪ್ರಜಾಪ್ರಭುತ್ವದ ಆತ್ಮ.

ಯಾವುದೇ ನಾಗರಿಕ ಸಮಾಜದಲ್ಲಿ ಜನರು ದೇಶಕ್ಕೆ ಯಾವುದು ಒಳ್ಳೆಯದು ಮತ್ತು ಹಿತವಾದದ್ದು ಎಂಬುದರ ಬಗ್ಗೆ ವಿವಿಧ ಕಲ್ಪನೆಗಳನ್ನು ಹೊಂದಿರುತ್ತಾರೆ. ನಿಜವಾದ ಸಹಿಷ್ಣುಶೀಲ ಸಮಾಜವು ಸುಧಾರಣಾವಾದಿಗಳ ಮತ್ತು ಪ್ರತಿಗಾಮಿಗಳ, ಕೈಗಾರಿಕೋದ್ಯಮಿಗಳ ಮತ್ತು ಕಾರ್ಮಿಕರ, ಧರ್ಮನಿಷ್ಠರ ಮತ್ತು ಚಾರ್ವಾಕರ, ಬಂಡವಾಳಶಾಹಿಗಳ ಮತ್ತು ಸಮತಾವಾದಿಗಳ, ಮತ್ತು ಅಸಂಖ್ಯ ವಿಧದ ವಿಕ್ಷಿಪ್ತರ, ಮತಭ್ರಾಂತರ ಮತ್ತು ಮನುಕುಲದ ಸ್ವಘೋಷಿತ ರಕ್ಷಕರನ್ನೊಳಗೊಂಡಂತೆ ಎಲ್ಲರಿಗೂ ಅವಕಾಶ ಸಮಾನತೆಯನ್ನು ನೀಡುತ್ತದೆ. ಭಿನ್ನಾಭಿಪ್ರಾಯವನ್ನು ಹೊಂದಿದವನು ಬಂಧನಕ್ಕೊಳಪಡುವ ಭಯವಿಲ್ಲದೆ ತನ್ನ ಭಿನ್ನಮತವನ್ನು ನಿರ್ಭಯವಾಗಿ, ಶಕ್ತವಾಗಿ, ಕಟುವಾಗಿ, ಅಭಿವ್ಯಕ್ತಿಗೊಳಿಸಲು ಸ್ವತಂತ್ರನಾಗಿರಬೇಕು. ಒಂದೇ ಷರತ್ತೆಂದರೆ ಅಲ್ಲಿ ಹಿಂಸೆಯ ಪ್ರಚೋದನೆಯಿರಬಾರದು. ಭಿನ್ನಮತೀಯನನ್ನು ಕೇಡುಮಾಡುವ, ಕಾನೂನನ್ನು ಉಲ್ಲಂಘಿಸುವ, ಅಥವಾ ದೇಶದ್ರೋಹದ ಅಥವಾ ದೇಶಭಕ್ತಿಯಿಲ್ಲದ ಒಬ್ಬ ವ್ಯಕ್ತಿಯೆಂದು ತಿಳಿಯುವುದು ತಪ್ಪು. ದೇಶಭಕ್ತಿಯೆಂಬುದು ದುಷ್ಟರಿಗೆ ಕೊನೆಯ ತಾಣವೆಂಬುದನ್ನು ನೆನಪಿಡಬೇಕು.

ಅಮೆರಿಕದ ಪ್ರಮುಖ ನ್ಯಾಯವೇತ್ತನಾದ ಬೆಂಝಮಿನ್ ಕಾರ್ಡೋರೆವಿನ ಮಾತುಗಳಲ್ಲಿ ‘‘ಭಿನ್ನಮತೀಯನು ಭವಿಷ್ಯದೊಂದಿಗೆ ಮಾತನಾಡುತ್ತಾನೆ ಮತ್ತು ಆತನ ಧ್ವನಿಯು ವರ್ಷಾನುಗಟ್ಟಲೆಯ ಸಂಕೇತಗಳ ತರಂಗಾಂತರಕ್ಕೆ ಹೊಂದಿಕೊಂಡಿರುತ್ತದೆ ಮತ್ತು ತತ್ಕಾಲಕ್ಕೆ ಆತನು ಸಿಂಹಗಳೊಂದಿಗೆ ಹೋರಾಡುವ ಮಲ್ಲನಾಗಿದ್ದಾನೆ.’’ ಅಮೆರಿಕದ ಮುಖ್ಯ ನ್ಯಾಯಾಧೀಶ ಚಾರ್ಲ್ಸ್ ಇವಾನ್ಸ್ ಹ್ಯೂಸ್ ಅವರು ಹೇಳುವಂತೆ ‘‘ಕೊನೆಯ ಹಂತದ ನ್ಯಾಯಾಲಯದಲ್ಲಿ ತೋರಿಸುವ ಭಿನ್ನಮತವೆಂದರೆ ಕಾನೂನಿನ ಗಾಢವಾದ ಚೈತನ್ಯಕ್ಕೆ, ಭವಿಷ್ಯದ ಬುದ್ಧಿಶಕ್ತಿಗೆ, ಮಾಡುವ ಮನವಿ’’ ಮತ್ತು ನ್ಯಾಯಮೂರ್ತಿ ಫ್ರಾಂಕ್‌ಫರ್ಟರ್ ಗಮನಿಸಿದಂತೆ ‘‘ಅಮೆರಿಕದ ಸರ್ವೋಚ್ಚ ನ್ಯಾಯಾಲಯದಲ್ಲಿ ಭಿನ್ನಮತಗಳು ನಿಧಾನವಾಗಿ ಬಹುಮತದ ಅಭಿಪ್ರಾಯಗಳಾಗುತ್ತಿವೆ.’’ ಭಾರತದ ನ್ಯಾಯಾಲಯಗಳೂ ಅಸಮ್ಮತಿಯ ಹಕ್ಕನ್ನು ಗೌರವಿಸಿವೆ. 1967ರಲ್ಲಿ ಬಾಂಬೆ ಉಚ್ಚ ನ್ಯಾಯಾಲಯವು ಅನಂತ್ ಕರಂಡಿಕರ್ ಪ್ರಕರಣದಲ್ಲಿ ‘‘ಪತ್ರಿಕಾ ಸ್ವಾತಂತ್ರ್ಯದಲ್ಲಿ ಪ್ರತಿಯೊಬ್ಬನಿಗೂ ಜನಪ್ರಿಯವಲ್ಲದ ಮತ್ತು ಅಪ್ರಿಯವಾದ ಅಭಿಪ್ರಾಯಗಳನ್ನು ಹೇಳುವ ಸ್ವಾತಂತ್ರ್ಯವು ಅಡಗಿದೆ. ಅಸಮ್ಮತಿಯ ಹಕ್ಕು ಪ್ರಜಾಪ್ರಭುತ್ವದ ಸಾರ. ಸ್ವೀಕೃತ ಮಾದರಿಗಳು ಮತ್ತು ನಂಬಿಕೆ ಯಾವಾಗಲೂ ಅಭಿವ್ಯಕ್ತಿ ಸ್ವಾತಂತ್ರ್ಯದ ಶತ್ರುವಾಗಿದೆ’’ ಎಂಬ ಮಹತ್ವದ ಅಂಶವನ್ನು ಹೇಳಿದೆ.

ಎರಡನೆಯ ಬಾರಿಗೆ ಜಾರಿಯಾದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು 1974ರ ನವೆಂಬರ 12ರಂದು ನೀಡಿದ ತೀರ್ಪಿನಲ್ಲಿ ಹೀಗೆ ಹೇಳಿದೆ: ‘‘ಶಾಂತಿಯುತ ಪ್ರತಿಭಟನೆಗಳು ಮತ್ತು ಭಿನ್ನಮತದ ಧ್ವನಿಯೆತ್ತುವಿಕೆ ಪ್ರಜಾಪ್ರಭುತ್ವದ ಉಗ್ರಾಣದಲ್ಲಿರುವ ಶಕ್ತಿಯುತ ಶಸ್ತ್ರಗಳು. ಆದ್ದರಿಂದ, ಶಾಂತಿಯುತವಾಗಿ ಪ್ರತಿಭಟಿಸುವವನನ್ನು ಬಂಧಿಸಿ ಕಂಬಿಗಳ ಹಿಂದೆ ತಳ್ಳುವುದು ಅಸಾಂವಿಧಾನಿಕ.’’

1950ರಲ್ಲಿ ನ್ಯಾಯಮೂರ್ತಿ ಫಝಲ್ ಅಲಿಯವರು ನೀಡಿದ ಭಿನ್ನಮತದ ತೀರ್ಪು ಗಮನಾರ್ಹ. ಎ.ಕೆ.ಗೋಪಾಲನ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ‘‘ಜೀವ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಸಂರಕ್ಷಣೆ- ಕಾನೂನು ಮೂಲಕ ಸ್ಥಾಪಿತವಾದ ಪ್ರಕ್ರಿಯೆ ಗನುಸಾರವಲ್ಲದೆ, ಯಾವನೇ ವ್ಯಕ್ತಿಯ ಜೀವ ಅಥವಾ ವ್ಯಕ್ತಿ ಸ್ವಾತಂತ್ರ್ಯವನ್ನು ಹರಣಮಾಡತಕ್ಕುದಲ್ಲ’’ ಎಂದು ಉಲ್ಲೇಖಿಸಲಾದ ಸಂವಿಧಾನದ 21ನೇ ವಿಧಿಯನ್ನು ಅರ್ಥವಿಸಬೇಕಾಗಿತ್ತು. ಆ ಪ್ರಕರಣದ ಬಹುಮತವು 21ನೇ ವಿಧಿಯಲ್ಲಿ ಹೇಳಲಾದ ‘‘ಕಾನೂನು ಮೂಲಕ ಸ್ಥಾಪಿಸಲಾದ ಪ್ರಕ್ರಿಯೆ’’ಯೆಂದರೆ ಇತ್ಯಾತ್ಮಕ ಅಥವಾ ಸರಕಾರವು ಮಾಡಿದ ಕಾನೂನು ಎಂದು ಅರ್ಥವಿಸಿತು. ಕಾನೂನಿನಡಿ ಸ್ಥಾಪಿಸಲಾದ ಪ್ರಕ್ರಿಯೆಗಳೆಂದರೆ ನೈಸರ್ಗಿಕ ನ್ಯಾಯದ ಮೂಲ ತತ್ವಗಳಿಗನುಸಾರವಾಗಿರಬೇಕೆಂಬ ವಾದವನ್ನು ತಿರಸ್ಕರಿಸಿತು.

ನ್ಯಾಯಮೂರ್ತಿ ಫಝಲ್‌ಅಲಿಯವರು ಭಿನ್ನಮತದ ತೀರ್ಪನ್ನು ನೀಡಿದರು. ಅವರು 21ನೇ ವಿಧಿಯು ಸರಕಾರದ ಕಾನೂನಿನಡಿ ಹೇಳಲಾದ ವಿಧಿವಿಧಾನಗಳಿಗನುಸಾರವಾಗಿದ್ದರಷ್ಟೇ ಸಾಲದು, ಬದಲಾಗಿ ಅಂತಹ ವಿಧಿವಿಧಾನಗಳು ‘‘ನಾಗರಿಕ ಕಾನೂನು ವ್ಯವಸ್ಥೆಯಲ್ಲಿ ಹುದುಗಿರುವ ಮತ್ತು ಅದರ ಬೇರುಗಳಂತಿರುವ ನ್ಯಾಯ’’ದ ಕೆಲವು ‘‘ಮೂಲತತ್ವ ಗಳನುಸಾರವಾಗಿರಬೇಕು’’ ಎಂದು ತೀರ್ಪು ನೀಡಿದರು. ನ್ಯಾಯಮೂರ್ತಿ ಫಝಲ್ ಅಲಿಯವರು ತಮ್ಮ ಭಿನ್ನಮತದ ತೀರ್ಪಿನಲ್ಲಿ ‘‘ಒಬ್ಬ ಮನುಷ್ಯನು ತನ್ನ ವ್ಯಕ್ತಿ ಸ್ವಾತಂತ್ರ್ಯವನ್ನು ವಿಚಾರಣೆಯಿಲ್ಲದೆ ಕಳೆದುಕೊಳ್ಳುವುದು ಒಂದು ಗಂಭೀರ ವಿಷಯ, ಆದರೆ ಸಮಾಜದ ಅಗತ್ಯಗಳು ಅಂತಹ ಸ್ಥಿತಿಯನ್ನು ಅಪೇಕ್ಷಿಸಬಹುದು ಮತ್ತು ವ್ಯಕ್ತಿಯು ಅಂತಹ ಅಗತ್ಯಗಳಿಗೆ ಶರಣಾಗಬೇಕಾಗಬಹುದು. ಆದರೂ ತನ್ನ ಹಕ್ಕುಗಳನ್ನು ಕಳೆದುಕೊಳ್ಳುವ ವ್ಯಕ್ತಿಗೆ ಆತನ ನಿರ್ದೋಷಿತ್ವವನ್ನು ಸಾಬೀತುಪಡಿಸಲು ಅವಕಾಶ ಕೊಟ್ಟಾಗ ಮಾತ್ರ ವ್ಯಕ್ತಿಯ ಹಕ್ಕುಗಳ ಪಾಲನೆ ಮತ್ತು ಸಾರ್ವಜನಿಕ ಹಿತ ಇವುಗಳು ಸಮತೋಲವಾಗುತ್ತವೆ.’’

ಇದಾದ ಎರಡು ದಶಕಗಳ ಆನಂತರ ಸರ್ವೋಚ್ಚ ನ್ಯಾಯಾಲಯವು 1978ರ ಜನವರಿಯಲ್ಲಿ ಶ್ರೀಮತಿ ಮೇನಕಾ ಗಾಂಧಿಯವರ ಪಾಸ್‌ಪೋರ್ಟ್ ನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿದ ಪ್ರಕರಣದ ತೀರ್ಪಿ ನಲ್ಲಿ ನ್ಯಾಯಮೂರ್ತಿ ಫಝಲ್‌ಅಲಿಯವರ ಭಿನ್ನಮತವೇ ಸರಿಯಾದ ತೀರ್ಪೆಂದು ಸ್ವೀಕೃತವಾಯಿತು. ಸರ್ವೋಚ್ಚ ನ್ಯಾಯಾಲಯವು ಔಚಿತ್ಯದ ಕಲ್ಪನೆಯು 21ನೇ ವಿಧಿಯಲ್ಲಿ ಸೂಚಿಸಲಾದ ವಿಧಿವಿಧಾನಗಳ ಮೂಲಕ ಹೊರಹೊಮ್ಮಬೇಕು ಎಂದು ಮತ್ತು ‘‘ನ್ಯಾಯಮೂರ್ತಿ ಫಝಲ್ ಅಲಿಯವರ ಅಭಿಪ್ರಾಯವು ಸರಿಯೆಂದು ತಿಳಿಯಬೇಕು ಮತ್ತು (1950ರ) ಬಹುಮತದ ಅಭಿಪ್ರಾಯವು ತಳ್ಳಿಹಾಕಲ್ಪಟ್ಟಿದೆಯೆಂದು ತಿಳಿಯಬೇಕು’’ ಎಂದು ಆದೇಶಿಸಿತು.

ಹಿಂಸೆಯ ಧ್ವನಿಯಾಗದ ಭಿನ್ನಮತದ ಧ್ವನಿಯು ಸಮಾಜದ ಮುನ್ನಡೆ ಮತ್ತು ಅಭಿವೃದ್ಧಿಗೆ ಅಗತ್ಯವಾಗಿದೆ. ಧೈರ್ಯವಂತ ಭಿನ್ನಮತೀಯರ ಚಾವಟಿಗೆಯಲ್ಲದಿದ್ದರೆ ಸತಿ ಮತ್ತಿತರ ಸಾಮಾಜಿಕ ಕೇಡುಗಳು ಇನ್ನೂ ನಮ್ಮನ್ನು ಕಾಡುತ್ತಿದ್ದವು. ಭಿನ್ನಮತೀಯರ ಅಭಿಪ್ರಾಯವನ್ನು ಯಾರೂ ಸ್ವೀಕರಿಸಬೇಕಾದ್ದಿಲ್ಲ. ಅವನ್ನು ಚರ್ಚೆಯ ಮೂಲಕ ಖಂಡಿಸಬಹುದು. ಗೌರಿ ಹಿಂದುತ್ವ ವಿರೋಧಿಯಾಗಿದ್ದರೆಂದು ಹೇಳಲಾಗಿದೆ. ಅವರ ಅಭಿಪ್ರಾಯವನ್ನು ದ್ವೇಷಿಸಲಾಗುತ್ತಿತ್ತು. ಅವರನ್ನು ನಕ್ಸಲ್ ಹಿತೈಷಿ, ಹಿಂದೂ ದ್ವೇಷಿಯೆಂದು ಹೇಳಲಾಗುತ್ತಿತ್ತು. ಆದರೆ, ಅವರ ಅಭಿಪ್ರಾಯಗಳದೆಷ್ಟೇ ಕಟುವಾಗಿದ್ದರೂ ಅವು ಅವರ ವಿರೋಧಿಗಳಿಗೆ ಕಂಟಕಪ್ರಾಯವಾಗಿರಲಿಲ್ಲ. ಒಟ್ಟಾರೆ ಸಾರವೆಂದರೆ ಭಿನ್ನಮತಗಳನ್ನು ಕೋವಿಯ ಗುಂಡಿನಿಂದ ಮೌನವಾಗಿಸಲು ಸಾಧ್ಯವಿಲ್ಲ. ಇತ್ತೀಚೆಗಿನ ಎಂ.ಎಂ.ಕಲಬುರ್ಗಿ, ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪನ್ಸಾರೆಯವರ ಪ್ರಕರಣಗಳು ಒಂದು ಪ್ರಕ್ಷುಬ್ಧ ಮನೋವೃತ್ತಿಯನ್ನು ಸೂಚಿಸುತ್ತವೆ. ದಾಭೋಲ್ಕರ್, ಕಲಬುರ್ಗಿ ಮತ್ತು ಪನ್ಸಾರೆಯವರನ್ನು ಯಾರು ಕೊಂದರೆನ್ನುವುದು ಇನ್ನೂ ಪತ್ತೆಯಾಗದಿರುವುದು ಮೂಲಭೂತವಾದ ಮತ್ತು ಸುಧಾರಣಾವಾದದ ನಡುವಣ ಹೋರಾಟವನ್ನು ಸೂಚಿಸುತ್ತವೆ ಮತ್ತು ಇದರಲ್ಲಿ ಮೊದಲನೆಯದು ತನ್ನ ನಂಜನ್ನು ತೋರಿಸಿದೆ.

ಅಲ್ಪಸಂಖ್ಯಾತರ ವ್ಯವಹಾರಗಳ ಕೇಂದ್ರ ಸಚಿವರಾದ ಮುಖ್ತಾರ್ ಅಬ್ಬಾಸ್ ನಖ್ವಿ ‘‘ಸಹಿಷ್ಣುತೆಯು ಭಾರತದ ಸಂಸ್ಕೃತಿ ಮತ್ತು ಬದ್ಧತೆಯಾಗಿದ್ದು ಸಹಿಷ್ಣುತೆಯ ಸಂಸ್ಕೃತಿಯನ್ನು ಕಾಪಾಡುವುದು ಮತ್ತು ಸುದೃಢಗೊಳಿಸುವುದು ನಮ್ಮ ಸಾಂವಿಧಾನಿಕ ಕರ್ತವ್ಯವಾಗಿದೆ’’ ಎಂದು ಸರಿಯಾಗಿಯೇ ಹೇಳಿದ್ದಾರೆ. ಈ ಪರಿಸ್ಥಿತಿಯಲ್ಲಿ ಭಿನ್ನಮತೀಯರನ್ನು ಕಾಪಾಡುವುದು ಮತ್ತು ಭಿನ್ನಮತಕ್ಕಾಗಿ ಆತನನ್ನು ಅಥವಾ ಆಕೆಯನ್ನು ದಂಡಿಸದಿರುವುದು ಸರಕಾರದ ಕರ್ತವ್ಯವಾಗಿರುತ್ತದೆ. ಭಿನ್ನಮತೀಯರನ್ನು ಹಿಂಸಾತ್ಮಕವಾಗಿ ಗುರಿಯಾಗಿಸುವವರನ್ನು ತೀವ್ರ ದಂಡನೆಗೆ ಗುರಿಪಡಿಸುವುದೂ ಸರಕಾರದ ಕರ್ತವ್ಯವಾಗಿದೆ.

ಈ ವಿಚಾರಕ್ಕೆ ರಾಜಕೀಯ ಪ್ರವೇಶಿಸುವುದು ಬೇಡ. ಭಿನ್ನಮತೀಯರನ್ನು ಅವರ ಧೈರ್ಯ ಮತ್ತು ನಿರ್ಭಯತೆಗಾಗಿ ಗೌರವಿಸೋಣ ಮತ್ತು ಆದರಿಸೋಣ. ಹಾಗೆ ಮಾಡುವುದರಿಂದ ನಾವು ಪರಿಣಾಮದಲ್ಲಿ ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸಿದಂತಾಗುತ್ತದೆ.

* ಸೊಲಿ ಸೊರಾಬ್ಜೀ ಮಾತ್ರವಲ್ಲ, ಗಾಂಧಿಯಂತಹ ಯುಗಪ್ರವರ್ತಕರು, ಪಾಲ್ಕೀವಾಲ ಮುಂತಾದ ಹಿರಿಯ ವಕೀಲರು, ಇಂತಹದೇ ಮಾತುಗಳನ್ನು ವಿವಿಧ ಸಂದರ್ಭಗಳಲ್ಲಿ ಹೇಳಿದ್ದಾರೆ. ಈ ಮತ್ತು ಇಂತಹ ಮಾತುಗಳು ನಮ್ಮನ್ನಾಳುವವರ ಕರ್ಣರಂಧ್ರಗಳನ್ನು ಪ್ರವೇಶಿಸಲಿ ಎಂದು ಹಾರೈಸೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)