varthabharthiಅನುಗಾಲ

ಸಾಹಿತ್ಯ ಸಮ್ಮೇಳನದ ಹೂ ಮತ್ತು ಎಸಳು

ವಾರ್ತಾ ಭಾರತಿ : 8 Jan, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಈಗ ಚಿಕ್ಕಮಗಳೂರು ಸರಕಾರದ, ಕನ್ನಡ ಸಾಹಿತ್ಯ ಪರಿಷತ್ತಿನ ಅನುದಾನವನ್ನು ಮರೆತು ಕನ್ನಡದ, ಸಾಹಿತ್ಯದ ಅಭಿಮಾನಿಗಳಿಂದ ಕೊಡುಗೆಯನ್ನು ಪಡೆದು ಸಮ್ಮೇಳನವನ್ನು ನಡೆಸಲು ತೀರ್ಮಾನಿಸಿದೆ. ಒಂದು ರೀತಿಯಲ್ಲಿ ಈ ಶಸ್ತ್ರಚಿಕಿತ್ಸೆ ಅಗತ್ಯವಿತ್ತು. ಈ ಬಾರಿ ಸಮ್ಮೇಳನವು ಸರಳವಾಗಿ ನಡೆದರೆ ಅದು ಮುಂದೆ ಮಾದರಿಯಾಗಬಹುದೆಂಬ ಅಪೇಕ್ಷೆಯಲ್ಲದಿದ್ದರೂ ನಿರೀಕ್ಷೆಯನ್ನಿಟ್ಟುಕೊಳ್ಳಬಹುದು. ಹೂವು ಕೊಡುವಲ್ಲಿ ಹೂವಿನೆಸಳು ಎಂಬ ಮಾತಿದೆ. ಒಂದು ದಳ ಶ್ರೀ ತುಳಸಿ, ಬಿಂದು ಗಂಗೋದಕ ಪರಮಾತ್ಮನಿಗೆ ಪ್ರೀತಿಯಂತೆ. ಸಾಹಿತ್ಯದ ದೇವರಿಗೆ ಇಂತಹ ಕುಚೇಲತನದ ಅವಲಕ್ಕಿಯೇ ಪ್ರೀತಿಯಾದರೆ ಸಾಹಿತ್ಯಕ್ಕೂ ಸಮಾಜಕ್ಕೂ ಒಳಿತು.


ಸಮಾಜದಲ್ಲಿ ಸಾಹಿತ್ಯ ಕ್ಷೇತ್ರವು ಚಿಂತನಾಪರವಾಗಿಯೇ ಕೆಲಸಮಾಡಬೇಕಾಗಿದೆ. ಜನಪ್ರತಿನಿಧಿಗಳ ಮೂಲಕ ದೇಶವನ್ನು, ರಾಜ್ಯವನ್ನು ಆಳುವವರು ಸಮಾಜದ ರಕ್ಷಣೆ, ಆರ್ಥಿಕತೆ ಇತ್ಯಾದಿ ಹೊಣೆಗಳನ್ನು ಹೊತ್ತುಕೊಂಡಂತೆ ಸಾಹಿತಿಗಳು ಅನಭಿಷಿಕ್ತ ಶಾಸಕರಾಗಿ ಸಮಾಜದ ಜೀವಪರತೆ ಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಹೊರುತ್ತಾರೆ ಅಥವಾ ಹಾಗಿರಬೇಕೆಂಬ ಆದರ್ಶಗಳಾಗಿರುತ್ತಾರೆ.

ಕನ್ನಡ ನೆಲದಲ್ಲಿ ಸಾಹಿತ್ಯದ ಸಾಂಘಿಕ ಕೆಲಸಕ್ಕಾಗಿ ಅಧಿಕೃತ ಮಾನ್ಯತೆಯನ್ನು ಹೊತ್ತ ಸಂಸ್ಥೆಯೆಂದರೆ ಕನ್ನಡ ಸಾಹಿತ್ಯ ಪರಿಷತ್ತು (‘ಕಸಾಪ’). ನೂರಕ್ಕೂ ಮಿಕ್ಕಿ ವರ್ಷಗಳಲ್ಲಿ ಕಸಾಪವು ಸಾಕಷ್ಟು ಸಾಹಿತ್ಯಪರ ಕೆಲಸಗಳನ್ನು ಮಾಡಿದೆ. ಮೊದಮೊದಲು ಸಾಹಿತಿಗಳೇ ಮುನ್ನಡೆಸುತ್ತಿದ್ದ ಈ ಸಂಸ್ಥೆಯು ಕಾಲಕ್ರಮೇಣ ತನ್ನ ಬೊಕ್ಕಸವನ್ನು ಹಿಗ್ಗಿಸಿಕೊಂಡದ್ದರಿಂದ ಮತ್ತು ಸರಕಾರೀ ಸ್ಥಾನಮಾನಗಳನ್ನು ಆವಾಹಿಸಿಕೊಂಡದ್ದರಿಂದ ಅದರ ಮುನ್ನಡೆಗಾಗಿ ಸ್ಪರ್ಧೆಗಳು ನಡೆಯಲಾರಂಭಿಸಿದವು. ಪರಿಣಾಮವಾಗಿ ಅದು ಇತರ ಸರಕಾರಿ ಮತ್ತು ಅರೆ ಸರಕಾರಿ ಪ್ರಾಧಿಕಾರಗಳಂತೆ ಸಾಹಿತ್ಯೇತರ ವ್ಯಕ್ತಿಗಳನ್ನು ನಾಯಕರನ್ನಾಗಿ ಪಡೆಯಲಾರಂಭಿಸಿತು. ಈ ಪೈಕಿ ಅನೇಕರು ಸಂಘಟನಾ ಚಾತುರ್ಯವನ್ನು ಹೊಂದಿದ್ದರಿಂದ ಸಾಹಿತ್ಯದ ಅಭಾವವು ಸಂಘಟನಾ ಕೌಶಲದಿಂದ ಮರೆಯಾಯಿತು. ಸಾಹಿತ್ಯಚಟುವಟಿಕೆಗಳೆಂದರೆ ವಿವಿಧ ಹಂತದಲ್ಲಿ ಸಾಹಿತಿ ಸನ್ಮಾನ, ಸಮ್ಮೇಳನಗಳನ್ನು, ದತ್ತಿ ಉಪನ್ಯಾಸಗಳನ್ನು, ಪುಸ್ತಕ ಪ್ರಕಟನೆಯನ್ನು ಹಾಗೂ ವಿಚಾರ ಸಂಕಿರಣಗಳನ್ನು ನಡೆಸುವುದು ಮೊದಲಾದ ಪ್ರಕ್ರಿಯೆಗಳೆಂಬ ಸಂಪ್ರದಾಯ ಸ್ಥಾಪನೆಯಾದರೂ ಬರಬರುತ್ತ ಇವುಗಳಲ್ಲಿ ‘ಸಾಹಿತ್ಯ’ ಸತ್ತುಹೋಗಿ ಆಡಂಬರ ಮತ್ತು ಪ್ರದರ್ಶನಗಳೇ ಮುಖ್ಯವಾದವು. ರಾಜಕಾರಣಿಗಳು ಸಾಹಿತಿಗಳು, ಸಾಹಿತ್ಯಾಸಕ್ತರು ಆಗಿರಬಾರದೆಂದೇನೂ ಇಲ್ಲ. ಆದರೆ ಅವರು ಇಂತಹ ವರ್ಗದವರಲ್ಲದೇ ಹೋದಲ್ಲಿ ಸಾಹಿತ್ಯ ಪರಿಷತ್ತಿಗೆ ತಮ್ಮ ಅಧಿಕಾರದ, ಪ್ರಭಾವದ, ವರ್ಚಸ್ಸಿನ ಮೂಲಕ ನೀಡಬಹುದಾದ ಸಹಾಯವನ್ನು ನೀಡುತ್ತಿದ್ದರೇ ವಿನಾ ವೇದಿಕೆ ಹತ್ತಿ ತಮ್ಮ ಸಾಹಿತ್ಯದ ಅಜ್ಞಾನವನ್ನು ಬಹಿರಂಗಗೊಳಿಸುತ್ತಿರಲಿಲ್ಲ. ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯೆಂದರೆ ಸಾಹಿತಿಯೊಬ್ಬನ ಶ್ರೇಷ್ಠತೆಯ ಹೆಜ್ಜೆಗುರುತಾಗಿ ಸರ್ವಮಾನ್ಯನನ್ನಾಗಿಸುತ್ತಿತ್ತು. ಅಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಇವುಗಳ ಕುರಿತು (ಮತ್ತು ಇವುಗಳ ಕುರಿತಷ್ಟೇ) ವಿಚಾರಮಂಡನೆಯಾಗುತ್ತಿತ್ತು. ಇತರ ಕ್ಷೇತ್ರಗಳಿಗೆ ಆಯಾಯ ವೇದಿಕೆಗಳಿರುತ್ತಿರುವುದರಿಂದ ಅವನ್ನು ಸಾಹಿತ್ಯ ವೇದಿಕೆಗಳಲ್ಲಿ ಯಾರೂ ಅಪೇಕ್ಷಿಸುತ್ತಿರಲಿಲ್ಲ. ಆದರೆ ಈಗ ಸಾಹಿತ್ಯ ಸಮ್ಮೇಳನದ ವೇದಿಕೆಯೆಂದರೆ ರಾಜಕಾರಣದ ಸಭೆಯಂತೆ, ಮಂತ್ರಿಗಳು, ಶಾಸಕರು ಮತ್ತು ಸರಿಸಮಾನ ಸ್ಥಾನಮಾನದ ಗಣ್ಯರಿಂದಲೇ ತುಂಬಿರುತ್ತದೆ. ಅವರ ಜೊತೆಯಲ್ಲಿ ಅವರ ‘ಅಪಾರ ಬೆಂಬಲಿಗರು’ ವೇದಿಕೆಸಮೃದ್ಧರಾಗುವುದರಿಂದ ಸಾಹಿತ್ಯ ವೇದಿಕೆಗಳಲ್ಲಿ ಸಾಹಿತಿಗಳು ಮಾತ್ರವಲ್ಲ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಸಮ್ಮೇಳನಾಧ್ಯಕ್ಷರೂ, ಇತರ ಸರಸ್ವತಿಪುತ್ರರೂ ಬಡಪಾಯಿಗಳಂತೆ ಅಥವಾ ಬಲಿಪಶುಗಳಂತೆ ಕಾಣಿಸುತ್ತಿದ್ದಾರೆ. ಜೊತೆಗೆ ಕನ್ನಡ ನೆಲ-ಜಲದ ಹೆಸರಿನಲ್ಲಿ ಎಲ್ಲ ಜೀವಪರ ಚಿಂತನೆಗಳೊಂದಿಗೆ ಸಮೀಕರಣ ಹಾಕಿಕೊಳ್ಳಲಾಗಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಸಾಹಿತ್ಯ ಸಮಾರಂಭಗಳು ಅತಿಯಾದ ವೈಭವವನ್ನು ಅಪೇಕ್ಷಿಸುತ್ತಿವೆ. ಸಾಹಿತ್ಯದ ಪರ್ಣಕುಟಿ ಮಯಾಮಂಟಪಕ್ಕೆ ದಾರಿ ಮಾಡಿದೆ. ಹಾರತುರಾಯಿಗಳಲ್ಲಿ, ಶಾಲುಗಳಲ್ಲಿ, ಫಲತಾಂಬೂಲಗಳಲ್ಲಿ, ಸ್ಮರಣಿಕೆಗಳಲ್ಲಿ, ಊಟದ ಆಹಾರಸೂಚಿಗಳಲ್ಲಿ ಸಾಹಿತ್ಯದ ಗುಣಮಟ್ಟ ನಿರ್ಧಾರವಾಗುತ್ತಿದೆ. ಇದರಿಂದಾಗಿ ಸರಕಾರವನ್ನು, ಮಂತ್ರಿಮಾಗಧರನ್ನು ಆಶ್ರಯಿಸುವುದು ಮತ್ತು ಅವರೆದುರು ಕೋಲೇಬಸವನಂತೆ ತಲೆಯಾಡಿಸುವುದು ಅನಿವಾರ್ಯವಾಗಿದೆ. ಅವರಿಗೆ ಇಷ್ಟವಾಗುವ ಮತ್ತು ಅವರು ಸೂಚಿಸುವ ವ್ಯಕ್ತಿಗಳು, ವಿಚಾರಗಳು ಚರ್ಚೆಗೊಳಗಾಗುವ ಕೆಟ್ಟಚಾಳಿ ಆರಂಭವಾಗಿದೆ. ಸ್ಥಾನ ಕಲ್ಪಿಸಲು ಸಾಧ್ಯವಾಗದಾಗ ಸಮಾನಾಂತರವಾಗಿ ಅವರಿಗೂ ಒಂದು ತ್ರಿಶಂಕು ಸ್ವರ್ಗವನ್ನು ಕಟ್ಟಲೂ ಸಾಹಿತ್ಯ ಪರಿಷತ್ತು ಕೆಲವು ವರ್ಷಗಳಿಂದ ಆರಂಭಿಸಿದೆ. ಅಲ್ಲಿ ಸಲ್ಲದವರು ಇಲ್ಲಿ ಸಲ್ಲುವರಾದ್ದರಿಂದ ಎಲ್ಲರಿಗೂ ಸಂಭ್ರಮ. ಇದೂ ಒಂದು ರೀತಿಯ ಸಬ್ ಕಾ ಸಾಥ್, ಸಬ್ ಕಾ ವಿಕಾಸ್!

85ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕಲಬುರಗಿಯಲ್ಲಿ ಆಯೋಜನೆಗೊಂಡಿದೆ. ಇದರ ಅಧ್ಯಕ್ಷರನ್ನಾಗಿ ಹಿರಿಯ ಕವಿ ಮತ್ತು ಸಜ್ಜನ ಎಚ್.ಎಸ್. ವೆಂಕಟೇಶ ಮೂರ್ತಿಯವರನ್ನು ಆಯ್ಕೆಮಾಡಲಾಗಿದೆ. ಅವರಿಗಿಂತ ಹಿರಿಯರು ಇರಲಿಲ್ಲವೆಂದೇನಲ್ಲ. ಜಿ.ಎಸ್.ಅಮೂರ, ಜಿ.ಎಚ್. ನಾಯಕ, ವೈದೇಹಿ, ಸುಬ್ರಾಯ ಚೊಕ್ಕಾಡಿ, ಹೀಗೆ (ಈ ಪಟ್ಟಿ ಬಹಳಷ್ಟಿದೆ!) ಸಾಹಿತ್ಯ ಮತ್ತು/ಅಥವಾ ವಯಸ್ಸಿನ ಹಿರಿಯರು ಅನೇಕರಿದ್ದರು. ಆದರೂ ಇಂತಹ ಸಣ್ಣ-ಪುಟ್ಟ ಲೋಪದೋಷಗಳನ್ನು ಹೊರತುಪಡಿಸಿದರೆ ಎಚ್ಚೆಸ್ವಿ ಆಯ್ಕೆಯನ್ನು ಒಪ್ಪದಿರಲಾಗದು. ವ್ಯವಸ್ಥೆಯನ್ನು ಒಪ್ಪುವ, ವ್ಯವಸ್ಥೆಯೊಂದಿಗೇ ಸಾಗುವ ಮನಸ್ಸಿನ ಎಚ್ಚೆಸ್ವಿಯವರು ಶುದ್ಧಸಸ್ಯಾಹಾರದಂತೆ ಶುದ್ಧಸಾಹಿತಿ; ವಿವಾದವಿದೆಯೆಂದರೆ ಮೌನಧಾರಣೆ ಮಾಡುವವರು; ಎಲ್ಲವೂ ಮುಗಿದ ಮೇಲೆ ಅರೆ ಹೀಗೂ ಆಯಿತೇ? ಎಂದು ಆಶ್ಚರ್ಯಚಕಿತರಾಗುವ ಅವಕಾಶದವರು. ಈ ಬಗ್ಗೆ ಅನುಕಂಪ ತೋರಬೇಕೇ ವಿನಾ ಇದರಿಂದ ಅವರ ಸಾಹಿತ್ಯದ ಮೌಲ್ಯ ಕಡಿಮೆಯಾಗದು.

ಸಮಸ್ಯೆಯಿರುವುದು ಸಮ್ಮೇಳನದ ಕಾರ್ಯಭಾಗದಲ್ಲಿ. ಅಧ್ಯಕ್ಷರು ಮಠಾಧೀಶರಂತೆ ಬಹಿರಂಗವಾಗಿ ಪ್ರವಚನ ನೀಡುವ, ಮೆರವಣಿಗೆಗೊಳ್ಳುವ ಮುಖವಾಡವೇ ಹೊರತು ಇಡೀ ಸಮ್ಮೇಳನದ ದಿಕ್ಕುತೋರುವ (ಮತ್ತು ಕೆಲವುಬಾರಿಯಾದರೂ ದಿಕ್ಕುತಪ್ಪಿಸುವ!) ಸೂತ್ರಧಾರೀ ದೇವರು ಮತ್ತು ಪೂಜಾರಿಗಳು ಬೇರೆಯೇ ಇರುತ್ತಾರೆ. ಸಮ್ಮೇಳನದ ಗೋಷ್ಠಿಗಳ ಪಾಲುದಾರರು ಯಾರೆಂಬುದನ್ನು ನಿಶ್ಚಯಿಸುವಲ್ಲಿ ಸ್ಥಾಪಿತ ಅಥವಾ ಪಟ್ಟಭದ್ರ ಹಿತಾಸಕ್ತಿಗಳು ಕೆಲಸಮಾಡುತ್ತವೆ. ಇಲ್ಲಿ ನಡೆಯಬಹುದಾದ ಪರ-ವಿರೋಧ ಪ್ರಚಾರ, ವ್ಯೆಹಗಳನ್ನು ಗಮನಿಸಿದರೆ ರಾಜ್ಯ ಅಥವಾ ಕೇಂದ್ರ ಸರಕಾರಗಳಲ್ಲಿ ಸಚಿವಸಂಪುಟಕ್ಕೆ ನಡೆಯುವ ಅಥವಾ ಚುನಾವಣಾ ಟಿಕೇಟಿಗೆ ನಡೆಯುವ ತಂತ್ರಗಳು, ಸ್ಪರ್ಧೆಗಳು ಗೌಣವಾಗಿ ಕಾಣಿಸುತ್ತವೆ.

ಇಷ್ಟಾದರೂ ಮುಗ್ಧ ಕನ್ನಡಿಗರು, ಪುಸ್ತಕ ಪ್ರೇಮಿಗಳು ಸಮ್ಮೇಳನಕ್ಕೆ ಹೋಗುತ್ತಾರೆಂಬುದೇ ಸಹಜ ವಿಚಿತ್ರ. ಈ ವಿಚಿತ್ರ ಪ್ರಕೃತಿ ಮುಂದುವರಿಯಲಿ ಎಂದು ಹಾರೈಕೆ.

ಚಿಕ್ಕಮಗಳೂರಿನಲ್ಲಿ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿದೆ. ಜಿಲ್ಲಾ ಸಮಿತಿಯು ಸಮ್ಮೇಳನಾಧ್ಯಕ್ಷರನ್ನಾಗಿ ತನ್ನದೇ ಜಿಲ್ಲೆಯ ಕಲ್ಕುಳಿ ವಿಠಲ ಹೆಗ್ಗಡೆಯವರನ್ನು ಆಯ್ಕೆಮಾಡಿದೆ. ಕಲ್ಕುಳಿಯವರು ಲೇಖಕರು, ಜೀವಪರ ಚಿಂತಕರು, ಹೋರಾಟಗಾರರು. ಅವರನ್ನು ಮತ್ತು ಸಾಹಿತ್ಯ ಮತ್ತು ಚಿಂತನೆಯ ನಿಲುವನ್ನು ವಿಮರ್ಶಾತ್ಮಕವಾಗಿ ಗೌರವಿಸುವುದು ಕಸಾಪ ಮತ್ತು ಅದು ಪ್ರತಿನಿಧಿಸುವ ಎಲ್ಲರ ಕರ್ತವ್ಯ. ಆದರೆ ಸಾಹಿತ್ಯಕ್ಕೆ ಕಪ್ಪುಚುಕ್ಕಿಯಂತೆ ಅವರ ಆಯ್ಕೆಗೆ ಬಲಪಂಥೀಯ ಮತ್ತು ಮೂಲಭೂತವಾದಿಗಳ ವಿರೋಧ ಪ್ರಕಟವಾಗಿದೆ. ಈ ವಿರೋಧ ಸೈದ್ಧಾಂತಿಕವಾದದ್ದಲ್ಲ; ಶಕ್ತಿಪ್ರದರ್ಶನಕ್ಕೆ ಸಂಬಂಧಿಸಿದ್ದು; ರಾಜಕೀಯ ಒಲವಿಗೆ ಸಂಬಂಧಿಸಿದ್ದು. ಚಿಕ್ಕಮಗಳೂರಿನ ಮತ್ತು ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿರುವ ರಾಜಕಾರಣಿಯೊಬ್ಬರು ಇದನ್ನು ವಿರೋಧಿಸಿದ್ದು ಮಾತ್ರವಲ್ಲ, ತಾನು ಭಾಗವಹಿಸುವುದಿಲ್ಲವೆಂದು ಹೇಳಿದರು. ಇದು ನಿಲುವನ್ನು ಪ್ರಕಟಿಸುವಲ್ಲೇ ನಿಂತಿದ್ದರೆ ಆತಂಕಪಡಬೇಕಾಗಿರಲಿಲ್ಲ. ಅಧಿಕಾರಶಕ್ತಿಯ ಬತ್ತಲೆ ಪ್ರದರ್ಶನವೂ ಈ ಪ್ರಸಂಗದಲ್ಲಿ ನಡೆದಿದೆ. ಮಾಮೂಲಾಗಿ ಯಾವುದೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕಸಾಪದ ಕೇಂದ್ರ ಸಂಸ್ಥೆಯು ಒಂದಷ್ಟು ಅನುದಾನವನ್ನು ನೀಡುತ್ತದೆ. ಇಲ್ಲೂ ಅದನ್ನು ನಿರೀಕ್ಷಿಸಲಾಗಿತ್ತು. ಆದರೆ ಮಾಹಿತಿಗಳಂತೆ ಸಚಿವರು ಈ ಸಮ್ಮೇಳನಕ್ಕೆ ಯಾವುದೇ ಸರಕಾರಿ ಅನುದಾನವನ್ನು ಪ್ರತಿಬಂಧಿಸಿದ್ದಾರೆ. ಅವರ ಸೂಚನೆಯಂತೆ ಯಾವುದೇ ಅನುದಾನವನ್ನು ನೀಡಲು ಕಸಾಪ ನಿರಾಕರಿಸಿದೆ. ಪ್ರಾಯಃ ಕಸಾಪದ ಇತಿಹಾಸದಲ್ಲೇ ಇಂತಹ ಘಟನೆ ನಡೆದಿಲ್ಲ.

 ಕಸಾಪ ಒಂದು ಸ್ವಾಯತ್ತ ಸಂಸ್ಥೆ. ಸರಕಾರದ ಹಸ್ತಕ್ಷೇಪ ಮಿತಿಮೀರುವ ಸೂಚನೆಗಳು, ಚಿಹ್ನೆಗಳು ಗೋಚರಿಸುವಾಗಲೇ ಅದನ್ನು ನಿಯಂತ್ರಿಸಿದ್ದರೆ ಎಲ್ಲವೂ ಸುಗಮವಾಗುತ್ತಿತ್ತು. ಕಸಾಪದ ನಿಯಮಾವಳಿಗಳಲ್ಲಿ ಎಲ್ಲೂ ಅಧ್ಯಕ್ಷರಾಗುವವರು, ಗೋಷ್ಠಿಯಲ್ಲಿ ಭಾಗವಹಿಸುವವರು ಆಳುವ ಪಕ್ಷದ ಸದಸ್ಯರಾಗಿರಬೇಕು ಇಲ್ಲವೇ ಆಡಳಿತದ ಲೋಪದೋಷಗಳನ್ನು ಟೀಕಿಸಿರಬಾರದು, ವಿರೋಧಿಸಿರಬಾರದು ಎಂಬ ನಿಯಮಗಳಿಲ್ಲ. ರಾಜಕೀಯ ನಿಲುವುಗಳು ವೈಯಕ್ತಿಕವಾದದ್ದು. ವಿವಾದಾಸ್ಪದವಾಗಬಹುದಾದ ಬದುಕು-ವಿಚಾರಗಳನ್ನು ತುಂಬಿಕೊಂಡವರನ್ನೂ ಸಾಹಿತ್ಯಕ್ಷೇತ್ರ ಗುರುತಿಸಿ ಪುರಸ್ಕರಿಸಿದೆ. ಉದಾಹರಣೆಗೆ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಎಸ್.ಎಲ್.ಭೈರಪ್ಪನವರ ರಾಜಕೀಯ ನಿಲುವನ್ನು ಮತ್ತು ಅವರ ಕೆಲವು ಕೃತಿಗಳನ್ನು ರಾಜಕೀಯ ಮಂಡನೆಯೆಂದವರೂ ಅವರ ಅನೇಕ ಕೃತಿಗಳನ್ನು (ವಂಶವೃಕ್ಷ, ಗ್ರಹಣ, ಗೃಹಭಂಗ, ನಿರಾಕರಣ, ದಾಟು ಇತ್ಯಾದಿ) ಶ್ರೇಷ್ಠವೆಂದು ಒಪ್ಪುತ್ತಾರೆ. ಅವರ ಕೆಲವು ಕೃತಿಗಳನ್ನು (ಅವರನ್ನು ತಾತ್ವಿಕವಾಗಿ ವಿರೋಧಿಸುತ್ತಿದ್ದ) ಗಿರೀಶ ಕಾರ್ನಾಡರು ನಿರ್ದೇಶಿಸಿ ನಟಿಸಿ ಸಿನೆಮಾ ಮಾಡಿದ್ದಾರೆ. ಇಂತಹ ಭಿನ್ನಮತದ ಹಕ್ಕನ್ನು ಸಾಹಿತ್ಯದಂತಹ ವಿಶಿಷ್ಟ ಪರಿಸರವು ಒಪ್ಪಿಕೊಳ್ಳದಿದ್ದರೆ ಅದು ಸಮಾಜದ ಕೈಗನ್ನಡಿಯಾಗಲು ಹೇಗೆ ಸಾಧ್ಯ?

 ಇಂತಹ ಸಮಯ ಮತ್ತು ಸಂದರ್ಭದಲ್ಲಿ ಕಸಾಪ ತಾನು ಸ್ವಾಯತ್ತ ಸಂಸ್ಥೆಯೆಂಬುದನ್ನು ನೆನಪುಮಾಡಿಕೊಂಡು ತನ್ನ ಹಕ್ಕನ್ನು ಪ್ರತಿಪಾದಿಸಬೇಕು. ಹೀಗೆ ನೀಡುವ ಹಣವು ಸಚಿವರ ಸ್ವಂತ ಆಸ್ತಿಯಲ್ಲ, ಪ್ರಜೆಗಳು ನಿರ್ದಿಷ್ಟವಾದ ಉದ್ದೇಶಗಳಿಗಾಗಿ ನೀಡಿದ ಕರವೆಂಬುದನ್ನು ಘೋಷಿಸಬೇಕು. ಅಭಿವ್ಯಕ್ತಿಯ ಹಕ್ಕುಗಳನ್ನು ಅದರಲ್ಲೂ ಭಿನ್ನಮತದ ಹಕ್ಕುಗಳನ್ನು ಪ್ರತಿಪಾದಿಸುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಸಮಾಜವು ಪ್ರಜಾಪ್ರಭುತ್ವವಾಗಿರಲು ಸಾಧ್ಯವಿಲ್ಲ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಾದ್ದರಿಂದ ಇಲ್ಲಿ ಯಾವುದೇ ಕ್ಷೇತ್ರದಲ್ಲೂ ಅದರಲ್ಲೂ ಸಾಹಿತ್ಯದಂತಹ ಸಂವೇದನಾಶೀಲ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶವಾಗಬಾರದು. ಇದು ಅಧಿಕಾರಶಕ್ತಿಪ್ರಯೋಗದ ಗರಡಿಯಲ್ಲ ಎಂಬುದನ್ನು ಕಸಾಪ ಅಧ್ಯಕ್ಷರು ಬಹಿರಂಗವಾಗಿ ಹೇಳಬೇಕು. ಆದರೆ ಅದಕ್ಷರು ಅಧ್ಯಕ್ಷರಾದರೆ ಇಂತಹ ಧೈರ್ಯ ಎಲ್ಲಿರಬೇಕು? ಎಲ್ಲಿಂದ ಬರಬೇಕು? ಸರಕಾರೀ ಅಧಿಕಾರಿಗಳಾಗಿದ್ದವರು ಬಹುಪಾಲು ದಶಕಗಳ ಕಾಲ ಅಧಿಕಾರಸ್ಥ ರಾಜಕಾರಣಿಗಳ ಅಡ್ಡಪಲ್ಲಕ್ಕಿಯನ್ನು ಹೊತ್ತು ಅಭ್ಯಾಸವಾಗಿರುವವರು.

ಅವರು ನಿವೃತ್ತಿಯ ಆನಂತರ ಜಾತಿ, ಗುಂಪುಗುಳಿತನ, ಪ್ರಭಾವ, ಹಣ ಇತ್ಯಾದಿಗಳ ಆಧಾರದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗುವವರು. ಆದ್ದರಿಂದ ಇಂತಹ ಜೋಳವಾಳಿಗೆಯ ಗೇಣಿತನವನ್ನು ಮುಂದುವರಿಸಿದಂತಿರುವ ಈಗಿನ ಅಧ್ಯಕ್ಷರಿಂದ ಇಂತಹ ಸ್ವಾತಂತ್ರ್ಯ ಘೋಷಣೆಯನ್ನು ನಿರೀಕ್ಷಿಸುವುದು ತಪ್ಪು. ಹೋಗಲಿ, ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಹಂತದ ಸಮ್ಮೇಳನಗಳು ನಡೆಸುವುದು ಒಂದೇ ವಿನ್ಯಾಸದಲ್ಲಿ. ಇಂದು ಜಿಲ್ಲಾ ಸಮ್ಮೇಳನಕ್ಕೆ ಬಂದದ್ದೇ ನಾಳೆ ಅಖಿಲ ಭಾರತ ಸಮ್ಮೇಳನಕ್ಕೂ ಬರುವುದು ಸಹಜ. ಊರು-ಕೇರಿ; ಇಷ್ಟೇ ವ್ಯತ್ಯಾಸ. ಆದ್ದರಿಂದ ಅಭಿಷಿಕ್ತರಾದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದವರು ತಮ್ಮ ಮೌನವನ್ನು ಮುರಿದು ಮಾತನಾಡಲು, ಕೊನೇ ಪಕ್ಷ ಎಚ್ಚೆತ್ತಿದ್ದೇನೆಂದು ತೋರಿಸಿ ಆಕಳಿಸಲು, ಇದು ಸುಸಂದರ್ಭ. ಅವರೇನೂ ಸರಕಾರದ ಅಥವಾ ಕಸಾಪದ ಸಾಮಂತರಾಜರಲ್ಲ. ಈ ಬಾರಿಯ ಚಕ್ರವರ್ತಿ. ಆದರೆ ಸಿಂಹಾಸನವನ್ನೇರುವ ಮುಹೂರ್ತದ ಸನಿಹದಲ್ಲಿ ವನವಾಸಕ್ಕೆ ತಯಾರಾಗಬೇಕಾದರೆ ಶ್ರೀರಾಮನಂತಹ ವ್ಯಕ್ತಿತ್ವ ಬೇಕು. ಅಧ್ಯಕ್ಷತೆಯ ಗುಂಗಿನ ಪರಮ ಷಡುರಸ ಭೋಜನವನ್ನುಂಡು ಮಲಗಿದ ಮುರಹರರನ್ನು ಎಚ್ಚರಿಸುವವರು ಯಾರು?

ಇತರ ಕೆಲವು ಹಿರಿಯರು, ಸಾಹಿತ್ಯದ ಅಕಾಡಮಿ, ಪ್ರಾಧಿಕಾರಗಳಂತಹ ಆಯಕಟ್ಟಿನ ಸ್ಥಾನದಲ್ಲಿರುವವರು, ಸಹಿತ ಮೌನಂ ಶರಣಂ ಗಚ್ಛಾಮಿ ಎಂದು ಬುದ್ಧರಾಗುವ ಪರಿಯನ್ನು ಗಮನಿಸಿದಾಗ ಕನ್ನಡ ಸಾಹಿತ್ಯದ ಭವಿಷ್ಯದ ಕುರಿತು ಆತಂಕವಾಗುತ್ತದೆ. ‘‘ರಾಜಕಾರಣಕ್ಕೆ ಅನ್ವಯಿಸುವ ರಾಜಕಾರಣಿ ಮುಂದಿನ ಚುನಾವಣೆಯನ್ನಷ್ಟೇ ಗಮನಿಸುತ್ತಾನೆ; ಮುತ್ಸದ್ದಿ ಮುಂದಿನ ತಲೆಮಾರನ್ನು ಗಮನಿಸುತ್ತಾನೆ’’ ಎಂಬ ಮಾತಿನಂತೆ ಸಾಹಿತ್ಯದಲ್ಲೂ ರಾಜಕಾರಣಿಗಳನ್ನು ಮತ್ತು ಮುತ್ಸದ್ದಿಗಳನ್ನು ವರ್ಗೀಕರಿಸುವ ಸಮಯ-ಸಂದರ್ಭ ಬಂದಿದೆಯೆಂದು ಕಾಣಿಸುತ್ತದೆ.

ಈಗ ಚಿಕ್ಕಮಗಳೂರು ಸರಕಾರದ, ಕನ್ನಡ ಸಾಹಿತ್ಯ ಪರಿಷತ್ತಿನ ಅನುದಾನವನ್ನು ಮರೆತು ಕನ್ನಡದ, ಸಾಹಿತ್ಯದ ಅಭಿಮಾನಿಗಳಿಂದ ಕೊಡುಗೆಯನ್ನು ಪಡೆದು ಸಮ್ಮೇಳನವನ್ನು ನಡೆಸಲು ತೀರ್ಮಾನಿಸಿದೆ. ಒಂದು ರೀತಿಯಲ್ಲಿ ಈ ಶಸ್ತ್ರಚಿಕಿತ್ಸೆ ಅಗತ್ಯವಿತ್ತು. ಈ ಬಾರಿ ಸಮ್ಮೇಳನವು ಸರಳವಾಗಿ ನಡೆದರೆ ಅದು ಮುಂದೆ ಮಾದರಿಯಾಗಬಹುದೆಂಬ ಅಪೇಕ್ಷೆಯಲ್ಲದಿದ್ದರೂ ನಿರೀಕ್ಷೆಯನ್ನಿಟ್ಟುಕೊಳ್ಳಬಹುದು. ಹೂವು ಕೊಡುವಲ್ಲಿ ಹೂವಿನೆಸಳು ಎಂಬ ಮಾತಿದೆ. ಒಂದು ದಳ ಶ್ರೀ ತುಳಸಿ, ಬಿಂದು ಗಂಗೋದಕ ಪರಮಾತ್ಮನಿಗೆ ಪ್ರೀತಿಯಂತೆ. ಸಾಹಿತ್ಯದ ದೇವರಿಗೆ ಇಂತಹ ಕುಚೇಲತನದ ಅವಲಕ್ಕಿಯೇ ಪ್ರೀತಿಯಾದರೆ ಸಾಹಿತ್ಯಕ್ಕೂ ಸಮಾಜಕ್ಕೂ ಒಳಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)