varthabharthi

ಅನುಗಾಲ

ನಳಪಾಕದ ಪೇಜಾವರರು

ವಾರ್ತಾ ಭಾರತಿ : 1 Jan, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಪೇಜಾವರರಿಗೂ ಪ್ರಜಾಪ್ರಭುತ್ವದ ಮದುವೆಯ ಸಂದಣಿಗೆ ಧರ್ಮವನ್ನು ಉಣಬಡಿಸಲು ತಕ್ಕ ಪಾತ್ರೆಗಳು ಮಧ್ವರ ಉಗ್ರಾಣದಲ್ಲಿ ಸಿಕ್ಕಲಿಲ್ಲ. ಅದಕ್ಕಾಗಿ ಅವರು ಸಂಸ್ಕೃತಿ, ಸಮಾನತೆ, ಧರ್ಮ ನಿರಪೇಕ್ಷತೆ/ಜಾತ್ಯತೀತತೆಗಳ ಸರೋವರದಲ್ಲಿ ಸಮಾಜೋಧಾರ್ಮಿಕ ಭೂರಿಭೋಜನ ನೀಡುವ ಬಾಣಸಿಗರಾದರು. ಸರೋವರದ ಕೆಳಗೆ ಪಾಕಕ್ರಿಯೆಗೆ ಬೇಕಾದ ಬೆಂಕಿ ಅವರಿಗೆ ದೊರೆಯಿತೇ (ನಳ ಬೆಂಕಿ-ನೀರಿಲ್ಲದೆಯೇ ಅಡುಗೆ ಮಾಡಿ ಬಡಿಸಿದನಂತೆ!) ಮತ್ತು ಈ ಅಗ್ನಿದಿವ್ಯದಲ್ಲಿ ಅವರು ಜಯಿಸಿದರೇ ಎಂಬುದು ನಿಗೂಢ-ಪ್ರಶ್ನಾರ್ಹ.


ಪೇಜಾವರ ಮಠದ ಗುರು ವಿಶ್ವೇಶತೀರ್ಥರು ಗತಿಸಿದರು. ತಕ್ಷಣದಲ್ಲಿ ಅವರ ಬಗ್ಗೆ ಬರೆಯಬೇಕೆಂದು ನನಗನ್ನಿಸಲೇ ಇಲ್ಲ. ಬರೆಯುವುದು, ಬರೆಯದಿರುವುದು ಇದು ಅವರ ವ್ಯಕ್ತಿತ್ವದ ಮಾನದಂಡವೇನೂ ಆಗಿರಲಿಲ್ಲ. ಹಾಗಂತ ಅವರ ಮೌಲ್ಯಮಾಪನಕ್ಕೆ ಅದು (ಮತ್ತು ಇದು!) ಸಕಾಲವೂ ಅಲ್ಲ. ಮಧ್ವ ಪರಂಪರೆಯ ಪೇಜಾವರರ ಕುರಿತು ಈಗಾಗಲೇ ಸಾಕಷ್ಟು ಲೇಖನಗಳು ಪತ್ರಿಕೆಗಳಲ್ಲಿ ಮತ್ತಿತರ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಉಳಿದಂತೆ ಸಾಮಾಜಿಕ ಜಾಲತಾಣಳಲ್ಲೂ ಅತ್ತವರು ಬೇಕಷ್ಟಿದ್ದರು. ಅವರು ಸಾಯುವುದನ್ನೇ ಎದುರುನೋಡುತ್ತಿದ್ದವರಂತೆ ಬೌದ್ಧಿಕ ಭಾವುಕತೆಯನ್ನು ಪ್ರದರ್ಶಿಸಿದವರೇ ಹೆಚ್ಚು. ಕೆಲವರಾದರೂ ಅವರು ಆಸ್ಪತ್ರೆ ಸೇರಿದಾಗಲೇ ಅವರಿಗೆ ಶ್ರದ್ಧಾಂಜಲಿ ಲೇಖನವನ್ನು ಬರೆಯಲು ಆರಂಭಿಸಿರಬಹುದೆಂಬ ಗುಮಾನಿ ನನಗಿದೆ. ಬರೆಯದಿದ್ದರೆ ತಪ್ಪಾಗುತ್ತದೆಂದೋ ಅಥವಾ ಬರೆಯುವ ಮೂಲಕ ತಮ್ಮ ಕರ್ತವ್ಯವನ್ನು ನಿಭಾಯಿಸಿದೆವೆಂದೋ ಶ್ರದ್ಧಾಂಜಲಿಯ ಧನ್ಯತಾಭಾವವೆಂದೋ ಅಕ್ಷರಲಕ್ಷಾಧಿಪತಿಗಳು ಬರೆದಿರಬಹುದು. ನಾನು ಈ ಅಂಕಣದಲ್ಲಿ ಅವರನ್ನು ಪ್ರಸ್ತಾವಿಸುವುದರೊಂದಿಗೆ ನನಗೂ ಈ ಹಣೆಪಟ್ಟಿ ಲಭಿಸಬಹುದು. ಅಕ್ಷರ ಪ್ರಪಂಚದಿಂದ ಸತ್ಯದರ್ಶನವಾಗುವುದಿಲ್ಲವೆಂಬ ಚರ್ಚಾಸ್ಪದ ಸಿದ್ಧಾಂತ/ವೇದಾಂತವನ್ನು ಗೆಳೆಯರೊಬ್ಬರು ಈಚೆಗೆ ಹೇಳಿದ್ದರು. 2019ರಲ್ಲಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಮತ್ತು ಪೇಜಾವರದ ವಿಶ್ವೇಶತೀರ್ಥ ಸ್ವಾಮೀಜಿ ಹೀಗೆ ಇಬ್ಬರು ಮಠಾಧಿಪತಿಗಳು ಗತಿಸಿದ್ದನ್ನು ಒಂದು ದುರಂತವೆಂದು ಸ್ನೇಹಿತರೊಬ್ಬರು ಉಲ್ಲೇಖಿಸಿದರು. ಆ ಕ್ಷಣಕ್ಕೆ ಅವರಿಗೆ ಹಾಗೆ ಅನ್ನಿಸಿದ್ದರಲ್ಲಿ ಅಚ್ಚರಿಯೇನೂ ಇಲ್ಲ. ಅದು ಮನುಷ್ಯ ಸಹಜ ಪ್ರತಿಕ್ರಿಯೆ. ಆದರೆ ನನಗೆ ಈ ಹುಟ್ಟು-ಸಾವಿನ ಕುರಿತು ಅಂತಹ ಭ್ರಮೆಗಳೇನೂ ಇಲ್ಲ. ಹುಟ್ಟಿದಾಗಲೇ ಸಾವು ಅನಿವಾರ್ಯ ಸತ್ಯ. ಅದರ ಕಾಲಾವಧಿ ಮಾತ್ರ ಊಹೆಗೆ ನಿಲುಕದ್ದು. ಹುಟ್ಟನ್ನು ಸಿಸೇರಿಯನ್ ಶಸ್ತ್ರಕ್ರಿಯೆಯಿಂದ ನಿಯಂತ್ರಿಸಿ ಬೇಕಾದ ರಾಶಿ-ನಕ್ಷತ್ರಗಳಿಗೆ ಬಂಧಿಸಬಹುದು; ಸಾವನ್ನೂ ಅಷ್ಟೇ: ವೆಂಟಿಲೇಟರುಗಳ ಮೂಲಕ ಬೇಕಾದಾಗ ಆತ್ಮಕ್ಕೆ ಸದ್ಗತಿ ಕಾಣಿಸಬಹುದು. ಸದ್ಗತಿಯೆಂಬ ಪದ ಸತ್ತ ಆನಂತರ ಇನ್ನೊಂದು ಲೋಕವಿರಬಹುದೆಂಬ ಪಾರಂಪರಿಕ, ಸಾಂಪ್ರದಾಯಿಕ ಊಹಾಜಗತ್ತಿನಲ್ಲಿ ನಮ್ಮನ್ನು ನಾವು ಸ್ಥಾಪಿಸಿಕೊಳ್ಳುವುದರ ಗುಪ್ತಸೂಚಿಯಲ್ಲಿ ನಮಗಿರುವ ನಿರೀಕ್ಷೆ-ಅಪೇಕ್ಷೆ, ಅಷ್ಟೇ. ಹೇಗೂ ಇರಲಿ: ಸತ್ತವರಿಗಾದರೂ ಸದ್ಗತಿ ಸಿಗಲಿ.

ಒಬ್ಬಾತ ಬೀದಿಬದಿಯಲ್ಲಿ ನಿರ್ಗತಿಕನಾಗಿ ಮಲಗಿದ್ದ. ಆದರೆ ಸಂತೋಷವಾಗಿದ್ದ. ಹಾದಿಹೋಕನೊಬ್ಬ ಆತನನ್ನು ಗಮನಿಸಿ ‘‘ನೀನು ಈ ಗತಿಗೆ ಬರಲು ಕಾರಣವೇನು? ಯಾವಾಗಿನಿಂದ ಈ ಸ್ಥಿತಿ?’’ ಎಂದು ಪ್ರಶ್ನಿಸಿದ. ‘‘ಎಲ್ಲ ಸೌಕರ್ಯಗಳೂ ಇದ್ದವು, ಸೂರಿತ್ತು, ಮಲಗಲು ಮಂಚವಿತ್ತು, ಊಟ-ತಿಂಡಿ ಚೆನ್ನಾಗಿತ್ತು, ಫ್ಯಾನು, ಟಿವಿಯಿತ್ತು, ಬಿಸಿನೀರಿನಲ್ಲೇ ಸ್ನಾನ, ಈ ಎಲ್ಲ ಸೌಕರ್ಯಗಳೂ ಇದ್ದವು. ಒಂದು ವಾರದಿಂದ ಈ ಗತಿ’’ ಎಂದ ನಿರ್ಗತಿಕ. ‘‘ಮತ್ತೇಕೆ ಈ ಗತಿ? ಯಾಕೆ, ಹೇಗೆ ನಿನ್ನ ಸೌಕರ್ಯಗಳನ್ನು ಕಳೆದುಕೊಂಡೆ’’ ಎಂದು ಹಾದಿಹೋಕ ಪ್ರಶ್ನಿಸಿದ. ‘‘ನಾನು ಜೈಲಲ್ಲಿದ್ದೆ, ಕಳೆದ ವಾರ ಬಿಡುಗಡೆಯಾದೆ’’ ಎಂದ ಆ ನಿರ್ಗತಿಕ. ‘‘ಆದರೂ ಸಂತೋಷವಾಗಿದ್ದೀಯಲ್ಲ?’’ ಎಂಬ ದಾರಿಹೋಕನ ಮರುಪ್ರಶ್ನೆಗೆ ನಿರ್ಗತಿಕ ‘‘ಸ್ವಚ್ಛಂದವಾಗಿರುವ ಸುಖ ನನ್ನನ್ನು ಸಂತೋಷವಾಗಿಟ್ಟಿದೆ’’ ಎಂದ. ಸದ್ಗತಿಯೆಂದರೆ ಇದೇ.

ಧರ್ಮ, ಮತ, ಸಿದ್ಧಾಂತಗಳ ಭ್ರಾಮಕ ಜಗತ್ತನ್ನು ಮತ್ತು ಅಲ್ಲಿ ವಿಹರಿಸುವ, ಅಥವಾ ಒದ್ದಾಡುವ ವ್ಯಕ್ತಿಗಳನ್ನು ವೈಭವೀಕರಿಸುವ, ಉತ್ಪ್ರೇಕ್ಷಿಸುವ ಸಮಾಜಕ್ಕೆ ಕನಸುಗಳು ಬೀಳದ, ಬಿದ್ದರೂ ಅರ್ಥವಾಗದ, ಮುಗ್ಧತೆಯ ವಯಸ್ಸಿನಲ್ಲಿ ಸನ್ಯಾಸಿಯಾದ ಒಬ್ಬ ಹುಡುಗ ಮುಂದೆ ಎಂಟು ದಶಕಗಳ ಕಾಲ ಸನ್ಯಾಸಿಯಾಗಿ ಬದುಕಿದ್ದು ಸಾಧನೆಯೆನ್ನುವುದಕ್ಕಿಂತ ಅನಿವಾರ್ಯತೆಯೆನ್ನುವ ಕಲ್ಪನೆ ಇರಲು, ಬರಲು, ಸಾಧ್ಯವಿಲ್ಲ. ನಮ್ಮ ಪೂರ್ವಿಕರ ಕಾಲಕ್ಕೆ ಈ ವಯಸ್ಸಿಗೆ ಮದುವೆಯಾಗಿ ಆನಂತರ ಮುತ್ತೈದೆಯಾಗಿಯೋ ವಿಧವೆಯಾಗಿಯೋ ದಶಕಗಳ ಕಾಲ ಕೂಪಮಂಡೂಕಗಳಾಗಿ ಕೊಳೆತ (ಬಹುತೇಕ ಬ್ರಾಹ್ಮಣ) ಹೆಂಗಸರ ಪಾಡನ್ನು ನೆನಪಿಸಿದರೆ ಇದರ ಭಯಾನಕತೆ ಅರ್ಥವಾದೀತು. ಕಥೆ ಕಾದಂಬರಿಗಳಲ್ಲಿ ಚಿತ್ರಿಸಲ್ಪಟ್ಟಾಗ ಇಂತಹ ಪಾತ್ರಗಳನ್ನು ಅನುಕಂಪದಿಂದ ಕಾಣುತ್ತೇವೆ; ನಿಜಜಗತ್ತಿನಲ್ಲಿ ಇದನ್ನೇ ಮಹತ್ಸಾಧನೆಯೆಂದು ಹೊಗಳುತ್ತೇವೆ. ಸನ್ಯಾಸಿಯಾಗಿ ಬದುಕಬೇಕೆಂಬ ಕನಸು ಮುಗ್ಧ ವಯಸ್ಸಿನಲ್ಲಿರಲು ಸಾಧ್ಯವಿಲ್ಲ. ಒಮ್ಮೆ ಅಲ್ಲಿ ಸೇರಿಸಲ್ಪಟ್ಟರೆ ಅದೊಂದು ಜೀವಾವಧಿ ಶಿಕ್ಷೆ. ವಾದಕ್ಕಾಗಿ ಹೇಳುವುದಾದರೆ ಬದುಕಿನ ಎಲ್ಲ ಕ್ಷೇತ್ರಗಳೂ ಸೆರೆಮನೆಗಳೇ. ಕೇಳಿಬಂದಂತೆ ಸನ್ಯಾಸದಲ್ಲಿ ಪಡುವ ಪರಿಶ್ರಮವು ಕರಿನೀರಿನ ಶಿಕ್ಷೆಗಿಂತ ಭಿನ್ನವೇನೂ ಅಲ್ಲ. ಇದು ಎಲ್ಲ ಧರ್ಮಗಳಲ್ಲೂ ಅಷ್ಟೇ. ಬಹಳಷ್ಟು ವರ್ಷಗಳನ್ನು ಹೀಗೆ ಕಳೆದ ವ್ಯಕ್ತಿಯೊಬ್ಬ ತನ್ನನ್ನು ಸಮಾಜ ಆದರ್ಶೀಕರಿಸಿ ಮೆಚ್ಚಿದಾಗ ತನ್ನ ಶಾಪಗ್ರಸ್ತ ಸೆರೆಗೆ ತಾನೇ ಪಹರೆಯಾಗಬೇಕಾದ ದುಸ್ಥಿತಿಯೂ ತುರಿಕೆಯಂತೆ ಕ್ಷಣಿಕ ಸುಖವನ್ನು ಕೊಡುತ್ತದೆ; ಅದನ್ನು ತಂಗಾಳಿಯಂತೆ ಭಾವಿಸಿ ಮೈಯೊಡ್ಡಿ ಬದುಕುವುದೇ ಹಿತವೆಂದು ಅನ್ನಿಸಿದರೆ ತಪ್ಪಿಲ್ಲ.

ತನ್ನೆಲ್ಲ ಜನಪ್ರಿಯತೆಯ ಹೊರತಾಗಿಯೂ ಪೇಜಾವರರು ಸದ್ಗತಿಯ ಸಂತೋಷವನ್ನು ಬದುಕಿನಲ್ಲಿ ಅನುಭವಿಸಿದ್ದಾರೆಂದು ನನಗನ್ನಿಸುವುದಿಲ್ಲ. ಈಗ ಸ್ವತಂತ್ರ ಸಾಯುಜ್ಯದಲ್ಲಿರಬಹುದೆಂದು ನಂಬುತ್ತೇನೆ.

ಸಮಾಜದಲ್ಲಿ, ಜಗತ್ತಿನಲ್ಲಿ ಸನ್ಯಾಸವೆಂದರೂ ಒಂದು ಧರ್ಮದ ಹೆಸರಿನ ಸಾಂಸ್ಥಿಕ ಮತ್ತು ಜಾತೀಯ, ಮತೀಯ ಪ್ರಾತಿನಿಧ್ಯ. ಮಠಾಧಿಪತಿಗಳು ಕೆಲವು ನಿಷ್ಠ ಮತ್ತು ನಿಷ್ಠುರ ಬಂಧನಗಳನ್ನು ಹೊಂದಿರುತ್ತವೆ. ಅದು ಅವರ ಗೌರವವನ್ನು, ಅವರು ಪ್ರತಿನಿಧಿಸುವ ಸಂಸ್ಥೆಗಳ ಗೌರವವನ್ನು ಉಳಿಸಲು ಅಗತ್ಯ. ಅದೂ ಒಂದು ಲೌಕಿಕ ತಂತ್ರವೇ ಹೊರತು ಅಧ್ಯಾತ್ಮವಲ್ಲ. ರಾಜಕಾರಣಿಗಳ ಜೊತೆಗೆ ವೇದಿಕೆಯನ್ನು ಹಂಚಿಕೊಳ್ಳುವವರನ್ನು ಸಂತರೆಂದು, ಸನ್ಯಾಸಿಗಳೆಂದು ಹೇಗೆ ಗುರುತಿಸಬಹುದು? ನಾವು ಬೆಂಬಲಿಸಿದರೆ ಮಾತ್ರ ನಿಮ್ಮ ಅಧಿಕಾರದ ಉಳಿವು ಎಂದು ಮಠಾಧಿಪತಿಯೊಬ್ಬ ಹೇಳಿದರೆ ಅದು ಧಾರ್ಮಿಕ ಅಥವಾ ಅಧ್ಯಾತ್ಮಿಕ ಹೇಳಿಕೆ ಹಾಗಾದೀತು? ಮಠಾಧಿಪತಿಗಳು ಹೇಗೆ ಬದುಕುತ್ತಾರೆಂದು ನಾನು ಸಮೀಪದಿಂದ ನೋಡಿದವನಲ್ಲ. ಆದರೆ ಅವರ ಸ್ಥಿತಿ ಬಹಿರಂಗ ವೇದಿಕೆಗಳಲ್ಲಷ್ಟೇ ಸುಖವಾದದ್ದು ಎಂದು ಕೇಳಿದ್ದೇನೆ. ಮಠದ ಮತ್ತು ಅದಕ್ಕೆ ಅಗತ್ಯವಾದ ಅವರ ಸನ್ಯಾಸವನ್ನು ನಿಯಂತ್ರಿಸುವ ಸೂತ್ರಧಾರರು ಬೇರೆಯೇ ಇರುತ್ತಾರೆಂದು ಹೇಳುವ ಸಾಕಷ್ಟು ಸತ್ಯಗಳಿವೆ. ‘ಸತ್ತವರ ನೆರಳು’ ನಾಟಕ ಇದನ್ನೇ ಸೂಚಿಸುತ್ತದೆ. ಈ ನಾಟಕಕ್ಕೆ ಹೊಂದಿಕೊಂಡು ಸುಖಿಸುವ ಕಪಟಿಗಳೂ ಇರುತ್ತಾರೆ. ಉಳಿದವರು ನೊಂದು ಬೆಂದು ತಮ್ಮ ವೃಂದಾವನವನ್ನು ತಲುಪುತ್ತಾರೆ. ಮಠಗಳನ್ನು ಸನ್ಯಾಸಿಗಳನ್ನು ಟೀಕಿಸುವ, ವ್ಯಂಗ್ಯದಿಂದ ಕಾಣುವ ಸಾಹಿತ್ಯ-ರಂಗ ಕೃತಿಗಳನ್ನು ಗಮನಿಸಿದರೂ ಕೊನೆಗೂ ನಮಗೆ ಅದರ ಕೇಂದ್ರ ಪಾತ್ರಗಳ ಬಗ್ಗೆ ಸಹಾನುಭೂತಿಯೇ ಪ್ರಾಪ್ತವಾಗುತ್ತದೆ.

ಒಂದು ನಿಶ್ಚಿತ ಸಂದರ್ಭದಲ್ಲಿ ನಮ್ಮ ಸಂವೇದನೆಗಳು ಇಷ್ಟೊಂದು ಸಾರ್ವತ್ರಿಕವಾಗುವ, ಸಾರ್ವಜನಿಕವಾಗುವ ಅಗತ್ಯವಿದೆಯೇ? ಅಗತ್ಯವಿದೆ; ಏಕೆಂದರೆ ಯಾವ ವ್ಯಕ್ತಿಯೇ ಆಗಲೀ ನಮ್ಮ ಭಾವುಕ ಮತ್ತು ಖಾಸಗಿ ಬದುಕಿನಲ್ಲಿ ಎಷ್ಟೇ ಆಪ್ತನಾದರೂ ಸಮಾಜದೆದುರು ಆತನನ್ನು ಅತಿಮಾನವರಂತೆ ಚಿತ್ರಿಸುವ ಹಕ್ಕು ನಮಗಿಲ್ಲ. ಆದರೆ ನಮ್ಮಲ್ಲಿ ನೈಜ ಬದುಕಿನ ಘಟನೆಗಳನ್ನೂ ಕಾಲಾಂತರದಲ್ಲಿ ಪವಾಡಗಳಾಗಿ ಬದಲಾಯಿಸುವ ಉತ್ಸಾಹ ಬಹಳಷ್ಟು ಮಂದಿಗಿರುತ್ತದೆ. ಸಂತರೆಂದು ನಾವು ನಂಬುವ ಎಲ್ಲ ವ್ಯಕ್ತಿಗಳ ಕುರಿತೂ ಇಂತಹ ಕಥೆಗಳು ಅವರು ಬದುಕಿದ್ದಾಗಲೇ ಸೃಷ್ಟಿಯಾಗುತ್ತವೆ. ‘ನಡೆದಾಡುವ ದೇವರು’ ಎಂದು ಗುರುತಿಸುವುದೇ ದೇವರಿಗೂ ಅವನೊಂದಿಗೆ ಹೋಲಿಸುವ ಮನುಷ್ಯನಿಗೂ ಮಾಡುವ ಅಪಮಾನ. ಅದಕ್ಕೇ ‘ದೇವರಂಥ ಮನುಷ್ಯ’ ಎಂಬ ನುಡಿಕಾಣಿಕೆ ಸೃಷ್ಟಿಯಾದದ್ದು. ಭೂಮಿಯ ಮೇಲಣ ಸ್ವರ್ಗ ಎಂದು ಭಾಷಣ ಬಿಗಿಯುವವರ್ಯಾರೂ ಸ್ವರ್ಗಕ್ಕೆ ಹೋಗಿ ಬಂದವರಲ್ಲ. ನಾವು ಕಾಣದ ಆದರ್ಶಗಳನ್ನು ಹೀಗಿರಬಹುದು ಎಂದು ಹೋಲಿಸುವುದು ಮನುಷ್ಯನ ಸಹಜ ದೌರ್ಬಲ್ಯ. ಇದಕ್ಕಾಗಿಯೇ ಪರಿಣತಿಹೊಂದಿದ ವ್ಯವಸ್ಥೆಯೂ ಇರುತ್ತದೆಂದು ಕೇಳಿದ್ದೇನೆ. ಅಮುಲ್ ಸಂಸ್ಥೆ ದಿನಾ ಎಂಬಂತೆ ಹೊಸಹೊಸ ವಿಚಾರಗಳಿಗೆ, ಘಟನೆಗಳಿಗೆ, ಥಳಕು-ಬಳುಕುಗಳಿಗೆ ಅಮುಲ್ ಉತ್ಪಾದನೆಗಳನ್ನು ಹೊಂದಿಸಿ ಪ್ರಕಟಿಸುವ ಚಿತ್ರಗಳಿಗೂ ಇವಕ್ಕೂ ಭಿನ್ನತೆಯಿಲ್ಲ. ವರ್ತಮಾನದಲ್ಲಿ ನಮ್ಮ ರಾಜಕೀಯ ಪಕ್ಷಗಳೂ ಫೋಟೋಶಾಪ್ ಅಂತರ್ಜಾಲ ವ್ಯವಸ್ಥೆಯನ್ನು ಮಾಡಿ ತಮ್ಮ ಕ್ರಿಯಾಸೂಚಿಗಳನ್ನು ಜನಪ್ರಿಯಗೊಳಿಸುವುದೂ ಹೀಗೆಯೇ!

ಆಧುನಿಕ ಜಗತ್ತಿನ ಒಂದು ವರವೆಂದರೆ ಯಾವ ಕ್ಷೇತ್ರವೂ ಅದಕ್ಕಾಗಿಯೇ ಎಂಬಂತಿಲ್ಲದಿರುವುದು. ಒಂದರ್ಥದಲ್ಲಿ ಇದೂ ಸರಿಯೇ. ಗರ್ಭಗುಡಿಯಲ್ಲಿರುವ ದೇವರನ್ನೂ ಜಾತ್ರೆ, ಹಬ್ಬ ಹರಿದಿನಗಳ ಸಂದರ್ಭದಲ್ಲಿ ಹೊರಗೆ ತಂದು ಮೆರವಣಿಗೆ ಮಾಡಿ ಕೊನೆಗೆ ಈ ಅಬ್ಬರ-ಉಬ್ಬರಗಳಿಳಿದ ಮೇಲೆ ಮತ್ತೆ ಅದೇ ಕತ್ತಲಲ್ಲಿ ಬಂಧಿಸಿಡುವುದು. ರಕ್ಷಿತಾರಣ್ಯಗಳಲ್ಲಿರುವ ಆನೆ ದಸರಾದ ಸಂದರ್ಭದಲ್ಲಿ ನಗರಯಾತ್ರೆ ಮಾಡಿ ಅಂಬಾರಿ ಮೆರವಣಿಗೆಯಲ್ಲಿ ಪಾಲ್ಗೊಂಡು ಮತ್ತೆ ತನ್ನ ಹಿಂಡನ್ನು ಸೇರುವುದೂ ಇಂತಹದ್ದೇ ಒಂದು ಘೋಷಯಾತ್ರೆ. ಈ ಸೀಮಿತ ಹವಾಯಾತ್ರೆ ಬದುಕಿನ ವರ್ಷಾವಧಿ ಜಾತ್ರೆಯಂತಿರುತ್ತದೆ. (ಹೀನೋಪಮೆಯಲ್ಲದಿದ್ದರೂ ಗೊತ್ತಾದ ಅವಧಿಯಲ್ಲಿ ಹಿರಿ-ಕಿರಿ ದಂಪತಿಗಳು, ಮಕ್ಕಳು, ಸಾಕುನಾಯಿ, ಹೀಗೆ ಹೊರಗೆ (ಕರೆದುಕೊಂಡು) ಹೋಗುತ್ತೇವಲ್ಲವೇ ಅದೂ ಒಂದು ನಿರ್ಬಂಧಿತ ಸ್ವಾತಂತ್ರ್ಯ! ಅಷ್ಟಕ್ಕೇ ತೃಪ್ತಿ.

ಇಂತಹ ಅನೇಕ ವಿರೋಧಾಭಾಸಗಳ ನಡುವೆ ಪೇಜಾವರರೂ ಲೌಕಿಕವಾಗಿಯೇ ತಮ್ಮ ಶಿಲುಬೆೆಯನ್ನು ತಾವೇ ಹೊತ್ತು ಬದುಕಿದರು. ಉಡುಪಿಯ ಮಠದ ಕಷ್ಟ-ನಿಷ್ಠುರತೆಗಳ ನಡುವೆ ತಾನೂ ಯಕಶ್ಚಿತ್ ಮನುಷ್ಯನೇ ಎಂಬಂತೆ ಬದುಕಿದರು. ದೈಹಿಕ ವ್ಯಾಮೋಹಗಳ ಅನೈತಿಕತೆಯನ್ನು ಅವರು ಎಂದೂ ಅನುಸರಿಸಲಿಲ್ಲ. ಆದರೂ ತನ್ನ ಸಮಕಾಲೀನ ಸಮಾಜದ ದೌರ್ಬಲ್ಯಗಳನ್ನು ಸರಿಪಡಿಸಬಹುದಾದ ಪ್ರಭಾವವನ್ನು ಅವರು ಬಳಸಿಕೊಳ್ಳಲಿಲ್ಲವೆಂದು ಕಾಣುತ್ತದೆ. ಯಾವುದೇ ಮಿತಿ ಅಥವಾ ವ್ಯಾಪ್ತಿಯನ್ನು ಅವರು ತಮ್ಮ ಕಾರ್ಯಸೂಚಿಯಲ್ಲಿ ಕೇಂದ್ರೀಕರಿಸಿಕೊಂಡರೆಂದು ಅನ್ನಿಸುವುದಿಲ್ಲ. ಸಾಮಾಜಿಕವಾಗಿ ವ್ಯವಹರಿಸುವ ವ್ಯಕ್ತಿಗೆ ಸಮಾಜದಲ್ಲಿ ಯಾವುದೇ ಪಂಥ, ಜಾತಿ, ಧರ್ಮಗಳ ಕಟ್ಟಿರುವುದಿಲ್ಲ. ಆತ ಸಂಕುಚಿತ ದೃಷ್ಟಿಯವನಾದರೆ ತನ್ನ ಪಂಥ, ಜಾತಿ, ಧರ್ಮ ಇಂತಹ ವ್ಯವಧಾನಗಳಿರುತ್ತವೆ. ಪೇಜಾವರರು ಮಧ್ವ ಸಂಪ್ರದಾಯದ ಕೊಳೆಗಳನ್ನಷ್ಟೇ ತೊಳೆಯಲು ಯತ್ನಿಸಿದ್ದರೂ ಅವರ ಸಾಧನೆ ಈಗಿರುವಷ್ಟೇ ಇರುತ್ತಿತ್ತು. ಆದರೆ ಅವರ ಅನುಯಾಯಿಗಳ ನಡುವೆ ಅವರು ಖಳನಾಯಕರಾಗಿರುತ್ತಿದ್ದರು. ಈ ಇಕ್ಕಟ್ಟನ್ನು ಅವರು ತಿಳಿದಿದ್ದರೆಂದು ಕಾಣಿಸುತ್ತದೆ. ಅದಕ್ಕಾಗಿಯೇ ಅವರು ಒಂದು ಕಡೆ ಅಸ್ಪಶ್ಯತಾ ನಿವಾರಣೆ, ಇನ್ನೊಂದೆಡೆ ರಾಮಮಂದಿರದ ಧರ್ಮಸಂಸತ್ತು, ಮತ್ತೊಂದೆಡೆ ಹಿಂದೂ-ಮುಸ್ಲಿಮ್ ಬಾಂಧವ್ಯವನ್ನು ಗಟ್ಟಿಗೊಳಿಸುವುದೆಂದು ನಂಬಲಾದ ಇಫ್ತಾರ್ ಕೂಟ ಇಂತಹ ಹಲವು ಬಗೆಯ ದ್ವೈತವನ್ನೂ ಮೀರಿದ ಕ್ಷೇತ್ರಗಳಲ್ಲಿ ಅಡ್ಡಾಡಿದರು. ಸಾಹಿತ್ಯ-ಸಂಗೀತ-ಮತ್ತಿತರ ಎಲ್ಲ ಜನಪ್ರಿಯ ಮಾಧ್ಯಮಗಳಲ್ಲೂ ಓಡಾಡಿದರು. ಅದನ್ನು ಸಮರ್ಥಿಸುವ ರಕ್ಷಣಾತ್ಮಕ ಹೊದಿಕೆಯನ್ನು ಅವರು ಸದಾ ಧರಿಸುತ್ತಿದ್ದರು.

ಇದೇ ಕಾರಣಕ್ಕೆ ತನ್ನ ಮತ್ತು ಇತರರ ಗೌರವಕ್ಕೆ ಚ್ಯುತಿ ಬಾರದಂತಹ ಸಭ್ಯ ಭಾಷೆಯನ್ನೇ ಬಳಸುತ್ತಿದ್ದರು. ಎಂತಹವರನ್ನೂ ನಿಶ್ಶಸ್ತ್ರಗೊಳಿಸಬಹುದಾದ ತಾಳ್ಮೆಯನ್ನು ತೋರಿಸುತ್ತಿದ್ದರು. ಸಾಹಿತ್ಯ ಸಮ್ಮೇಳನವೊಂದರಲ್ಲಿ ‘ದಿಬ್ಬಣ’ವೆಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದಾಗ ಅವರು ‘‘ದಿಬ್ಬಣವು ಮದುವೆಯ ಭಾಗ. ಅದಕ್ಕೂ ಸನ್ಯಾಸಿಗೂ ಎಲ್ಲಿಯ ಸಂಬಂಧ?’’ ಎಂದು ಪ್ರಶ್ನಿಸಿ ಅವರೇ ಪುರಾಣದಲ್ಲಿ ತಿರುಪತಿ ತಿಮ್ಮಪ್ಪನ ಮದುವೆಯ ದಿಬ್ಬಣವನ್ನು (ಭೃಗು?) ಋಷಿಗಳು ಹೊರಡಿಸಿದ್ದನ್ನು ಉಲ್ಲೇಖಿಸಿದರು. ವೆಂಕಟೇಶ ದೇವರ ಮದುವೆಯ ಕತೆ ಭವಿಷ್ಯೋತ್ತರ ಪುರಾಣದಲ್ಲಿ ಇದೆ. ದೇವರ ಮದುವೆಗೆ ಎಲ್ಲ ಸಜ್ಜಾಗಿದೆ. ಆಗ ವೆಂಕಟೇಶನು ಅಗ್ನಿಯನ್ನು ಕರೆದು ಇಲ್ಲಿ ಸೇರಿದ ಮಂದಿಗೆ ಅಡುಗೆ ತಯಾರು ಮಾಡು ಎನ್ನುತ್ತಾನೆ. ಆಗ ಅಗ್ನಿಯು (ಅಡುಗೆ) ಮಾಡುವೆ, ಆದರೆ ಅದಕ್ಕೆ ತಕ್ಕ ಪಾತ್ರೆಗಳನ್ನೊದಗಿಸು ಎನ್ನುತ್ತಾನೆ. ಆಗ ವೆಂಕಟೇಶ ನಾನು ಬಡವ, ನನ್ನ ಬಳಿ ಪಾತ್ರೆಗಳಿಲ್ಲ, ಅದಕ್ಕಾಗಿ ಇಲ್ಲಿನ (ಅಂದರೆ ತಿರುಪತಿಯ) ಒಂದೊಂದು ಸರೋವರವನ್ನೇ ಪಾತ್ರೆಯಾಗಿ ಬಳಸಿ ಅಡುಗೆ ಮಾಡು ಎನ್ನುತ್ತಾನೆ. ಅಗ್ನಿ ಅದರಂತೆಯೇ ಅಡುಗೆ ಮಾಡಿ ಬಡಿಸುತ್ತಾನೆ. ಪೇಜಾವರರಿಗೂ ಪ್ರಜಾಪ್ರಭುತ್ವದ ಮದುವೆಯ ಸಂದಣಿಗೆ ಧರ್ಮವನ್ನು ಉಣಬಡಿಸಲು ತಕ್ಕ ಪಾತ್ರೆಗಳು ಮಧ್ವರ ಉಗ್ರಾಣದಲ್ಲಿ ಸಿಕ್ಕಲಿಲ್ಲ. ಅದಕ್ಕಾಗಿ ಅವರು ಸಂಸ್ಕೃತಿ, ಸಮಾನತೆ, ಧರ್ಮ ನಿರಪೇಕ್ಷತೆ/ಜಾತ್ಯತೀತತೆಗಳ ಸರೋವರದಲ್ಲಿ ಸಮಾಜೋಧಾರ್ಮಿಕ ಭೂರಿಭೋಜನ ನೀಡುವ ಬಾಣಸಿಗರಾದರು. ಸರೋವರದ ಕೆಳಗೆ ಪಾಕಕ್ರಿಯೆಗೆ ಬೇಕಾದ ಬೆಂಕಿ ಅವರಿಗೆ ದೊರೆಯಿತೇ (ನಳ ಬೆಂಕಿ-ನೀರಿಲ್ಲದೆಯೇ ಅಡುಗೆ ಮಾಡಿ ಬಡಿಸಿದನಂತೆ!) ಮತ್ತು ಈ ಅಗ್ನಿದಿವ್ಯದಲ್ಲಿ ಅವರು ಜಯಿಸಿದರೇ ಎಂಬುದು ನಿಗೂಢ-ಪ್ರಶ್ನಾರ್ಹ. ಅದನ್ನು ಸಂಶ್ಲೇಷಣೆ, ವಿಶ್ಲೇಷಣೆ ಮಾಡುವುದಕ್ಕೆ ಇದು ಸಂದರ್ಭವಲ್ಲ.

ಗೆಳೆಯ ಆನಂದರು ಉಲ್ಲೇಖಿಸಿದ ಈ ಸುದರ್ಶನದೊಂದಿಗೆ ಪೇಜಾವರರಿಗೆ ವಿದಾಯ ಹೇಳುತ್ತೇನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)